ADVERTISEMENT

ನಿಮ್ಮ ಮುದ್ದು ನಾಯಿಗೂ ರೆಸಾರ್ಟ್....

ಶಾರದಾ ವಗರನಾಳ
Published 9 ಜುಲೈ 2018, 20:06 IST
Last Updated 9 ಜುಲೈ 2018, 20:06 IST
ನಿಮ್ಮ ಮುದ್ದು ನಾಯಿಗೂ ರೆಸಾರ್ಟ್
ನಿಮ್ಮ ಮುದ್ದು ನಾಯಿಗೂ ರೆಸಾರ್ಟ್   

ನಮಗೆ ಬೇಜಾರಾದಂತೆ ನಾಯಿಗೂ ಬೇಜಾರಾಗಲ್ವಾ? ಅದೇ ಮನೆ, ಅದೇ ರಸ್ತೆ, ಅದೇ ಪಾರ್ಕಿನ ಅಲೆದಾಟ... ಅದು ಬಿಟ್ಟೇನಿದೆ ನಾಯಿ ಜೀವನದಲ್ಲಿ? ನಾಯಿ ಪ್ರೀತಿ ಇರುವ ಆರ್‌. ಕುಮಾರ್‌ ಅವರಿಗೆ ಈ ಪ್ರಶ್ನೆ ಕಾಡಿದ್ದೇ ಕಾಡಿದ್ದು.

ಜನರಿಗಾದರೆ ಶಾಪಿಂಗ್‌ ಮಾಡುವ ಅನುಕೂಲವಿದೆ. ರೆಸಾರ್ಟ್‌ಗಳಿವೆ. ಕ್ಲಬ್‌ಗಳಿವೆ. ನಾಯಿಗಳಿಗೇನಿದೆ... ಪಾಪ! ಅಂತ ಅನಿಸಿದ್ದೇ ಅವರು ಕೆನನ್‌ ಪೆಟ್‌ ರೆಸಾರ್ಟ್‌ ಪರಿಕಲ್ಪನೆ ಹುಟ್ಟಿತು.

ಜೊತೆಗೆ ಸಾಕುನಾಯಿಗಳಿಗೆ ತರಬೇತಿ ನೀಡುವ ಕೆಲಸವನ್ನೂ ಆರಂಭಿಸಿದರು. ಅವಕ್ಕೆ ಉಣ್ಣುವುದು, ತಿನ್ನುವುದು, ಈಜುವುದು, ಜೊತೆಗಿರುವುದು, ಹೊರಹೋಗಿ ಮಲವಿಸರ್ಜನೆ ಮಾಡಿಸುವುದು ಇವೆಲ್ಲವನ್ನೂ ಕಲಿಸಲಾರಂಭಿಸಿದರು.

ADVERTISEMENT

ಈಗ ಈ ಪೆಟ್‌ ರೆಸಾರ್ಟ್‌ನಲ್ಲಿ ಸ್ವಿಮ್ಮಿಂಗ್‌ ಪೂಲ್‌ ಇದೆ. ನಾಯಿಗೂಡುಗಳಿವೆ. ಹೆಚ್ಚಿನ ಜನರು ತಮ್ಮ ನೆಚ್ಚಿನ ನಾಯಿಯನ್ನು ಕರೆದುಕೊಂಡು ಬಂದು, ಇಲ್ಲಿ ಆಟವಾಡಿಸಿಕೊಂಡು ಹೋಗುತ್ತಾರೆ. ತರಬೇತಿಗೆಂದು ಬರುವ ನಾಯಿಗಳು ಕೆಲವೊಮ್ಮೆ ಹಟಹೂಡುತ್ತವೆ. ಏನನ್ನೂ ತಿನ್ನದೇ ಕೂರುತ್ತವೆ. ಆಗ ಅವಕ್ಕೆ ಈಜಲು ಬಿಡುತ್ತೇವೆ. ದೂರ ನಡಿಗೆಗೆ ಕರೆದುಕೊಂಡು ಹೋಗುತ್ತೇವೆ. ಹಸಿವಾದ ತಕ್ಷಣ ಯಾವುದೇ ತಕರಾರಿಲ್ಲದೇ ಊಟ ಮಾಡುತ್ತವೆ.

