ADVERTISEMENT

‘ಲವ್‌ ಮಿ ಇಂಡಿಯಾ’ ಗೆದ್ದ ಗುರು

ಹೇಮಾ ವೆಂಕಟ್
Published 1 ಜನವರಿ 2019, 20:00 IST
Last Updated 1 ಜನವರಿ 2019, 20:00 IST
ಗುರುಕಿರಣ್‌
ಗುರುಕಿರಣ್‌   

ವಯಸ್ಸು 15. ಇಷ್ಟರಲ್ಲಾಗಲೇ ಕನ್ನಡದ ಒಂದು, ಹಿಂದಿಯ ಒಂದು ರಿಯಾಲಿಟಿ ಶೋ ಗೆದ್ದು ಬಂದಿದ್ದಾನೆ ಈ ಬಾಲಕ.ಜೀ 5 ಹಿಂದಿ ಮನರಂಜನಾ ವಾಹಿನಿಯಲ್ಲಿ ಡಿಸೆಂಬರ್‌ 23ರಂದು ಅಂತ್ಯ ಕಂಡ ‘ಲವ್‌ ಮಿ ಇಂಡಿಯಾ’ಲೈವ್‌ ಸಂಗೀತ ಸ್ಪರ್ಧೆಯಲ್ಲಿ ಗೆದ್ದು₹ 5 ಲಕ್ಷ ಬಹುಮಾನ ಪಡೆದ ಕನ್ನಡದ ಈ ಬಾಲಕ ಗುರುಕಿರಣ್ ಹೆಗ್ಡೆ.

ಮೂಲತಃ ಉತ್ತರಕನ್ನಡದವರಾದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸುಧಾಕರ ಹೆಗ್ಡೆ ಮತ್ತು ಪಾರ್ವತಿ ದಂಪತಿಯ ಪುತ್ರ. ಯಶವಂತಪುರದ ರಾಜರಾಜೇಶ್ವರಿ ಇಂಗ್ಲೀಷ್ ಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ.

ಹಿಂದೂಸ್ತಾನಿ ಜೂನಿಯರ್ ಪರೀಕ್ಷೆ ಪಾಸು ಮಾಡಿ ಸೀನಿಯರ್ ಪರೀಕ್ಷೆಗೆ ಸಿದ್ಧನಾಗುತ್ತಿದ್ದಾನೆ. ಶಾಲೆಯ ಓದಿನ ಜೊತೆಗೆ ಸಂಗೀತದ ನಾಲ್ಕು ವರ್ಷದ ಡಿಪ್ಲೊಮಾ ಕೂಡಾ ಮಾಡುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲ ಮಾಡಲು ಈ ಬಾಲಕನಿಗೆ 24 ಗಂಟೆ ಸಾಕೇ ಎಂಬ ಅನುಮಾನ ಬರುವುದಂತೂ ನಿಜ. ಗುರುಕಿರಣ್‌ಗೆ ಸಂಗೀತ ಅಂದರೆ ಅಷ್ಟು ಪ್ರೀತಿ.

ADVERTISEMENT

ಬಾಲ್ಯದಿಂದಲೇ ಗುರುವಿಗೆ ಸಂಗೀತದ ಗೀಳು. ಅಮ್ಮನೇ ಮೊದಲ ಗುರು. ಏಳನೇ ವಯಸ್ಸಿನಿಂದ ವಿದುಷಿ ರಾಜೇಶ್ವರಿ ಭಟ್ ಅವರಿಂದ ಸಂಗೀತ ಕಲಿಕೆ. ಹತ್ತನೇ ವಯಸ್ಸಿನಿಂದ ವಿದ್ವಾನ್ ಮಹೇಶ್ ಕುಮಾರ್ ಹೇರಿತು ಅವರಿಂದ ಸಂಗೀತ ಪಾಠ. ಭಾರತೀಯ ವಿದ್ಯಾಭವನದಿಂದ ನಡೆಸುವ ನಾಲ್ಕು ವರ್ಷಗಳ ಸಂಗೀತ ಡಿಪ್ಲೊಮಾ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿ.

