ADVERTISEMENT

ಶ್...! ಇದು ಹಾರರ್ ಕಥೆ

ಸುಕೃತ ಎಸ್.
Published 24 ಜನವರಿ 2019, 19:45 IST
Last Updated 24 ಜನವರಿ 2019, 19:45 IST
ಹಾರರ್ ಕಥೆ
ಹಾರರ್ ಕಥೆ   

ಕೋಣೆ. ಕಿಟಕಿಯಿಂದ ಬೀದಿ ದೀಪದ ಸಣ್ಣ ಬೆಳಕು ಆತನ ಮೈಮೇಲೆ ಬೀಳುತ್ತಿತ್ತು. ಯಾರೋ ಕರೆದ ಹಾಗೆ ಆಯಿತು. ಆತ ಎದ್ದು ನೋಡಿದ. ಆದರೆ, ಯಾರೂ ಇಲ್ಲ. ಕಿಟಕಿಯ ಹತ್ತಿರ ಹೋಗಿ ಸುತ್ತಮುತ್ತ ನೋಡುತ್ತಿದ. ಅಲ್ಲಿಯೂ ಏನೂ ಇಲ್ಲ. ‘ಛೇ!’ ಎಂದು ಹಾಸಿಗೆ ನೋಡಿದರೆ...

ಹೀಗೆ, ಅನಿರೀಕ್ಷಿತಗಳನ್ನೇ ಬಂಡವಾಳ ಮಾಡಿಕೊಂಡು ಕಟ್ಟುವುದು ಈ ಭಯ ಹುಟ್ಟಿಸುವ ಕಥೆಗಳನ್ನು. ಹಾರರ್ ಧಾರಾವಾಹಿ ಅಥವಾ ಸಿನಿಮಾ ಅಂದರೆ ಒಂದು ರೀತಿಯ ಥ್ರಿಲ್. ಕೆಲವರಿಗೆ ಭಯ, ಕೆಲವರಿಗೆ ತಮ್ಮ ಧೈರ್ಯ ಪ್ರದರ್ಶನಕ್ಕೆ ಇರುವ ಮಾರ್ಗ. ಈಗಂತೂ ಹಲವು ವಾಹಿನಿಗಳಲ್ಲಿ ಒಂದೊಂದು ಹಾರರ್ ಕಥೆ ಇದ್ದೇ ಇದೆ.

ನೋಡುಗರನ್ನ ಪೂರ್ತಿಯಾಗಿ ತನ್ನತ್ತ ಹಿಡಿದಿಟ್ಟುಕೊಳ್ಳುವುದು ಈ ಕಥೆಗಳಲ್ಲಿ ಇರುವ ವೈಶಿಷ್ಟ್ಯ. ಕಥೆಯಲ್ಲಿ ಹೆದರಿಕೊಂಡ ಪಾತ್ರ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಾ ಇದ್ದರೆ, ತಾವೇ ಆ ಕತ್ತಲಿನಲ್ಲಿ ನಡೆದುಕೊಂಡು ಹೋದ ಅನುಭವವೂ ಕೆಲವರಿಗೆ ದಕ್ಕುವುದುಂಟು.

ADVERTISEMENT

‘ನನಗಂತೂ ಹಾರರ್ ಸಿನಿಮಾ, ಧಾರಾವಾಹಿ ನೋಡೋದಕ್ಕೆ ತುಂಬಾ ಇಷ್ಟ. ಸಿನಿಮಾ ಮೂರು ತಾಸಿನಲ್ಲಿ ಮುಗಿದು ಹೋಗುತ್ತದೆ. ಆದರೆ, ಧಾರಾವಾಹಿ ವರ್ಷಗಟ್ಟಲೇ ನಮ್ಮನ್ನು ರಂಜಿಸುತ್ತದೆ. ಹಾಗಾಗಿ, ದಿನಾ ಥ್ರಿಲ್ ಆಗಿ ಇರಬಹುದು. ಕಥೆ ಸಾಗಿದಂತೆ ನಮ್ಮ ಹೊಟ್ಟೆಯೊಳಗೆ ಏನೋ ಓಡಾಡಿದ ಹಾಗೆ ಅನ್ನಿಸುತ್ತೆ. ಮುಂದೇನಾಗುತ್ತೋ ಎಂದು ಕಾಯುವುದರಲ್ಲಿ ಇರುವ ಮಜಾನೇ ಬೇರೆ’ ಅಂತ ಥ್ರಿಲ್ ಆಗ್ತಾರೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವಿದ್ಯಾಶ್ರೀ.

