ADVERTISEMENT

ಅಯ್ಯ್‌... ನಮ್ಮೂರನ್ಯಾಗ್‌ ಬಿಳಿ ಕಾಗೆ ನಾ!

ಈರಪ್ಪ ನಾಯ್ಕರ್
Published 17 ಸೆಪ್ಟೆಂಬರ್ 2019, 20:17 IST
Last Updated 17 ಸೆಪ್ಟೆಂಬರ್ 2019, 20:17 IST
ಕಪ್ಪು ಕಾಗೆಗಳ ಮಧ್ಯ ಬಿಳಿ ಕಾಗೆ ಹಾರುತ್ತಿರುವ ದೃಶ್ಯ
ಕಪ್ಪು ಕಾಗೆಗಳ ಮಧ್ಯ ಬಿಳಿ ಕಾಗೆ ಹಾರುತ್ತಿರುವ ದೃಶ್ಯ   

ಕಲಘಟಗಿ ತಾಲ್ಲೂಕಿನ ಧುಮ್ಮವಾಡದ ನೀರುಸಾಗರ ಕೆರೆಯ ಸಮೀಪದಲ್ಲಿ ಎಸೆದ ಆಹಾರವನ್ನು ಅರಸುತ್ತ ಹತ್ತಾರು ಕಪ್ಪು ಬಣ್ಣದ ಕಾಗೆಗಳ ಹಿಂಡಿನ ಮಧ್ಯದಲ್ಲಿ ಒಂದೇ ಒಂದು ಬಿಳಿಯ ಕಾಗೆ ನೋಡಿದಾಗ ಕಣ್ಣಿಗೆ ನಂಬಲಾಗದ ಆಶ್ಚರ್ಯ. ಬರೀ ಕಪ್ಪು ಕಾಗೆಗಳನ್ನೇ ಕಂಡ ಜನರಿಗೆ ಈ ಬಿಳಿ ಕಾಗೆ ಕೌತುಕ ಮೂಡಿಸಿತು.

ಕಾಗೆ ಅಲ್ಲ ಬಿಡಿ! ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಪಾರಿವಾಳ ಇರಬೇಕು ಎಂದು ಅವರಲ್ಲೆ ಮಾತನಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವರು ‘ಕೇಡುಗಾಲಕ್ಕೆ ಕಾಗೆ ಕೂಡ ಬಿಳಿ ಬಣ್ಣಕ್ಕೆ ತಿರುಗಿದೆ’ ಎಂದು ಗಾದೆ ಮಾತುಗಳನ್ನು ಆಡುತ್ತಾ ಬಿಳಿ ಕಾಗೆಯನ್ನು ವೀಕ್ಷಿಸುತ್ತಿದ್ದರು.

ಅಷ್ಟರಲ್ಲಿ ಕೈಯಲ್ಲಿದ್ದ ಕ್ಯಾಮೆರಾದಿಂದ ಕೆಲವು ಫೋಟೊಗಳನ್ನು ಕ್ಲಿಕ್ ಮಾಡಿ ಅದರ ಕೆಲವು ವಿಡಿಯೊ ತುಣುಕು ಸೆರೆ ಹಿಡಿದು ಎಲ್ಲರಿಗೂ ತೋರಿಸಿದಾಗಲೇ ಅದು ಬಿಳಿ ಕಾಗೆಯೆ ಎಂಬುದು ಜನರಿಗೆ ನಿಖರವಾಯಿತು.

ADVERTISEMENT

ಈ ಬಿಳಿ ಕಾಗೆ (Leucistic crow) ಸುತ್ತಲಿನ ಮಕ್ಕಳು ಹಾಗೂ ಸಾರ್ವಜನಿಕರ ಕೇಂದ್ರಬಿಂದುವಾಗಿತ್ತು. ಮೊದಲ ಬಾರಿ ಇಲ್ಲಿನ ಜನ ನೋಡಿದವರಂತು, ಸಂಬಂಧಿಕರಿಗೆ, ಸ್ನೇಹಿತರಿಗೆ ಫೋನ್‌ ಕರೆಗಳನ್ನು ಮಾಡಿ ತಿಳಿಸುತ್ತಿದ್ದರು.

ಸಾಮಾನ್ಯ ಕಾಗೆಗಳ ಗುಂಪಿನ ಜೊತೆಯಲ್ಲೇ ಹಾರಾಟ, ಆಹಾರ ಹುಡುಕಾಟ ನಡೆಸುತ್ತಿದ್ದ ಈ ಬಿಳಿ ಕಾಗೆಯನ್ನು ದೂರ ಮಾಡದೇ ಎಲ್ಲವೂ ಅನ್ಯೋನ್ಯವಾಗಿದ್ದವು. ಕಾಗೆಯ ಮೈಬಣ್ಣ ಬಿಳಿಯಾಗಿದ್ದರೆ, ಮೈ ಮೇಲೆ ಅಲ್ಲಲ್ಲಿ ಮೇಲ್ಭಾಗ ಮಾತ್ರ ಬೂದು ಬಣ್ಣ ಇದೆ. ಕೊಕ್ಕು ಹಾಗೂ ಕಾಲುಗಳು ಬಣ್ಣ ಇತರ ಕಾಗೆಗಳಂತೇ ಇವೆ. ಸ್ವಭಾವ ಸಾಮಾನ್ಯ ಕಾಗೆಯಂತೆ.

‘ಜೀನ್ ವ್ಯತ್ಯಾಸದಿಂದ ಪ್ರಾಣಿ ಪಕ್ಷಿಗಳು ಬಿಳಿ ಬಣ್ಣಕ್ಕೆ ತಿರುಗಿರುವ ಸಾಧ್ಯತೆಗಳಿರುತ್ತವೆ. ಇದರಲ್ಲಿ ಯಾವುದೇ ವಿಶೇಷವಿಲ್ಲ’ ಎನ್ನುವುದು ಕೆಲ ಪಕ್ಷಿಪ್ರಿಯ ಗುರುನಾಥ ದೇಸಾಯಿ ಅವರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.