ADVERTISEMENT

ಮತ್ತೆ ನಗಿಸಲು ಬರುತ್ತಿದ್ದಾರೆ ಪಾಂಡು ಮತ್ತು ಶ್ರೀಮತಿ

ರೇಷ್ಮಾ ಶೆಟ್ಟಿ
Published 28 ಜೂನ್ 2018, 16:20 IST
Last Updated 28 ಜೂನ್ 2018, 16:20 IST
ಚಿದಾನಂದ್‌ ಮತ್ತು ಶಾಲಿನಿ
ಚಿದಾನಂದ್‌ ಮತ್ತು ಶಾಲಿನಿ   

ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳಷ್ಟೇ ಪ್ರಸಾರವಾಗುತ್ತಿದ್ದ ಕಾಲ ಅದು. ಹೆಣ್ಣುಮಕ್ಕಳೆಲ್ಲಾ ಟಿ.ವಿ. ಮುಂದೆ ಕುಳಿತು ಧಾರಾವಾಹಿ ನೋಡುತ್ತಾ ಕಣ್ಣೀರು ಹಾಕುತ್ತಿದ್ದರೆ, ಗಂಡಸರೆಲ್ಲಾ ಧಾರಾವಾಹಿಗಳಿಗೆ ಹಿಡಿಶಾಪ ಹಾಕಿಕೊಂಡು ಜಗಲಿಕಟ್ಟೆ ಸೇರುತ್ತಿದ್ದರು. ಅಂತಹ ಸಂದರ್ಭದಲ್ಲಿ ಜಗುಲಿಕಟ್ಟೆಯ ಗಂಡಸರು, ಕಣ್ಣೀರು ಸುರಿಸುವ ಮಹಿಳಾಮಣಿಗಳು ಒಟ್ಟಾಗಿ ಕುಳಿತು ನೋಡುವಂತೆ ಮಾಡಿದ, ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಧಾರಾವಾಹಿ ‘ಪಾ.ಪ ಪಾಂಡು’.

15 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ‘ಪಾ.ಪ ಪಾಂಡು’ ಈಗ ಮತ್ತೆ ‘ಪಾ.ಪ ಪಾಂಡು 2’ ಹೆಸರಿನಲ್ಲಿ ಸೋಮವಾರದಿಂದ (ಜುಲೈ 2) ಪ್ರಸಾರವಾಗಲಿದೆ. ಅಂದು ನಾಯಕ–ನಾಯಕಿಯಾಗಿ ನಟಿಸಿದ್ದ ಚಿದಾನಂದ್ ಹಾಗೂ ಶಾಲಿನಿ ಈ ಬಾರಿಯೂ ಅದೇ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಪಾತ್ರವರ್ಗದಲ್ಲಿ ಕೆಲವು ಬದಲಾವಣೆ ಹೊರತುಪಡಿಸಿದರೆ ಇನ್ನೆಲ್ಲವೂ ಹಳೆಯ ‘ಪಾ.ಪ ಪಾಂಡು’ವಿನ ಸೊಗಸನ್ನೇ ನೆನಪಿಸುವಂತೆ ಇವೆ. ‘ಪಾಂಡು 2’ಗೆ ಸಿಹಿಕಹಿ ಚಂದ್ರು ಹಾಗೂ ಜಯಂತ್ ಸಂಭಾಷಣೆ ಬರೆಯುತ್ತಿದ್ದಾರೆ.

ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ಅಲೆ ಎಬ್ಬಿಸಿದ್ದ ಪಾಂಡು ಈ ಬಾರಿ ‘ಕಲರ್ಸ್ ಸೂಪರ್‌’ ವಾಹಿನಿಯಲ್ಲಿ ಪ್ರತಿ ರಾತ್ರಿ 10ರಿಂದ 10.30ರವರೆಗೆ ಪ್ರಸಾರವಾಗಲಿದೆ. ಧಾರಾವಾಹಿಯ ಎರಡನೇ ಆವೃತ್ತಿಯ ಬಗ್ಗೆ ಧಾರಾವಾಹಿ ತಂಡದವರೆಲ್ಲ ಬಹಳ ನಿರೀಕ್ಷೆ ಇರಿಸಿಕೊಂಡಿದ್ದು, ಜನ ಹಿಂದೆ ತೋರಿದ ಪ್ರೀತಿ, ಪ್ರೋತ್ಸಾಹವನ್ನು ಈ ಬಾರಿಯೂ ತೋರುತ್ತಾರೆ ಎಂಬ ನಿರೀಕ್ಷೆ, ಆತ್ಮವಿಶ್ವಾಸದಲ್ಲಿ ಇದ್ದಾರೆ.

