ADVERTISEMENT

ಒತ್ತಡ ಅಂದ್ರೆ ಜವಾಬ್ದಾರಿ: ಗಾನವಿ ಲಕ್ಷ್ಮಣ್

ಸುಕೃತ ಎಸ್.
Published 19 ಡಿಸೆಂಬರ್ 2018, 10:20 IST
Last Updated 19 ಡಿಸೆಂಬರ್ 2018, 10:20 IST
ಗಾನವಿ ಲಕ್ಷ್ಮಣ
ಗಾನವಿ ಲಕ್ಷ್ಮಣ   

ನನಗೆ ಸ್ವಲ್ಪ ಕನ್ನಡ ಭಾಷೆಯ ಸಮಸ್ಯೆ ಇದೆ. ನಾನು ಓದಿದ್ದು ಮಂಗಳೂರಿನಲ್ಲಿ. ಆದ್ದರಿಂದ ಅಲ್ಲಿನ ಭಾಷಾ ಶೈಲಿ ನನ್ನನ್ನು ಹೆಚ್ಚು ಪ್ರಭಾವಿಸಿತ್ತು. ಓದಿ ಮುಗಿದು ಕೆಲಸಕ್ಕೆ ಸೇರಿದ್ದು ಅಂತರರಾಷ್ಟ್ರೀಯ ಶಾಲೆಗೆ ನೃತ್ಯ ಶಿಕ್ಷಕಿಯಾಗಿ. ಅಲ್ಲಿಯ ವಿದೇಶಿ ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕಿತ್ತು. ಆದರೆ, ಧಾರಾವಾಹಿಯಲ್ಲಿ ನಾನು ಕನ್ನಡ ಮಾತನಾಡಬೇಕಿತ್ತು. ಭಾಷೆ ಸಮಸ್ಯೆಯೇ ಧಾರಾವಾಹಿ ಒಪ್ಪಿಕೊಳ್ಳಲು ನನಗೆ ಇದ್ದ ಮುಖ್ಯ ಒತ್ತಡ.

ಮತ್ತೊಂದು ಒತ್ತಡ ಅಥವಾ ಭಯ ಇದ್ದದ್ದು ಟಿ.ಎನ್. ಸೀತಾರಾಮ್‌ ಸರ್‌ ಜೊತೆಗೆ ಕೆಲಸ ಮಾಡುತ್ತೇನೆ ಎಂದು. ಅವರದ್ದು ಒಳ್ಳೆಯ ಕನ್ನಡ. ನನ್ನದು ಅಷ್ಟು ಚೆನ್ನಾಗಿಲ್ಲ. ಹೇಗೆ ಸಂಭಾಷಣೆ ಹೇಳುತ್ತೇನೋ ಅನ್ನುವ ಭಯ ಕಾಡಿತ್ತು. ಈಗಲೂ ಸರಿ ಹೋಗಿದ್ದೇನೆ ಅಂತಲ್ಲ. ಆದರೆ, ಮೊದಲಿಗಿಂತಲೂ ಸುಧಾರಿಸಿದ್ದೇನೆ. ‘ಮಗಳು ಜಾನಕಿ’ ಧಾರಾವಾಹಿಯ ಇಡೀ ತಂಡ ನನ್ನ ಬೆಂಬಲಕ್ಕೆ ನಿಂತಿದೆ. ಸೀತಾರಾಮ್‌ ಸರ್‌ ಅವರ ಎಲ್ಲರನ್ನು ಒಳಗೊಳ್ಳುವ ಗುಣ, ನನ್ನಲ್ಲಿ ಆತ್ಮವಿಶ್ವಾಸ ತುಂಬಿತು.

ನನ್ನ ಪ್ರಕಾರ ಒತ್ತಡ ಎಂದರೆ ಜವಾಬ್ದಾರಿ. ಒತ್ತಡ ಹೀಗೆ ಬರುತ್ತದೆ ಎಂದು ಹೇಳೋದು ಕಷ್ಟ. ನಾನು ಚೆನ್ನಾಗಿ ನಟಿಸುತ್ತೇನೆ ಅಂತಾದರೆ, ಅದನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಅಥವಾ ನಟನೆ ಇಷ್ಟ ಆಗದೇ ಇದ್ದರೆ ಅದನ್ನು ಹೇಗೆ ಸುಧಾರಿಸಿಕೊಳ್ಳಬೇಕು ಈ ಎಲ್ಲಾ ಒತ್ತಡಗಳು ಜವಾಬ್ದಾರಿಯಾಗಿ ಮಾರ್ಪಾಡಾಗುತ್ತವೆ.‌ ಇದು ನಮ್ಮನ್ನು ಎಚ್ಚರದಿಂದ ಇರಿಸುತ್ತದೆ ಮತ್ತು ಹೆಚ್ಚು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ADVERTISEMENT

