ADVERTISEMENT

ಕುಂದಾಪ್ರ ಕನ್ನಡದಲ್ಲಿ ಶಾಂತಂ ಪಾಪಂ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 10:11 IST
Last Updated 21 ಫೆಬ್ರುವರಿ 2021, 10:11 IST
ಕಡಲೂರ ಕನಸುಗಳು ವಿಶೇಷ ಸಂಚಿಕೆಯ ದೃಶ್ಯ
ಕಡಲೂರ ಕನಸುಗಳು ವಿಶೇಷ ಸಂಚಿಕೆಯ ದೃಶ್ಯ   

ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶಾಂತಂ ಪಾಪಂ ಸರಣಿಯಲ್ಲಿ ಫೆ.22ರಂದು ರಾತ್ರಿ ಹತ್ತು ಗಂಟೆಗೆ ವಿಶೇಷ ಸಂಚಿಕೆ ‘ಕಡಲೂರ ಕನಸುಗಳು’ ಪ್ರಸಾರವಾಗಲಿದೆ.

ವಿಶ್ವ ಮಾತೃಭಾಷಾ ದಿನದ ಹಿನ್ನೆಲೆಯಲ್ಲಿ, ಟಿವಿ ಮಾಧ್ಯಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕುಂದಾಪ್ರ ಕನ್ನಡವನ್ನು ಬಳಸಿರುವ ಸತ್ಯಘಟನೆ ಆಧಾರಿತ ವಿಶೇಷ ಸಂಚಿಕೆ ವೀಕ್ಷಕರ ಮುಂದೆ ಬರಲಿದೆ. ಕನ್ನಡ ನಮ್ಮೆಲ್ಲರ ಮಾತೃಭಾಷೆ. ಜೊತೆಗೆ ಕರ್ನಾಟಕದಾದ್ಯಂತ ಕನ್ನಡ ಭಾಷೆಯಲ್ಲಿ ವಿವಧತೆ ಹಾಗೂ ವಿಭಿನ್ನ ಸೊಗಡಿದೆ. ಇದರಲ್ಲಿ ಕುಂದಾಪ್ರ ಕನ್ನಡವೂ ಒಂದು. ಈ ಭಾಷೆಯಲ್ಲೇ ವಿಶೇಷ ಸಂಚಿಕೆ ಪ್ರಸಾರವಾಗಲಿದೆ ಎಂದು ತಂಡವು ತಿಳಿಸಿದೆ.

ಕಡಲಿನ ಮಕ್ಕಳೇ ಆದ ಮೀನುಗಾರರಿಗೂ ಕಡಲಿಗೂ ಇರುವ ಸಂಬಂಧವೇ ವಿಶಿಷ್ಟ. ಈ ಕಡಲು ಇವರಿಗಾಗಿ ಇದೆಯೋ, ಇವರು ಕಡಲಿಗಾಗಿ ಇದ್ದಾರೋ ಹೇಳುವುದು ಕಷ್ಟ. ನಾಲ್ಕು ಮಕ್ಕಳ ತಂದೆ ನಾರಾಯಣ ಕಡಲನ್ನೇ ನಂಬಿ ಜೀವನ ನಡೆಸುತ್ತಿದ್ದವನು. ಆದರೆ ಅದೇ ಕಡಲು ಅವನನ್ನು ತನ್ನ ಒಡಲೊಳಗೆ ಸೆಳೆದುಕೊಂಡು ಅವನ ನಾಲ್ಕು ಮಕ್ಕಳನ್ನ ಅನಾಥರನ್ನಾಗಿ ಮಾಡಿದೆ. ಆದರೆ ಮನುಷ್ಯನ ಬದುಕಿಗಾಗಿನ ಹೋರಾಟ ಕಡಲಿಗಿಂತ ದೊಡ್ಡದು. ನಾರಾಯಣನ ಮಗಳು ರುಕ್ಕೂ, ತನ್ನ ತಮ್ಮ ತಂಗಿಯರಿಗೆ ಆಸರೆಯಾಗಿ ನಿಂತು ಅವರನ್ನು ದಡ ಸೇರಿಸಲು ಹೋರಾಡುತ್ತಾಳೆ. ಈ ಹೋರಾಟದಲ್ಲಿ ಈ ನಾಲ್ವರು ಮಕ್ಕಳ ಏಳು ಬೀಳಿನ ಕಥೆಯೇ ಕಡಲೂರ ಕನಸುಗಳು.

ADVERTISEMENT

ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ, ಹೋರಾಟ ಹಾಗೂ ಬದುಕಿನ ಕಥೆಯನ್ನು ಹೇಳುತ್ತದೆ. ಸಂಚಿಕೆಗೆ ಡಾವೆಂಕಿ ಕಥೆ ಬರೆದಿದ್ದು, ನವೀನ್‌ ಸೋಮನಹಳ್ಳಿ ನಿರ್ದೇಶನ ಮಾಡಿದ್ದಾರೆ. ಜಗದೀಶ್ ಭಾವೆ ಚಿತ್ರಕಥೆ, ಅನಂತ್ ಶಾಂದ್ರೇಯ ಸಂಭಾಷಣೆ, ರವಿ ಕನಕಪುರಛಾಯಾಗ್ರಹಣವಿದೆ. ಪಾತ್ರ ವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.