ADVERTISEMENT

ಏಷ್ಯಾದ ಚಿನ್ನದ ಕಾಡುಬೆಕ್ಕಿನ 6 ರೂಪಾಂತರಗಳು

ರಮ್ಯ ಬದರಿನಾಥ್
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
   

2014ರಲ್ಲಿ, ಡಾ. ಸಾಹಿಲ್ ನಿಝಾವಾನ್ ನೇತೃತ್ವದ ಸ್ಥಳೀಯ ಇಡು-ಮಿಷ್ಮಿ ಜನಾಂಗದ ಒಂದು ಸಂಶೋಧನಾ ತಂಡ ಮಧ್ಯಮ ಹಾಗೂ ದೊಡ್ಡ ಗಾತ್ರದ ಸಸ್ತನಿಗಳ ಬಗ್ಗೆ ಅಧ್ಯಯನ ನಡೆಸಲು ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಡಿಬಾಂಗ್ ಕಣಿವೆಯ ಕಾಡುಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು.

20 ತಿಂಗಳುಗಳ ನಂತರ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ದೃಶ್ಯಗಳನ್ನು ಕಂಡು ನಿಬ್ಬೆರಗಾದರು.

ಒಂದೇ ಪ್ರಭೇದದ ಆರು ಪ್ರತ್ಯೇಕ ಬಣ್ಣ, ಮಧ್ಯಮ ಗಾತ್ರದ ಏಷ್ಯಾದ ಕಾಡು ಬೆಕ್ಕುಗಳು ಈ ಕಣಿವೆಯಲ್ಲಿ ಇರುವುದನ್ನು ಕಂಡರು.

ADVERTISEMENT

ಈ ಆವಿಷ್ಕಾರ ಅರುಣಾಚಲ ಪ್ರದೇಶದ ಡಿಬಾಂಗ್ ಕಣಿವೆಯ ಕಾಡುಗಳಲ್ಲಿ ಪ್ರಪಂಚದಲ್ಲೇ, ಒಂದೇ ಪ್ರಭೇದದ ಅತಿ ಹೆಚ್ಚು ಬಣ್ಣವಿಧಗಳ ಕಾಡು ಬೆಕ್ಕುಗಳು ಕಂಡುಬರುತ್ತವೆ ಎಂದು ದೃಢಪಡಿಸುತ್ತದೆ.

ಈ ಅಧ್ಯಯನವನ್ನು “ಇಕಾಲಜಿ” ಎಂಬ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಗೊಳಿಸಲಾಗಿದೆ.

ಈ ಅಧ್ಯಯನವು ಡಿಬಾಂಗ್ ಕಣಿವೆಯಲ್ಲಿ, ಪರಿಸರ ವಿಜ್ಞಾನ ಹಾಗೂ ಮಾನವಶಾಸ್ತ್ರೀಯ ವಿಧಾನಗಳನ್ನು ಅಳವಡಿಸಿ ನಡೆಸಲಾಗುತ್ತಿರುವ ಮಾನವ-ವನ್ಯಜೀವಿಗಳ ನಡುವಿನ ಪರಸ್ಪರ ಕ್ರಿಯೆಗಳು ಹಾಗೂ ಹೊಂದಾಣಿಕೆಗಳ ದೊಡ್ಡ ಅಧ್ಯಯನದ ಒಂದು ಭಾಗ.

ಕಾಡುಬೆಕ್ಕುಗಳ ಬಗೆಗಿನ ಈ ಅಧ್ಯಯನ ಏಷ್ಯಾದ ಚಿನ್ನದ ಕಾಡುಬೆಕ್ಕುಗಳ 6 ರೂಪಾಂತರಗಳನ್ನು ಹೊರತಂದಿದೆ. ಅವು- ಚಿನ್ನದ ಬಣ್ಣ (golden), ಬೂದಿ ಬಣ್ಣ (grey), ಕಡುಗಂದು ಅಥವಾ ಕಪ್ಪು (melanistic), ಚುಕ್ಕೆಯುಳ್ಳ ಅಥವಾ ಬಟ್ಟುಗಳುಳ್ಳ (ocelot or spotted), ದಾಲ್ಚಿನ್ನಿ ಬಣ್ಣದ (cinnamon) and ಬಿಗಿಯಾಗಿರುವ ಗುಲಾಬಿ ಮಾದರಿಯ, ಗಾಢ ಬಣ್ಣವುಳ್ಳ ಬೆಕ್ಕು (tightly-rosetted- a darker morph with tight rosette patterns). ಇಂತಹ ಒಂದು ಪ್ರಕ್ರಿಯೆಗೆ ಪಾಲಿಮಾರ್ಫಿಸಮ್ (Polymorphism) ಎಂದು ಕರೆಯಲಾಗುತ್ತದೆ.