ಕೆಲವೊಮ್ಮೆ ಶೋಕಿಗಾಗಿ ನಾಯಿ ಸಾಕುವವರು, ಇಲ್ಲಿ ಕರೆತಂದು ಬಿಡುತ್ತಾರೆ. ತರಬೇತಿ ನೀಡಲು ಕೇಳಿಕೊಳ್ಳುತ್ತಾರೆ. ಮಾಲೀಕರು ಮತ್ತು ನಾಯಿಗಳ ನಡುವೆ ಆತ್ಮೀಯ ಸಂಬಂಧವೇರ್ಪಡದೇ ಇದ್ದಲ್ಲಿ ಅವು ಏನೂ ಮಾಡಲಾರವು. ಅವರ ಸೂಚನೆಗಳನ್ನೂ ಪಾಲಿಸಲಾರವು. ಇಷ್ಟಕ್ಕೂ ಅವು ನಾಯಿಗಳೇ ಹೊರತು ರೋಬೋಟ್‌ಗಳಲ್ಲವಲ್ಲ ಎನ್ನುತ್ತಾರೆ ಆರ್‌. ಕುಮಾರ್‌.

ಇನ್ನೂ ಕೆಲವರು ತಮ್ಮ ನಾಯಿಗಳ ಉಗ್ರ ನಡವಳಿಕೆಯನ್ನು ನಿಯಂತ್ರಿಸಲು, ತೂಕ ಕಡಿಮೆ ಮಾಡಿಸಿಕೊಳ್ಳಲು ಕರೆತರುವವರೂ ಇದ್ದಾರೆ.

2007ರಿಂದ ತರಬೇತಿ ನೀಡುತ್ತಿದ್ದೆ. ಆಟೋಟದ ಅಗತ್ಯ ಗಮನಿಸಿ ಈ ರೆಸಾರ್ಟ್‌ ಆರಂಭಿಸಿದೆ. ಈಗ ಒಂದು ಈಜುಕೊಳ, ಆಟದ ಮೈದಾನ, 30 ನಾಯಿಗೂಡುಗಳಿವೆ. ನಾಯಿಯ ತಳಿ, ಗಾತ್ರದ ಆಧಾರದ ಮೇಲೆ ಶುಲ್ಕ ನಿಗದಿಪಡಿಸಲಾಗಿದೆ. ನಾಯಿಗಾಗಿ ಓಟ, ಈಜು, ಚೆಂಡಾಟಗಳು ಇಲ್ಲಿರುತ್ತವೆ.

ಇಲ್ಲಿ ಪರಿಣತ ಗ್ರೂಮಿಂಗ್ ಮಾಡುವವರಿದ್ದಾರೆ. ಪರಿಣತ ಪ್ರಾಣಿ ತಜ್ಞರಿದ್ದಾರೆ. ಆರೋಗ್ಯ ಸಮಸ್ಯೆಯುಂಟಾದರೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸೇರಿಸುವ ಸೌಲಭ್ಯವಿದೆ.

ಕೆಲ ಜನರು ಪ್ರಯಾಣಕ್ಕೆ ಹೋಗಿ ಬರುತ್ತೇವೆ ಎಂದು ನಾಯಿ ಬಿಟ್ಟು ಹೋದವರು ವಾಪಸ್‌ ಬರುವುದೇ ಇಲ್ಲ. ಅಂತಹ ನಾಯಿಗಳು ನಮ್ಮ ರೆಸಾರ್ಟ್‌ನಲ್ಲಿ ಶಾಶ್ವತ ಅತಿಥಿಗಳಾಗಿವೆ.

ರೆಸಾರ್ಟ್‌ಗೆ ಪ್ರಾಣಿಗಳನ್ನು ಸೇರಿಸಿಕೊಳ್ಳುವ ಮುಂಚೆ ವೈದ್ಯಕೀಯ ಪರೀಕ್ಷೆ ನಡೆಸಿ ಸೇರಿಸಿಕೊಳ್ಳುತ್ತಾರೆ. ‘ಕೆನಾನ್ ಪೆಟ್ ಕ್ಯಾಬ್‘ ಸಹ ಇದೆ. ಸಾಕುಪ್ರಾಣಿಗಳನ್ನು ಹೇಗೆ ಸಲಹಬೇಕೆಂದು ಅವುಗಳ ಪೋಷಕರಿಗೆ ಆಪ್ತ ಸಮಾಲೋಚನೆಯನ್ನು ನಡೆಸುತ್ತಾರೆ.

ಕುಮಾರ್ ‘ಉತ್ತಮ ಸಾಕು ಪ್ರಾಣಿ ನಿರ್ವಹಣೆ‘ ಎಂಬ ವಿಷಯದಲ್ಲಿ ‘ನಾಯಿ ನಡವಳಿಕೆ‘ ಯಲ್ಲಿ ಪಿ.ಎಚ್.ಡಿ ಪೂರೈಸಿರುವಬೆಂಗಳೂರಿನ ಸಿರಿನ್ ಮರ್ಚಂಟ್ ಅವರಲ್ಲಿ 1 ವರ್ಷದ ತರಬೇತಿ ಪಡೆದಿದ್ದಾರೆ.

ಮಾಹಿತಿಗಾಗಿ– 9900420777 , cpetjunction@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.