ADVERTISEMENT

ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ!

ಅರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರು, ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿ ಗುಂಪುಗಳ ದರ್ಶನ

ಮೋಹನ್ ಕುಮಾರ ಸಿ.
Published 29 ಜುಲೈ 2022, 19:30 IST
Last Updated 29 ಜುಲೈ 2022, 19:30 IST
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆರೆಯೊಂದರಲ್ಲಿ ಚಿನ್ನಾಟವಾಡುತ್ತಿರುವ ಹುಲಿಗಳು.        –ಪ್ರಜಾವಾಣಿ ಚಿತ್ರ/ ಸತೀಶ್‌ ಬಿ. ಆರಾಧ್ಯ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆರೆಯೊಂದರಲ್ಲಿ ಚಿನ್ನಾಟವಾಡುತ್ತಿರುವ ಹುಲಿಗಳು.        –ಪ್ರಜಾವಾಣಿ ಚಿತ್ರ/ ಸತೀಶ್‌ ಬಿ. ಆರಾಧ್ಯ   

ಮೈಸೂರು: ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿಯೇ ಮೈಸೂರು ವಲಯವು ಹೆಸರಾಗಿದ್ದು, ಈ ಬಾರಿ ವಲಯ ವ್ಯಾಪ್ತಿಯ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆ ಪರಿಸರ ಪ್ರಿಯರಲ್ಲಿ ಮನೆ ಮಾಡಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಮರಿಗಳೊಂದಿಗೆ ತಾಯಿ ಹುಲಿಯು ಸಂಚರಿಸಿತ್ತು. ತಿಂಗಳ ಹಿಂದೆ ನಾಲ್ಕಕ್ಕೂ ಹೆಚ್ಚು ಹುಲಿಗಳು ಒಟ್ಟಿಗಿದ್ದ ವಿಡಿಯೊ ಕೂಡ ವೈರಲ್‌ ಆಗಿತ್ತು. ಈ ಎಲ್ಲ ಅಂಶಗಳು ನಾಗರಹೊಳೆಯಲ್ಲಿ ಹುಲಿ ಸಂಖ್ಯೆ ಹೆಚ್ಚಾಗಿರುವುದನ್ನು ಖಾತ್ರಿಗೊಳಿಸುತ್ತಿವೆ.

2018ರ ಹುಲಿ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 524 ಹುಲಿಗಳಿದ್ದರೆ, ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದವು. ಎರಡೇ ಹುಲಿಗಳ ಅಂತರದಲ್ಲಿ ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯವೆಂಬ ಗರಿಮೆಯು ರಾಜ್ಯದ ಕೈ ತಪ್ಪಿತ್ತು. ಆದರೆ, ಈ ಬಾರಿಯ ಸಮೀಕ್ಷೆಯು ಮೊದಲ ಸ್ಥಾನ ತಂದುಕೊಡುವುದೆಂಬ ಅಭಿಪ್ರಾಯ ದಟ್ಟವಾಗಿದೆ.

ADVERTISEMENT

ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿನ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಬೆಟ್ಟ ಹುಲಿಸಂರಕ್ಷಿತ ಪ್ರದೇಶಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಬ್ರಹ್ಮಗಿರಿ, ಕಾವೇರಿ ವನ್ಯಜೀವಿಧಾಮಗಳಲ್ಲೂ ಹುಲಿಗಳು ಸರಹದ್ದನ್ನು ವಿಸ್ತರಿಸಿಕೊಂಡಿವೆ.

‘ಹುಲಿ ಸಮೀಕ್ಷೆಯ ವರದಿಯನ್ನುಅರಣ್ಯ ಇಲಾಖೆಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಈಗಾಗಲೇ ಸಲ್ಲಿಸಿದೆ. 2022ರ ಜನವರಿಯಲ್ಲಿ ಕೇಂದ್ರ ಸರ್ಕಾರವು ವರದಿ ಬಿಡುಗಡೆ ಮಾಡಲಿದೆ’ ಎಂದು ಡಿಸಿಎಫ್‌ ಕರಿಕಾಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಗರಹೊಳೆ, ಬಂಡೀಪುರ ಭಾಗದಲ್ಲಿ ಹುಲಿಗಳು ಹೆಚ್ಚಿವೆ. ಹುಲಿಗಳು ಗುಂಪಾಗಿ ಸಂಚರಿಸುವ ದೃಶ್ಯಗಳು ಸಿಬ್ಬಂದಿಗಷ್ಟೇ ಅಲ್ಲದೆ, ಪ್ರವಾಸಿಗರು, ನಾಗರಿಕರಿಗೂ ಕಂಡಿರುವುದು ನಿರೀಕ್ಷೆಯನ್ನು ಹೆಚ್ಚಿಸಿದೆ. ವರದಿ ಬಂದ ನಂತರವೇ ದೃಢವಾಗುತ್ತದೆ’ ಎಂದು ಅವರು ತಿಳಿಸಿದರು.