ಜೀವನದಿಂದ ಹೆಚ್ಚು ನಿರೀಕ್ಷೆ ಹಾಗೂ ಆಸೆಗಳನ್ನು ಇಟ್ಟುಕೊಳ್ಳುವುದು ನಮ್ಮ ಹೆಚ್ಚಿನ ಒತ್ತಡಗಳಿಗೆ ಕಾರಣ. ಆಸೆ ಹೆಚ್ಚಿದಂತೆಲ್ಲಾ ಒತ್ತಡ ಜಾಸ್ತಿ ಆಗುತ್ತದೆ. ಇಂಥ ಒತ್ತಡ ನಮ್ಮನ್ನು ಹಾಳು ಮಾಡುತ್ತದೆ.

ಕಲೆ ಎಂದರೆ ಮನರಂಜನೆ ಅಲ್ಲ. ಜನರ ಅರಿವನ್ನು ಹೆಚ್ಚಿಸುವುದಕ್ಕೆ ಇರುವ ಅದ್ಭುತ ಮಾರ್ಗ ಎಂದೇ ನಾನು ನಂಬಿದ್ದೇನೆ.ನನಗೆ ಮೊದಲಿನಿಂದಲೂ ಸೋಲುವುದು ಗೊತ್ತಿಲ್ಲ. ಶಾಲೆಯಲ್ಲಿ ಕೆಲಸ ಮಾಡುವಾಗಲೂ ಹಾಗೆ, ಎಲ್ಲರೂ ನನ್ನ ನೃತ್ಯ ಸಂಯೋಜನೆಯನ್ನು ಇಷ್ಟಪಡುತ್ತಿದ್ದರು. ಶಾಲೆಯಲ್ಲಿ ಒಂದು ರೀತಿಯಲ್ಲಿ ಸ್ಟಾರ್‌ ಆಗಿದ್ದೆ. ಅಭಿನಯ ಮೊದಲಿಂದಲೂ ನನಗೆ ಇಷ್ಟವೇ ಇತ್ತು. ಅದಕ್ಕಾಗಿಯೇ ಬೇರೆ ಬೇರೆ ಆಡಿಷನ್‌ಗಳಲ್ಲಿ ಭಾಗವಹಿಸಿದೆ. ನನಗೆ ಇನ್ನು ನೆನಪಿದೆ. ಮೊದಲನೆ ಆಡಿಷನ್‌ನಲ್ಲಿ ನನ್ನನ್ನು ತಿರಸ್ಕರಿಸಲಾಯಿತು. ಸೋಲನ್ನು ಮನಸ್ಸಿಗೆ ಹಚ್ಚಿಕೊಂಡು ನನಗೆ ಎರಡು ವಾರ ನಿದ್ದೆ ಬಂದಿರಲಿಲ್ಲ. ಒತ್ತಡಕ್ಕೆ ಬಿದ್ದೆ. ಸೋಲು ನನಗೆ ಬದುಕಿನ ಪಾಠ ಕಲಿಸಿತು. ಸೋಲುವುದನ್ನು ಕಲಿಸಿತು. ಇದು ನನಗೆ ಬದುಕಿನ ಮುಖ್ಯ ಪಾಠ. ಆದರೆ, ಪಟ್ಟು ಬಿಡಲಿಲ್ಲ. ಈಗ ನೋಡಿ ಇಲ್ಲಿದ್ದೇನೆ.

ಮನುಷ್ಯ ಎಂದ ಮೇಲೆ ಒತ್ತಡ ಸಹಜ. ಹೊರಗಿನಿಂದ ಯಾರು ಎಷ್ಟೇ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದರೂ ನಮಗೆ ನಾವೇ ತಯಾರಾಗದ ಹೊರತು ಎಲ್ಲವೂ ವ್ಯರ್ಥ. ಹಾಗಾಗಿ, ನಮ್ಮನ್ನು ನಾವು ನಂಬಬೇಕು. ಹಾಗಿದ್ದಾಗ ಮಾತ್ರ ನಾವು ಜಗತ್ತನ್ನೇ ಗೆಲ್ಲಬಹುದು. ಸೃಜನಾತ್ಮಕ ಒತ್ತಡ ನಮಗೆ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ನೀಡುವ ಜತೆಗೆ ನಮ್ಮಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.