ADVERTISEMENT

ಹಿರಿತೆರೆ ಹುಡುಗಿಯ ಕಿರುತೆರೆ ಪಯಣ

ರೇಷ್ಮಾ
Published 26 ನವೆಂಬರ್ 2020, 19:30 IST
Last Updated 26 ನವೆಂಬರ್ 2020, 19:30 IST
ಸಂಜನಾ ಬುರ್ಲಿ
ಸಂಜನಾ ಬುರ್ಲಿ   

ಬಾಲ್ಯದಿಂದಲೂ ನಟನೆಯ ಕನಸಿನೊಂದಿಗೆ ಸಾಗಿಬಂದ ಹುಡುಗಿ ಸಂಜನಾ ಬುರ್ಲಿ. ಸಣ್ಣ ವಯಸ್ಸಿನಿಂದಲೂ ನೃತ್ಯ, ನಾಟಕ, ಏಕಪಾತ್ರಾಭಿನಯಗಳಲ್ಲಿ ಸದಾ ಮುಂದು. ನಟನೆಗೆ ಅಡಿಪಾಯ ಎಂಬಂತೆ ಶುಭಾರಂಭ ಎಂಬ ರಂಗತಂಡದಲ್ಲಿ ಒಂದೂವರೆ ವರ್ಷಗಳ ಕಾಲ ಗುರುತಿಸಿಕೊಂಡಿದ್ದರು. ರಂಗಭೂಮಿಯ ಸಂಪರ್ಕದಲ್ಲಿದ್ದಾಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ‘ವೀಕೆಂಡ್‌’ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಾರೆ ಈ ಬೆಡಗಿ. ಸದ್ಯ ಕಲರ್ಸ್ ಕನ್ನಡ ವಾಹಿನಿಯ ‘ಲಗ್ನಪತ್ರಿಕೆ’ ಧಾರಾವಾಹಿಯ ಮಯೂರಿಯಾಗಿ ಕರುನಾಡಿಗೆ ಪರಿಚಿತರಾಗಿದ್ದಾರೆ.

ಬೆಂಗಳೂರಿನವರಾದ ಸಂಜನಾ ನಟನೆಯೊಂದಿಗೆ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ಕನ್ನಡದಲ್ಲಿ ‘ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್’, ‘ಸ್ಟೀಲ್ ಪಾತ್ರೆ ಸಾಮಾನು’ ಸಿನಿಮಾಗಳಲ್ಲೂ ನಟಿಸಿದ್ದಾರೆ ಸಂಜನಾ. ಈ ಸಿನಿಮಾಗಳು ಕೊರೊನಾ ಕಾರಣದಿಂದ ಬಿಡುಗಡೆಯಾಗಿಲ್ಲ.

ಈ ನಡುವೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ನಟನೆಯ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸಂಜನಾ ‘ಚೂಮಂದ್ರ ಕಾಳಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾ ಕೂಡ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಿರಿತೆರೆಯಿಂದ ಕಿರುತೆರೆಯ ಹಾದಿ ಹಿಡಿದ ಸಂಜನಾ ‘ಪ್ರಜಾಪ್ಲಸ್’ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ನಟನೆಯ ಆರಂಭದ ದಿನಗಳು..

‘ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವಳಾದರೂ ಮೊದಲು ಕ್ಯಾಮೆರಾ ಎದುರಿಸುವುದು ಸುಲಭವಾಗಿರಲಿಲ್ಲ. ‘ವೀಕೆಂಡ್’ ಸಿನಿಮಾ ಮಾಡುವ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಅದು ನನಗೆ ಕ್ಯಾಮೆರಾ ಎದುರು ನಟಿಸುವುದನ್ನು ಕಲಿಸಿತ್ತು, ಅದರೊಂದಿಗೆ ಇಂಟರ್‌ನೆಟ್ ಮೂಲಕ ನಟನೆಯ ಆಳ–ಅಗಲದ ಕುರಿತು ಅರಿತಿದ್ದೆ. ಹಾಗಾಗಿ ಸಿನಿಮಾದಲ್ಲಿ ಸರಾಗವಾಗಿ ನಟಿಸಲು ಸಾಧ್ಯವಾಯ್ತು. ನಟನೆಯ ಆರಂಭದ ದಿನಗಳು ತುಂಬಾ ಚೆನ್ನಾಗಿತ್ತು. ನನ್ನ ಮೊದಲ ಸಿನಿ ತಂಡ ತುಂಬಾ ಪ್ರೋತ್ಸಾಹ ನೀಡಿತ್ತು’ ಎಂದು ಆರಂಭದ ದಿನಗಳನ್ನು ನೆನೆಯುತ್ತಾರೆ. ‌

ಕಿರುತೆರೆಗೆ ಬರಲು ಕಾರಣ..

