ADVERTISEMENT

'ರಾಜ-ರಾಣಿ' ಸೀಸನ್‌ 2 ಜೂನ್‌ 11ರಂದು

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 9:50 IST
Last Updated 10 ಜೂನ್ 2022, 9:50 IST
ಸೃಜನ್‌ ಲೋಕೇಶ್‌
ಸೃಜನ್‌ ಲೋಕೇಶ್‌   

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಶೋ‘ರಾಜ-ರಾಣಿ’ಯ ಹೊಸ ಆವೃತ್ತಿ ಜೂನ್‌ 11ರಂದು ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರಗೊಳ್ಳಲಿರುವ ರಾಜ-ರಾಣಿ ಶೋ, ಸೆಲಿಬ್ರಿಟಿಗಳ ಸಂಸಾರದ ಸುಖ ದುಃಖಗಳನ್ನು ಬಣ್ಣಬಣ್ಣವಾಗಿ ನಮ್ಮ ಮುಂದಿಡುತ್ತದೆ. ಅಲ್ಲಿ ಮಾತು, ಆಟ, ಕಣ್ಣೀರು, ಪನ್ನೀರು ಎಲ್ಲವೂ ಇರುತ್ತದೆ.
ಸಂಸಾರ ಅಂದರೆ ಅದೇ ಪ್ರೆಷರ್ ಕುಕ್ಕರು, ಫ್ರಿಜ್ಜು, ವಾಷಿಂಗ್ ಮಶೀನು, ಲಂಚ್ ಬಾಕ್ಸು, ಮಕ್ಕಳ ಯೂನಿಫಾರ್ಮು, ವೀಕೆಂಡ್ ಶಾಪಿಂಗ್, ದಿನಸಿ ಪಟ್ಟಿ ಅಂತ ಅಂದುಕೊಳ್ಳಬಹುದು. ಹಾಗಿದ್ದರೂ ಪ್ರತೀ ಸಂಸಾರವೂ ಬೇರೆ ಬೇರೆ. ಇನ್ನೊಬ್ಬರ ಸಂಸಾರ ತಾಪತ್ರಯಗಳೊಳಗೆ ಇಣುಕಿ ನೋಡುವುದರಲ್ಲಿ ಕುತೂಹಲ, ಖುಷಿಗಳಿದ್ದಂತೆಯೇ ಕಲಿಯುವುದೂ ಸಾಕಷ್ಟಿರುತ್ತದೆ ಎಂದಿದೆ ವಾಹಿನಿಯ ತಂಡ.

ಮತ್ತೊಂದು ವಿಶೇಷತೆ ಎಂದರೆ ಈ ಬಾರಿಯ ರಾಜ-ರಾಣಿ ಸೀಸನ್‌ನಲ್ಲಿ ಸಾಮಾನ್ಯ ಜೋಡಿಗಳಿಗೂ ಅವಕಾಶ ದೊರೆಯಲಿದೆ. ವೀಕ್ಷಕರಿಗಾಗಿ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಜೋಡಿಯು ಸ್ವಿಟ್ಜರ್ಲೆಂಡ್‌ನಲ್ಲಿ ತಮ್ಮ ಎರಡನೇ ಹನಿಮೂನ್ ಅನ್ನು ಆಚರಿಸಿಕೊಳ್ಳಬಹುದು ಎಂದಿದೆ ವಾಹಿನಿ.

ADVERTISEMENT

ನಟ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಈ ಕಾರ್ಯಕ್ರಮದ ತೀರ್ಪುಗಾರರು. ಜಾಹ್ನವಿ ಅವರು ಈ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.

ಕಣದಲ್ಲಿರುವ ಜೋಡಿಗಳು

ಖ್ಯಾತ ಸಂಗೀತ ನಿರ್ದೇಶಕ, ನಟ ವಿ ಮನೋಹರ್ ಮತ್ತು ಅವರ ಪತ್ನಿ ವೇಣಿ, ನಟ ನಟಿಯರಾದ ಸುಂದರ್ ಮತ್ತು ವೀಣಾ ದಂಪತಿ, ರಾಧಾರಮಣ ಖ್ಯಾತಿಯ ನಟಿ ಸುಜಾತಾ ಮತ್ತವರ ಪತಿ ಅಕ್ಷಯ್, ಬಿಗ್ ಬಾಸ್ ಖ್ಯಾತಿಯ ಧನರಾಜ್ ಮತ್ತು ಅವರ ಹೆಂಡತಿ ಶಾಲಿನಿ, ಬಿಗ್‌ಬಾಸ್‌ನಿಂದಲೇ ಹೆಸರಾದ ಕ್ರಿಕೆಟಿಗ ರಾಜೀವ್ ಮತ್ತು ರೇಷ್ಮಾ ಈ ಬಾರಿ ಸ್ಪರ್ಧೆಯಲ್ಲಿದ್ದಾರೆ. ಅವರೊಟ್ಟಿಗೆ ವಿವಿಧ ರಂಗಗಳಲ್ಲಿ ಖ್ಯಾತರಾಗಿರುವ ರಜತ್- ಅಕ್ಷಿತಾ, ಕಾವ್ಯಾ ಮಹದೇವ್-ಕುಮಾರ್, ಶೋಭರಾಜ್- ದೀಪಿಕಾ ಸುವರ್ಣ, ಸಂದೇಶ್- ಮನೀಶಾ, ನಿಶಿತಾ ಗೌಡ-ಪ್ರಸನ್ನ, ಅರುಣ್-ಮಾಧುರ್ಯ, ಮತ್ತು ಐಶ್ವರ್ಯಾ-ವಿನಯ್ ಇದ್ದಾರೆ ಎಂದು ವಾಹಿನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.