ADVERTISEMENT

ಋತುಮಾನದ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಕನ್ನಡದಲ್ಲಿ ವಿದೇಶಿ ಧಾರಾವಾಹಿಗಳ ಟ್ರೆಂಡ್ ಹುಟ್ಟುಹಾಕಲು ನಿರ್ಮಾಪಕ ಸಿಹಿಕಹಿ ಚಂದ್ರು ಮುಂದಾಗಿದ್ದಾರೆ. ಕಾಲಮಿತಿಯ ಚೌಕಟ್ಟಿನಲ್ಲಿ ಪ್ರಸಾರವಾಗುವ ವಿದೇಶಿ ಕಿರು ಧಾರಾವಾಹಿಗಳ `ಸೀಸನ್ಸ್' ಮಾದರಿಯನ್ನು ಪ್ರಯೋಗಿಸುವ ಅವರ ಯತ್ನಕ್ಕೆ ಝೀ ಕನ್ನಡ ವಾಹಿನಿ ಭೂಮಿಕೆ ಒದಗಿಸಿದೆ. ಜೂನ್ 24ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ `ಭಲೆ ಬಸವ' ಹಾಸ್ಯ ಧಾರಾವಾಹಿಯ ಮೂಲಕ ಈ ಹೊಸ ಪ್ರಯೋಗ ಆರಂಭ. 

ಫೈನಲ್ ಕಟ್ ಪ್ರೊಡಕ್ಷನ್‌ನ `ಪಾರ್ವತಿ ಪರಮೇಶ್ವರ' ಒಂದು ಸಾವಿರ ಸಂಚಿಕೆ ದಾಟಿದ್ದರೆ, `ಪಾಂಡು ರಂಗ ವಿಠಲ' ಸಾವಿರದ ಗುರಿಮುಟ್ಟುವ ಹಾದಿಯಲ್ಲಿದೆ. ಹೀಗೆ ಸುದೀರ್ಘವಾದ ಹಾಸ್ಯ ಕಥನ ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡಿರುವ ಚಂದ್ರು, ಈ ಹೊಸ `ಸೀಸನ್ಸ್' ಮಾದರಿಯಲ್ಲಿ ಕಾಲಮಿತಿಯಲ್ಲಿಯೇ ಧಾರಾವಾಹಿ ಕಟ್ಟುತ್ತಾರೆ. 13 ವಾರಗಳ, 65 ಸಂಚಿಕೆಗಳಲ್ಲಿ ಮುಗಿಯುವ ತಲಾ ನಾಲ್ಕು ಮಿನಿ ಧಾರಾವಾಹಿಗಳನ್ನು ನಿರ್ಮಿಸಿಕೊಡುವುದು ಈ ಮಾದರಿಯ ಚೌಕಟ್ಟು.

ಈ ಹಾಸ್ಯ ಧಾರಾವಾಹಿಗಳು ದಿನಕ್ಕೊಂದು ಕಚಗುಳಿಯ ಕಥೆ ಹೇಳುವುದಿಲ್ಲ. ಮೆಗಾ ಧಾರಾವಾಹಿಗಳ ರೀತಿ ಒಂದು ಸಂಚಿಕೆಗೂ ಮುಂದಿನ ಸಂಚಿಕೆಗೂ ಸಂಬಂಧ ಬೆಸೆಯುತ್ತವೆ. ಏಕತಾನತೆಗೆ ಪೂರ್ಣವಿರಾಮ.
ಈ `ಸೀಸನ್ಸ್'ನ ಮೊದಲ ಅವತರಣಿಕೆ `ಭಲೆ ಬಸವ'ನ ಕಥೆ ಸಾಗುವುದು `ಎ.ಸಿ. ಲುಂಗಿ' ಕಂಪೆನಿಯ ಸುತ್ತ. ಲುಂಗಿ, ಎ.ಸಿ. ಆಗಿರುವಂತೆಯೇ ಪಾತ್ರಗಳೆಲ್ಲವೂ ಹಾಸ್ಯಕ್ಕೆ ಮುಕ್ತವಾಗಿವೆಯಂತೆ.