ಇವರಿಗೆ ಹಾರರ್ ಕಥೆ ಎದೆಬಡಿತ ಹೆಚ್ಚು ಮಾಡಿದರೆ, ವಿಕಾಸ್‍ಗೆ ಇದು ಕಾಮಿಡಿ ಶೋ ನೋಡಿದ ಹಾಗೆ ಆಗುತ್ತದೆಯಂತೆ. ‘ನನಗೆ ಹಾರರ್ ಕಥೆಗಳು ಅಂದರೆ ತುಂಬಾ ಇಷ್ಟ. ನಾವು ಏನು ಕಲ್ಪನೆ ಮಾಡಿಕೊಂಡರೂ ನಡೆಯುತ್ತದೆ. ದೆವ್ವಗಳು ನೆಲ ಬಿಟ್ಟು ಮನೆ ಗೋಡೆ ಮೇಲೆ ನಡೆಯೋದು, ಫ್ಯಾನ್ ಮೇಲೆ ಕೂರೋದು, ಬಾಗಿಲು ಟಪ್ ಅಂತ ಹಾಕಿಕೊಳ್ಳೋದು ಎಲ್ಲವೂ ಒಂದು ಥರ ಕಾಮಿಡಿ ದೃಶ್ಯ ಇದ್ದಂಗೆ ಇರುತ್ತೆ’ ಅಂತ ಕೇಳಿ ಹಾರರ್ ಕಥೆಯ ಉದ್ದೇಶವನ್ನೇ ಬುಡಮೇಲು ಮಾಡ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಸ್ನಾತಕೋತ್ತರ ವಿದ್ಯಾರ್ಥಿ ವಿಕಾಸ್.

ಇನ್ನು ಕೆಲವರು ಇದ್ದಾರೆ. ಅವರಿಗೆ ಹಾರರ್ ಧಾರಾವಾಹಿ ನೋಡಲು ಇಷ್ಟ. ಆದರೆ, ನೋಡಿ ಆದಮೇಲೆ ಅವರ ಪಾಡು ನೋಡುವುದು ಇತರರಿಗೆ ಕಷ್ಟ! ‘ಅಯ್ಯೋ ನನ್ನ ಕಥೆ ಕೇಳಬೇಡಿ. ನನಗೆ ಹಾರರ್ ಕಥೆ ನೋಡೋಕೆ ತುಂಬಾ ಇಷ್ಟ. ನೋಡೋವಾಗ ಭಾರಿ ಧೈರ್ಯದಿಂದ ನೋಡುತ್ತೇನೆ. ಆಮೇಲೆ ಅನುಭವಿಸುತ್ತೇನೆ. ನನಗೆ ಗೊತ್ತು ಕತೆಯಲ್ಲಿ ಇರುವ ರೀತಿಯಲ್ಲಿ ಏನೂ ಆಗೋಕೆ ಸಾಧ್ಯ ಇಲ್ಲ ಅಂತ. ಆದರೂ, ರಾತ್ರಿ ಮಲಗಿದ ಮೇಲೆ ಒಂದು ಸಣ್ಣ ಶಬ್ದ ಆದರೂ ನನಗೆ ಭಯ ಶುರು ಆಗಿಬಿಡುತ್ತದೆ. ಕಿಟಕಿಯಿಂದ ರಕ್ತದ ಕೈ ನನ್ನ ಹತ್ತಿರ ಬಂದ ಹಾಗೆ, ಇನ್ನೂ ಏನೇನೋ ಕಲ್ಪನೆಗಳು. ಇಷ್ಟೆಲ್ಲಾ ಆದರೂ, ನಾನು ಹಾರರ್ ಕಥೆ ನೋಡೋದನ್ನ ಮಾತ್ರ ಬಿಡಲ್ಲ’ ಅನ್ನೋದು ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಕೀರ್ತಿಯ ಶಪಥ.

