ADVERTISEMENT

ನಾಯಕಿಯಾಗಿ ಬೆಳ್ಳಿತೆರೆ ಬೆಳಗಬೇಕು

ರಾಘವೇಂದೆ ಕೆ.
Published 25 ಏಪ್ರಿಲ್ 2019, 12:41 IST
Last Updated 25 ಏಪ್ರಿಲ್ 2019, 12:41 IST
ರಕ್ಷಿತಾ
ರಕ್ಷಿತಾ   

ರಕ್ಷಿತಾ ಅವರು ಉದಯ ಟಿವಿಯ ‘ದೇವಯಾನಿ’ಯಲ್ಲಿ ನಿಶ್ಚಿತಾ ಎಂಬ ಪಾತ್ರ ನಿಭಾಯಿಸುತ್ತಿದ್ದಾರೆ. ಕಿರುತೆರೆ ಬದುಕಿನ ಕುರಿತು ಅವರು ಇಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

ನಿಶ್ಚಿತಾ ಹೇಗೆ ಅನ್ನಿಸುತ್ತಾಳೆ?

ಆಕೆ ಪಕ್ಕಾ ವಿಲನ್‌ ಆದರೆ ನನಗೆ ತುಂಬಾ ಇಷ್ಟ ಆಗ್ತಾಳೆ. ಏಕೆಂದರೆ ಬೇರೆಯ ವಿಲನ್‌ಗಳಂತೆ ತೆರೆ ಮರೆಯಲ್ಲಿ ಮಸಲತ್ತು ಮಾಡುವುದು ಆಕೆಯ ಗುಣ ಅಲ್ಲ. ನೇರ ನೇರವೇ ಅಖಾಡಕ್ಕೆ ಇಳಿಯುವ ಜಾಯಮಾನ ಅವಳದು. ಇಲ್ಲಿಯೂ ಆಕೆ ನಾಯಕ– ನಾಯಕಿಗೆ ಸವಾಲನ್ನು ಹಾಕಿ ಪ್ರತಿನಾಯಕಿಯಾಗಿದ್ದಾಳೆ. ಕಾರಣ ಅವಳ ತಂದೆ– ತಾಯಿ ಶ್ರೀವತ್ಸನಿಗೆ ನಿನ್ನನ್ನು ಮದುವೆ ಮಾಡುವುದು ಎಂದು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ. ಅದರಿಮದ ಪ್ರಭಾವಿತಳಾದ ಅವಳ ಮನಸ್ಸಿನಲ್ಲಿ ಶ್ರಿ ತುಂಬಿಕೊಂಡಿದ್ದಾನೆ. ಅವನು ಏಳು ವರ್ಷದಿಂದ ದೇವಯಾನಿಯನ್ನು ಪ್ರೀತಿಸುತ್ತಿದ್ದಾನೆ. ಈ ಸಂಗತಿ ಗೊತ್ತಾದ ಮೇಲೆ ಆಕೆ ತಾನೇ ಅವನ ಕೈ ಹಿಡಿಯಬೇಕು ಎನ್ನುವ ಅಭಿಲಾಷೆಯಿಂದ ಪ್ರಯತ್ನಿಸುತ್ತಾಳೆ. ಅದು ಕೈಗೂಡುವ ಲಕ್ಷಣ ಕಾಣದಿದ್ದಾಗ ಅವರಿಬ್ಬರಿಗೂ ಸವಾಲನ್ನು ಎಸೆದಿದ್ದಾಳೆ. ತಾನೇ ಶ್ರೀಯನ್ನು ಮದುವೆಯಾಗುವುದಾಗಿ ಇಂಥ ಅದ್ಭುತ ಪಾತ್ರ ನಿರ್ವಹಿಸುವುದು ಖುಷಿಯ ಸಂಗತಿ.

ADVERTISEMENT

ನೀವು ಬಣ್ಣದ ಲೋಕ ಹಿಡಿಯುವ ಹಿಂದಿನ ಹಾದಿ ಬಗ್ಗೆ ಹೇಳಿ..