ಕಳೆದ ಜನವರಿಯಲ್ಲಿ ಉದಯ ಚಾನೆಲ್‌ ನಡೆಸಿದ ಉದಯ ಸಿಂಗರ್ ಜೂನಿಯರ್ ರಿಯಾಲಿಟಿ ಶೋ ನಲ್ಲಿ ಗೆದ್ದ ಗುರುಕಿರಣ್‌ ಹಿಂದಿಯ ರಿಯಾಲಿಟಿ ಶೋಗೆ ನೇರ ಪ್ರವೇಶ ಪಡೆದಿದ್ದ. ‘ಲವ್‌ ಮಿ ಇಂಡಿಯಾ’ ಕಿಡ್ಸ್‌ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಕರ್ನಾಟಕದ ಏಕೈಕ ಸ್ಪರ್ಧಿ ಈತ. ಒಂದೇ ವರ್ಷದಲ್ಲಿ ಎರಡು ಸ್ಪರ್ಧೆ ಗೆದ್ದು ಸಂಗೀತ ಕ್ಷೇತ್ರದಲ್ಲಿ ತನ್ನ ಪಯಣ ಹೇಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾನೆ. ದೇಶದ ಲಕ್ಷಾಂತರ ಸಂಗೀತಪ್ರಿಯರ ಮನಸೂರೆಗೊಂಡಿದ್ದಾನೆ.

‘ಉದಯ ಟಿ.ವಿಯ ಉದಯ ಸಿಂಗರ್‌ ಜೂನಿಯರ್‌ ರಿಯಾಲಿಟಿ ಶೋ ಗೆದ್ದ ನಂತರ, ಲವ್‌ ಮಿ ಇಂಡಿಯಾ ಹಿಂದಿ ಹಾಡುಗಳ ರಿಯಾಲಿಟಿ ಶೋಗೆ ಆಡಿಷನ್‌ ಇಲ್ಲದೇ ಗುರುಕಿರಣ್‌ಗೆ ಪ್ರವೇಶ ನೀಡಲಾಯಿತು. ಸ್ಪರ್ಧೆಯ ಮೊದಲ ಹಾಡಿನಿಂದ ಕೊನೆಯವರೆಗೂ ಒಂದೇ ಒಂದು ನೆಗೆಟಿವ್‌ ಅಭಿಪ್ರಾಯ ತೀರ್ಪುಗಾರರಿಂದ ಬಂದಿರಲಿಲ್ಲ. ಹಾಡಿನ ವಿಚಾರದಲ್ಲಿ ಮಗನಿಗೆ ಸೋಲಾಗುವ ಛಾನ್ಸೇ ಇಲ್ಲ ಎಂದು ಆಗೆಲ್ಲ ಅನ್ನಿಸಿತ್ತು. ಉಳಿದಂತೆ ಒಳರಾಜಕೀಯ ಅಥವಾ ವೋಟಿಂಗ್‌ ವಿಚಾರದಲ್ಲಿ ನಮಗೆ ಹೆಚ್ಚಿನ ಭರವಸೆ ಇರಲಿಲ್ಲ. ಆದರೆ, ತೀರ್ಪುಗಾರರು ಮೊದಲ ದಿನವೇ ಗುರುಕಿರಣ್‌ ಫೈನಲ್‌ ಸ್ಪರ್ಧಿ ಎಂದು ಹೇಳಿಬಿಟ್ಟಿದ್ದರು. ಇದು ಗೆಲ್ಲುವ ಭರವಸೆ ಜೀವಂತವಾಗಿಟ್ಟಿತ್ತು. ಪ್ರತಿ ಹಾಡು ಹಾಡಿದಾಗಲು ತೀರ್ಪಗಾರ ಗುರು ರಾಂಧವ ಅವರು ಎದ್ದು ವೇದಿಕೆಗೆ ಬಂದು ಹರಸುತ್ತಿದ್ದರು’ ಎಂದು ಗುರುಕಿರಣ್‌ ತಾಯಿ ಪಾರ್ವತಿ ಹೇಳುತ್ತಾರೆ.

ಕಳೆದ ಸೆಪ್ಟೆಂಬರ್‌ 22ರಿಂದ ಆರಂಭವಾಗಿದ್ದ ರಿಯಾಲಿಟಿ ಶೋ ಡಿಸೆಂಬರ್‌ 23ರಂದು ಕೊನೆಗೊಂಡಿತ್ತು. ಹಿಮೇಶ್‌ ರೇಶ್ಮಿಯಾ, ನೇಹಾ ಭಸಿನ್‌, ಗುರು ರಾಂಧವ ತೀರ್ಪುಗಾರರಾಗಿದ್ದರು. ಈ ರಿಯಾಲಿಟಿ ಶೋದ ಥೀಮ್‌ ಮ್ಯೂಸಿಕ್ ಅನ್ನು ಹಿಮೇಶ್‌ ಅವರೇ ನಿರ್ದೇಶನ ಮಾಡಿದ್ದರು. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗುತ್ತಿತ್ತು. Zee5 App ಮೂಲಕ ವೋಟಿಂಗ್‌ಗೆ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.