ADVERTISEMENT

‘ಅಡುಗೆ ಆಸ್ವಾದಿಸೋದಷ್ಟೇ ಗೊತ್ತಿರೋದು’

ಮಾನಸ ಬಿ.ಆರ್‌
Published 14 ಜನವರಿ 2019, 19:47 IST
Last Updated 14 ಜನವರಿ 2019, 19:47 IST
   

ನೀವು ಅದ್ಭುತವಾಗಿ ಅಡುಗೆಮಾಡ್ತಾರೆ ಅಂದ್ಕೊಂಡವರಿಗೆ ‘ಬಿಗ್‌ಬಾಸ್‌’ ವೇದಿಕೆಯಲ್ಲೇ ಶಾಕ್‌ ಕೊಟ್ರಂತೆ?

ಹೌದು. ನಾನು ಅಡುಗೆ ಕಾರ್ಯಕ್ರಮದ ನಿರೂಪಕ ಅಷ್ಟೇ. ನಾನು ಪಾಕ ಪ್ರವೀಣ ಅಂತ ಎಲ್ಲರೂ ತಪ್ಪು ತಿಳಿದುಕೊಂಡು ಬಿಟ್ಟಿದ್ದಾರೆ. ನಿಜವಾಗಿ ನನಗೆ ಒಗ್ಗರಣೆ ಹಾಕೋದೂ ಗೊತ್ತಿಲ್ಲ. ರುಚಿಯನ್ನು ಚೆನ್ನಾಗಿ ಆಸ್ವಾದಿಸೋದು, ಮಾತಿನಲ್ಲೇ ಹದವನ್ನು ಹೇಳುವುದು ನನಗೆ ಚೆನ್ನಾಗಿ ಗೊತ್ತು. ಅದೇ ನನ್ನ ಬದುಕಿಗೆ ದಾರಿ ಆ‌ಯ್ತು ಕೂಡ.

ಬಿಗ್‌ಬಾಸ್‌ ವೇದಿಕೆಯಲ್ಲಿ ಸುದೀಪ್‌ ಅವರ ಎದುರೇ, ‘ನನಗೆ ಅಡುಗೆ ಮಾಡೋಕೆ ಬರಲ್ಲ’ ಅಂದಾಗ ಸಾಕಷ್ಟು ಜನರಿಗೆ ಆಶ್ಚರ್ಯವಾಗಿತ್ತು.

ADVERTISEMENT

ಒಗ್ಗರಣೆ ಡಬ್ಬಿಯಿಂದ ಬಿಗ್‌ಬಾಸ್‌ವರೆಗಿನ ಹಾದಿ ಹೇಗಿತ್ತು?

ಅಡುಗೆ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಬೆಳೆದೆ. ಈಗ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದೇನೆ ಅನ್ನೋದು ಆಚೆ ಬಂದಾಗಲೇ ಸಾಬೀತಾಯಿತು.

ಹೌದು. ನೀವು ಅಚಾನಕ್‌ ಆಗಿ ಹೊರಬರಲು ಏನು ಕಾರಣ?

ನನಗೂ ಅದು ಗೊತ್ತಿಲ್ಲಪ್ಪ. ಅವರ ಲೆಕ್ಕಾಚಾರ ನನಗೆ ಅರ್ಥ ಆಗಿಲ್ಲ. ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಸಾಕಷ್ಟು ಜನರು ಇದನ್ನು ಪ್ರಶ್ನಿಸಿದ್ದಾರೆ. ಮೊದಲೆರಡು ವಾರ ನಾನು ಎಲ್ಲರನ್ನೂ ಅರ್ಥ ಮಾಡಿಕೊಳ್ಳೋಕೆ ಸಮಯ ತೆಗೆದುಕೊಂಡೆ. ಆಗ ನನ್ನನ್ನು ತುಂಬಾ ಜನ ಬೈಕೊಂಡ್ರಂತೆ. ಹೊರಗೆ ಬಂದ ಮೇಲೆ ಗೊತ್ತಾಯ್ತು. ಉಳಿದ ವಾರಗಳಲ್ಲಿ ನನ್ನ ಆಟವನ್ನು ಬಿಟ್ಟುಕೊಟ್ಟಿಲ್ಲ. ಇನ್ನೊಂದು ವಾರ ಇರಬೇಕಿತ್ತು ಅನ್ನಿಸಿತ್ತು. ಹೋಗ್ಲಿ ಬಿಡಿ.

