ADVERTISEMENT

ಚುರುಕಾಗಿ ಬೇಟೆಯಾಡುವ ಆಫ್ರಿಕಾ ಕಾಡುನಾಯಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 9:50 IST
Last Updated 24 ಜೂನ್ 2019, 9:50 IST
   

ಅಪರೂಪದ ಜೀವ ಸಂಕುಲಕ್ಕೆ ಆಫ್ರಿಕಾ ಖಂಡ ನೆಲಬೇಡು. ವಿಶ್ವದ ಬೇರೆ ಯಾವ ಭೂಪ್ರದೇಶದಲ್ಲೂ ಕಾಣಸಿಗದ ಪ್ರಾಣಿ,ಪಕ್ಷಿಗಳು ಇಲ್ಲಿವೆ. ಅಂತಹ ಜೀವಿಗಳಲ್ಲಿ ಆಫ್ರಿಕಾ ಕಾಡನಾಯಿ ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ. ಈ ನಾಯಿಯ ವೈಜ್ಞಾನಿಕ ಹೆಸರು ಲೈಕಾನ್ ಪಿಕ್ಟಸ್ (Lycaon pictus). ಇದು ತೋಳ, ನಾಯಿ, ನರಿಯಂತಹ ಮಾಂಸಾಹಾರಿ ಪ್ರಾಣಿಗಳ ಕ್ಯಾನಿಡೇ (Canidae) ಕುಟುಂಬಕ್ಕೆ ಸೇರಿದೆ. ಸ್ಥಳೀಯರು ಇದನ್ನು ಬಣ್ಣ ಬಳಿದುಕೊಂಡ ಬೇಟೆ ನಾಯಿ (Painted Hunting Dog) ಎಂದು ಕರೆಯುತ್ತಾರೆ. ಆಫ್ರಿಕಾ ಬೇಟೆ ನಾಯಿ, ವರ್ಣಮಯ ತೋಳ ಎಂಬ ಹೆಸರುಗಳೂ ಇದಕ್ಕೆ ಇವೆ.

ಹೇಗಿರುತ್ತದೆ?
ಸಾಮಾನ್ಯ ನಾಯಿಯಂತೆ ಕಂಡರೂ ಗಾತ್ರದಲ್ಲಿ ತೋಳದಂತೆ ದೊಡ್ಡದಾಗಿರುತ್ತದೆ. ಕಪ್ಪು, ಕಂದು ಮತ್ತು ಬಿಳಿ ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಉದರ, ಬೆನ್ನು, ಸೊಂಟ ಮತ್ತು ಹಿಂಗಾಲಿನ ತೊಡೆಗಳು ಕಂದು ಮತ್ತು ಕಪ್ಪು ಬಣ್ಣದಲ್ಲಿದ್ದರೆ, ಮುಂಗಾಲುಗಳು ಬಿಳಿ ಮತ್ತು ಕಪ್ಪು ಬಣ್ಣದ ಚುಕ್ಕಿಗಳಿಂದ ಕೂಡಿರುತ್ತವೆ. ಕುತ್ತಿಗೆ ಭಾಗದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಕೂದಲು ನೀಳವಾಗಿ ಬೆಳೆದಿರುತ್ತವೆ. ಹಣೆಯ ಭಾಗ ಕಂದು ಬಣ್ಣದಲ್ಲಿದ್ದರೆ, ಮೂತಿ ಕಪ್ಪು ಬಣ್ಣದಲ್ಲಿರುತ್ತದೆ. ಕಿವಿಗಳು ದೊಡ್ಡದಾಗಿ, ಅಗಲವಾಗಿ, ವೃತ್ತಕಾರಾದಲ್ಲಿದ್ದು, ಎದ್ದು ಕಾಣುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಬಣ್ಣದಲ್ಲಿರುತ್ತವೆ. ಬಾಲ ನೀಳವಾಗಿದ್ದು, ಬಿಳಿ ಬಣ್ಣದ ದಟ್ಟವಾದ ಕೂದಲಿನಿಂದ ಕೂಡಿರುತ್ತದೆ. ಹೆಣ್ಣಿಗಿಂತ ಗಂಡು ನಾಯಿಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.

