ADVERTISEMENT

ಗೊರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 12:51 IST
Last Updated 17 ಮೇ 2021, 12:51 IST
ನಮ್ಮ ಊರಿನ ರಸಿಕರು ಪೋಸ್ಟರ್‌
ನಮ್ಮ ಊರಿನ ರಸಿಕರು ಪೋಸ್ಟರ್‌   

ಬೆಂಗಳೂರು: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ಕೃತಿ ‘ನಮ್ಮ ಊರಿನ ರಸಿಕರು’ ವೆಬ್‌ಸರಣಿಯಾಗಿ ‘ಕಟ್ಟೆ’ ಆ್ಯಪ್‌ನಲ್ಲಿ ತೆರೆಗೆ ಬರುತ್ತಿದೆ.

ಸ್ವಾತಂತ್ರ‍್ಯ ಪೂರ್ವದಲ್ಲಿ, ಬ್ರಿಟಿಷ್ ರಾಜ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಮಧ್ಯದ ಈ ಕಥೆ ತನ್ನದೇ ಆದ ಕಥಾಹಂದರವನ್ನು ಹೊಂದಿದೆ. ಈ ಕಥೆಯು ಸಂತೋಷ, ದುಃಖ, ನವಿರಾದ ಹಾಸ್ಯ, ನಾಟಕ, ಶೋಷಣೆ, ರಾಜಕೀಯ, ನಿರೀಕ್ಷೆಗಳು, ನಿರ್ಧಾರಗಳು, ಸಂಕೀರ್ಣತೆಗಳು, ಜಾತಿವಾದ, ಅಭಿಪ್ರಾಯಗಳು, ಸ್ನೇಹ, ಸಂಬಂಧಗಳು ಮತ್ತು ಇನ್ನೂ ಅನೇಕ ವಿಷಯಗಳನ್ನು ಹೊಂದಿದೆ.

ಪ್ರೀತಿಯಿಂದ ಶಾಮಣ್ಣ ಎಂದು ಕರೆಯಲ್ಪಡುವ ಶಾಮ ಅಯ್ಯಂಗಾರ್ ಅವರು ಕೊಟ್ಟ ಮಾತಿಗೆ ತಪ್ಪದ ಗೊರುರು ಗ್ರಾಮದ ಪ್ರಾಮಾಣಿಕ ವ್ಯಕ್ತಿ.ಶಾಮಣ್ಣ ಅತ್ಯಂತ ಸುಶಿಕ್ಷಿತ, ಉದಾರ ವ್ಯಕ್ತಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾದ ಶಾಮಣ್ಣ ಇಡೀ ಗ್ರಾಮವನ್ನು ತನ್ನ ನಿರ್ವಿವಾದದ ತೀರ್ಪಿನಿಂದ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾನೆ. ಸರಸ್ವತಿ, ಶಾಮಣ್ಣನ ಪತ್ನಿ. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಇರುವ ಅಪರೂಪದ ಮಹಿಳೆ. ತನ್ನ ಬುದ್ಧಿವಂತಿಕೆ ಮತ್ತು ವಿಶೇಷ ಕಾಳಜಿಯಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಚತುರೆ. ಇವರಿಬ್ಬರೂ ‘ನಮ್ಮ ಊರಿನ ರಸಿಕರು’ ಕಥೆಯ ಆಧಾರ. ಒಟಿಟಿ ‘ಕಟ್ಟೆ’ ಆ್ಯಪ್‌ನಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. ವೆಬ್‌ ಸರಣಿಯಾಗಿರುವ ಇದು ಒಟ್ಟು 16 ಸಂಚಿಕೆಯನ್ನು ಹೊಂದಿದ್ದು, ಮೊದಲ ಸೀಸನ್‌ನಲ್ಲಿ 8 ಸಂಚಿಕೆಯನ್ನು ಹೊಂದಿದೆ. ಕಟ್ಟೆ ಆ್ಯಪ್‌ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಈ ಸರಣಿಯು ಅದರಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ADVERTISEMENT

ಪ್ರತಿ ಸಂಚಿಕೆಯು ವಿವಿಧ ಭಾವನೆಗಳು, ಮೂರ್ಖ ನಡವಳಿಕೆ, ಅಹಂನ ಘರ್ಷಣೆಗಳು, ಪ್ರೀತಿ, ದ್ವೇಷ, ಸೇಡು, ತಪ್ಪುಗ್ರಹಿಕೆ ಮತ್ತು ಸಾಕಷ್ಟು ಹಾಸ್ಯಮಯ ಘಟನೆಗಳಿಂದ ಕೂಡಿದೆ. ಪ್ರತಿಯೊಂದು ಸಂಚಿಕೆಯು ಒಂದು ಸಮಸ್ಯೆಯೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಸಾಕಷ್ಟು ಗೊಂದಲ ಮತ್ತು ತಪ್ಪುಗ್ರಹಿಕೆಗಳಿರುತ್ತವೆ, ಆದರೆ ಸಂಚಿಕೆಯ ಅಂತ್ಯದ ವೇಳೆಗೆ ಗ್ರಾಮಸ್ಥರು ಸಮಸ್ಯೆಗಳನ್ನು ಚಾಣಾಕ್ಷತನದಿಂದ ಪರಿಹರಿಸುತ್ತಾರೆ.

‘ನಮ್ಮ ಊರಿನ ರಸಿಕರು’ ಚಿತ್ರಕ್ಕೆ ಲೇಖಕಿ ನಂದಿತಾ ಯಾದವ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅವರು ‘ರಾಜಸ್ಥಾನ್ ಡೈರೀಸ್’ (ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ತೆರೆಕಂಡ ಚಿತ್ರ) ಚಿತ್ರವನ್ನು ನಿರ್ದೇಶಿಸಿದ್ದರು. ಹಾಗೆಯೇ ರಾಜ್ಯ ಪ್ರಶಸ್ತಿ ಗೆದ್ದ ‘ರಾಜು’ ಎನ್ನುವ ಸಿನಿಮಾದಲ್ಲಿ ಸಹ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. 5 ವರ್ಷಗಳ ಕಾಲ ಕ್ರಿಯೇಟಿವ್ ಹೆಡ್ ಆಗಿ ಜೀ ಥಿಯೇಟರ್‌ನಲ್ಲಿ ಕೆಲಸ ಮಾಡಿದ್ದ ನಂದಿತಾ ಅವರು, ಭಾರತದಾದ್ಯಂತ 70 ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ಚಿತ್ರೀಕರಿಸಿದ್ದಾರೆ.

ರಾಜೇಶ್‌ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಮಂಡ್ಯ ರಮೇಶ್‌, ಪಿ. ಶೇಷಾದ್ರಿ, ಶೃಂಗ, ಬಿ. ಸುರೇಶ, ಸುನೇತ್ರಾ ಪಂಡಿತ್‌, ರಮೇಶ್‌ ಪಂಡಿತ್‌, ಸುಜಯ್‌ ಶಾಸ್ತ್ರಿ, ಸುಂದರ್‌ ವೀಣಾ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರ ತಂಡ ಚಿತ್ರದಲ್ಲಿದೆ. ಚಿತ್ರಕ್ಕೆ ಅಶೋಕ್‌ ಕಶ್ಯಪ್‌ ಛಾಯಾಗ್ರಹಣವಿದ್ದು, ಪ್ರಕಾಶ ಸೊಂಟಕ್ಕೆ ಸಂಗೀತವಿದೆ. ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಮಲೆನಾಡ ಪರಿಸರದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.