ADVERTISEMENT

‘ಆಸ್ಪರ್ಜರ್‌’ ಅರಿವಿನೊಂದಿಗೆ ಭಗಿನಿಯರ ಬಾಂಧವ್ಯ

ಅಭಿಲಾಷ ಬಿ.ಸಿ.
Published 6 ಡಿಸೆಂಬರ್ 2018, 20:00 IST
Last Updated 6 ಡಿಸೆಂಬರ್ 2018, 20:00 IST
ಅಮೃತವರ್ಷಿಣಿ ಧಾರಾವಾಹಿಯ ನೋಟ
ಅಮೃತವರ್ಷಿಣಿ ಧಾರಾವಾಹಿಯ ನೋಟ   

ಅಮೃತವರ್ಷಿಣಿ. ಧಾರಾವಾಹಿ ಪ್ರಿಯರ ಪಾಲಿಗೆ ನೆಚ್ಚಿನ ಹೆಸರು ಇದು. ಸತತ ಆರು ವರ್ಷಗಳ ಕಾಲ ಪ್ರತಿ ಮನೆಯ ಟಿ.ವಿ. ಪರದೆಯ ಮೇಲೆ ‘ಅಮೃತವರ್ಷಿಣಿ’ ಎನ್ನುವ ಹಾಡೊಂದು ಕಾಣಿಸುತ್ತಿತ್ತು. ‘ಸುವರ್ಣ’ ವಾಹಿನಿಗೆ ಹೊಸ ಗರಿ ತಂದುಕೊಟ್ಟಿತ್ತು ಆ ಧಾರಾವಾಹಿ.

ಅದೇ ಹೆಸರಿನೊಂದಿಗೆ ಹೊಸ ಕಥೆಯನ್ನು ಹೊತ್ತು, ಹೊಸತನವನ್ನು ಸೇರಿಸಿಕೊಂಡು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮತ್ತೊಮ್ಮೆ ‘ಅಮೃತವರ್ಷಿಣಿ’ ಬಿತ್ತರವಾಗುತ್ತಿದೆ. ಆದರೆ ಧಾರಾವಾಹಿಯ ಶೀರ್ಷಿಕೆ ಹೊರತುಪಡಿಸಿದರೆ ಮತ್ತೆಲ್ಲವೂ ಇಲ್ಲಿ ಭಿನ್ನ ಎನ್ನುತ್ತಾರೆ. ಇದನ್ನು ನಿರ್ದೇಶಿಸುತ್ತಿರುವವರು ಕೋರಮಂಗಲ ಅನಿಲ್‌.

‘ಮೇಘ ಮಯೂರಿ’, ‘ಮಹಾದೇವಿ’, ಮತ್ತು ‘ಬಿಳಿಹೆಂಡ್ತಿ’ ಧಾರಾವಾಹಿಗಳ ನಿರ್ದೇಶನದ ಅನುಭವವಿರುವ ಅನಿಲ್‌ ಅವರಿಗೆ ‘ಅಮೃತವರ್ಷಿಣಿ’ ಹೊಸ ಸವಾಲು.

ADVERTISEMENT

‘ಆಸ್ಪರ್ಜರ್‌ ಸಿಂಡ್ರೋಮ್’ ಎನ್ನುವ ಅಪರೂಪದ ನ್ಯೂನತೆಯುಳ್ಳ ಬಾಲಕಿ ಎದುರಿಸುವ ಸವಾಲುಗಳು, ಆ ನ್ಯೂನತೆಯ ಲಕ್ಷಣಗಳು, ಚಿಕಿತ್ಸಾ ವಿಧಾನಗಳ ಕುರಿತು ಪ್ರೇಕ್ಷಕರಿಗೆ ಅರಿವು ಮೂಡಿಸುತ್ತಲೇ, ಸಂಬಂಧಗಳ ಸೌಂದರ್ಯವನ್ನು ತೋರಿಸುತ್ತದೆ ಈ ಧಾರಾವಾಹಿ. ಅದರಲ್ಲೂ ಮುಖ್ಯವಾಗಿ, ವರ್ಷಾ ಮತ್ತು ಅಮೃತಾ ಎಂಬ ಅವಳಿ ಸಹೋದರಿಯರ ನಡುವಿನ ಸಂಬಂಧವನ್ನು ಕಟ್ಟಿಕೊಡುತ್ತದೆ.

ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾದಾಗ ಅಕ್ಕ ವರ್ಷಾ ತಾನೇ ತಾಯಿಯಾಗಿ ಅಮೃತಾಳನ್ನು ಸಲಹುತ್ತಾಳೆ. ತಂಗಿ ತನ್ನ ನ್ಯೂನತೆಯನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾಳೆ. ಅಕ್ಕನ ವಾತ್ಸಲ್ಯ, ಕಾಳಜಿಯನ್ನು ಧಾರಾವಾಹಿ ನಿರೂಪಿಸುತ್ತದೆ.

