ADVERTISEMENT

ಸಂಧಾನ ಸಭೆ ಸಫಲ: ನಟ ಅನಿರುದ್ಧ ನಿರಾಳ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 20:42 IST
Last Updated 10 ಡಿಸೆಂಬರ್ 2022, 20:42 IST
ಅನಿರುದ್ಧ
ಅನಿರುದ್ಧ   

ಬೆಂಗಳೂರು: ಕಿರುತೆರೆ ನಿರ್ಮಾಪಕರ ಸಂಘ, ಟೆಲಿವಿಷನ್‌ ಅಸೋಸಿಯೇಷನ್‌ ಹಾಗೂ ನಟ ಅನಿರುದ್ಧ ಅವರ ನಡುವೆ ಶನಿವಾರ(ಡಿ.10) ನಡೆದ ಸಂಧಾನ ಸಭೆ ಸಫಲವಾಗಿದೆ. ಈ ಮೂಲಕ ಕಿರುತೆರೆಯಿಂದ ಅನಿರುದ್ಧ ಅವರನ್ನು ತಾತ್ಕಾಲಿಕವಾಗಿ ಬಹಿಷ್ಕರಿಸಬೇಕು ಎನ್ನುವ ಆಗ್ರಹದ ವಿವಾದ ಸುಖಾಂತ್ಯಗೊಂಡಿದೆ.

ನಿರ್ದೇಶಕ ಪಿ.ಶೇಷಾದ್ರಿ ಅವರ ಸಮ್ಮುಖದಲ್ಲಿ ಈ ಸಭೆ ನಡೆದಿತ್ತು. ಸಭೆಯ
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅನಿರುದ್ಧ, ‘ಸಂಬಂಧಗಳಿಗೆ ಬೆಲೆ ಕೊಡುವವನು ನಾನು. ಸಂಬಂಧ ಉಳಿದುಕೊಳ್ಳಬೇಕು ಎನ್ನುವುದೇ ನನ್ನ ಉದ್ದೇಶವಾಗಿತ್ತು. ‘ಜೊತೆ ಜೊತೆಯಲಿ’ ದಾಖಲೆ ಸೃಷ್ಟಿ ಮಾಡಿದ ಧಾರಾವಾಹಿ. ಆ ಧಾರಾವಾಹಿಗೆ ಹೀಗಾಗಬಾರದಿತ್ತು. ಈ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್‌ ಅವರ ಜೊತೆ ನಾನು ಮೂರು ವರ್ಷ ಎರಡು ತಿಂಗಳು ಕೆಲಸ ಮಾಡಿದ್ದೇನೆ. ಈ ಸಂಬಂಧ ಬಿರುಕು ಬಿಡಬಾರದಿತ್ತು. ಏನೋ ಕಾರಣದಿಂದ ಹಾಗೆ ಆಗಿಹೋಯಿತು. ಅದು ದುರಂತ. ನಾನು ಅಭಿಮಾನಿಗಳ ಬಳಿ ಕ್ಷಮೆ ಕೋರುತ್ತೇನೆ. ಝೀ ವಾಹಿನಿಗೆ ಒಳ್ಳೆಯದಾಗಲಿ. ಆರೂರು ಜಗದೀಶ್‌ ಅವರಿಗೆ ಒಳ್ಳೆಯದಾಗಲಿ’ ಎಂದು ಜಗದೀಶ್‌ ಅವರನ್ನು ತಬ್ಬಿಕೊಂಡು ಭಾವುಕರಾದರು.

‘ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ, ಎಸ್‌. ನಾರಾಯಣ್‌ ಅವರ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಟಿಸುತ್ತಿದ್ದೇನೆ’ ಎಂದು ಇದೇ ವೇಳೆ ಅವರು ಹೇಳಿದರು.

ADVERTISEMENT

ನಿರ್ದೇಶಕ ಆರೂರು ಜಗದೀಶ್‌ ಮಾತನಾಡಿ, ‘ಅನಿರುದ್ಧ ಅವರ ಮೇಲೆ ವೈಯಕ್ತಿಕವಾಗಿ ಯಾರಿಗೂ ಯಾವುದೇ ದ್ವೇಷವಿಲ್ಲ. ಹಿರಿಯರು ಕುಳಿತು ಹಳೆಯ ಘಟನೆಗಳಿಗೆ ಸುಖಾಂತ್ಯ ಹಾಡಿದ್ದಾರೆ. ಹಳೆಯ ಘಟನೆಗಳನ್ನು ಮರೆತು, ಎಲ್ಲರೂ ಒಳ್ಳೆಯ ದಾರಿಯಲ್ಲಿ, ಶಿಸ್ತಿನಿಂದ ಹೋದರೆ ಒಳ್ಳೆಯದು. ಅನಿರುದ್ಧ ಅವರ ಮುಂದಿನ ಬಣ್ಣದ ಪಯಣ ಒಳ್ಳೆಯದಾಗಲಿ’ ಎಂದರು. ‘ಜೊತೆ ಜೊತೆಯಲಿ’ ಧಾರಾವಾಹಿಗೆ ಅನಿರುದ್ಧ ಅವರು ಮರಳುತ್ತಾರೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಗದೀಶ್‌, ‘ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ’ ಎಂದಷ್ಟೇ ಹೇಳಿದರು.

ಈ ಸಭೆಗೂ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅನಿರುದ್ಧ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್‌, ‘ಅನಿರುದ್ಧ ಅವರಿಗೆ ಅನ್ಯಾಯ ಆಗಲು ವಾಣಿಜ್ಯ ಮಂಡಳಿ ಬಿಡುವುದಿಲ್ಲ. ಇಡೀ ಉದ್ಯಮ ಅನಿರುದ್ಧ ಅವರ ಜೊತೆಗೆ ಇರಲಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.