ADVERTISEMENT

ಏಳು ಗಂಟೆಗೆ ಅಕ್ಕ, ಏಳೂವರೆಗೆ ತಂಗಿ ಕಥೆ!!

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 0:00 IST
Last Updated 10 ಮಾರ್ಚ್ 2023, 0:00 IST
ಸುಷ್ಮಾರಾವ್‌, ಭೂಮಿಕಾ
ಸುಷ್ಮಾರಾವ್‌, ಭೂಮಿಕಾ   

ಕಲರ್ಸ್‌ ಕನ್ನಡದ ಧಾರಾವಾಹಿಗಳ ಪೈಕಿ ಜನ ಮೆಚ್ಚುಗೆ ಗಳಿಸಿರುವ ಧಾರಾವಾಹಿ ‘ಭಾಗ್ಯಲಕ್ಷ್ಮೀ’ ಹೊಸ ಪ್ರಯೋಗಕ್ಕೆ ತೆರೆದುಕೊಂಡಿದೆ. ಧಾರಾವಾಹಿಯ ಕಥೆ ಪ್ರಮುಖ ಘಟ್ಟ ತಲುಪಿರುವ ಹೊತ್ತಿನಲ್ಲಿ ಅದನ್ನು ಎರಡು ಧಾರಾವಾಹಿಗಳಾಗಿ ಕವಲೊಡೆಸಿ ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ.

ಈಗ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ಯ ಜೊತೆಗೆ ಏಳೂವರೆಯಿಂದ ‘ಲಕ್ಷ್ಮೀ ಬಾರಮ್ಮ’ ಎಂಬ ಹೊಸ ಧಾರಾವಾಹಿ ಇದೇ ಸೋಮವಾರದಿಂದ (ಮಾರ್ಚ್‌ 13) ಪ್ರಸಾರವಾಗಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅಕ್ಕ ಭಾಗ್ಯಳ ಕತೆ ಮುಂದುವರಿಯಲಿದೆ. ಅದರ ಬೆನ್ನಿಗೇ ಪ್ರಸಾರವಾಗಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಈಗಷ್ಟೇ ಮದುವೆಯಾಗಿ ಗಂಡನ ಮನೆಗೆ ತೆರಳಿರುವ ತಂಗಿ ಲಕ್ಷ್ಮಿಯ ಬದುಕು ತೆರೆದುಕೊಳ್ಳುತ್ತದೆ. ಆದರೆ ಈ ಅಕ್ಕತಂಗಿಯರ ಬಾಂಧವ್ಯ ಎಷ್ಟು ಹತ್ತಿರದ್ದು ಎಂಬುದು ಈಗಾಗಲೇ ವೀಕ್ಷಕರಿಗೆ ಗೊತ್ತಿರುವುದರಿಂದ ಧಾರಾವಾಹಿಗಳು ಎರಡಾದರೂ ಅವಳಿ ಕಥೆಗಳಾಗಿ ಬೆಳೆಯಲಿವೆ ಎಂದಿದೆ ವಾಹಿನಿ.

ADVERTISEMENT

ಪದ್ಮಜಾ ರಾವ್, ಸುಷ್ಮಾ ರಾವ್, ಸುದರ್ಶನ್ ರಂಗರಾಜು ಮತ್ತು ಗೌತಮಿ ಗೌಡ ಪ್ರಮುಖ ಪಾತ್ರದಲ್ಲಿರುವ ‘ಭಾಗ್ಯಲಕ್ಷ್ಮೀ’ಯನ್ನು ಮುನ್ನಡೆಸಲಿದ್ದಾರೆ. ಶಮಂತ್, ಭೂಮಿಕಾ, ಸುಷ್ಮಾ ನಾಣಯ್ಯ, ತನ್ವಿರಾವ್ ಮುಂತಾದವರು ಹೊಸದಾಗಿ ಶುರುವಾಗಲಿರುವ ‘ಲಕ್ಷ್ಮೀ ಬಾರಮ್ಮ’ ಜೊತೆ ಸಾಗಲಿದ್ದಾರೆ. ಭಾಗ್ಯ ಈಗಷ್ಟೇ ಹರಸಾಹಸ ಮಾಡಿ ತಂಗಿ ಲಕ್ಷ್ಮಿಯ ಮದುವೆ ಮಾಡಿ ಮುಗಿಸಿದ್ದಾಳೆ. ಅಕ್ಕ ತಂಗಿ ಇನ್ನು ಮುಂದೆ ಎರಡು ಮನೆಗಳಲ್ಲಿ ಮಾತ್ರವಲ್ಲ, ಎರಡು ಬೇರೆ ಬೇರೆ ಧಾರಾವಾಹಿಗಳಲ್ಲಿ ಬದುಕಬೇಕಾಗಿದೆ. ಎರಡೂ ಧಾರಾವಾಹಿಗಳನ್ನು ನಿರ್ಮಿಸುತ್ತಿರುವುದು ಶ್ರೀ ಜೈ ಮಾತಾ ಕಂಬೈನ್ಸ್. ಈ ಹೊಸ ಪ್ರಯೋಗವನ್ನು ವೀಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ
ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.