ಪವಿ ಪೂವಪ್ಪ
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದವು. ಹಳೆಯ ಸಂಚಿಕೆಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಅವರಿಗಿದ್ದರಿಂದ ಮನೆಯಲ್ಲಿ ಏನೋ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ, ಮನೆಯೊಳಗೆ ಹೋದ ಪವಿ ಮೂರೇ ವಾರಕ್ಕೆ ಹೊರ ಬಂದಿದ್ದಾರೆ. ಮೂರು ವಾರಗಳ ಈ ಪಯಣದ ಬಗ್ಗೆ ಜಿಯೋ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹೊರ ಬರುತ್ತೆನೆಂಬ ಸಣ್ಣ ಸುಳಿವು ಇತ್ತು
ಮನೆಯಲ್ಲಿ ಎಲ್ಲರೂ ನನ್ನನ್ನೇ ಗುರಿಯಾಗಿಸಿಕೊಂಡು ಮಾತನಾಡುವುದನ್ನು ಕಂಡು ನಾನು ಈ ವಾರ ಮನೆಯಿಂದ ಹೊರ ಹೋಗುತ್ತೇನೆ ಎಂಬ ಸಣ್ಣ ಅನುಮಾನ ನನ್ನೊಳಗೆ ಬಂದಿತ್ತು. ಆದರೆ ಅದು ಅಷ್ಟು ಖಚಿತವಾಗಿರಲಿಲ್ಲ. ಈ ವಾರ ಸಕ್ರಿಯವಾಗಿ ಆಡುವುದರಲ್ಲಿಯೂ ಸ್ವಲ್ಪ ಎಡವಿದ್ದೆ. ಎಲಿಮಿನೇಷನ್‌ಗೆ ಇದು ಕೂಡ ಒಂದು ಕಾರಣ ಎಂದರು.
ವಿನಯ್ ಮೇಲಿರುವ ಕೋಪಕ್ಕೆ ನಾನು ಬಲಿಯಾದೆ
ಬಿಗ್‌ಬಾಸ್ ಮನೆಯೊಳಗೆ ಹೋದಾಗ ಯಾರನ್ನೂ ಸ್ನೇಹಿತರಾಗಿ ಸ್ವೀಕರಿಸಿರಲಿಲ್ಲ. ಎಲ್ಲರ ಜೊತೆಗೂ ಚೆನ್ನಾಗಿ ಇದ್ದೆ. ಒಂದಿಷ್ಟು ಜನರ ಜೊತೆ ನನಗೆ ಸ್ನೇಹ ಕೂಡಿಬರುತ್ತಿತ್ತು. ಅದಕ್ಕಾಗಿ ಅವರ ಜೊತೆ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದೆ. ಅವರ ಜೊತೆ ಇದ್ದೆ ಅನ್ನೊ ಕಾರಣಕ್ಕೆ ಸಂಗೀತಾ ಮತ್ತು ಕಾರ್ತಿಕ್ ನನ್ನನ್ನು ಟಾರ್ಗೆಟ್ ಮಾಡಿದ್ದರು. ಅವಿನಾಶ್‌ನನ್ನು ಅವರ ಜೊತೆ ಎಳೆದುಕೊಂಡರು. ವಿನಯ್ ತಂಡದಲ್ಲಿ ಇದ್ದೇನೆ ಎಂಬ ಒಂದೇ ಕಾರಣಕ್ಕೆ ನಾನು ಟಾರ್ಗೆಟ್ ಆಗುತ್ತಿದೆ. ವಿನಯ್ ಮೇಲಿನ ಕೋಪಕ್ಕೆ ನಾನು ಬಲಿಯಾದೆ ಅನಿಸುತ್ತಿದೆ ಎಂದು ಹೇಳಿದರು.
ಯಾರು ಜೆನ್ಯೂನ್-ಯಾರು ಫೇಕ್?