ಎಲ್ಲಿದೆ?‌
ಇದು ಆಫ್ರಿಕಾದಲ್ಲಿ ಮಾತ್ರ ಕಂಡುಬರುವ ನಾಯಿ. ಆಫ್ರಿಕಾ ಖಂಡದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಪ್ರದೇಶಕ್ಕೆ ಅನುಗುಣವಾಗಿ ಇದರಲ್ಲಿ ತಳಿಗಳನ್ನು ಗುರುತಿಸಲಾಗಿದೆ. ದಟ್ಟವಾಗಿ ಮರಗಳು ಬೆಳೆದಿರುವ ಕಾಡಿನ ಪ್ರದೇಶ, ಸವನ್ನಾ ಹುಲ್ಲುಗಾವಲು ಪ್ರದೇಶ, ಸಹಾರಾ ಮರುಭೂಮಿ ಪ್ರದೇಶದಲ್ಲಿ ಇದನ್ನು ಕಾಣಬಹುದು.

ADVERTISEMENT

ಜೀವನಕ್ರಮ ಮತ್ತು ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಒಂದು ಗುಂಪಿನಲ್ಲಿ 10ರಿಂದ 12 ನಾಯಿಗಳು ಇರುತ್ತವೆ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಗುಂಪು, ಸರಾಸರಿ ನೂರು ಚ.ಕಿ.ಮೀ ಪ್ರದೇಶದಲ್ಲಿ ಗಡಿ ಗುರುತಿಸಿಕೊಂಡಿರುತ್ತದೆ. ಪ್ರಬಲ ಹೆಣ್ಣು ಮತ್ತು ಗಂಡು ನಾಯಿಗಳು ಗುಂಪನ್ನು ನಿಯಂತ್ರಿಸುತ್ತವೆ. ಗುಂಪಿನಲ್ಲಿ ಹೆಣ್ಣಿಗಿಂತ ಗಂಡು ನಾಯಿಗಳೇ ಹೆಚ್ಚಾಗಿರುತ್ತವೆ. ಗುಂಪಿನಲ್ಲಿದ್ದಾಗ, ಯಾವ ನಾಯಿಯೂ ಆಕ್ರಮಣಕಾರಿ ಸ್ವಭಾವ ತೋರುವುದಿಲ್ಲ. ಕೂಡಿ ಬಾಳುವುದಕ್ಕೆ ಇಷ್ಟಪಡುವ ಈ ನಾಯಿಗಳು, ಗಂಪಾಗಿ ಬೇಟೆಯಾಡುತ್ತವೆ. ನರಿಯಂತೆ ಹೊಂಚು ಹಾಕಿ ಕುಳಿತು, ಕುತಂತ್ರದ ಮೂಲಕ ಈ ನಾಯಿ ಬೇಟೆಯಾಡುವುದಿಲ್ಲ. ವೇಗವಾಗಿ ಓಡುವ ಸಾಮರ್ಥ್ಯ ಇರುವುದರಿಂದ, ಆಹಾರವಾಗುವ ಪ್ರಾಣಿಯನ್ನು ಕಂಡ ಕೂಡಲೇ ಬೆನ್ನು ಹತ್ತಿ ಹೋಗುತ್ತದೆ. ದೊಡ್ಡ ಪ್ರಮಾಣದಲ್ಲಿ ಆಹಾರ ದೊರೆತರೆ ಹಂಚಿಕೊಂಡು ತಿನ್ನುತ್ತವೆ.ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ವಿಶ್ರಾಂತಿ ಪಡೆಯುತ್ತವೆ.

ಆಹಾರ
ಈ ನಾಯಿ ಸಂಪೂರ್ಣ ಮಾಂಸಾಹಾರಿ ಪ್ರಾಣಿ. ಗಾತ್ರದಲ್ಲಿ ತನಗಿಂತಲೂ ದೊಡ್ಡದಾದ ಪ್ರಾಣಿಗಳನ್ನು ಹೆಚ್ಚಾಗಿ ಬೇಟೆಯಾಡುತ್ತದೆ. ಜೀಬ್ರಾಗಳು, ವಿವಿಧ ಬಗೆಯ ಜಿಂಕೆಗಳು, ಸಾರಂಗಗಳ ಮಾಂಸವೇ ಇದರ ನೆಚ್ಚಿನ ಆಹಾರ. ಒಮ್ಮೆಮ್ಮೊ ಆಸ್ಟ್ರೀಚ್‌ನಂತ ದೈತ್ಯಗಾತ್ರದ ಹಕ್ಕಿಗಳನ್ನೂ ಬೇಟೆಯಾಡುತ್ತದೆ.

