ADVERTISEMENT

ಕಾಮಿಡಿ ಕಿಲಾಡಿಯ ಮನದಾಳದ ಮಾತು

ಕೆ.ಎಚ್.ಓಬಳೇಶ್
Published 25 ಜೂನ್ 2018, 20:16 IST
Last Updated 25 ಜೂನ್ 2018, 20:16 IST
ಮಡೆನೂರು ಮನು
ಮಡೆನೂರು ಮನು   

ಆ ಹುಡುಗ ಹತ್ತನೇ ತರಗತಿ ಪ್ರವೇಶಿಸಿ ಎರಡು ತಿಂಗಳಾಗಿತ್ತು. ಆಗಲೇ ಅವನ ತಲೆಯಲ್ಲಿ ಬಣ್ಣದಲೋಕ ರೆಕ್ಕೆಬಿಚ್ಚಿತ್ತು. ಒಮ್ಮೆ ಆರ್ಕೆಸ್ಟ್ರಾದಲ್ಲಿ ನೃತ್ಯಕ್ಕೆ ಅವಕಾಶ ಸಿಕ್ಕಿತು.

‘ಪ್ರೀತ್ಸೆ ಪ್ರೀತ್ಸೆ...’ ಹಾಡಿಗೆ ಹೆಜ್ಜೆಹಾಕಿದ ಹುಡುಗ ತಾನು ಧರಿಸಿದ್ದ ಬಟ್ಟೆಯನ್ನೂ ಹರಿದುಕೊಂಡ. ನಟನೆಯ ಗೀಳು ಹಚ್ಚಿಕೊಂಡ ಆತ ನೇರ ಬೆಂಗಳೂರಿಗೆ ಬಸ್‌ ಹತ್ತಿದ. ಬೆಳಿಗ್ಗೆ ಹೊಟ್ಟೆಪಾಡಿಗಾಗಿ ಬೇಕರಿಯಲ್ಲಿ ಕೆಲಸ. ರಾತ್ರಿವೇಳೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಕುಣಿಯುತ್ತಾ ನಟನೆಯ ಅಭ್ಯಾಸ ಮಾಡತೊಡಗಿದ.

ಹಾಸನ ಜಿಲ್ಲೆಯ ಮಡೆನೂರು ಮನು ನಟನೆಯ ಬೆನ್ನುಬಿದ್ದಿದ್ದು ಹೀಗೆ.

ADVERTISEMENT

ಅವರೊಳಗಿರುವ ನಟನೆಗೆ ಕನ್ನಡಿ ಹಿಡಿದಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 2 ರಿಯಾಲಿಟಿ ಶೋ.

ಸ್ಪರ್ಧೆಯಲ್ಲಿ ವಿಜೇತರಾಗಿರುವ ಮನು ಚಂದನವನದಲ್ಲಿ ಹಾಸ್ಯನಟನಾಗಿ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ವೇದಿಕೆ
ಮೇಲೆ ಅವರ ನಟನಾ ಕೌಶಲ ನೋಡಿದ ಹಲವು ನಿರ್ದೇಶಕರು ಸಿನಿಮಾದಲ್ಲಿ ಅಭಿನಯಿಸುವಂತೆ ದುಂಬಾಲು ಬಿದ್ದಿದ್ದಾರೆ.

ಯಶವಂತಪುರದ ಸ್ನೇಹಾಂಜಲಿ ಆರ್ಕೆಸ್ಟ್ರಾ ಮತ್ತು‌ ತುಮಕೂರಿನ ಸಂಗೀತ ಮ್ಯೂಸಿಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ನಟನೆಯ ಆರಂಭಿಕ ಪಾಠ ಕಲಿತಿದ್ದ ಅಲ್ಲಿಯೇ.

‘ನಾನು ಸಿನಿಮಾ ಮೋಹಿ. ಸಿನಿಮಾಗಳಲ್ಲಿ ನಟಿಸಬೇಕೆಂದು ಹಂಬಲಿಸಿ ಬೆಂಗಳೂರಿಗೆ ಬಂದೆ. ಆದರೆ, ನಟನೆ ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಚಂದನವನ
ಸುಲಭಕ್ಕೆ ದಕ್ಕುವುದಿಲ್ಲ ಎನ್ನುವ ಅರಿವಾಯಿತು. ಇನ್ನೊಂದೆಡೆಜೀವನದ ಬಂಡಿ ಎಳೆಯುವುದು ಅನಿವಾರ್ಯವಾಗಿತ್ತು. ದೇವನಹಳ್ಳಿ ಸಮೀಪದ ನಲ್ಲೂರಿನ ಬೇಕರಿಯಲ್ಲಿ ಕೆಲಸಕ್ಕೆ ಸೇರಿದೆ. ಕಾಮಿಡಿ ಕಿಲಾಡಿಗಳು ನನ್ನ ಬದುಕಿಗೆ ಭರವಸೆಯ ಕಿರಣವಾಯಿತು’ ಎಂದುತಾವು ಬದುಕು ಕಟ್ಟಿಕೊಳ್ಳಲು ಹೊರಟ ಬಗೆಯನ್ನು ವಿವರಿಸುತ್ತಾರೆ.