ADVERTISEMENT

ಪಾಂಡುವಿನ ಮನದ ಮಾತು

‘ನನ್ನನ್ನು ಜನ ಇಂದಿಗೂ ಪಾಂಡು ಎಂದೇ ಗುರುತಿಸುತ್ತಾರೆ. ಚಿದಾನಂದ ಎಂಬ ತನ್ನ ನಿಜ ನಾಮಕ್ಕಿಂತ ಪಾಂಡು ಎಂಬ ಧಾರಾವಾಹಿ ಹೆಸರಿನಲ್ಲೇ ನನ್ನನ್ನು ಕರೆಯುತ್ತಾರೆ. ಪಾಪ ಪಾಂಡು 2 ಮತ್ತೆ ತೆರೆ ಮೇಲೆ ಬರುತ್ತಿರುವುದಕ್ಕೆ, ಅದರಲ್ಲಿ ನಾನು ಪಾಂಡು ಪಾತ್ರಕ್ಕೆ ಮತ್ತೆ ಜೀವ ತುಂಬುತ್ತಿರುವುದಕ್ಕೆ ನನಗೆ ಖುಷಿ ಇದೆ. ಆಗಿನ ‍ಪಾಂಡುಗೂ ಈಗೀನ ಪಾಂಡುವಿಗೂ ವ್ಯತ್ಯಾಸ ಎಂದರೆ ಕಾಲದಲ್ಲಿ ಆಗಿರುವ ಬದಲಾವಣೆ ಮಾತ್ರ. ಈಗಿನ ಟ್ರೆಂಡ್‌ಗೆ ಬೇಕಾದ ಹಾಗೆ ಕತೆಯನ್ನು ಹೆಣೆಯಲಾಗಿದೆಯೇ ಹೊರತು ಪಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂದು ಪಾಂಡು ಮನೆ ಅಳಿಯ ಆಗಿದ್ದ. ಅತ್ತೆ, ಮೈದುನ, ಹೆಂಡತಿ ಹೀಗಿದ್ದ ಕುಟುಂಬ ಈಗ ಬದಲಾಗಿದೆ.ಪಾಂಡು 2ನೇ ಆವೃತ್ತಿಯಲ್ಲಿ ಪಾಂಡುವಿಗೆ ಮಗ, ಸೊಸೆ ಇದ್ದಾರೆ. ಈ ಕುಟುಂಬದ ನಡುವೆ ಧಾರಾವಾಹಿ ಸಾಗುತ್ತದೆ. ಈಗಲೂ ಪಾಂಡು ಹೆಂಡತಿಗೆ ಹೆದರುತ್ತಾನೆ, ಹಿಂದೆ ಶ್ರೀಮತಿ ಪಾಂಡುವನ್ನು ಎಸೆದಾಗ ಅತ್ತೆಯ ತೊಡೆಯ ಮೇಲೆ ಬೀಳುತ್ತಿದ್ದ, ಆದರೆ ಈಗ ಅವನು ಸೋಫಾ ಮೇಲೆ ಬೀಳುತ್ತಾನೆ ಅಷ್ಟೇ ವ್ಯತ್ಯಾಸ’ ಎಂದು ಹೇಳಿದರು ಚಿದಾನಂದ.

‘ಇಷ್ಟು ವರ್ಷಗಳ ಅಂತರದಲ್ಲಿ ನಾನು ಹಲವನ್ನು ಕಲಿತಿದ್ದೇವೆ. ಇದು ಅನುಭವಗಳ ಮೂಟೆಯನ್ನೇ ನನಗಾಗಿ ಕಟ್ಟಿಕೊಟ್ಟಿದೆ. 2ನೇ ಆವೃತ್ತಿಯಲ್ಲೂ ಶ್ರೀಮತಿಯು ಪಾಂಡುವನ್ನು ಮೊದಲಿನಷ್ಟೇ ಗೋಳಾಡಿಸುತ್ತಾಳೆ. ಪಾಂಡುವಿನ ಗೋಳಾಟ ಜನರಲ್ಲಿ ನಗು ತರಿಸಿಯೇ ತರಿಸುತ್ತದೆ’ ಎಂದು ‘ಚಂದನವನ’ದ ಜೊತೆ ಮಾತನಾಡಿದ ಚಿದಾನಂದ ಖುಷಿಯಿಂದ ಹೇಳಿಕೊಂಡರು.

