ADVERTISEMENT

ಮೊಟ್ಟೆಯಿಡದ ಕಾಮನಬಿಲ್ಲು ಮೀನು ನೋಡಿದ್ದೀರಾ?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:13 IST
Last Updated 23 ಅಕ್ಟೋಬರ್ 2018, 11:13 IST
   

ವಿಚಿತ್ರ ಮತ್ತು ವಿಶೇಷ ಎನಿಸುವಂತಹ ವರ್ತನೆ, ಲಕ್ಷಣ ತೋರುವಂತಹ ಅಪರೂಪದ ಮತ್ಸ್ಯ ಪ್ರಭೇದ ಗಪ್ಪಿ ಮೀನು. ಇದರ ವೈಜ್ಞಾನಿಕ ಹೆಸರು ಪೊಸಿಲಿಯಾ ರೆಟಿಕುಲಟಾ (Poecilia reticulata) ಇಂದಿನ ಮತ್ಸ್ಯ ಪ್ರಪಂಚದಲ್ಲಿ ಈ ವಿಶೇಷ ಮೀನಿನ ಬಗ್ಗೆ ತಿಳಿಯೋಣ.

ಸಾಮಾನ್ಯವಾಗಿ ಎಲ್ಲ ಮೀನುಗಳು ಮೊಟ್ಟೆಯಿಟ್ಟು, ಅವಕ್ಕೆ ಕಾವುಕೊಟ್ಟು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಈ ಮೀನು ಮಾತ್ರ ಭಿನ್ನ. ಮೊಟ್ಟೆಯಿಡದೇ ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತದೆ. ಆದರೂ ಇದನ್ನು ಸಸ್ತನಿಗಳ ಗುಂಪಿಗೆ ಸೇರಿಸದೇ ಮತ್ಸ್ಯವಾಗಿಯೇ ಪರಿಗಣಿಸಲಾಗುತ್ತದೆ.

‌ಇದು ಲಕ್ಷಾಂತರ ಮರಿಗಳಿಗೆ ಜನ್ಮ ನೀಡುವುದರಿಂದ ಮಿಲಿಯನ್‌ ಮೀನು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ವಿವಿಧ ಬಣ್ಣಗಳಲ್ಲಿ ಕಂಗೊಳಿಸುವುದರಿಂದ ಕಾಮನಬಿಲ್ಲು ಮೀನು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ADVERTISEMENT

ಇವುಗಳಲ್ಲಿ ಈವರೆಗೆ 300ಕ್ಕೂ ಹೆಚ್ಚು ತಳಿಗಳನ್ನು ಗುರುತಿಸಲಾಗಿದೆ. ಒಂದಕ್ಕಿಂತ ಒಂದು ಭಿನ್ನವಾಗಿ ಕಾಣುತ್ತವೆ. ಆಕರ್ಷಕ ಬಣ್ಣಗಳಲ್ಲಿ ಕಂಗೊಳಿಸುವುದರಿಂದ ನೋಡಲು ಸುಂದರವಾಗಿ ಕಾಣುತ್ತವೆ.

ಹೇಗಿರುತ್ತದೆ?

ಈ ಮೀನು ಯಾವುದೇ ನಿರ್ದಿಷ್ಟ ಬಣ್ಣದಲ್ಲಿ ಕಾಣಸಿಗುವುದಿಲ್ಲ. ಸಾಮಾನ್ಯವಾಗಿ ಗಾಢ‌ಕಂದು, ಕಪ್ಪು, ಬಿಳಿ, ತಿಳಿನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಕಾಣಿಸುತ್ತದೆ. ಈಜು ರೆಕ್ಕೆಗಳೂ ವಿವಿಧ ಬಣ್ಣಗಳಲ್ಲಿರುತ್ತವೆ.ದೇಹವು ನೀಳವಾಗಿದ್ದು, ಯಾವುದೇ ಅಂಕುಡೊಂಕುಗಳಿರುವುದಿಲ್ಲ. ವಿಶಾಲವಾದ ಕಣ್ಣುಗಳನ್ನು ಹೊಂದಿದೆ. ಬೆನ್ನಿನ ಭಾಗದಲ್ಲಿರುವ ಈಜು ರೆಕ್ಕೆ ಬೆನ್ನಿಗಷ್ಟೇ ಅಲ್ಲದೇ ಸೊಂಟದ ಭಾಗಗಳಿಗೂ ಅಂಟಿಕೊಂಡಿರುತ್ತದೆ.