ಮನು ನಟಿಸಿದ ಮೊದಲು ಚಿತ್ರ‘ಪೊರ್ಕಿ ಹುಚ್ಚ ವೆಂಕಟ್‌’. ಅದರಲ್ಲಿಅವರು ಗ್ಯಾಂಗ್‌ ಲೀಡರ್‌ನ ಪಾತ್ರ ಮಾಡಿದ್ದರಂತೆ.

‘ಈ ಚಿತ್ರದಲ್ಲಿ ನಟಿಸಲು ಬೆಣ್ಣೆ ಮಾರಿಮನೆಯಲ್ಲಿದ್ದ ದುಡ್ಡು ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದೆ. ಚಿತ್ರ ತೆರೆಕಾಣುವ ದಿನದಂದು ಊರಿನಲ್ಲಿ ಸ್ನೇಹಿತರು ನನ್ನ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಾಕಿದ್ದರು. ಸಿನಿಮಾ ಬಿಡುಗಡೆ ಆಯಿತು. ಆದರೆ,
ಅದರಲ್ಲಿ ನನ್ನ ದೃಶ್ಯವೇ ಇರಲಿಲ್ಲ. ಆಗ ಸಾಕಷ್ಟು ನೊಂದುಕೊಂಡೆ. ಊರಿಗೆ ತೆರಳಿ ಮಧ್ಯರಾತ್ರಿ ಪೋಸ್ಟರ್‌ಗಳನ್ನು ಹರಿದು ಹಾಕಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಮನು.

‘ಬೇಕರಿಯಲ್ಲಿ ತಿಂಗಳಿಗೆ ಎಂಟುನೂರು ರೂಪಾಯಿಗೆ ದುಡಿದಿದ್ದೇನೆ. ನನ್ನ ಮಿತಿಗಳ ಅರಿವು ಇದೆ. ತಾವು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನಟನೆಗೆ ಸೂರಜ್‌, ಅಪ್ಪಣ್ಣ ಮತ್ತು ನನಗೆ ಅವಕಾಶ ನೀಡುವುದಾಗಿ
ನಿರ್ದೇಶಕ ಸಂತೋಷ ಆನಂದರಾಮ ಹೇಳಿದ್ದಾರೆ ಎಂದು ಜಗ್ಗೇಶ್‌ ಸರ್‌ ತಿಳಿಸಿದ್ದಾರೆ. ಕೆಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಕೋರಿದ್ದಾರೆ. ಹಾಸ್ಯ ನಟನಾಗಿಯೇ ಚಿತ್ರರಂಗದಲ್ಲಿ ನೆಲೆಯೂರುವ ಆಸೆ ಇದೆ’ ಎನ್ನುತ್ತಾರೆ ಅವರು.

‘ನಾಯಕ ನಟರು ಅಭಿನಯಿಸುವ ಸಿನಿಮಾಗಳಿಗೆ ಒಂದು ಚೌಕಟ್ಟು ಇರುತ್ತದೆ. ಹಾಸ್ಯ ನಟರಅಭಿನಯಕ್ಕೆ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ಮಾದರಿಯ ಚಿತ್ರಗಳಲ್ಲೂ ನಟಿಸಬಹುದು.ಇದು ನನ್ನ ವೃತ್ತಿಬದುಕಿಗೂ ಸಹಕಾರಿಯಾಗಲಿದೆ’ ಎನ್ನುವುದು ಅವರ ವಿಶ್ವಾಸದ ನುಡಿ.

‘ನನಗೆ ನಟನೆಯ ಪಾಠ ಹೇಳಿಕೊಟ್ಟಿದ್ದುಜೀ ಕನ್ನಡ ವಾಹಿನಿ. ಸ್ನೇಹಿತರ ಸಹಕಾರ ಮರೆಯಲು ಸಾಧ್ಯವಿಲ್ಲ’ ಎಂದು ಸ್ಮರಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.