ತುಂಬಾ ಪುಟ್ಟ ಹುಡುಗಿ ಇದ್ದಾಗಲೇ ನನಗೆ ನಟಿಯಾಗುವ ಕನಸು ಇತ್ತು. ಹಾಗೆಂದು ಸುಮ್ಮನೇ ಎಂದೂ ಕೂತಿಲ್ಲ. ನಿರಂತರವಾಗಿ ಪ್ರಯತ್ನವನ್ನು ಮಾಡುತ್ತಿದ್ದೆ. ನನಗೆ ನೆನಪಿರುವ ಹಾಗೆ ನನ್ನ ಏಳನೇ ವಯಸ್ಸಿನಿಂದಲೇ ಆಡಿಷನ್‌ ನೀಡುತ್ತಿದ್ದೆ. ನನ್ನ ಮೂರನೇ ವಯಸ್ಸಿನಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದೇನೆ. ಜೊತೆಗೆ ಪಾಶ್ಚಿಮಾತ್ಯ ನೃತ್ಯವನ್ನೂ ಕಲಿತಿದ್ದೇನೆ. ‘ಪಂಚರಂಗಿ ಪೋಂ ಪೋಂ’ ಮೂಲಕ ನಟನೆಯ ಬದುಕು ಆರಂಭವಾಯಿತು. ಪಿಯು ಓದುತ್ತಿದ್ದಾಗ ‘ಆ ಎರಡು ವರ್ಷಗಳು’ ಸಿನಿಮಾದಲ್ಲಿ ಮಾಡಿದೆ. ಈಗ ಮೊದಲ ವರ್ಷದ ಎಂಜಿನಿಯರಿಂಗ್‌ ತುಮಕೂರಿನಲ್ಲಿ ಓದುತ್ತಿದ್ದೇನೆ.

ನಟನೆಯಿಂದ ನಿಮ್ಮ ಓದಿಗೆ ತೊಂದರೆಯಾಗುವುದಿಲ್ಲವೇ?

ಇಲ್ಲ. ಮನೆ ಮತ್ತು ಕಾಲೇಜಿನಿಂದ ಬೆಂಬಲ ಇದೆ. ಧಾರಾವಾಹಿ ತಂಡವೂ ಸಹಕರಿಸುವುದರಿಂದ ತೊಂದರೆ ಆಗುತ್ತಿಲ್ಲ. ಹಾಗೆಂದು ಓದಿನಲ್ಲೂ ಎಂದೂ ಹಿಂದೆ ಬಿದ್ದಿಲ್ಲ. ಎರಡರಲ್ಲೂ ಸಮತೋಲವನ್ನು ಕಾಪಾಡುತ್ತಿದ್ದೇನೆ. ಇದೆಲ್ಲದಕ್ಕೂ ನಮ್ಮ ತಾಯಿಯ (ಮಮತಾ ಗೃಹಿಣಿ) ಶ್ರಮವನ್ನು ಮರೆಯುವಂತಿಲ್ಲ. ಇವತ್ತು ಶೂಟಿಂಗ್‌ಗೆ ಹೋಗಬೇಕು ಎಂದರೆ ಬೆಳಿಗ್ಗೆ 5ಕ್ಕೆ ನಮ್ಮ ಅಮ್ಮ ರೆಡಿಯಾಗಿರುತ್ತಾರೆ. ನಿತ್ಯಕರ್ಮಗಳನ್ನು ಮುಗಿಸಿ ಅವತ್ತಿನ ತಿಂಡಿ, ಪೂಜೆಯನ್ನು ಮಾಡಿ ನನಗೆ ರೆಡಿಯಾಗಲು ಹೇಳುತ್ತಾರೆ. ಅವರೂ ನನ್ನ ಜೊತೆ ಬಂದು ಸಂಜೆ ನನ್ನ ಜೊತೆಗೆ ಮನೆಗೆ ಹಿಂದಿರುಗಿ ಬರುತ್ತಾರೆ. ನಮ್ಮ ತಂದೆ (ಪ್ರಸನ್ನ) ತುಮಕೂರಿನಲ್ಲಿಯೇ ಉದ್ಯಮಿಯಾಗಿದ್ದಾರೆ. ಅವರೂ ಕೂಡ ನನ್ನ ಆಶೆಯನ್ನು ಪ್ರೋತ್ಸಾಹಿಸುತ್ತಾರೆ. ಕಾಲೇಜಿನಲ್ಲಿಯೂ ರಜೆಗಳನ್ನು ಬೇಕೆಂದಾಗ ರಜೆಯನ್ನು ನೀಡುತ್ತಾರೆ. ಇಷ್ಟೆಲ್ಲಾ ಸಹಕಾರ ಇರುವಾಗ ತೊಂದರೆ ಹೇಗೆ ಆಗುತ್ತದೆ?