ಬಿಗ್‌ಬಾಸ್‌ ಮನೆಯಿಂದ ನೀವು ಸಂಪಾದಿಸಿದ್ದು?

ಬಿಗ್‌ಬಾಸ್‌ ಮನೆಯಿಂದಒಳ್ಳೆಯ ವ್ಯಕ್ತಿತ್ವವನ್ನು ಉಳಿಸಿಕೊಂಡು ಆಚೆ ಬರೋದು ಮುಖ್ಯ. ಕಪ್‌ ಗೆಲ್ಲೋದು ಅಲ್ಲ. ಕಪ್‌ಗೋಸ್ಕರ ನಮ್ಮ ವ್ಯಕ್ತಿತ್ವವನ್ನೇ ಹರಾಜು ಹಾಕಲು ಸಾಧ್ಯವಿಲ್ಲ. ಯಾರೋ ನೋಡ್ತಾರೆ ಅಂತ ನಾಟಕ ಮಾಡೋಕೆ ಆಗಲ್ಲ.ನಾಳೆ ಹೊರಗೆ ಬಂದಮೇಲೆ ಅವರ ಮುಖಗಳನ್ನೇ ನೋಡಬೇಕು. ಮನೆಯವರಿಗೆ ಉತ್ತರ ಕೊಡಬೇಕು ಅನ್ನುವ ಪ್ರಜ್ಞೆ ನಮಗಿರಬೇಕು ಅಲ್ವಾ..

ಹೊರಗೆ ಬಂದಾಗ ಎಲ್ಲರ ಪ್ರತಿಕ್ರಿಯೆ ಹೇಗಿತ್ತು?

ನಮ್ಮದು ಕೂಡು ಕುಟುಂಬ. 15 ಜನ ಇದ್ದೇವೆ. ನನ್ನನ್ನು ಬಿಗ್‌ಬಾಸ್‌ಗೆ ಕಳಿಸೋಕೆ ಅವರಿಗೆಲ್ಲಾ ಇಷ್ಟ ಇರಲಿಲ್ಲ. ಆದರೆ ಈಗ ಎಲ್ಲಾ ಖುಷಿಯಾಗಿದ್ದಾರೆ. ಮುಂದಿನವಾರ ಬಿಗ್‌ಬಾಸ್‌ ಮನೆಗೆ ಬರಬೇಕು ಎಂಬ ಸಂದೇಶ ನನ್ನ ಪತ್ನಿಗೆ ಸಿಕ್ಕಿತ್ತು. ಅವರು ಖುಷಿಯಿಂದ ತಯಾರಿ ನಡೆಸಿದ್ದರು. ಆದರೆ ನಾನೇ ಬಂದೆ.

ಜನರು ಗುರುತಿಸುತ್ತಾರಾ?

ಅಯ್ಯೋ, ಸಿಕ್ಕಾಪಟ್ಟೆ. ಹೊರಗೆ ಹೋಗೋಕೆ ಕಷ್ಟ ಆಗ್ತಿದೆ. ಎಲ್ಲಿ ಹೋದರೂ ಜನರುಸೇರಿಕೊಂಡು ಬಿಡ್ತಾರೆ. ಮುತ್ತಿಕೊಂಡು ಪ್ರಶ್ನೆ ಕೇಳ್ತಾರೆ. ನಿಮ್ಮನ್ನು ಹೊರಗೆ ಕಳಿಸಿದ್ದು ಸರಿ ಅಲ್ಲ ಅಂತಾರೆ. ಕೇಳಿಸಿಕೊಂಡು ಸುಮ್ನೆ ಬರ್ತೀನಿ..