ಸಂತಾನೋತ್ಪತ್ತಿ
ಮಾರ್ಚ್‌ ಮತ್ತು ಜೂನ್‌ ತಿಂಗಳ ಅವಧಿಯಲ್ಲಿ ಇದು ಹೆಚ್ಚಾಗಿ ಸಂತಾನೋತ್ಪತ್ತಿ ನಡೆಸುತ್ತದೆ. ಆದರೆ ಯಾವುದೇ ನಿರ್ದಿಷ್ಟ ಅವಧಿ ಇಲ್ಲ. ಸುಮಾರು 70 ದಿನಗಳ ಕಾಲ ಗರ್ಭಧರಿಸಿ ಸರಾಸರಿ 10 ಮರಿಗಳಿಗೆ ಜನ್ಮ ನೀಡುತ್ತದೆ. ಇತರೆ ಪರಭಕ್ಷಕ ಪ್ರಾಣಿಗಳಿಂದ ಇವಕ್ಕೆ ಅಪಾಯ ಹೆಚ್ಚಾಗಿರುವುದರಿಂದ ಕೆಲವು ಮರಿಗಳು ಬದುಕುಳಿಯುತ್ತವೆ. ಇತರೆ ಪ್ರಾಣಿಗಳು ನುಸುಳುವುದಕ್ಕೆ ಸಾಧ್ಯವಿಲ್ಲದಂತಹ ಪೊದೆಗಳಲ್ಲಿ, ಬಂಡೆಗಳ ಬಿರುಕಗಳಲ್ಲಿ ಮರಿಗಳನ್ನು ತಾಯಿ ನಾಯಿ ಬಚ್ಚಿಟ್ಟು ಜೋಪಾನ ಮಾಡುತ್ತದೆ. 10 ವಾರಗಳ ವರೆಗೆ ಹಾಲುಣಿಸಿ ಬೆಳೆಸುತ್ತದೆ. 3 ತಿಂಗಳ ನಂತರ ಮರಿಗಳು ಬಿಲ ಬಿಟ್ಟು, ಗುಂಪಿನೊಂದಿಗೆ ಜೀವಿಸಲು ಆರಂಭಿಸುತ್ತವೆ. 11 ತಿಂಗಳ ನಂತರ ಪುಟ್ಟ ಸಸ್ತನಿಗಳನ್ನು ಬೇಟೆಯಾಡುತ್ತದೆ. 14 ತಿಂಗಳ ನಂತರ ವಯಸ್ಕ ಹಂತ ತಲುಪುತ್ತದೆ.

ವಾಸಸ್ಥಾನಗಳ ನಾಶ, ಅರಣ್ಯ ನಾಶ, ಆಹಾರ ಕೊರತೆ ಮತ್ತು ಅತಿಯಾದ ಬೇಟೆಯಿಂದ ಈ ನಾಯಿ ಅಳವಿನಂಚಿನಲ್ಲಿದ್ದು, ಪ್ರಸ್ತುತ ಆಫ್ರಿಕಾದಾದ್ಯಂತ 2 ರಿಂ 5 ಸಾವಿರ ನಾಯಿಗಳು ಮಾತ್ರ ಉಳಿದಿವೆ.

ಸ್ವಾರಸ್ಯಕರ ಸಂಗತಿಗಳು
* ಜಿರಾಫೆಯ ಚುಕ್ಕಿಗಳಂತೆ, ಇದರ ದೇಹದ ಚುಕ್ಕಿಗಳೂ ಪ್ರತಿ ನಾಯಿಗೂ ಭಿನ್ನವಾಗಿರುತ್ತವೆ.
* ಇದಕ್ಕೆ 42 ಹಲ್ಲುಗಳು ಇರುತ್ತವೆ.
* ಬೇಟೆಯಾಡಿದ ನಾಲ್ಕು ಪ್ರಾಣಿಗಳಲ್ಲಿ ಕನಿಷ್ಠ ಮೂರು ಪ್ರಾಣಿಗಳನ್ನು ಕೊಲ್ಲುತ್ತದೆ.
* ಸಿಂಹಗಳು ಮತ್ತು ಹೈನಾಗಳು ಈ ನಾಯಿಗೆ ಹೆಚ್ಚು ಉಪಟಳ ಕೊಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.