ಮನೆಯಲ್ಲಿ ನಮ್ರತಾ ಹೆಚ್ಚು ಜೆನ್ಯೂನ್ ಆಗಿರುವ ವ್ಯಕ್ತಿ ಅಂತ ಅನಿಸುತ್ತಾರೆ. ಸಂಗೀತಾ–ಕಾರ್ತಿಕ್ ಕೂಡ ಹೌದು. ಆದರೆ, ಸಂಗೀತಾ ಅವರು ನಿರ್ದಿಷ್ಟವಾಗಿ ಒಂದು ಕಡೆ ನಿಲ್ಲುವುದಿಲ್ಲ. ತನಿಷಾ ಅವರು ಫೇಕ್ ಆಗಿ ಕಾಣಿಸುತ್ತಾರೆ. ಟಾಸ್ ಸಮಯದಲ್ಲಿ ಒಂದು ಥರ ಇದ್ದರೆ, ಮನೆಯೊಳಗೆ ಇನ್ನೊಂದು ಥರ ಕಾಣಿಸುತ್ತಾರೆ. ಟಾಸ್ಕ್ ಅನ್ನು ಇಲ್ಲೇ ಬಿಟ್ಟು ಬಿಡೋಣ ಅಂತಾರೆ ಆದರೆ ಬೇರೆಯವರು ಹಾಗೆ ಮಾಡಿದಾಗ ಅದನ್ನು ಒಂದೆರಡು ವಾರವಾದರೂ ಮರೆಯದೇ ಹೇಳುತ್ತಾರೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಟಾಪ್ 5 ಅಲ್ಲಿ ಯಾರೆಲ್ಲ ಇರಬಹುದು?
ಟಾಪ್ 5ನಲ್ಲಿ ಕಾರ್ತಿಕ್, ವಿನಯ್, ನಮ್ರತಾ, ಸಂಗೀತಾ ಇರಬೇಕು ಎಂಬುವುದು ನನ್ನ ಆಸೆ. ಆದರೆ ಈಗ ಆಡುತ್ತಿರುವ ರೀತಿ ನೋಡಿದರೆ ನನಗೆ ಅನುಮಾನ. ಮುಂದೆ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತದೆ.
ಕಳಪೆ-ಉತ್ತಮ ಪಡೆದುಕೊಂಡಿರುವ ಬಗ್ಗೆ?
ಉತ್ತಮ ಪಡೆದುಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ. ನಾನು ನನ್ನನ್ನು ಆ ವಾರದಲ್ಲಿ ಪ್ರೂವ್ ಮಾಡಿಕೊಂಡಿದ್ದೆ. ಚೆನ್ನಾಗಿ ಆಡಿದ್ದೆ. ಹಾಗೆಯೇ ಕಳಪೆಯನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಜೈಲಿನಲ್ಲಿದ್ದುಕೊಂಡೂ ಸುದೀಪ್ ಸರ್ ಊಟ ತಿಂದಿದ್ದು ನನಗೆ ತುಂಬಾ ಖುಷಿಯಾದ ವಿಷಯ. ನನಗೆ ಜೈಲಿನಲ್ಲಿದ್ದೇನೆ ಎಂದು ಅನಿಸಲಿಲ್ಲ.
ಸಿರಿ – ತುಕಾಲಿ ಸೇವ್ ಮಾಡಿದ್ದು ತಪ್ಪು ನಿರ್ಧಾರ
ನಾವು ಮನೆಯೊಳಗೆ ಹೋಗುವಾಗ ನಮಗೊಂದು ವಿಶೇಷಾಧಿಕಾರ ಸಿಕ್ಕಿತ್ತು. ಯಾರನ್ನಾದರೂ ಸೇವ್ ಮಾಡಬಹುದು ಎಂದು. ಆಗ ನಾವು ಸಿರಿ ಮತ್ತು ತುಕಾಲಿ ಅವರನ್ನು ಸೇವ್ ಮಾಡಿದ್ದೇವು. ನಾವು ಮಾಡಿರುವ ಮೊದಲ ತಪ್ಪು ಅದು. ಅವರನ್ನು ಸೇವ್ ಮಾಡಿರದಿದ್ದರೆ ಅವರು ಈ ಜಾಗದಲ್ಲಿರುತ್ತಿದ್ದರು ಎಂದು ಹೇಳಿದರು.
ಮಿಸ್ ಮಾಡಿಕೊಳ್ಳುವುದೇನು?
ಬಿಗ್‌ಬಾಸ್ ಮನೆಯಲ್ಲಿ ರಾತ್ರಿ ಎಲ್ಲರಿಗೂ ಅಡುಗೆ ಮಾಡಿಕೊಡುತ್ತಿದ್ದೆ. ಅದು ಬಿಟ್ಟರೆ, ಪ್ರತಿದಿನ ಊಟ ಆದ್ಮೇಲೆ ನಾನು, ನಮ್ರತಾ, ವಿನಯ್, ಮೈಕಲ್ ಆಚೆ ಬಂದು ಒಂದು ತಾಸು ಗಾಳಿಯಲ್ಲಿ ಕೂತು ಮಾತಾನಾಡುತ್ತಾ ಇದ್ದೇವು. ಅದನ್ನು ತುಂಬಾ ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್‌ನ ಈ ಪಯಣವನ್ನು ನಾನು ಯಾವತ್ತೂ ಮರೆಯಲ್ಲ. ಮರೆಯಲು ಯತ್ನಿಸಿದರೂ ಮರೆಯಲಾಗುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.