ಇಡೀ ದೇಹದಲ್ಲಿ ಬಾಲದ ರೆಕ್ಕೆಯೇ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಇದು ಮುದುಡಿಕೊಂಡಾಗ ಬೀಸಣಿಗೆಯ ಹಾಗೆ ಕಾಣಿಸಿದರೆ, ಹರಡಿದಾಗ ಸೀರೆಯ ನೆರಿಗೆಯಂತೆ ಆಕರ್ಷಕವಾಗಿ ಕಾಣಿಸುತ್ತದೆ. ಗಂಡು ಮೀನುಗಳಿಗಿಂತ ಹೆಣ್ಣು ಮೀನುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಆದರೆ ರೆಕ್ಕೆಗಳು ಮಾತ್ರ ಚಿಕ್ಕದಾಗಿರುತ್ತವೆ. ಗಂಡು ಮೀನುಗಳ ದೇಹವು ಗಾಢ ಬಣ್ಣದಲ್ಲಿದ್ದರೆ, ಹೆಣ್ಣು ಮೀನುಗಳು ತಿಳಿ ಬಣ್ಣದಲ್ಲಿರುತ್ತವೆ.

ಎಲ್ಲೆಲ್ಲಿವೆ?

ಇದು ಉಷ್ಣ ವಲಯದ ಪ್ರದೇಶಗಳಿಗೆ ಬೇಗನೆ ಹೊಂದಿಕೊಳ್ಳುತ್ತದೆ. ದಕ್ಷಿಣ ಅಮೆರಿಕ, ಅಮೆಜಾನ್‌, ಬ್ರೆಜಿಲ್, ಬಾರ್ಬೊಡಸ್, ಗಯಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ವೆನೆಜುವೆಲಾ ದೇಶಗಳ ನೀರಿನ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಆಹಾರ?

ಇದು ಮಿಶ್ರಾಹಾರಿ ಮತ್ಸ್ಯ. ಸಣ್ಣ ಮೀನು, ಜಲ ಕೀಟ ಮತ್ತು ಜಲ ಸಸ್ಯಗಳನ್ನು ತಿಂದು ಜೀವಿಸುತ್ತವೆ. ಇತರೆ ಸಣ್ಣ ಗಾತ್ರದ ಮೀನುಗಳಿಗೆ ಹೋಲಿಸಿದರೆ ಇದು ಸ್ವಲ್ಪ ಹೆಚ್ಚಾಗಿಯೇ ಆಹಾರ ಸೇವಿಸುತ್ತದೆ.

ಜೀವನ ಕ್ರಮ ಮತ್ತು ವರ್ತನೆ

ಇದು ಹೆಚ್ಚಾಗಿ ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ವಿವಿಧ ಬಣ್ಣಗಳಲ್ಲಿ ಕಂಗೊಳಿಸುವುದಿರಂದ ಪರಭಕ್ಷಕ ಜಲಚರಗಳು ಇದನ್ನು ಸುಲಭವಾಗಿ ಗುರುತಿಸುತ್ತವೆ. ಆದರೆ ಅವುಗಳ ಕಣ್ಣಿಗೆ ಬೀಳದಂತೆ ಅಡಗಿ ಕುಳಿತುಕೊಳ್ಳುವ ಜಾಣ್ಮೆಯನ್ನೂ ಹೊಂದಿದೆ. ಇದು ಸೊಳ್ಳೆಗಳನ್ನು ಹೆಚ್ಚಾಗಿ ಬೇಟೆಯಾಡುತ್ತದೆ. ಹೀಗಾಗಿ ಮಲೇರಿಯಾ ಹರಡುವ ಸೊಳ್ಳೆಗಳ ಸಂತತಿ ನಾಶ ಮಾಡಲು ಏಷ್ಯಾದ ಕೆಲವು ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಸಾಕಲಾಗುತ್ತದೆ.

ಸಂತಾನೋತ್ಪತ್ತಿ

ಇದು ಎರಡರಿಂದ ಮೂರು ತಿಂಗಳು ತಲುಪುತ್ತಿದ್ದಂತೆಯೇ ಸಂತಾನೋತ್ಪತ್ತಿ ಸಾಮಾರ್ಥ್ಯ ಪಡೆಯುತ್ತದೆ. ವಿಶೇಷವೆಂದರೆ ಪ್ರತಿ ತಿಂಗಳೂ ಮರಿಗಳಿಗೆ ಜನ್ಮ ನೀಡುತ್ತದೆ. ತಿಂಗಳಲ್ಲಿ ಸುಮಾರು 50 ರಿಂದ 200 ಮರಿಗಳಿಗೆ ಜನ್ಮ ನೀಡುತ್ತದೆ. ಒಮ್ಮೆಮ್ಮೊ ತನ್ನ ಮರಿಗಳನ್ನು ತಾನೇ ಭಕ್ಷಿಸುತ್ತದೆ.

ದೇಹದ ಉದ್ದ

ಗಂಡು: 1.5 ರಿಂದ 3.5 ಸೆಂ.ಮೀ
ಹೆಣ್ಣು: 3 ರಿಂದ 6 ಸೆಂಮೀ
ಜೀವಿತಾವಧಿ:3 ರಿಂದ 5 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.