ADVERTISEMENT

ಪಗೋಡಾ ಪ್ರಿಯ ಪಕ್ಷಿ...

ಮಂಜುನಾಥ ಆರ್.ಗೌಡರ
Published 17 ಮೇ 2019, 20:00 IST
Last Updated 17 ಮೇ 2019, 20:00 IST
ಅಮರಗೋಳದ ಎಪಿಎಂಸಿ ಗಿಡದಲ್ಲಿ ಜೋಡಿ ಕರಿತಲೆ ಕಬ್ಬಕ್ಕಿಗಳು
ಅಮರಗೋಳದ ಎಪಿಎಂಸಿ ಗಿಡದಲ್ಲಿ ಜೋಡಿ ಕರಿತಲೆ ಕಬ್ಬಕ್ಕಿಗಳು   

ಕರಿತಲೆ ಕಬ್ಬಕ್ಕಿ ಕುರಿತು ಹೇಳುವ ಮೊದಲು ಅವುಗಳ ಬಗ್ಗೆ ಇರುವ ಒಂದಿಷ್ಟು ಆಸಕ್ತಿದಾಯಕ ಸಂಗತಿಗಳನ್ನು ತಿಳಿದುಕೊಳ್ಳಿ.

ಒಂದಾನೊಂದು ಕಾಲದಲ್ಲಿ ಈ ಹಕ್ಕಿ ದಕ್ಷಿಣ ಭಾರತದ ದೇಗುಲ, ಪಗೋಡಾದಲ್ಲಿ ನೆಲೆ ಕಂಡುಕೊಂಡಿತ್ತು. ಅದಕ್ಕಾಗಿ ‘ಸ್ಪರ್ನಸ್‌ ಪಗೊಡರಮ್‌’ ಎಂಬ ಹೆಸರು ಇದಕ್ಕಿದೆ. ಮರಿಗೆ ಮೊದಲು ಹುಳು, ನಂತರ ಕಾಳಿನ ಗುಟುಕು ನೀಡುವ ಕಬ್ಬಕ್ಕಿಗಳು ಮರಿಗಳ ಮಲವನ್ನು ಗೂಡಿನಿಂದ 20 ಮೀಟರ್ ದೂರದಲ್ಲಿ ಎಸೆದು ಬರುತ್ತವೆ. ನಮ್ಮ ದೇಶದ ರಸ್ತೆ ಬದಿ, ಉದ್ಯಾನಗಳಲ್ಲಿ ಬೆಳೆಯಲಾಗುವ ಕಣಿಗಿಲೆ ಹೂವು ಮತ್ತು ಅದರ ಬೀಜ ಬಹುತೇಕ ಜೀವಿಗಳಿಗೆ ವಿಷ ಎಂದೇ ಪರಿಗಣಿಸಲಾಗುತ್ತದೆ. ಅದನ್ನು ಈ ಪಕ್ಷಿ ಭಕ್ಷಿಸುತ್ತದೆ.

ಇಂಥ ಹಲವು ಅಚ್ಚರಿ ವಿಷಯಗಳನ್ನೊಳಗೊಂಡ ಈ ಹಕ್ಕಿಯ ಕರಿ ಜುಟ್ಟು ಥೇಟ್‌ ಯುವಕರ ಹಿಪ್ಪಿ ಕಟ್ಟಿನಂಥ ಕೇಶಶೈಲಿಯಂತೆ ಭಾಸವಾಗುತ್ತದೆ.

ADVERTISEMENT

ಮೇಲ್ ಮೈಬೂದು ಮಿಶ್ರಿತ ಕಂದು ಬಣ್ಣವಾದರೆ,ಕೆಳ ಮೈ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದೆ. ತಲೆಯುಕರಿ ಬಣ್ಣ ರೆಕ್ಕೆಯ ತುದಿಗಳು ಕರಿ, ಬಾಲದ ಕೆಳಗೆ ಬಿಳಿ ಬಣ್ಣ ಹೊಂದಿದೆ. ಇದರ ಕೊಕ್ಕಿನ ಆರಂಭ ನೀಲಿ, ತುದಿಯು ಹಳದಿ ಬಣ್ಣದ್ದಾಗಿರುತ್ತದೆ. ಗಂಡು-ಹೆಣ್ಣು ಎರಡೂ ನೋಡಲು ಒಂದೇ ಥರ ಇರುತ್ತವೆ. ಇವುಗಳ ಕರೆ ಹಲವು ಕಿರ್ ಕುರ್ ಶಬ್ದ ಸಂತಸದಲ್ಲೂ ಹಾಗೂ ಮರಿ ಮಾಡುವ ಸಮಯದಲ್ಲೂ ಹೀಗೆಯೇ ಹಾಡುತ್ತವೆ.

