ADVERTISEMENT

‘ಅನಿಕಾ’ ಮನದ ಮಾತು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
ರಚನಾ ಸ್ಮಿತ್
ರಚನಾ ಸ್ಮಿತ್   

ಕಿರುತೆರೆ ನಟಿ ರಚನಾ ಸ್ಮಿತ್‌ ಹೆಸರು ಹೇಳಿದರೆ, ವೀಕ್ಷಕರಿಗೆ ಥಟ್ಟನೆ ಮುಖ ನೆನಪಾಗುವುದು ಕಷ್ಟ. ಆದರೆ, ‘ಕಮಲಿ‘ ಧಾರಾವಾಹಿಯ ವಿಲನ್ ಪಾತ್ರಧಾರಿ ‘ಅನಿಕಾ‘ ಹೆಸರು ಹೇಳಿದರೆ, ‘ಅವರು ಗೊತ್ತುಬಿಡಿ‘ ಎನ್ನುತ್ತಾರೆ.

ಕಿರುತೆರೆ ಕ್ಷೇತ್ರದಲ್ಲಿ ರಚನಾ ಸ್ಮಿತ್‌, ತಮ್ಮ ಪಾತ್ರದಿಂದಲೇ ಹೆಚ್ಚು ಗುರುತಿಸಿಕೊಳ್ಳುತ್ತಾರೆ.

ಅಂದ ಹಾಗೆ ರಚನಾ, ಬೆಂಗಳೂರಿನ ಹುಡುಗಿ. ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.ಆಗ ಬಣ್ಣ ಹಚ್ಚಿಕೊಂಡು, ಗಿಟ್ಟಿಸಿಕೊಂಡ ಚಪ್ಪಾಳೆ ಅವರನ್ನು ಫ್ಯಾಷನ್‌ ಲೋಕದತ್ತ ಕರೆದೊಯ್ಯಿತು. ಇದೇ ವೇಳೆ ಪ್ರಸಿದ್ಧ ವಸ್ತ್ರ ವಿನ್ಯಾಸಕ ಪ್ರಸಾದ್‌ ಬಿದ್ದಪ್ಪ ಅವರು ಮುಂಬೈನಲ್ಲಿ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯೊಂದನ್ನು ಆಯೋಜಿಸಿದ್ದರು. ಅದರಲ್ಲಿಮೊದಲ ಬಾರಿ ರಚನಾ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.ಅಲ್ಲಿ ‘ರ‍್ಯಾಂಪ್‌ ವಾಕ್‌‘ ಬಗ್ಗೆ ಪ್ರಾಥಮಿಕ ಪಾಠವೂ ಅವರಿಗೆ ದೊರೆಯಿತು.

ADVERTISEMENT

ಅಲ್ಲಿಂದ ರಚನಾ ಮಾಡೆಲಿಂಗ್‌ನಲ್ಲಿ ಸಕ್ರಿಯರಾದರು. ಮಾಡೆಲಿಂಗ್‌ ಜಗತ್ತಿನಿಂದ ಆಹ್ವಾನಗಳು ಬರತ್ತಿರುವಾಗಲೇ ಸಿನಿಮಾ ನಟನೆಯತ್ತಲೂ ಹೊರಳಿದರು. ಮೊದಲು ಭಾಗವಹಿಸಿದ ಆಡಿಶನ್‌ನಲ್ಲೇ ‘ವರದ ನಾಯಕ’ ಸಿನಿಮಾದ ಸಣ್ಣ ಪಾತ್ರವೊಂದಕ್ಕೆ ಆಯ್ಕೆ ಆದರು. ನಂತರ ಶರಣ್‌ ಅವರ ಜೊತೆ ‘ವಿಕ್ಟರಿ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು.

ರಚನಾ ಕನ್ನಡದ ‘ಮೊಂಬತ್ತಿ’ ಮತ್ತು ತೆಲುಗಿನ ಒಂದು ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಅವು ಇವರಿಗೆ ಹೆಸರು ತಂದುಕೊಡಲಿಲ್ಲ. ಸಿನಿಮಾ ಪಯಣದ ನಡುವೆಯೇ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಷೋವೊಂದರಲ್ಲಿ ಭಾಗವಹಿಸಿದ್ದರು. ಇದು ಅವರಿಗೆ ‘ಕಮಲಿ’ ಧಾರಾವಾಹಿಯ ಅವಕಾಶ ಒದಗಿಸಿಕೊಟ್ಟಿತು. ‘ಕಮಲಿ’ ಧಾರಾವಾಹಿ ಆಡಿಶನ್‌ನಲ್ಲಿ ಕನ್ನಡದ ಉಚ್ಛಾರಣೆಯ ಕಾರಣಕ್ಕೆ ನಿರ್ದೇಶಕರು, ರಚನಾರನ್ನುತಿರಸ್ಕರಿಸಿದ್ದರು. ಆದರೆ ಇವರ ನಟನಾ ಕೌಶಲ, ಆಸಕ್ತಿ ಕಂಡು, ನಿರ್ದೇಶಕರು 9 ಬಾರಿ ಆಡಿಶನ್‌ ನಡೆಸಿ, ‘ಅನಿಕಾ‘ ಪಾತ್ರಕ್ಕೆ ಅವಕಾಶ ಕೊಟ್ಟರಂತೆ.

‘ಈ ಧಾರಾವಾಹಿಯಲ್ಲಿ ನನ್ನದು ನೆಗೆಟಿವ್‌ ಪಾತ್ರ. ಚಿತ್ರೀಕರಣ ಆರಂಭವಾದಾಗ ನಾನು ತುಂಬ ಸವಾಲಾಗಿ ತೆಗೆದುಕೊಂಡು ಪಾತ್ರ ಮಾಡುತ್ತಿದ್ದೆ. ಆದರೆ ಧಾರಾವಾಹಿ ಪ್ರಸಾರ ಶುರುವಾದ ನಂತರ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ‌ ನೆಗೆಟಿವ್‌ ಕಮೆಂಟ್‌, ಬೈಗುಳ ಬಂತು. ಒಂದು ರೀತಿ ಖಿನ್ನತೆಗೆ ಒಳಗಾಗಿದ್ದೆ. ನಿರ್ದೇಶಕರ ಬಳಿ ಸಮಸ್ಯೆ ಹೇಳಿಕೊಂಡಾಗ, ಅವರು ‘ನೀನು ಅಷ್ಟು ಚೆನ್ನಾಗಿ ಪಾತ್ರ ಮಾಡುತ್ತಿದ್ದೀಯಾ’ ಎಂದು ಧೈರ್ಯ ತುಂಬಿದರು. ಸದ್ಯಕ್ಕೆ ನನ್ನ ನಟನಾ ಕೆರಿಯರ್‌ಅಮೇಜಿಂಗ್‌’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.