
ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯು 79ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಪೈಪೋಟಿಯೂ ಹೆಚ್ಚಿದೆ. ಈ ಮಧ್ಯೆ, ಮನೆಯಿಂದ ಹೊರಹೋಗಿದ್ದ ಒಬ್ಬ ಸ್ಪರ್ಧಿಯೊಬ್ಬರ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ.
ಹೌದು, ತಮ್ಮ ಮನೆಯಲ್ಲಿ ತುರ್ತು ಪರಿಸ್ಥಿತಿ ಕಾರಣದಿಂದಾಗಿ ಕಳೆದ ವಾರ ಮನೆಗೆ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ದೊಡ್ಡ ಮನೆಗೆ ಪ್ರವೇಶಿಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಭಾನುವಾರದ ಎಪಿಸೋಡ್‌ನ ಪ್ರೊಮೊದಲ್ಲಿ ಈ ಪ್ರಶ್ನೆಗೆ ಇಂಬು ದೊರೆತಿದೆ. ತಾವು ನಡೆಸುತ್ತಿದ್ದ ಉದ್ಯಮ ಹಳಿ ತಪ್ಪಿದ್ದರಿಂದ ಖುದ್ದು ಹೊರಬರಬೇಕಾಯಿತು. ಈಗ ಎಲ್ಲವೂ ಸರಿಯಾಗಿದೆ ಎಂದು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಸುರೇಶ್ ಸ್ಪಷ್ಟಪಡಿಸಿದ್ದರು. ಅದರಂತೆ, ಅವರು ಮತ್ತೆ ಬಿಗ್‌ಬಾಸ್ ಮನೆಗೆ ಬರುತ್ತಿರುವ ಹಾಗಿದೆ.
ಪ್ರೊಮೊದಲ್ಲಿ ಏನಿದೆ?
ತಮ್ಮ ಜೊತೆ ವೇದಿಕೆ ಹಂಚಿಕೊಂಡಿರುವ ಸುರೇಶ್ ಅವರಿಗೆ ಆ ಜಾಗ ನೀವಿಲ್ಲದೆ ಕಾಲಿ ಹೊಡೆಯುತ್ತಿದೆ ಎಂದು ಸುದೀಪ್ ಹೇಳುತ್ತಾರೆ. ಇದಕ್ಕುತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಬಿಟ್ಟರೆ ಈಗಲೇ ಖುಷಿಯಿಂದ ಮನೆಗೆ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಕುತೂಹಲದಿಂದ ಅವರತ್ತ ನೋಡುವಲ್ಲಿಗೆ ಪ್ರೊಮೊ ಅಂತ್ಯಕಂಡಿದೆ. ರಾತ್ರಿ 9 ಗಂಟೆಗೆ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಈ ಕುತೂಹಲಕ್ಕೆ ತೆರೆಬೀಳಲಿದೆ. ಇದರ ಜೊತೆಗೆ ಈ ವಾರ ಮನೆಯಿಂದ ಹೊರಬರುವುದು ಯಾರೂ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ.
ರಜತ್, ಧನರಾಜ್, ಮೋಕ್ಷಿತಾ, ಹನುಮಂತು, ತ್ರಿವಿಕ್ರಮ್ ಮತ್ತು ನಾಯಕಿ ಭವ್ಯಾ ಗೌಡರಿಂದ ನೇರವಾಗಿ ನಾಮಿನೇಟ್ ಆಗಿರುವ ಐಶ್ವರ್ಯ ಎಲಿಮಿನೇಶನ್ ಅಗ್ನಿಪರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.