ADVERTISEMENT

ಎಂ.ಜಿ. ರಸ್ತೆಗೆ ಬಂದ ಯಮ ಧರ್ಮರಾಯ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 15:55 IST
Last Updated 10 ಜುಲೈ 2018, 15:55 IST
ಯಮಧರ್ಮರಾಯನ ವೇಷತೊಟ್ಟ ರಂಗಕಲಾವಿದ ವೀರೇಶ ಮುತ್ತಿನಮಠ
ಯಮಧರ್ಮರಾಯನ ವೇಷತೊಟ್ಟ ರಂಗಕಲಾವಿದ ವೀರೇಶ ಮುತ್ತಿನಮಠ   

ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದ ಬಳಿ ಮಂಗಳವಾರ ಮಧ್ಯಾಹ್ನ ಕಾರು, ಬೈಕ್ ಸವಾರರು ಇದ್ದಕ್ಕಿದ್ದಂತೆ ಕ್ಷಣಕಾಲ ವಿಚಲಿತರಾದರು. ತಲೆಮೇಲೆ ದೊಡ್ಡ ಕಿರೀಟ, ಕಪ್ಪನೆಯ ಉಡುಪು ತೊಟ್ಟು ಹೆಗಲ ಮೇಲೆ ಗದೆಇಟ್ಟುಕೊಂಡು ದಪ್ಪನೆಯ ಮೀಸೆ ತಿರುವುತ್ತಾ ಅಲ್ಲಿ ಯಮಧರ್ಮರಾಯ ನಿಂತಿದ್ದ!

ಇದೇನಪ್ಪಾ ಎಂ.ಜಿ.ರಸ್ತೆಯಲ್ಲಿ ಯಮನಿಗೇನು ಕೆಲಸ ಅಂದುಕೊಂಡ್ರಾ? ಅಲ್ಲಿ ಯಮ ಯಾರನ್ನೂ ಕರೆದೊಯ್ಯಲು ಬಂದಿರಲಿಲ್ಲ. ಬದಲಿಗೆ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆ ಕುರಿತು ತಿಳಿವಳಿಕೆ ನೀಡಲು ಬಂದಿದ್ದ. ರಂಗಕಲಾವಿದ ವೀರೇಶ ಮುತ್ತಿನಮಠ ಯಮಧರ್ಮರಾಯನ ವೇಷತೊಟ್ಟು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕೆಂಪುಗುಲಾಬಿ ಕೊಟ್ಟು ಸಂಚಾರ ನಿಯಮ ಪಾಲಿಸುವಂತೆ ತಿಳಿ ಹೇಳಿದರು.

‘ನಾನು ಯಮ ಧರ್ಮರಾಯ. ಇಂದು ನೀನು ಮೊಬೈಲ್‌ನಲ್ಲಿ ಮಾತನಾಡುತ್ತಾ, ಹೆಲ್ಮೆಟ್ ತೊಡದೇ ಗಾಡಿ ಚಲಾಯಿಸಿ ನಿಯಮ ಉಲ್ಲಂಘಿಸಿದ್ದೀಯಾ. ಅಕಸ್ಮಾತ್ ಅಪಘಾತ ಸಂಭವಿಸಿ ಪ್ರಾಣಕ್ಕೆ ಹಾನಿಯಾಗಿದ್ದರೆ ಏನು ಮಾಡುತ್ತಿದ್ದೆ? ಇಂದು ನಾನು ನಿನ್ನನ್ನು ಕ್ಷಮಿಸಿದ್ದೇನೆ. ಆದರೆ, ಮುಂದಿನ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ನಿನ್ನ ಪ್ರಾಣ ನನ್ನ ಕೈಯಲ್ಲಿರುತ್ತದೆ. ಎಚ್ಚರ. ನಿಯಮ ಪಾಲಿಸಿ ವಾಹನ ಚಲಾಯಿಸಿ’ ಎಂದು ಕಂಪನಿ ನಾಟಕ ಶೈಲಿಯಲ್ಲಿ ವಾಹನ ಸವಾರರಿಗೆ ಸಂಚಾರ ನಿಯಮ ತಿಳಿಸಿಕೊಟ್ಟರು.

ADVERTISEMENT

ಅಶೋಕ ನಗರ ಪೊಲೀಸ್ ಠಾಣೆಯ ಸಂಚಾರ ಪೊಲೀಸ್ ಇನ್‌ಸ್ಟೆಕ್ಟರ್ ವಿಜಿಕುಮಾರ್ ಮತ್ತು ಸಿಬ್ಬಂದಿ ನಿಯಮ ಉಲ್ಲಂಘಿಸಿದ ಸವಾರರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.