‘ಕಪ್‌’ ಯಾರು ಗೆಲ್ಲಬಹುದು?

ಈಗಲೇ ಹೇಳೋದು ಕಷ್ಟ.ಇರೋದ್ರಲ್ಲಿ ಧನರಾಜ್‌ ಗೆಲ್ಲಬಹುದು ಅನ್ನಿಸುತ್ತೆ. ಶಶಿ ಗೆಲ್ಲೋದು ಕಷ್ಟ. ಗುಂಪುಗಾರಿಕೆ ಬಿಟ್ಟಿದ್ದರೆ ಅವರಿಗೂ ಒಳ್ಳೆ ಅವಕಾಶ ಇತ್ತು. ಜಯಶ್ರೀ ಅವರು ಕೂಡ ಗುಂಪಿನಲ್ಲಿ ಕಾಣಿಸಿಕೊಂಡಿದ್ದರಿಂದ ಕೆಲವು ಅವಕಾಶ ಕಳೆದುಕೊಂಡ್ರು, ಇನ್ನು ಆ್ಯಂಡಿ ಬಗ್ಗೆ ಹೇಳೋದು ಏನಿದೆ ನೀವೇ ನೋಡ್ತೀರಲ್ಲಾ...

ಮನೆಯಿಂದ ಆಚೆ ಬಂದ ತಕ್ಷಣ ಸಹ ಸ್ಪರ್ಧಿಗಳನ್ನು ಮಾತಾಡಿಸಿದ್ರಾ?

ಹೌದು. ಮೊದಲು ಜಿಮ್‌ ರವಿ ಅವರಿಗೆ ಕರೆ ಮಾಡಿದೆ. ಖುಷಿ ಪಟ್ಟರು. ಅವರು ನಿಜವಾದ ಸದ್ಗುಣ ಇರುವ ವ್ಯಕ್ತಿ. ನಾವೆಲ್ಲಾ ಮೊದಲೇ ಅವರ ಕುರಿತ ಲೇಖನಗಳನ್ನು ಪತ್ರಿಕೆಯಲ್ಲಿ ಓದ್ತಾ ಇದ್ವಿ. ಅಷ್ಟು ಹೆಸರಾಂತ ವ್ಯಕ್ತಿಯಾಗಿದ್ದರೂ ಅವರಿಗೆ ಗರ್ವ ಇಲ್ಲ.

ಮನೆಯ ಆಟಗಳೆಲ್ಲಾ ಮೊದಲೇ ನಿಶ್ಚಯವಾಗಿರುತ್ತಾ ಅಥವಾ ಹೆಸರಿಗೆ ತಕ್ಕಂತೆ ರಿಯಲ್ ಆಗಿರುತ್ತಾ?

ಅಲ್ಲಿ ಏನೂ ನಿಶ್ಚಯ ಆಗಿರಲ್ಲ. ಯಾವ ಆಟವನ್ನು ಹೇಗಾದ್ರೂ ಆಡಬಹುದು. ನಮಗೆ ಕೊಡುವ ನಿರ್ದೇಶನಗಳನ್ನು ಇಟ್ಟುಕೊಂಡು ಆಟವಾಡುತ್ತಾ ಹೋಗಬೇಕು. ಮೊದಲೇ ನಿಶ್ಚಯ ಮಾಡುವಂತದ್ದು ಏನೂ ಇಲ್ಲ. ನಾನು ನ್ಯಾಯಾಧೀಶನಾಗಿ ಮಾಡಿದ ಪಾತ್ರ ಜನರಿಗೆ ತುಂಬಾ ಇಷ್ಟ ಆಗಿದೆ. ಹೊರಗೆ ಬಂದ ಮೇಲೆ ಸಾಕಷ್ಟು ಜನರು ಅದನ್ನೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.