ಇವರೆಲ್ಲ ಹೊಸ ತಲೆಮಾರಿನವರು. ಸ್ವಲ್ಪ ಹಿರಿಯನ್ನು ಕೇಳಿದರೆ, ಅವರ ಅನುಭವವೇ ಬೇರೆ. ‘ನಾವು ಸಣ್ಣವರಿದ್ದಾಗ, ಅಜ್ಜಿ ನಮಗೆಲ್ಲ ಗಿಣಿ ಕಥೆ ಹೇಳೋರು. ಒಂದು ರಾಜ, ಮಂತ್ರವಾದಿ, ಗಿಣಿ ಅಂತೆಲ್ಲ ಪಾತ್ರ ಇರುತ್ತಿತ್ತು. ಮಂತ್ರವಾದಿ ಇಲ್ಲಿ ಗಿಣಿ ಕಾಲಿಗೆ ಚುಚ್ಚಿದ್ರೆ, ಅಲ್ಲೆಲ್ಲೋ ಇರುವ ರಾಜನಿಗೆ ಚುಚ್ಚಿದ ಹಾಗೆ ಆಗ್ತಿತ್ತು ಅಂತೆಲ್ಲ ಕಥೆ. ಅದನ್ನು ಕೇಳಿ ನಾವು ಹೆದರಿ ಹೋಗುತ್ತಿದ್ದೆವು. ಆ ಮರದ ಹತ್ತಿರ ಹೋಗಬೇಡಿ ಅಲ್ಲಿ ಕೊಳ್ಳಿದೆವ್ವ ಇದೆ ಅಂತೆಲ್ಲ ದೊಡ್ಡೋರು ಹೇಳೋರು. ಕಥೆಯಲ್ಲಿ ಕೇಳಿದ್ದನ್ನು ಹೊರತುಪಡಿಸಿದರೆ, ನಾವೇನು ಯಾವ ಕೊಳ್ಳಿದೆವ್ವವನ್ನೂ ನೋಡಲಿಲ್ಲ. ಈಗ ಆ ಕತೆಗಳೆಲ್ಲಾ ದೃಶ್ಯ ರೂಪ ಪಡೆಯುತ್ತಾ ಇವೆ! ಆಗೆಲ್ಲ ಕಥೆ ಕೇಳಿ ಕಲ್ಪನೆ ಮಾಡಿಕೊಳ್ಳುತ್ತಾ ಇದ್ದೆವು; ಈಗ ಕಣ್ಣಾರೆ ನೋಡ್ತಾ ಇದ್ದೇವೆ. ಹಾಗಾಗಿ, ನಾನು ಕುತೂಹಲದಿಂದ ಇಂಥ ಧಾರಾವಾಹಿ ನೋಡ್ತೀನಿ’ ಅಂತಾರೆ ಸೊರಬದ ಗೃಹಿಣಿ ಸೀತಮ್ಮ.

ಹೀಗೆ ಹಲವರಿಗೆ ಹಲವು ಅನುಭವ. ಆದರೆ, ಬಹಳಷ್ಟು ಜನ ಈ ರೀತಿಯ ಕಥೆಯನ್ನಂತೂ ನೋಡುತ್ತಾರೆ ಎಂಬುದು ಸತ್ಯ. ಹೀಗೆ ಹಾರರ್ ಧಾರಾವಾಹಿ ನೋಡುವ ಇವರಿಗೆ ಒಂದು ಬೇಜಾರು ಇದೆ. ಕನ್ನಡದ ಧಾರಾವಾಹಿಗಳಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಹಾರರ್ ಕಥೆಗಳು ಬರುತ್ತಿಲ್ಲ ಎಂಬುದು ಆ ಬೇಸರ. ಕಥೆಗಳು ದೊಡ್ಡ ಮಟ್ಟದಲ್ಲಿ ಭಯ ಹುಟ್ಟಿಸುವಂತೆ ಇರುವುದಿಲ್ಲ ಎನ್ನುವುದು ಅವರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.