ನನಗೆ ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿದ್ದವು. ಆದರೆ ನಾನು ಅಂದುಕೊಂಡಂತಹ ಪಾತ್ರಗಳು ಸಿಗುತ್ತಿರಲಿಲ್ಲ. ಅಲ್ಲದೇ ಕೋವಿಡ್ ಬಂದ ಕಾರಣ ನನ್ನ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೇ ಬಾಕಿಯಾಗಿವೆ. ಇನ್ನೂ ಒಂದೂವರೆ ವರ್ಷ ಬಿಡುಗಡೆಯಾಗುವುದು ಅನುಮಾನವಾಗಿದೆ. ಅಲ್ಲಿಯವರೆಗೆ ನಾನು ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಲಗ್ನಪತ್ರಿಕೆ ಧಾರಾವಾಹಿ ತಂಡದಿಂದ ಕರೆ ಬಂದಿತ್ತು. ಕಥೆ ಹಾಗೂ ಮಯೂರಿ ಪಾತ್ರದ ಬಗ್ಗೆ ಕೇಳಿದ ಮೇಲೆ ನಟಿಸುವ ಮನಸ್ಸಾಯಿತು.

ಲಗ್ನಪತ್ರಿಕೆ ಧಾರಾವಾಹಿಗೆ ಬಗ್ಗೆ..

ಲಗ್ನಪತ್ರಿಕೆ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಜೊತೆ ನಾನು ಮೊದಲು ಸಿನಿಮಾ ಮಾಡಿದ್ದೆ. ಅವರು ನನಗೆ ಮೊದಲಿನಿಂದಲೂ ಪರಿಚಯಸ್ಥರಾದ ಕಾರಣ ಧಾರಾವಾಹಿಯಲ್ಲಿ ನಟಿಸುವ ಬಗ್ಗೆ ಕೇಳಿದ್ದರು. ನನಗೆ ಕಾಲೇಜು, ನಟನೆ ಎಲ್ಲವನ್ನೂ ನಿಭಾಯಿಸುವುದು ಕಷ್ಟ ಎನ್ನಿಸಿದ ಕಾರಣ ಮೊದಲು ಒಪ್ಪಿಕೊಂಡಿರಲಿಲ್ಲ. ಆಮೇಲೆ ಕೋವಿಡ್ ಲಾಕ್‌ಡೌನ್ ಕಾರಣದಿಂದ ಸಮಯ ಸಿಕ್ಕಿತ್ತು. ಆಗ ಈ ಅವಕಾಶವನ್ನು ಬಳಸಿಕೊಳ್ಳುವುದು ಸೂಕ್ತ ಎನ್ನಿಸಿತ್ತು. ಹೀಗೆ ಆಡಿಷನ್ ಕೊಟ್ಟು ಧಾರಾವಾಹಿಗೆ ಆಯ್ಕೆಯಾದೆ.

‘ಮಯೂರಿ ಪಾತ್ರದ ಬಗ್ಗೆ ಹೇಳುವುದಾದರೆ ಮಯೂರಿ ಎಲ್ಲರ ಮನೆಯಲ್ಲೂ ಇರುವಂತಹ ಹುಡುಗಿ. ಎಲ್ಲರಿಗೂ ಒಳ್ಳೆಯದನ್ನು ಬಯಸುವ, ಎಲ್ಲರನ್ನೂ ತಮ್ಮವರು ಎಂದು ಪ್ರೀತಿಸುವ ಹುಡುಗಿ. ಅವಳು ಮಾತಿನಿಂದಲೇ ಎಲ್ಲರ ಮನಸ್ಸು ಗೆಲ್ಲುವ ಹುಡುಗಿ. ಜೀವನದಲ್ಲಿ ತುಂಬಾನೇ ಕನಸು ಕಟ್ಟಿಕೊಂಡ ಹುಡುಗಿ’ ಎಂದು ಮಯೂರಿ ಪಾತ್ರವನ್ನು ವಿವರಿಸುತ್ತಾರೆ ಸಂಜನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.