ADVERTISEMENT

‘ಹೂ ಮಳೆ’ ಹುಡುಗಿ ಚಂದನಾ

ರೇಷ್ಮಾ
Published 29 ಅಕ್ಟೋಬರ್ 2020, 19:30 IST
Last Updated 29 ಅಕ್ಟೋಬರ್ 2020, 19:30 IST
ಚಂದನಾ
ಚಂದನಾ   

‘ನಟನೆ ಎಂದರೆ ಟಿವಿ ಪರದೆ ಮೇಲೆ ನಮ್ಮನ್ನು ನೋಡುವವರಿಗೆ ನಾವು ನಟಿಸುತ್ತಿದ್ದೇವೆ ಎನ್ನಿಸದೆ ಇವರೂ ನಮ್ಮಂತೆಯೆ, ನಮ್ಮೊಳಗೊಬ್ಬರು ಎಂಬ ಸಹಜ ಭಾವನೆ ಮೂಡುವಂತಿರಬೇಕು’ ಎನ್ನುವ ಚಂದನಾ ಅನಂತಕೃಷ್ಣ ನಟಿಯಾಗಿ, ನಿರೂಪಕಿಯಾಗಿ ಹಾಗೂ ಬಿಗ್‌ಬಾಸ್‌ ಸ್ಪರ್ಧಿಯಾಗಿ ಕಿರುತೆರೆ ಅಂಗಳದಲ್ಲಿ ಗುರ್ತಿಸಿಕೊಂಡವರು.

ತುಮಕೂರು ಮೂಲದ ಚಂದನಾ ಪಿಯುಸಿ ಓದಿದ್ದು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ. ಚಿಕ್ಕ ವಯಸ್ಸಿನಿಂದಲೂ ಹಾಡು ಹಾಗೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಆಳ್ವಾಸ್‌ನಲ್ಲಿ ರಂಗಭೂಮಿ ಕ್ಷೇತ್ರಕ್ಕೆ ಕಾಲಿಡುವ ಅವಕಾಶ ಸಿಕ್ಕಿತ್ತು. ಅಲ್ಲಿನ ರಂಗಭೂಮಿಯ ನಂಟು ನಟನೆಯ ಆಸೆ ಚಿಗುರೊಡೆಯುವಂತೆ ಮಾಡಿತ್ತು. ಕಾಲೇಜು ಮುಗಿದ ಮೇಲೆ ಒಂದಿಷ್ಟು ಕಡೆ ಆಡಿಷನ್‌ ನೀಡಿದ್ದ ಇವರು ಸ್ಟಾರ್‌ ಸುವರ್ಣ ವಾಹಿನಿಯ ‘ಪುಟ್ಮಲ್ಲಿ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿರಿಸಿದ್ದರು. ನಂತರ ಕಲರ್ಸ್ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾದ ‘ರಾಜಾ ರಾಣಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಅಲ್ಲಿಂದ ಬಿಗ್‌ಬಾಸ್‌ಗೂ ತೆರಳಿದ್ದರು. ಈಗ ಕಲರ್ಸ್ ಕನ್ನಡದ ‘ಹೂ ಮಳೆ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಚಂದನಾ ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ. ‘ಹೂ ಮಳೆ’ ಧಾರಾವಾಹಿ ನವೆಂಬರ್ 16 ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

‘ಹೂ ಮಳೆ’ ಧಾರಾವಾಹಿ ಬಗ್ಗೆ..

ADVERTISEMENT

‘ಲಾಕ್‌ಡೌನ್ ಬಳಿಕ ‘ಹೂ ಮಳೆ’ಯಂತಹ ಒಂದು ಒಳ್ಳೆಯ ಪ್ರಾಜೆಕ್ಟ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಇದರಲ್ಲಿ ನನ್ನದು ರಾಜಕಾರಣಿಯ ಮಗಳ ಪಾತ್ರ. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತೇನೆ. ಆದರೆ ನಮ್ಮ ತಾಯಿ ಪಾರ್ಟಿ ಪ್ರೆಸಿಡೆಂಟ್ ಜೊತೆ ಮಗಳ ಮದುವೆ ಮಾಡಿಸಿದರೆ ಮಗಳಿಗೆ ಗಂಡ ಹಾಗೂ ಎಂಎಲ್‌ಎ ಸೀಟು ಎರಡೂ ಸಿಗುತ್ತದೆ ಎಂಬ ಹಂಬಲ ಹೊಂದಿದವರು. ಪ್ರೀತಿ, ತಾಯಿಯ ಲೆಕ್ಕಾಚಾರದ ಕಥೆ ಮುಂದೇನಾಗುತ್ತದೆ ಎಂಬುದನ್ನು ನೀವು ಕಾದು ನೋಡಬೇಕು. ಇದರಲ್ಲಿ ನನ್ನದು ಬಬ್ಲಿ ಹುಡುಗಿ ಹಾಗೂ ಅಷ್ಟೇ ಪ್ರೌಢತೆ ಹೊಂದಿರುವ ಪಾತ್ರ’ ಎನ್ನುತ್ತಾ ಪ್ರೋಮೊ ಕಥೆಯನ್ನಷ್ಟೇ ವಿವರಿಸುತ್ತಾರೆ.