ಅಮೃತಾಳಿಗಿರುವ ಆಸ್ಪರ್ಜರ್ ಸಿಂಡ್ರೋಮ್‌ ಕುರಿತು ಮಾಹಿತಿಯಿಲ್ಲದ ಸಮಾಜ ಆಕೆಯನ್ನು ಅರೆಹುಚ್ಚಿ ಎಂದೇ ಪರಿಗಣಿಸುತ್ತದೆ. ಸಮಾಜದ ಜೊತೆ ಬೆರೆಯಲು ಹೆಣಗಾಡುವ ಅಮೃತಾಳಿಗೆ ವರ್ಷಾ ಸಹಕರಿಸುತ್ತಾಳೆ. ಕೆಲವೊಮ್ಮೆ ತಂಗಿಯ ಫೋಬಿಯಾ ಕುರಿತು ಮರುಗುವ ಅಕ್ಕನಾಗಿ, ಬಾಲ್ಯ ಸಹಜ ತುಂಟಾಟದ ಹುಡುಗಿಯಾಗಿ, ಮತ್ತೆ ಕೆಲವೊಮ್ಮೆ ಮುಗ್ಧತೆಯೇ ಮೈವೆತ್ತ ಕಂದಮ್ಮಗಳಾಗಿ ಮಕ್ಕಳ ನಟನೆ ಆಪ್ತ ಭಾವ ನೀಡುತ್ತದೆ.

ಮಲ್ಲಿಗೆಹಳ್ಳಿ ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ಬೆಳೆದ ಈ ಅವಳಿ ಸಹೋದರಿಯರು ಅಮೃತಾಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ತಾಯಿಯೊಂದಿಗೆ ಮಹಾನಗರಿಗೆ ಬರುತ್ತಾರೆ. ಅಪಘಾತದಲ್ಲಿ ತಾಯಿ ಮೃತಪಟ್ಟ ನಂತರ ನಗರದ ಪರಿಚಯವಿಲ್ಲದ ಮಕ್ಕಳು ಪಡುವ ಪಾಡು, ಅನುಭವಿಸುವ ಕಷ್ಟಗಳು, ಇತರರೊಂದಿಗೆ ಬೆರೆಯಲು ಭಯಪಡುವ ಪ್ರವೃತ್ತಿ, ಸವಾಲುಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತವೆ.

‘ಸದ್ಯ ಕಿರುತೆರೆಯಲ್ಲಿ ಪ್ರೀತಿ, ಪ್ರೇಮ, ಕೌಟುಂಬಿಕ ಕಥನಗಳೇ ರಾರಾಜಿಸುತ್ತಿವೆ. ಅವುಗಳ ನಡುವೆ, ಅಪರೂಪದ ಆಸ್ಪರ್ಜರ್‌ ಸಿಂಡ್ರೋಮ್‌ ಕುರಿತು ಅರಿವು ಮೂಡಿಸುವ, ಮಕ್ಕಳ ಮುಗ್ಧತೆಯ ಕತೆ ಹೇಳುವ ಈ ಧಾರಾವಾಹಿ ನಿರ್ದೇಶಿಸುತ್ತಿದ್ದೇನೆ’ ಎನ್ನುತ್ತಾರೆ ಅನಿಲ್‌.

‘ಆಸ್ಪರ್ಜರ್ ಸಿಂಡ್ರೋಮ್‌ ಆಧರಿಸಿ ಕಿರುತೆರೆಯಲ್ಲಿ ಇದುವರೆಗೆ ಯಾವುದೇ ಧಾರಾವಾಹಿ ನಿರ್ಮಾಣವಾಗಿಲ್ಲ. ಬೆಳ್ಳಿತೆರೆಯಲ್ಲಿ ಮೈ ನೇಮ್‌ ಈಸ್‌ ಖಾನ್‌ ಸೇರಿದಂತೆ ಕೆಲವು ಸಿನಿಮಾಗಳಿಗೆ ಇದು ಕಥಾವಸ್ತುವಾಗಿದೆ. ನಮ್ಮ ಧಾರಾವಾಹಿಯಲ್ಲಿ ಇರುವುದು ಭಿನ್ನವಾದ ಕಥೆ’ ಎನ್ನುವುದು ಅನಿಲ್‌ ಅವರ ಅಂಬೋಣ.

