ADVERTISEMENT

‘ಆಕೃತಿ’ ನಾಯಕಿ ತನ್ವಿ ರಾವ್‌ ನೃತ್ಯದ ಹೆಜ್ಜೆಗೆ ನಟನೆಯ ಗೆಜ್ಜೆ

ರೇಷ್ಮಾ
Published 20 ಆಗಸ್ಟ್ 2020, 19:30 IST
Last Updated 20 ಆಗಸ್ಟ್ 2020, 19:30 IST
ತನ್ವಿ ರಾವ್‌
ತನ್ವಿ ರಾವ್‌   

ಬಾಲಿವುಡ್‌ನಿಂದ ನಟನೆಯ ಪಯಣ ಆರಂಭಿಸಿ ಕನ್ನಡ ಕಿರುತೆರೆಯತ್ತ ಮುಖ ಮಾಡಿದ್ದಾರೆ ಕುಡ್ಲದ ಬೆಡಗಿ ತನ್ವಿ ರಾವ್‌. ನಟನೆಯೊಂದಿಗೆ ಓದಿನಲ್ಲೂ ಮುಂದುವರಿಯುವ ಕನಸು ಹೊಂದಿರುವ ಇವರು ಮುಂದಿನ ದಿನಗಳಲ್ಲಿ ತನ್ನದಲ್ಲದ ವ್ಯಕ್ತಿತ್ವದ ಪಾತ್ರಗಳಿಗೆ ಬಣ್ಣ ಹಚ್ಚುವ ಆಸೆ ಹೊಂದಿದ್ದಾರೆ.

ಆಕೆಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದ ಮೇಲೆ ವಿಪರೀತ ಆಸಕ್ತಿ. ತೊಟ್ಟಿಲಿನಲ್ಲಿ ಮಲಗಿದ್ದಾಗಲೇ ಸಂಗೀತಕ್ಕೆ ತಕ್ಕಂತೆ ಕೈ–ಕಾಲು ಆಡಿಸುತ್ತಿದ್ದ ಆ ಹುಡುಗಿ 4ನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿದ್ದರು. ನೃತ್ಯ ತರಬೇತಿ ಪಡೆಯುತ್ತಾ ನಟನೆಯ ಮೇಲೂ ಒಲವು ಮೂಡಿಸಿಕೊಂಡಿದ್ದರು. ಅವರೇ ಉದಯ ವಾಹಿನಿಯ ‘ಆಕೃತಿ’ ಧಾರಾವಾಹಿಯ ನಾಯಕಿ ತನ್ವಿ ರಾವ್.

ಮಂಗಳೂರಿನ ತನ್ವಿ ಪದವಿ ಮುಗಿಸಿ, ಈಗ ಮನಶ್ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಯೋಚನೆಯಲ್ಲಿದ್ದಾರೆ. ಮೊದಲು ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಎಂದುಕೊಂಡಿದ್ದ ಇವರು ಈಗ ನಟನೆಯ ಜೊತೆಗೆ ಥೆರಪಿಸ್ಟ್ ಆಗುವ ಕನಸು ಕಾಣುತ್ತಿದ್ದಾರೆ.

ADVERTISEMENT

ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ..
ಮಾಧುರಿ ದಿಕ್ಷೀತ್ ಅವರನ್ನು ಅನುಕರಿಸುವ ತನ್ವಿ ಮಾಧುರಿ ಅಭಿನಯದ‘ಗುಲಾಬ್‌ ಗ್ಯಾಂಗ್’ ಸಿನಿಮಾದ ಮೂಲಕ ನಟನೆ ಆರಂಭಿಸಿದರು. 15ನೇ ವಯಸ್ಸಿನಲ್ಲಿ ಬಾಲಿವುಡ್‌ ಪ್ರವೇಶ. ‘ಗನ್ಸ್ ಆಫ್‌ಬನಾರಸ್’ ಎಂಬ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ‘ರಂಗ್ ಬಿರಂಗಿ’ ಸಿನಿಮಾದ ಮೂಲಕ ಚಂದನವನದಲ್ಲೂ ಹೆಜ್ಜೆಗುರುತು ಮೂಡಿಸಿದ್ದಾರೆ ತನ್ವಿ.

