ADVERTISEMENT

ಸುಂದರ ಕೊಕ್ಕಿನ ಹಕ್ಕಿ ಟೊಕೊ ಟೌಕನ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 12:36 IST
Last Updated 15 ಜೂನ್ 2019, 12:36 IST
ಟೊಕೊ ಹಕ್ಕಿ
ಟೊಕೊ ಹಕ್ಕಿ   

ಹಕ್ಕಿಗಳು ಎಂದ ಕೂಡಲೇ ಅವುಗಳ ಬಣ್ಣ ಬಣ್ಣದ ಆಕರ್ಷಕ ಪುಕ್ಕ ನೆನಪಾಗುತ್ತದೆ. ಆದರೆ ಈ ಹಕ್ಕಿಗಳು ಮಾತ್ರ ಸುಂದರವಾದ ತಮ್ಮ ಕೊಕ್ಕಿನ ಮೂಲಕವೇ ಪಕ್ಷಿ ಪ್ರಿಯರ ಗಮನ ಸೆಳೆಯುತ್ತವೆ. ಮಳೆಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಟೌಕನ್ ಹಕ್ಕಿಗಳ ಸೊಬಗು ಬೆರಗು ಮೂಡಿಸುತ್ತದೆ. ಟೌಕನ್‌ ಹಕ್ಕಿಗಳಲ್ಲಿ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಟೊಕೊ ಟೌಕನ್ (Toco Toucan) ಕೂಡ ಒಂದು. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿ ಹೆಸರು ರಮ್‌ಫಸ್‌ಟೊಸ್‌ ಟೊಕೊ (Ramphastos toco). ಇದು ರಮ್‌ಫಾಸ್ಟಿಡೇ (Ramphastidae) ಕುಟುಂಬಕ್ಕೆ ಸೇರಿದ ಸುಂದರ ಹಕ್ಕಿ.

ಹೇಗಿರುತ್ತದೆ?
ಕಪ್ಪು ಮತ್ತು ಬಿಳಿಬಣ್ಣದ ಆಕರ್ಷಕ, ಮೃದುವಾದ ಪುಕ್ಕದಿಂದ ದೇಹ ಆವರಿಸಿರುತ್ತದೆ. ತಲೆ, ಬೆನ್ನು, ಸೊಂಟ, ಉದರ ಮತ್ತು ಬಾಲ ಸಂಪೂರ್ಣ ಕಪ್ಪು ಬಣ್ಣದ ಪುಕ್ಕದಿಂದ ಆವರಿಸಿದ್ದರೆ, ಕುತ್ತಿಗೆ ಭಾಗ ಮತ್ತು ಬಾಲದ ಮೇಲ್ಭಾಗ ಬಿಳಿ ಬಣ್ಣದ ಪುಕ್ಕದಿಂದ ಆವರಿಸಿರುತ್ತದೆ. ಕಣ್ಣಿನ ಭಾಗದ ಸುತ್ತಲೂ ಕಿತ್ತಳೆ ಬಣ್ಣದ ಪುಕ್ಕವಿರುತ್ತದೆ. ಕಣ್ಣುಗಳು ಗಾಢ ಕಪ್ಪು ಬಣ್ಣದಲ್ಲಿರುತ್ತವೆ. ಕೊಕ್ಕು ನೀಳವಾಗಿ, ದೊಡ್ಡದಾಗಿದ್ದು, ಆಕರ್ಷಕ ಕಿತ್ತಳೆ ಬಣ್ಣದಲ್ಲಿ ಹೊಳೆಯುತ್ತಿರುತ್ತದೆ. ಕೊಕ್ಕಿನ ಆರಂಭದ ಭಾಗದಲ್ಲಿ ಕಪ್ಪು ಬಣ್ಣದ ಗೆರೆ ಇದ್ದು, ಮೇಲ್ಭಾಗದ ಕೊಕ್ಕಿನ ತುದಿಯಲ್ಲೂ ಕಪ್ಪು ಬಣ್ಣವಿರುತ್ತದೆ. ಕಾಲುಗಳು ಪುಟ್ಟದಾಗಿದ್ದು, ಬೂದು ಅಥವಾ ಗಾಢ ನೀಲಿ ಬಣ್ಣದಲ್ಲಿರುತ್ತವೆ. ಗೂಡಿನಲ್ಲಿ ಮಲಗುವಾಗ ಕತ್ತನ್ನು ಸಂಪೂರ್ಣ ತಿರುಗಿಸಿ ಬೆನ್ನಿನ ಮೇಲೆ ಇಟ್ಟು ವಿರಮಿಸುತ್ತದೆ.