ಮಕ್ಕಳಲ್ಲಿ ಈ ಸಮಸ್ಯೆ ಇದೆ ಎಂದು ಗುರುತಿಸುವುದೇ ತ್ರಾಸದಾಯಕ. ಇವರು ಸಾಮಾನ್ಯರಂತೆಯೇ ಇರುತ್ತಾರೆ. ದೈಹಿಕ, ಮಾನಸಿಕ ಬೆಳವಣಿಗೆಯಲ್ಲಿ ಕೊರತೆ ಇರುವುದಿಲ್ಲ. ಮಾತನಾಡುವುದರಲ್ಲಿ ಯಾವುದೇ ತೊಡಕುಗಳಿರುವುದಿಲ್ಲ. ಇದು ಅವರು ಸಮಾಜದ ಜೊತೆ ಬೆರೆಯುವುದರ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಯಾರೊಂದಿಗೂ ಬೆರೆಯದ ಈ ಮಕ್ಕಳು, ಶಬ್ದ ಮತ್ತು ಜನಜಂಗುಳಿಗೆ ಅಂಜುತ್ತಾರೆ. ಇಂತಹ ವಿಶಿಷ್ಟ ಕಥಾವಸ್ತು ಇಟ್ಟುಕೊಂಡು ಧಾರಾವಾಹಿ ಹೆಣೆಯುವುದು ಸವಾಲು ಎನ್ನುವುದು ನಿರ್ದೇಶಕರ ಅಭಿಪ್ರಾಯ.

ಈ ನ್ಯೂನತೆ ಇರುವ ಮಕ್ಕಳಿಗೆ ಚಿಕಿತ್ಸೆ ಕೊಡಿಸುವವರ ಪ್ರಮಾಣ ಕಡಿಮೆ. ಮಗುವಿನ ಸ್ವಾಭಾವವೇ ಹೀಗೆ ಎಂದು ಪೋಷಕರು ನಿರ್ಲಕ್ಷಿಸಿದರೆ, ದಡ್ಡ, ಮಂಕು ಎನ್ನುತ್ತಾ ಸಮಾಜ ಅವರ ಮನೋಸ್ಥೈರ್ಯವನ್ನು ಮತ್ತಷ್ಟು ಕುಂದಿಸುತ್ತದೆ. ಇದೊಂದು ಮಾನಸಿಕ ಕಾಯಿಲೆ. ಇದಕ್ಕೆ ಚಿಕಿತ್ಸೆ ಇದೆ ಎನ್ನುವುದರ ಅರಿವು ಎಷ್ಟೋ ಪೋಷಕರಿಗೆ ಇರುವುದಿಲ್ಲ. ಚಿಕ್ಕಂದಿನಲ್ಲಿಯೇ ಇದರ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣವಾಗುವ ಸಾಧ್ಯತೆಯಿದೆ. ಆಸ್ಪರ್ಜರ್ ಸಿಂಡ್ರೋಮ್‌ ಎನ್ನುವ ನ್ಯೂನತೆಯೊಂದಿದೆ ಎನ್ನುವುದು ತಿಳಿದರೆ ಧಾರಾವಾಹಿ ಸಾರ್ಥಕವಾದಂತೆ ಎನ್ನುತ್ತಾರೆ ಅನಿಲ್.

ವರ್ಷಾಳ ಪಾತ್ರಕ್ಕೆ ಜೀವ ತುಂಬಿರುವ ದ್ಯುತಿ ನಾಲ್ಕನೆ ತರಗತಿ ವಿದ್ಯಾರ್ಥಿನಿ. ಬೆಂಗಳೂರಿನ ರಾಜಾಜಿನಗರದ ನಿವಾಸಿ. ಮೈಸೂರಿನ ರಂಗಾಯಣದಲ್ಲಿ ಬೇಸಿಗೆ ಶಿಬಿರದಲ್ಲಿ ನಾಟಕವೊಂದಕ್ಕೆ ಬಣ್ಣಹಚ್ಚಿದ್ದಳು. ಆಕೆಯ ಆ ಅಭಿನಯ ಕಿರುತೆರೆಯಲ್ಲಿಯೂ ಅವಕಾಶದ ಬಾಗಿಲು ತೆರೆದು ಕೊಟ್ಟಿತು. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರೂ, ಪರಿಣಿತ ನಟರಂತೆ ನಟಿಸುತ್ತಿರುವ ಮಗಳ ಅಭಿನಯ ಕಂಡು ತಾಯಿ ವಾಣಿಶ್ರೀ ಹೆಮ್ಮೆಪಡುತ್ತಿದ್ದಾರೆ.

‘ಮಗಳು ಓದಿನ ಜೊತೆಗೆ ನಟನೆಯನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾಳೆ. ಶಾಲೆಗೆ ತೊಂದರೆಯಾಗದಂತೆ ಚಿತ್ರೀಕರಣಕ್ಕೆ ಸಮಯ ಮೀಸಲಿರಿಸಿದ್ದೇವೆ. ಎಲ್ಲರ ಸಹಕಾರ ಜೊತೆಗಿದೆ’ ಎನ್ನುತ್ತಾರೆ ವಾಣಿಶ್ರೀ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.