ತಗ್ಗಿದ ಮರಣ ಪ್ರಮಾಣ

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ‍ಪ್ರಸಕ್ತ ವರ್ಷದ ಹುಲಿಗಳ ಮರಣ ಪ್ರಮಾಣ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಹೆಚ್ಚಿದ್ದರೆ ರಾಜ್ಯವು ಮೂರನೇ ಸ್ಥಾನದಲ್ಲಿದೆ. 2021, 2022ರಲ್ಲಿ ಕ್ರಮವಾಗಿ ಮಧ್ಯಪ್ರದೇಶದಲ್ಲಿ 27, 42 ಹುಲಿಗಳು, ರಾಜ್ಯದಲ್ಲಿ 15, 12 ಹುಲಿಗಳು ಸಾವನ್ನಪ್ಪಿವೆ ಎಂದುರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (‌ಎನ್‌ಟಿಸಿಎ) ಅಂಕಿ– ಅಂಶವು ಹೇಳಿದೆ.

2022ರಲ್ಲಿ ಮೃತಪಟ್ಟಿರುವ ರಾಜ್ಯದ 12 ಹುಲಿಗಳಲ್ಲಿ ನಾಗರಹೊಳೆ ವ್ಯಾಪ್ತಿಯಲ್ಲಿ 7 ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ 5 ಹುಲಿಗಳು ಮೃತಪಟ್ಟಿವೆ. ನಾಗರಹೊಳೆಯ ಎರಡು ಹುಲಿಗಳು ಬಫರ್‌ ವಲಯದಲ್ಲಿ, ಉಳಿದೆಲ್ಲ ಹುಲಿಗಳು ಅರಣ್ಯದೊಳಗೆ ವಯೋಸಹಜ ಹಾಗೂ ಹುಲಿ ಕಾಳಗದಲ್ಲಿ ನೈಸರ್ಗಿಕವಾಗಿ ಮೃತಪಟ್ಟಿವೆ ಎಂದು ಎನ್‌ಟಿಸಿಎ ತಿಳಿಸಿದೆ.

‘ಈ ಬಾರಿ ನಾವೇ ಮೊದಲು’

‘ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯು ಮಹತ್ತರವಾದ ಪಾತ್ರ ವಹಿಸಿದೆ. 500 ಕ್ಯಾಮೆರಾ ಟ್ರ್ಯಾಪಿಂಗ್‌ಗಳನ್ನು ನಾಗರಹೊಳೆ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ನಾಗರಹೊಳೆ ಅರಣ್ಯದಲ್ಲಿ ಹುಲಿ ಸಾಂದ್ರತೆ ಹೆಚ್ಚಿದೆ’ ಎಂದು ಬೆಂಗಳೂರಿನ ಪರಿಸರಪ್ರಿಯ ಉದ್ಯಮಿರಮೇಶ್‌ ಗೋವಿಂದನ್‌ ತಿರುಮಲೈ ‘ಪ್ರಜಾವಾಣಿ’ಗೆ ತಿಳಿಸಿದರು.

‘2018ರ ಹುಲಿ ಗಣತಿಯಲ್ಲಿ ಕರ್ನಾಟಕವೇ ಮೊದಲ ಸ್ಥಾನಕ್ಕೇರುವ ನಿರೀಕ್ಷೆಯಲ್ಲಿದ್ದೆವು. ನಮಗಿಂತ ಮಧ್ಯಪ್ರದೇಶದಲ್ಲಿ ಎರಡು ಹುಲಿಗಳು ಹೆಚ್ಚಿದ್ದವು. ಈ ಬಾರಿ ನಾವೇ ಮೊದಲಾಗುತ್ತೇವೆ’ ಎಂಬ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.