ಪದವಿ ಮುಗಿಸಿದ ಬಳಿಕ ವರ್ಷಗಳ ಕಾಲ ಮುಂಬೈ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಿದರು. ಅಲ್ಲಿಂದ ಮರಳಿದ ಇವರಿಗೆ ಆಕೃತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಧಾರಾವಾಹಿಗೆ ಆಯ್ಕೆಯಾದ ಬಗೆ
‘ನಾನು ಕ್ರೈಸ್ಟ್‌ ಕಾಲೇಜಿನಲ್ಲಿ ಓದುತ್ತಿರುವಾಗ ಧಾರಾವಾಹಿ ನಿರ್ಮಾಪಕರಾದ ಕೆ. ಎಂ. ಚೈತನ್ಯ ಅವರಿಗೆ ಬೇರೆ ಪ್ರಾಜೆಕ್ಟ್‌ವೊಂದಕ್ಕೆ ಆಡಿಷನ್ ಕೊಟ್ಟಿದ್ದೆ. ಆದರೆ ಕೆಲವು ಕಾರಣಗಳಿಂದ ಆಗ ನಾನು ಆಯ್ಕೆ ಆಗಿರಲಿಲ್ಲ. ಆದರೆ ಚೈತನ್ಯ ಅವರು ನನ್ನ ಹೆಸರನ್ನು ಬರೆದಿಟ್ಟುಕೊಂಡಿದ್ದರು. ನಾನು ಡಾನ್ಸ್ ವಿಡಿಯೊಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹಾಕುತ್ತಿದ್ದೆ. ಧಾರಾವಾಹಿಗೆ ನೃತ್ಯದ ಹಿನ್ನೆಲೆಯವರು ಬೇಕಾದ ಕಾರಣ ನನ್ನನ್ನು ಸಂಪರ್ಕಿಸಿದ್ದರು. ಧಾರಾವಾಹಿ ಕತೆ ನನಗೆ ತುಂಬಾ ಇಷ್ಟವಾಗಿತ್ತು. ಅಲ್ಲದೇ ಇದು ಮಹಿಳಾಕೇಂದ್ರಿತ ಕತೆ. ಅಮ್ಮ–ಮಗಳ ಪಾತ್ರವೇ ಇಲ್ಲಿ ಮುಖ್ಯ. ಹಾಗಾಗಿ ನಾನು ನಟಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ.

’ಧಾರಾವಾಹಿಯಲ್ಲಿ ನನ್ನದು ಕಾಲೇಜಿಗೆ ಹೋಗುವ ಮುಗ್ಧ ಹುಡುಗಿಯ ಪಾತ್ರ. ಆ ಹುಡುಗಿಯ ಜೀವನದಲ್ಲಿ ನಡೆಯುವ ಆಕಸ್ಮಿಕ ಘಟನೆ ಅವಳನ್ನು ಹೇಗೆಲ್ಲಾ ಬದಲಿಸುತ್ತದೆ ಎಂಬುದನ್ನು ಕತೆ ಒಳಗೊಂಡಿದೆ’ ಎನ್ನುತ್ತಾ ಸಂಕ್ಷಿಪ್ತವಾಗಿ ಪಾತ್ರ ವಿವರಣೆ ನೀಡುತ್ತಾರೆ ತನ್ವಿ.

ಆಕೃತಿ ಧಾರಾವಾಹಿ ಕುರಿತು..
ಕೌಟುಂಬಿಕ ಕಥೆಯ ಜತೆಗೆ ಹಾರರ್‌ ಅಂಶಗಳಿಂದ ಕೂಡಿರುವ ‘ಆಕೃತಿ’ ಧಾರಾವಾಹಿ ಆಗಸ್ಟ್‌ 24ರಿಂದ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ.

ಈ ಧಾರಾವಾಹಿಯನ್ನು ಖ್ಯಾತ ಸಿನಿಮಾ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ. ಹರಿದಾಸ್.ಪಿ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತಿದ್ದಾರೆ. ಎಂ.ಕುಮಾರ್‌ ನಿರ್ದೇಶನ ಮತ್ತು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.