ADVERTISEMENT

‘ಬಾಹುಬಲಿ’ ಎಂಬ ದೃಶ್ಯಕಾವ್ಯ ಈಗ ಕನ್ನಡದಲ್ಲಿ

ಕಲರ್ಸ್ ಕನ್ನಡದಲ್ಲಿ ನ.15 ಸಂಜೆ 4.30ಕ್ಕೆ ಪ್ರಸಾರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 16:55 IST
Last Updated 12 ನವೆಂಬರ್ 2020, 16:55 IST
ಬಾಹುಬಲಿ ಪೋಸ್ಟರ್‌
ಬಾಹುಬಲಿ ಪೋಸ್ಟರ್‌   

ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ ‘ಬಾಹುಬಲಿ’ ಈ ಕಾಲದ ಮಹೋನ್ನತ ದೃಶ್ಯಕಾವ್ಯಗಳಲ್ಲೊಂದು. ದೃಶ್ಯಕಾವ್ಯವೇನೋ ಸರಿ, ಅದು ಶ್ರಾವ್ಯಕಾವ್ಯವೂ ಆಗಬೇಕೆಂದರೆ ಮಾತುಗಳೂ ನಮ್ಮ ಕನ್ನಡದಲ್ಲಿ ಇರಬೇಕಲ್ಲವೆ? ಇದೀಗ ‘ಕಲರ್ಸ್ ಕನ್ನಡ’ ಆ ಕೆಲಸ ಮಾಡಿದೆ. ಇದೇ ನವೆಂಬರ್ 15ರಂದು ‘ಬಾಹುಬಲಿ'ಯ ಒಂದನೇ ಭಾಗವನ್ನು ನೀವು ಕನ್ನಡದಲ್ಲಿ ನೋಡಬಹುದು. ಅದೂ ನಿಮ್ಮ ಮನೆಯಲ್ಲೇ ಕುಳಿತುಕೊಂಡು.

‘ಬಾಹುಬಲಿ’ ತಾಂತ್ರಿಕವಾಗಿ ಭಾರತೀಯ ಸಿನಿಮಾಗಳಿಗೆ ಹೊಸ ಬಾಗಿಲು ತೆರೆದ ಸಿನಿಮಾ. ಭಾರತೀಯ ಸಿನಿಮಾ ಮಾರುಕಟ್ಟೆಗೆ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಸಿನಿಮಾ. ಅಮ್ಮ ಮಕ್ಕಳ ಸಂಬಂಧ, ದಾಯಾದಿಗಳ ವೈಮನಸ್ಸು, ಒಡೆಯ-ಸೇವಕನ ನಂಟುಗಳೆಲ್ಲವನ್ನೂ ಕನಸಿನಂಥಾ ಕ್ಯಾನ್‌ವಾಸ್‌ನಲ್ಲಿ ಬಿಡಿಸಿಟ್ಟ ಚಿತ್ರವಿದು.

ಹಿಂದಿ, ತಮಿಳು, ತೆಲುಗು ಸೇರಿದಂತೆ ಇಡೀ ದೇಶ ಈ ಚೆಂದದ ಚಿತ್ರವನ್ನ ತಮ್ಮ ತಮ್ಮ ಮಾತೃಭಾಷೆಯಲ್ಲೇ ಆನಂದಿಸಿತು. ಆದರೆ ನಾವು ಮಾತ್ರ ಬೇರೆ ಭಾಷೆಯ ಮೂಲಕವೇ ಅರ್ಥವಾದಷ್ಟು ಅರ್ಥ ಮಾಡಿಕೊಂಡು ನೋಡಿದೆವು. ಇದೀಗ ಆ ಕೊರತೆಯನ್ನು ‘ಕಲರ್ಸ್ ಕನ್ನಡ’ ನಿವಾರಿಸಿದೆ. ಈ ಕುರಿತು ಮಾತನಾಡಿದ ವಯಾಕಾಂ 18ರ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್, ‘ಈ ಚಿತ್ರದ ಸಂಭಾಷಣೆಯನ್ನು ತುಂಬಾ ನಾಜೂಕಾಗಿ ಕನ್ನಡಕ್ಕೆ ತಂದಿದ್ದೇವೆ. ಕಥೆಯ ಭಾವ ಮುಕ್ಕಾಗದಂತೆ ಮಾತುಗಳನ್ನು ಕನ್ನಡಕ್ಕೆ ಒಗ್ಗಿಸಲು ಶ್ರಮವಹಿಸಿದ್ದೇವೆ’ ಎಂದರು.

ADVERTISEMENT

‘ಕಣ್ತುಂಬುವ ರಂಗುರಂಗಿನ ಚಿತ್ರಗಳಿಗೆ ಕನ್ನಡದ್ದೇ ಕಿವಿತುಂಬುವ ಸಂಭಾಷಣೆಗಳು ಸೇರಿದ ಮೇಲೆ ಬಾಹುಬಲಿಯನ್ನು ನೋಡುವುದು ಹೊಸದೇ ಅನುಭವವಾಗಬಲ್ಲದು. ಕನ್ನಡದಲ್ಲೇ ಇರುವುದರಿಂದ ಈ ಸಲ ಒಂದೂ ವಿವರ ತಪ್ಪಿಹೋಗುವುದಿಲ್ಲ- ಕಟ್ಟಪ್ಪ ಯಾಕೆ ಹಾಗೆ ಮಾಡಿದ ಎಂಬುದನ್ನೂ ಸೇರಿ!’ ಎನ್ನುವುದು ಅವರ ಅಭಿಮತ. ಬಾಹುಬಲಿ ಒಂದು ವಿಶೇಷ ಸಿನಿಮಾ. ಸ್ಪೆಷಲ್ ಎಫೆಕ್ಟಿಗೆ ಏನಿದ್ರೂ ಇಂಗ್ಲಿಷ್ ಸಿನಿಮಾಗಳೇ ಸರಿ ಅಂತಿರುವಾಗ ಸ್ಥಳೀಯ ಕತೆಗೆ ಹಾಲಿವುಡ್‌ನ ತಂತ್ರಜ್ಞಾನ ಬೆರೆತರೆ ಎಂಥ ಪವಾಡವಾಗಬಹುದೆಂಬುದನ್ನ ಅದು ತೋರಿಸಿಕೊಟ್ಟಿತು. ಒಳ್ಳೆಯ ಕತೆಗೆ ಒಳ್ಳೇ ಟೆಕ್ನಾಲಜಿ ಸೇರಿದ ಒಳ್ಳೆ ಉದಾಹರಣೆ ಎಂದರೆ ‘ಬಾಹುಬಲಿ’.

ಈ ಅನುಭವವನ್ನು ಪಡೆಯಲು ನೀವು ಮಾಡಬೇಕಾದ್ದಿಷ್ಟೇ, ಇದೇ ನವೆಂಬರ್ 15ರಂದು ಸಂಜೆ 4.30ಕ್ಕೆ ‘ಕಲರ್ಸ್ ಕನ್ನಡ’ ಚಾನೆಲ್ ಟ್ಯೂನ್ ಮಾಡುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.