ADVERTISEMENT

ದಿಲೀಪ್‌ ಶೆಟ್ಟಿ ನಟನೆಯ ಹಾದಿ

ರೇಷ್ಮಾ
Published 29 ಏಪ್ರಿಲ್ 2021, 19:30 IST
Last Updated 29 ಏಪ್ರಿಲ್ 2021, 19:30 IST
ದಿಲೀಪ್ ಶೆಟ್ಟಿ
ದಿಲೀಪ್ ಶೆಟ್ಟಿ   

ದೂರದ ದುಬೈನಲ್ಲಿ ಉದ್ಯೋಗದಲ್ಲಿದ್ದ ಮೂಡಬಿದಿರೆಯ ಆ ಹುಡುಗ ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಮಿಸ್ಟರ್ ದುಬೈ ಪಟ್ಟಕ್ಕೇರುತ್ತಾರೆ. ಇವರ ಫೋಟೊ ಹಾಗೂ ವಿಡಿಯೊಗಳನ್ನು ನೋಡಿದ್ದ ಜೀ ಕನ್ನಡದ ವಾಹಿನಿಯು ಇವರಿಗೆ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡುತ್ತದೆ. ಹೀಗೆ ನಟನೆ ಆರಂಭಿಸಿದವರು ದಿಲೀಪ್‌ ಆರ್‌. ಶೆಟ್ಟಿ. ಸದ್ಯ ಉದಯ ವಾಹಿನಿಯ ‘ಕಸ್ತೂರಿ ನಿವಾಸ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಇವರು ರಾಬರ್ಟ್ ಸಿನಿಮಾದಲ್ಲೂ ನಟಿಸಿದ್ದಾರೆ. ‘ಸಿನಿಮಾ ಪುರವಣಿ’ಗೆ ದಿಲೀಪ್ ತಮ್ಮ ಪರಿಚಯ ಮಾಡಿಕೊಂಡಿದ್ದು ಹೀಗೆ..

ಆರಂಭದ ದಿನಗಳು
ಬ್ಯಾಂಕ್ ಮ್ಯಾನೇಜರ್‌ ಅಥವಾ ಅಕೌಂಟೆಂಟ್‌ ಆಗಬೇಕು ಎಂಬ ಕನಸು ಇರಿಸಿಕೊಂಡಿದ್ದ ದಿಲೀಪ್, ವಿದ್ಯಾ ವಿನಾಯಕ ಧಾರಾವಾಹಿ ಮೂಲಕ ನಟನಾಗುತ್ತಾರೆ. ಆರಂಭದ ದಿನಗಳಲ್ಲಿ ಕ್ಯಾಮೆರಾ ಎದುರಿಸುವುದು, ನಟಿಸುವುದು ಸುಲಭವಿರಲಿಲ್ಲ. ತನ್ನದಲ್ಲದ ದಾರಿಯಲ್ಲಿ ಸಾಗುವುದು ಕಷ್ಟವೇ ಆಗಿತ್ತು ಎನ್ನುವ ಇವರು ಸದ್ಯ ಧಾರಾವಾಹಿ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

ತೆಲುಗಿನಲ್ಲೂ ನಟನೆ
ಕನ್ನಡ ಕಿರುತೆರೆಯ ಒಂದೇ ಧಾರಾವಾಹಿಯಲ್ಲಿನ ಇವರ ನಟನೆ ತೆಲುಗು ಕಿರುತೆರೆಗೂ ‍ಪರಿಚಯವಾಗುವಂತೆ ಮಾಡಿತ್ತು. ತೆಲುಗಿನ ‘ಸ್ವರ್ಣಖಡ್ಗಂ’ ಧಾರಾವಾಹಿಯಲ್ಲಿ ನಟಿಸಿದ್ದ ಇವರು ಸದ್ಯ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೃಷ್ಣ ತುಳಸಿ’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.

ADVERTISEMENT

ರಾಬರ್ಟ್‌ನಲ್ಲೂ ಪಾತ್ರ
ಚಾಲೆಜಿಂಗ್‌ ಸ್ಟಾರ್ ದರ್ಶನ್‌ ನಟನೆಯ ‘ರಾಬರ್ಟ್’ ಸಿನಿಮಾದಲ್ಲೂ ನಟಿಸಿರುವ ದಿಲೀಪ್‌ಗೆ ಇದು ಮೊದಲ ಸಿನಿಮಾ. ‘ತಕಧಿಮಿತ’ ರಿಯಾಲಿಟಿ ಷೋದಲ್ಲಿ ನನ್ನನ್ನು ನೋಡಿದ ತರುಣಣ್ಣ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಸಿನಿಮಾದಲ್ಲಿ ನನ್ನದು ನೆಗೆಟಿವ್‌ ಪಾತ್ರ. ಆದರೂ ನನಗೆ ಬೇಸರವಿಲ್ಲ. ಈ ಸಿನಿಮಾದಲ್ಲಿ ದರ್ಶನ್‌ರಂತಹ ಸ್ಟಾರ್‌, ನಿರ್ದೇಶಕರು ಸೇರಿದಂತೆ ಹಲವು ಲೆಜೆಂಡ್‌ಗಳ ಜೊತೆ ಕೆಲಸ ಮಾಡಿದ್ದೇನೆ. ಅವರೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದೇ ದೊಡ್ಡ ಸಂಗತಿ. ಆ ವಿಷಯದಲ್ಲಿ ನಾನು ತುಂಬಾನೇ ಅದೃಷ್ಟವಂತ’ ಎನ್ನುತ್ತಾರೆ.