ಇದರಲ್ಲಿ, ಒಂದು ವಿಶೇಷವೆಂದರೆ, ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್ ಗಳ ಮೇಲಿನ ಪ್ರದೇಶಗಳಲ್ಲಿ ಚುಕ್ಕೆಯುಳ್ಳ ಮತ್ತು ಬಿಗಿಯಾದ ಗುಲಾಬಿ ಮಾದರಿಯುಳ್ಳ ಬೆಕ್ಕುಗಳು ಕಂಡುಬಂದರೆ, ಏಕಬಣ್ಣ ಬೆಕ್ಕುಗಳಾದ ಚಿನ್ನದ, ದಾಲ್ಚಿನ್ನಿ, ಕಡುಗಂದು ಮತ್ತು ಬೂದು ಬಣ್ಣವುಳ್ಳ ಬೆಕ್ಕುಗಳನ್ನು ಸಮುದ್ರ ಮಟ್ಟದಿಂದ 1700ಮೀ ಮೇಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹಾಗೆಯೇ, ಅದರದರ ಬಣ್ಣಗಳ ಪ್ರಕಾರ, ಅದರ ವರ್ತನೆಗಳಲ್ಲಿಯೂ ವ್ಯತ್ಯಾಸಗಳು ಕಂಡುಬಂದಿವೆ. ಮಾದರಿಯುಳ್ಳ ಮತ್ತು ಬೂದು ಬಣ್ಣದ ಬೆಕ್ಕುಗಳು ನಿಶಾಚರಿಗಳಾದರೆ (Nocturnal), ಬೇರೆ ಏಕಬಣ್ಣ ಬೆಕ್ಕುಗಳು ಹಗಲು (diurnal) ಹೊತ್ತಿನಲ್ಲಿ ಸಕ್ರಿಯರಾಗಿರುತ್ತವೆ.

ಇವು, ವ್ಯಾಪಕ ಇರುನೆಲೆ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಇವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, ಕುರುಚಲು ಕಾಡುಗಳಲ್ಲಿ, ಜನವಸತಿ ಇರುವ ದ್ವಿತೀಯ ಶ್ರೇಣಿಯ ಕಾಡುಗಳಲ್ಲಿ, ಎತ್ತರವಿರುವ ಬೆಟ್ಟಗುಡ್ಡಗಳಲ್ಲಿ, ಪಕ್ಷಿಗಳನ್ನು, ದಂಶಕಗಳನ್ನು, ಸರೀಸೃಪಗಳನ್ನು ಮತ್ತು ಚ್ಚಿಕ್ಕ ಸಸ್ತನಿಗಳನ್ನು ಬೇಟೆಯಾಡುತ್ತವೆ. ಸಂಶೋಧಕರು, ಈ ರೂಪಾಂತರಗಳು ಕಡಿಮೆ ಎತ್ತರದ ಪ್ರದೇಶಗಳಲ್ಲಿ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡಲು, ಮತ್ತು ಹಿಮಾಲಯದ ಅಲ್ಪೈನ್ ಕಾಡುಗಳಲ್ಲಿ ಹಿಮಾಲಯನ್ ಪಿಕಾಗಳನ್ನು ಬೇಟೆಯಾಡಲು ಸಹಾಯವಾಗುವಂತೆ ಒಳ್ಳೆಯ ಮರೆಮಾಚುವಿಕೆಯನ್ನು ನೀಡಬಲ್ಲದು, ಬೇರೆ ಪರಭಕ್ಷಕಗಳಾದ ಚಿರತೆಗಳಂತಹ ಪ್ರಾಣಿ ಸ್ಪರ್ಧೆಯನ್ನು ತಪ್ಪಿಸಲು ಸಹಾಯಕವಾಗುತ್ತವೆ ಎಂದು ಅಂದಾಜಿಸುತ್ತಾರೆ.

ಏಷ್ಯಾದ ಚಿನ್ನದ ಕಾಡುಬೆಕ್ಕು (ಆಂಗ್ಲಭಾಷೆಯಲ್ಲಿ Asian Golden Cat, ವೈಜ್ಞಾನಿಕ ನಾಮ Catopuma temminckii), ಈಶಾನ್ಯ ಭಾರತ ಹಾಗೂ ಆಗ್ನೇಯ ಏಷ್ಯಾ ದೇಶಗಳಿಗೆ ಸ್ವಂತ. ಆದರೆ, ಅರಣ್ಯ ವಿನಾಶದ ಹಿನ್ನಲೆಯಲ್ಲಿ, ಇದರ ಇರುನೆಲೆ ಶ್ರೇಣಿಗಳು ವಿನಾಶಕ್ಕೆ ತುತ್ತಾಗುತ್ತಾ ಬಂದಿವೆ. ಹಾಗಾಗಿ, ಇದರ ಸ್ಥಿತಿ ವಿನಾಶಕ್ಕೆ ಹತ್ತಿರವಾಗುತ್ತಿದೆಯೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.