ADVERTISEMENT

ಈ ಬಾರಿ ಪ್ರೇಕ್ಷಕರಿಲ್ಲದೆ ‘ಕೌನ್‌ ಬನೇಗಾ ಕ್ರೋರ್‌ಪತಿ’ ಶೂಟಿಂಗ್‌!

ಸೆ. 7ರಿಂದ ಕೆಬಿಸಿ ಚಿತ್ರೀಕರಣ ಶುರು: ಅಕ್ಟೋಬರ್‌ಗೆ ಕಾರ್ಯಕ್ರಮ ಪ್ರಸಾರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 9:30 IST
Last Updated 4 ಸೆಪ್ಟೆಂಬರ್ 2020, 9:30 IST
ಅಮಿತಾಭ್‌ ಬಚ್ಚನ್‌
ಅಮಿತಾಭ್‌ ಬಚ್ಚನ್‌   

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ಗೆ ಕೋವಿಡ್‌–19 ಸೋಂಕು ತಗುಲಿದ್ದು ಹಳೆಯ ಸುದ್ದಿ. ಈಗ ಸಂಪೂರ್ಣ ಗುಣಮುಖರಾಗಿರುವ ಅವರು, ‘ಕೌನ್‌ ಬನೇಗಾ ಕ್ರೋರ್‌ಪತಿ’ಯ 12ನೇ ಆವೃತ್ತಿ ನಡೆಸಿಕೊಡಲು ಸಜ್ಜಾಗಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮದ ಶೂಟಿಂಗ್ ಯಾವಾಗ ಎನ್ನುವ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.

ಮುಂಬೈನ ಫಿಲ್ಮ್‌ ಸಿಟಿಯಲ್ಲಿ ಈ ರಿಯಾಲಿಟಿ ಶೋನ ಶೂಟಿಂಗ್‌ಗಾಗಿ ಆಕರ್ಷಕ ಸೆಟ್‌ ಸಿದ್ಧವಾಗಿದೆ. ತಂತ್ರಜ್ಞರ ತಂಡ ಇದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತವಾಗಿದ್ದು, ಮುಂಜಾಗ್ರತಾ ಕ್ರಮಕ್ಕೂ ಮುಂದಾಗಿದೆ. ‘ಜನರು ನಿರೀಕ್ಷೆಯಿಂದ ಕಾಯುತ್ತಿರುವ ಸಮಯ ಬಂದಿದೆ. ಸೆಪ್ಟೆಂಬರ್‌ 7ರಿಂದ ಕೆಬಿಸಿ ಶೂಟಿಂಗ್‌ ಶುರುವಾಗಲಿದೆ’ ಎಂದು ಸೋನಿ ಟಿವಿ ಟ್ವೀಟ್‌ ಮಾಡಿದೆ.

ಇದೇ ಮೊದಲ ಬಾರಿಗೆ ಆಡಿಷನ್‌ ಪ್ರಕ್ರಿಯೆಯು ಡಿಜಿಟಲ್‌ ರೂಪದಲ್ಲಿ ನಡೆಯುತ್ತಿದೆ. ಈ ಬಾರಿ ಕೆಬಿಸಿ ಸೆಟ್‌ನಲ್ಲಿ ಪಾಲ್ಗೊಳ್ಳಲು ಯಾವೊಬ್ಬ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಿಲ್ಲ. ಕೋವಿಡ್‌ ಪರಿಣಾಮ ಈ ಕ್ರಮವಹಿಸಲಾಗಿದೆ. ಆದರೆ, ಪ್ರತಿಯೊಬ್ಬ ಸ್ಪರ್ಧಿಗೂ ತನ್ನ ಕುಟುಂಬದ ಒಬ್ಬ ಸದಸ್ಯನನ್ನು ಸೆಟ್‌ಗೆ ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆಯಂತೆ. ಈಗಾಗಲೇ, ಸ್ಪರ್ಧಿಗಳನ್ನು ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅಲ್ಲಿಂದಲೇ ಫಾಸ್ಟ್‌ಟೆಸ್ಟ್‌ ಫಿಂಗರ್‌ ರೌಂಡ್‌ ಮೂಲಕ ಸ್ಪರ್ಧಿಗಳ ಅಂತಿಮ ಸುತ್ತಿನ ಆಯ್ಕೆ ನಡೆಯಲಿದೆ.

ADVERTISEMENT

ಅಮಿತಾಭ್‌ ಬಚ್ಚನ್‌ ಇತ್ತೀಚೆಗೆ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗಾಗಿ, ಕೆಬಿಸಿ ತಂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆಯಂತೆ. ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವವರಿಗೆ ಪರಸ್ಪರ ಸಂವಾದ ನಡೆಸುವ ಸಂಬಂಧ ಕೆಲವು ನಿರ್ಬಂಧ ವಿಧಿಸಲಾಗಿದೆ. ಆದರೆ, ಚಿತ್ರೀಕರಣ ತಂಡದ ಸದಸ್ಯರಿಗೆ ಇನ್ನೂ ಕೊರೊನಾ ಭಯ ಹೋಗಿಲ್ಲ. ಆದರೂ, ಸೆಟ್‌ಗೆ ಮರಳಲು ಅವರು ಉತ್ಸುಕರಾಗಿದ್ದಾರಂತೆ. ಕಳೆದ ವರ್ಷದಂತೆಯೇ ಅಮಿತಾಭ್‌ ಅವರು ದಿನಕ್ಕೆ ಎರಡು ಎಪಿಸೋಡ್‌ಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್‌ನಿಂದ ಕೆಬಿಸಿ 12 ಪ್ರಸಾರವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.