ರಾಬರ್ಟ್‌ ನಂತರ ವೆಬ್‌ಸಿರೀಸ್‌ ಹಾಗೂ ಕೆಲವು ಸಿನಿಮಾಗಳಿಂದ ಇವರಿಗೆ ಅವಕಾಶ ಬಂದಿತ್ತು. ಆದರೆ ಸದ್ಯ ಕೊರೊನಾ ಇರುವ ಕಾರಣ ಶೂಟಿಂಗ್ ಮುಂದಕ್ಕೆ ಹೋಗಿದೆ. ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತಷ್ಟು ಸಿನಿಮಾ ಧಾರಾವಾಹಿ, ವೆಬ್‌ಸಿರೀಸ್‌ಗಳಲ್ಲಿ ನಟಿಸುವ ಭರವಸೆ ಇವರದ್ದು. ‘ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುವುದಕ್ಕಿಂತ ಭಿನ್ನ ಪಾತ್ರಗಳಿಗೆ ಜೀವ ತುಂಬುವುದು ನನಗೆ ಇಷ್ಟ. ಚಾಲೆಜಿಂಗ್‌ ಅಥವಾ ಔಟ್‌ ಆಫ್‌ ದಿ ಸ್ಕೇಲ್‌ ಪಾತ್ರಗಳಲ್ಲಿ ನಟಿಸುವುದು ಇಷ್ಟವಾಗುತ್ತದೆ’ ಎನ್ನುತ್ತಾರೆ ದಿಲೀಪ್‌.

ಖ್ಯಾತಿ ತಂದ ಕಸ್ತೂರಿ ನಿವಾಸ
‘ಕಸ್ತೂರಿ ನಿವಾಸ ಕೌಟುಂಬಿಕ ಹಿನ್ನೆಲೆ ಇರುವ ಧಾರಾವಾಹಿ. ತುಂಬು ಕುಟುಂಬದಲ್ಲಿನ ಒಗ್ಗಟ್ಟು, ಭಿನ್ನಾಭಿಪ್ರಾಯ ಎಲ್ಲವೂ ಇದರಲ್ಲಿದೆ. ನಮ್ಮ ನಿಜ ಜೀವನದಲ್ಲಿ ನಡೆಯುವ ಘಟನೆಗಳೇ ಈ ಧಾರಾವಾಹಿಯಲ್ಲಿ ಪ್ರತಿಫಲಿತವಾಗುತ್ತವೆ. ನನ್ನದು ಧಾರಾವಾಹಿಯಲ್ಲಿ ನಾಯಕನ ಪಾತ್ರ. ಆ ಪಾತ್ರ ನನಗೆ ತುಂಬಾನೇ ಹೆಸರು ತಂದುಕೊಟ್ಟಿದೆ. ಹೊರಗಡೆ ಜನ ನನ್ನನ್ನು ರಾಘವ ಎಂದೇ ಗುರುತಿಸುತ್ತಾರೆ. ಧಾರಾವಾಹಿಯಲ್ಲಿ ನನಗೆ ನನ್ನ ಗುರು ಮುಸ್ಸಂಜೆ ಮಹೇಶ್ ಸಿಕ್ಕಿದ್ದರು. ಅವರು ನನಗೆ ನಟನೆಯ ಹಾಗೂ ಈ ಕ್ಷೇತ್ರದ ಆಳ–ಅಗಲದ ಪರಿಚಯ ಮಾಡಿಸಿದವರು. ಅದರೊಂದಿಗೆ ಧಾರಾವಾಹಿ ಇಡೀ ತಂಡ ನನಗೆ ಕಲಿಸಿದೆ. ಒಟ್ಟಾರೆ ಕಸ್ತೂರಿ ನಿವಾಸ ನನಗೆ ಹೆಸರು, ಖ್ಯಾತಿ ಎರಡನ್ನೂ ತಂದುಕೊಟ್ಟಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.