ತುಳು ರಂಗಭೂಮಿಯ ನಟ ಶೋಭರಾಜ್ `ಬಸವ'ನ ಪಾತ್ರಧಾರಿ. ಬಸವ ಸಾಮಾನ್ಯ ಪ್ರಜೆಯ ಪ್ರತಿನಿಧಿ. `ನನ್ನ ನೋವು ಮತ್ತೊಬ್ಬರಿಗೆ ನೋವು ತರಬಹುದು. ಆದರೆ ನಗೆ ಮತ್ತೊಬ್ಬರಿಗೆ ನೋವು ತರಬಾರದು' ಎನ್ನುವ ಪಾತ್ರ. ಯಾವ ಯಾವ ಬಗೆಯಲ್ಲಿ ಲುಂಗಿ ಉಡಬಹುದೋ ಆ ವೈವಿಧ್ಯವೆಲ್ಲವೂ ಎ.ಸಿ. ಲುಂಗಿ ಕಂಪೆನಿಯ ಪಾತ್ರಗಳ ಮೂಲಕ ಪರಿಚಿತವಾಗಿವೆ. `ಭಲೆ ಬಸವ'ನ ಕಲಾವಿದರಲ್ಲಿ ಬಹುಮಂದಿ ಹೊಸಬರು.   

ಧಾರಾವಾಹಿಯ ನಿರ್ದೇಶಕ ಪವನ್ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಂಭಾಷಣೆ ಬರೆಯುವ ಹೊಣೆ ಎಂ.ಎಸ್. ನರಸಿಂಹ ಮೂರ್ತಿ ಅವರದ್ದು. ಸತೀಶ್ಚಂದ್ರ, ರಾಜೇಶ್ ಡಾಲಿ, ರಾಜೇಶ್ವರಿ ತಲ್ವಾರ್ ಮತ್ತಿತರರು ಧಾರಾವಾಹಿಯ ಹಾಸ್ಯದ ಎಸಳುಗಳು.

`ಟಿಆರ್‌ಪಿ ಚೆನ್ನಾಗಿದ್ದರೆ ಆ ಧಾರಾವಾಹಿ ಹರವನ್ನು ವಿಸ್ತರಿಸುತ್ತಲೇ ಸಾಗುತ್ತದೆ. ಆದರೆ ಜನರ ಮನಸ್ಸಿನಲ್ಲಿ ಅದು ಹೇಗೆ ನೆಲೆಯೂರುತ್ತಿದೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಕೆಲವು ಮೆಗಾ ಧಾರಾವಾಹಿಗಳು ವೀಕ್ಷಕರ ತಾಳ್ಮೆ ಪರೀಕ್ಷಿಸುವಂತೆ ಪ್ರಸಾರವಾಗುತ್ತಿವೆ.  ಆದರೆ ಈ ಹೊಸ `ಸೀನಸ್ಸ್'ನಲ್ಲಿ ಕಥೆಗೆ ಕಾಲದ ಚೌಕಟ್ಟಿದೆ. ಕಥೆಯ ಅಂಶ ಮತ್ತು ಆಶಯ ಚಿಕ್ಕದಾಗಿ ಚೊಕ್ಕವಾಗಿ ಇರಬೇಕು. ಆಗ ಮಾತ್ರ ವೀಕ್ಷಕರಿಗೆ ಮುಟ್ಟುತ್ತದೆ' ಎನ್ನುವುದು ಸಿಹಿಕಹಿ ವಾದ.

`ಭಲೆ ಬಸವ'ನ ಮೂಲಕ ಹೊಸ ಪ್ರಯೋಗಕ್ಕಿಳಿದಿರುವ ಚಂದ್ರು ಅವರಿಗೆ ಇಲ್ಲಿ ಎದುರಾಗುವ ಸಮಸ್ಯೆಗಳು ಮುಂದಿನ ಧಾರಾವಾಹಿ ಗಳಿಗೆ ಪಕ್ವವಾಗಲು ವೇದಿಕೆಯಂತೆ.

ಆರೇಳು ತಿಂಗಳ ಪ್ರಯೋಗದ ಮೂಸೆಯಲ್ಲಿ ಕಥೆ ರೂಪು ತಳೆದಿದ್ದಾಗಿ ಹೇಳಿದ ಝೀ ಕನ್ನಡ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥ ಕಿಶೋರ್ ಆಚಾರ್ಯ,  ಈ ಹೊಸ `ಸೀಸನ್ಸ್'ನ ಭವಿಷ್ಯದ ಕುರಿತು   ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.