ಮಾಸಲುಗಂದು ಕೆನ್ನೆಯ ಇವುಗಳಿಗೆ ಕುರುಚಲು ಕಾಡು, ಹೂದೋಟ, ಜನವಸತಿ ಪ್ರದೇಶ ಅಚ್ಚು ಮೆಚ್ಚು. ಬಂಜರು ಪ್ರದೇಶ ಮತ್ತು ತೇವವಾದ ನಿತ್ಯ ಹರಿದ್ವರ್ಣದ ಜಾಗಗಳನ್ನು ಬಿಟ್ಟು ಇಡೀ ಭಾರತದಲ್ಲಿ ಕಂಡುಬರುತ್ತವೆ. ಶ್ರೀಲಂಕಾ ದೇಶಕ್ಕೆ ಚಳಿಗಾಲದ ಅತಿಥಿಯಾದರೆ, ಭಾರತದ ಈಶಾನ್ಯ ರಾಜ್ಯಗಳಿಗೆ ಬೇಸಿಗೆ ಅತಿಥಿ ಎನ್ನಲಾಗಿದೆ. ಪಾಕಿಸ್ತಾನ, ಭೂತಾನ್, ನೇಪಾಳಗಳಲ್ಲೂ ಇವುಗಳ ಸಂಖ್ಯೆ ಉತ್ತಮವಾಗಿದೆ.

ಸಾಧಾರಣವಾಗಿ ಒಂದು, ಎರಡು ಅಥವಾ ಸಣ್ಣ ಗುಂಪಿನಲ್ಲಿ ಈ ಹಕ್ಕಿಗಳನ್ನು ತೋಟಗಳಲ್ಲಿ, ಹಳ್ಳಿ, ಪಟ್ಟಣಗಳಲ್ಲಿ ಕಾಣಬಹುದು. ಹುಲ್ಲು ಮೇಯುತ್ತಿರುವ ದನಗಳ ಸಮೀಪದಲ್ಲಿ ಹಾರುವ ಕ್ರಿಮಿ–ಕೀಟಗಳನ್ನು ಭಕ್ಷಿಸುತ್ತವೆ. ಇವುಗಳಲ್ಲದೇ ಬೆರ‍್ರಿ, ಅತ್ತಿ ಹಣ್ಣು ಬಲುಪ್ರಿಯ. ಇನ್ನು ಹಣ್ಣು, ಹೂವು ಬಿಟ್ಟ ಮರಗಳಲ್ಲಿ ಗುಂಪಾಗಿ ಕಾಣಸಿಗುವ ಈ ಹಕ್ಕಿಯು ಗಾತ್ರದಲ್ಲಿ ಮೈನಾ ಹಕ್ಕಿಯಷ್ಟಾಗುತ್ತದೆ.

ಹವಾಮಾನ, ಸ್ಥಳ ಅನುಗುಣವಾಗಿ ಸಂತಾನೋತ್ಪತ್ತಿ ಆರಂಭಿಸುತ್ತವೆ ಎಂದಿದ್ದಾರೆ ಕೆಲ ಪಕ್ಷಿ ಶಾಸ್ತ್ರಜ್ಞರು. ಇವು ಮೇ ತಿಂಗಳಿಂದ ಜುಲೈ ಮಧ್ಯೆ ಮರಗಳ ಪೊಟರೆ, ಗೋಡೆಗಳ ಬಿರುಕು, ಮನೆಗಳ ಸಂದಿಗಳಲ್ಲಿ ಹುಲ್ಲು, ಹರಿದ ಬಟ್ಟೆಯಿಂದ ಗೂಡು ನಿರ್ಮಿಸಿಕೊಳ್ಳುತ್ತವೆ.

ತಿಳಿನೀಲಿ ಬಣ್ಣದ ಮೂರ್ನಾಲ್ಕು ಮೊಟ್ಟೆಗಳನ್ನಿಟ್ಟು 14 ದಿನಗಳಲ್ಲಿ ಮರಿ ಮಾಡುತ್ತವೆ. ಗೂಡು ನಿರ್ಮಾಣದಂತೆ ಪೋಷಣೆ ಜವಾಬ್ದಾರಿಯನ್ನು ಗಂಡು-ಹೆಣ್ಣುಗಳೆರಡೂ ಒಟ್ಟಿಗೆ ನಿರ್ವಹಿಸುತ್ತವೆ. ಈ ಸಂದರ್ಭದಲ್ಲಿ ಗುಬ್ಬಿ, ಮರಕುಟಿಗ ಜಗಳಕ್ಕಿಳಿಯುತ್ತವೆ. ಆಗ ಅಸ್ತಿತ್ವಕ್ಕಾಗಿ ಹೋರಾಟ ಸಾಮಾನ್ಯ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.