‘ಮೊದಲಿನ ಆವೃತ್ತಿ ಮುಗಿದು 15 ವರ್ಷ ಕಳೆದಿದೆ. ಇಂದಿಗೂ ಎಲ್ಲೇ ಹೋದರೂ ಮತ್ತೆ ಪಾಪ ಪಾಂಡು ಶುರು ಮಾಡಿ ಅಂತ ಜನ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಜನ ಧಾರಾವಾಹಿಯನ್ನು ಮೆಚ್ಚಿದ್ದರು. ಜನರ ನಿರೀಕ್ಷೆಯೊಂದಿಗೆ ನಮ್ಮ ನಿರೀಕ್ಷೆಯೂ ಸೇರಿದೆ. ಹೊಸತನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲ ಖಂಡಿತ ಇದೆ. ಇದು ಎಲ್ಲರ ಮನಸ್ಸನ್ನು ತಲುಪುತ್ತದೆ ಎಂಬ ನಂಬಿಕೆ ನನ್ನದು’ ಎಂದರು.

‘ನಾನು ಇಲ್ಲಿಯೂ ಶ್ರೀಮತಿಯೇ’

ಶಾಲಿನಿ ಅವರದ್ದು ಈ ಆವೃತ್ತಿಯಲ್ಲಿ ಕೂಡ ಶ್ರೀಮತಿಯ ಪಾತ್ರಕ್ಕೆ ಜೀವ ತುಂಬುಕ ಕೆಲಸ. ‘ಶ್ರೀಮತಿ ಶ್ರೀಮತಿಯಾಗಿಯೇ ಇರುತ್ತಾಳೆ. ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುತ್ತಾಳೆ. ಗಂಡನ ಗೋಳುಹೊಯ್ದುಕೊಳ್ಳುವುದೇ ಶ್ರೀಮತಿಯ ಕೆಲಸ. ಆದರೆ ಹೊಸದಾಗಿ ಸೇಪರ್ಡೆಯಾಗಿರುವುದು ಇಬ್ಬರು ಮಕ್ಕಳು, ಸೊಸೆ ಹಾಗೂ ತಮ್ಮನ ಮಗಳು. ಮಕ್ಕಳ ಪೈಕಿ ಮೊದಲ ಮಗನಿಗೆ ಮದುವೆಯಾಗಿರುತ್ತದೆ. ಅವನು ಶ್ರೀಮತಿಗೆ ಇಷ್ಟವಿಲ್ಲದೇ ಮದುವೆಯಾಗಿರುತ್ತಾನೆ. ಆ ಕಾರಣಕ್ಕಾಗಿ ಅವನಲ್ಲಿ ಅಸಮಾಧಾನ ಇರುತ್ತದೆ. ಒಟ್ಟಾರೆ ಇದರಲ್ಲೂ ನನ್ನದು ಮನೆಯ ಎಲ್ಲರನ್ನೂ ತನ್ನ ಸುಪರ್ದಿಯಲ್ಲಿ ಇರಿಸಿಕೊಳ್ಳುವ ಪಾತ್ರ’ ಎಂದರು ಶಾಲಿನಿ.

ಪುಂಡ (ಮೊದಲನೇ ಮಗ) ಎಂದರೆ ಶ್ರೀಮತಿಗೆ ಬಹಳ ಪ್ರೀತಿ, ಎರಡನೇ ಮಗನ ಮೇಲೆ ಗಮನವೇ ಇಲ್ಲ. ಶ್ರೀಹರಿ (ಎರಡನೇ ಮಗ) ಮೇಲೆ ಪ್ರೀತಿ ಕಡಿಮೆ. ಒಟ್ಟಾರೆಯಾಗಿ ಹೇಳಬೇಕೆಂದರೆ ‘ಪಾ.ಪ ಪಾಂಡು’ಗೂ ‘ಪಾ.ಪ ಪಾಂಡು 2’ಕ್ಕೂಹೆಚ್ಚಿನ ವ್ಯತ್ಯಾಸ ಶ್ರೀಮತಿಯ ದಬ್ಬಾಳಿಕೆಯ ವ್ಯಾಪ್ತಿಗೆ ಇನ್ನಷ್ಟು ಮಂದಿ ಸಿಲುಕಿದ್ದಾರೆ!

‘15 ವರ್ಷಗಳ ಹಿಂದೆ ಜನ ನಮ್ಮ ಮೇಲೆ ತೋರಿದ್ದ ಪ್ರೀತಿಯನ್ನು ಈ ಬಾರಿಯೂ ತೋರುತ್ತಾರೆ ಎಂಬ ನಂಬಿಕೆ, ನಿರೀಕ್ಷೆ ಇದೆ. ಜೊತೆಗೆ ಒಂದಷ್ಟು ಭಯವೂ ಇದೆ. ಅವರ ನಿರೀಕ್ಷೆಗಳಿಗೆ ಸ್ಪಂದಿಸುವ ಆತ್ಮವಿಶ್ವಾಸವೂ ಇದೆ’ ಎಂದರು ಶಾಲಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.