ಬಿಗ್‌ಬಾಸ್ ನಂತರದ ಜೀವನ..

‘ನಾನು ಬಿಗ್‌ಬಾಸ್‌ಗೆ ಹೋಗುತ್ತೇನೆ, ಬಿಗ್‌ಬಾಸ್‌ ಮನೆಯಲ್ಲಿ ಇರುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ರಾಜಾ ರಾಣಿ ಧಾರಾವಾಹಿ ಮುಗಿಯುತ್ತಿದೆ ಎಂದಾಗ ವಾಹಿನಿಯ ಪರಮೇಶ್ವರ್ ಗುಂಡ್ಕಲ್ ಕರೆ ಮಾಡಿ ಬಿಗ್‌ಬಾಸ್‌ ಬಗ್ಗೆ ಹೇಳಿದಾಗ ನನಗೆ ಶಾಕ್ ಆಗಿತ್ತು. ಇದು ನಿಜಕ್ಕೂ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ. ಆಮೇಲೆ ನನಗೂ ಹೋಗಬೇಕು ಅನ್ನಿಸಿತ್ತು. ಅಲ್ಲಿಗೆ ಹೋಗಿ ಬಂದ ಮೇಲೆ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗಿವೆ. ಅಲ್ಲಿಂದ ಬಂದ ಮೇಲೆ ಜನ ನನ್ನನ್ನು ಹೆಚ್ಚು ಹೆಚ್ಚು ಗುರುತಿಸುತ್ತಿದ್ದಾರೆ. ನನ್ನ ಮೇಲೆ ಜನರಿಗೆ ಒಳ್ಳೆಯ ಅಭಿಪ್ರಾಯ ಸೃಷ್ಟಿಯಾಗಿದೆ. ಹೆಚ್ಚು ಅವಕಾಶಗಳು ಹುಡುಕಿ ಬರುತ್ತಿವೆ. ಒಟ್ಟಾರೆ ಬಿಗ್‌ಬಾಸ್ ಪಯಣ ನನ್ನ ಬದುಕನ್ನು ಬದಲಿಸಿದೆ’ ಎನ್ನುತ್ತಾರೆ ಚಂದನಾ.

ನಿರೂಪಕಿಯಾಗಿ..

ನಟನೆಯ ನಡು ನಡುವೆ ‘ಹಾಡು ಕರ್ನಾಟಕ ಹಾಡು’ ರಿಯಾಲಿಟಿ ಷೋದ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಆ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ‘ನನ್ನನ್ನು ನಿರೂಪಕಿಯಾಗಿ ತೆರೆ ಮೇಲೆ ಕಾಣಬೇಕು ಎಂಬುದು ನಮ್ಮ ಮನೆಯವರ ಆಸೆಯಾಗಿತ್ತು. ಆ ಆಸೆಯನ್ನು ಈಡೇರಿಸಿದ್ದು ಹಾಡು ಕರ್ನಾಟಕ ಕಾರ್ಯಕ್ರಮ. ನನಗೂ ಇದು ಹೊಸ ಅನುಭವವಾಗಿತ್ತು, ಆ ಮೂಲಕ ಹೊಸತನ್ನು ಕಲಿತ ಅನುಭವ ನಿಜಕ್ಕೂ ಚೆನ್ನಾಗಿತ್ತು’ ಎನ್ನುತ್ತಾರೆ.

‘ಸಿನಿಮಾಗಳಿಂದಲೂ ಅವಕಾಶ ಬರುತ್ತಿದೆ. ಒಳ್ಳೆಯ ಕಥೆ ಹಾಗೂ ಕಿರುತೆರೆಯಲ್ಲಿ ಇನ್ನಷ್ಟು ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಿನಿಮಾಕ್ಕೆ ಹಿಂದೇಟು ಹಾಕುತ್ತಿದ್ದೇನೆ. ಮುಂದಿನ ವರ್ಷದಿಂದ ಖಂಡಿತ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎನ್ನುವ ಇವರು ‘ನಟಿಯಾಗಿಲ್ಲ ಎಂದರೆ ಎಂಜಿನಿಯರಿಂಗ್‌ ಮುಗಿಸಿ ಡಾನ್ಸರ್ ಆಗಿ ಇರುತ್ತಿದ್ದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.