ಕಾಲೇಜು ಕ್ಯಾಂಪಸ್‌ನಲ್ಲಿ ಹುಡುಗರು ನಿಮ್ಮನ್ನು ರೇಗಿಸುತ್ತಾರಾ?

ಹಾಗೇನೂ ರೇಗಿಸುವುದಿಲ್ಲ. ಬಹುತೇಕರಿಗೆ ನಾನು ನಟಿ ಎನ್ನುವುದು ಗೊತ್ತಾಗಿದೆ. ಕೆಲವರಿಗೆ ‘ದೇವಯಾನಿ’ ಅಭಿನಯಿಸುತ್ತಿರುವುದೂ ಗೊತ್ತಿದೆ. ನನಗೊಂದು ಗುರುತನ್ನು ನನ್ನ ಕಲೆ ನೀಡಿದೆ ಎನ್ನುವುದು ಖುಷಿಯನ್ನು ಕೊಡುತ್ತದೆ. ಉಳಿದಂತೆ ಯಾರೇನು ಅಂದುಕೊಂಡರೆ ನಾನೇಕೆ ತಲೆ ಕೆಡಿಸಿಕೊಳ್ಳಲಿ. ಯಾರೂ ಈವರೆಗೆ ರೇಗಿಸಿಲ್ಲ ಕೂಡ.

ಮುಂದಿನ ಗುರಿ ಬಗ್ಗೆ

ಓದನ್ನು ನಿಲ್ಲಿಸುವುದಿಲ್ಲ. ಎಂಜಿನಿಯರಿಂಗ್‌ ಮಾಡುತ್ತಲೇ ನಟನೆಯನ್ನು ಮುಂದುವರಿಸುತ್ತೇನೆ. ಅದನ್ನು ಹೊರತಾಗಿ ಸಿನಿಮಾ ಕ್ಷೇತ್ರದ ಬೇರೆ ಬೇರೆ ರಂಗಗಳು ಪರಿಚಯ ನನಗೆ ಇಲ್ಲ. ಈಗಷ್ಟೆ ಬಣ್ಣದ ಲೋಕವನ್ನು ಪ್ರವೇಶಿಸಿದ ಎಳೆಯ ಮಗು ಇದ್ದ ಹಾಗೆ ಇದ್ದೇನೆ. ಮುಂದೆ ಬೇರೆ ಏನಾದರೂ ಸಾಧ್ಯ ಆಗಬಹುದೋ ಏನೋ ಗೊತ್ತಿಲ್ಲ. ಸದ್ಯ ನಟಿಸಬೇಕು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕು. ಅವಕಾಶ ಸಿಗಬೇಕು, ಸಿಕ್ಕ ಅವಕಾಶ ನನಗೆ ಇಷ್ಟ ಆಗಬೇಕು. ಒಂದಂತೂ ಸ್ಪಷ್ಟವಾಗಿದೆ ಎಂದರೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಸಿನಿಮಾ, ಟೀವಿಗಳಲ್ಲಿ ನಾಯಕಿಯಾಗಿ ನಟಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.