ADVERTISEMENT

ಎಲ್ಲಿದೆ?
ದಕ್ಷಿಣ ಅಮೆರಿಕ ಖಂಡದ ಮಳೆಕಾಡುಗಳು ಇದರ ನೆಚ್ಚಿನ ವಾಸಸ್ಥಾನ. ಕೆರಾಡೊ ಸವನ್ನಾ ಕಾಡುಗಳಲ್ಲೂ ಇದು ಕಾಣಸಿಗುತ್ತದೆ. ಅರ್ಜೆಂಟೀನಾ, ಬೊಲಿವಿಯಾ, ಬ್ರೆಜಿಲ್, ಗಯಾನಾ, ಪರಾಗ್ವೆ, ಪೆರು ಮತ್ತು ಸುರಿನಾಮ್ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಮೆಕ್ಸಿಕೊದಿಂದ ಅರ್ಜೆಂಟೀನಾವರೆಗೆ ಟೊಕೊ ಟೌಕನ್‌ನ 37 ತಳಿಗಳನ್ನು ಗುರುತಿಸಲಾಗಿದೆ.

ಜೀವನಕ್ರಮ ಮತ್ತು ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಪುಟ್ಟ ಗುಂಪು ರಚಿಸಿಕೊಂಡಿರುತ್ತದೆ. ಆಹಾರ ಹುಡುಕುವಾಗ ಒಂಟಿಯಾಗಿ ಅಥವಾ ಸಂಗಾತಿಯೊಂದಿಗೆ ಸುತ್ತುತ್ತದೆ. ಎತ್ತರವಿರುವ ಮರಗಳ ಮೇಲೆ ಗೂಡು ಕಟ್ಟಿಕೊಳ್ಳುತ್ತದೆ. ಇಲ್ಲದಿದ್ದರೆ ಮರದ ಪೊಟರೆಗಳಲ್ಲಿ ವಾಸಿಸುತ್ತದೆ. ಹಾರುವಾಗ ವಿರಳವಾಗಿ ರೆಕ್ಕೆ ಬಡಿಯುತ್ತದೆ. ಗುಂಪು ಕೂಡಿದಾಗ ವಿಶಿಷ್ಟ ಶಬ್ದಗಳನ್ನು ಹೊರಡಿಸುತ್ತಾ, ಜೋರಾಗಿ ಕಿರುಚುತ್ತಾ ಸಂವಹನ ನಡೆಸುತ್ತವೆ.

ಆಹಾರ
ಇದು ಮಿಶ್ರಾಹಾರಿ ಹಕ್ಕಿ. ಸುಂದರವಾದ ನೀಳ ಕೊಕ್ಕು ಆಹಾರ ಹುಡುಕುವುದಕ್ಕೂ ನೆರವಾಗುತ್ತದೆ. ವಿವಿಧ ಬಗೆಯ ಹಣ್ಣುಗಳು ಇದರ ಪ್ರಮುಖ ಆಹಾರ. ಆಗಾಗ್ಗೆ ಕೆಲವು ಬಗೆಯ ಕೀಟಗಳನ್ನೂ ಭಕ್ಷಿಸುತ್ತದೆ. ಒಮ್ಮೆಮ್ಮೊ ಸರೀಸೃಪಗಳನ್ನೂ ಬೇಟೆಯಾಡಿ ತಿನ್ನುತ್ತದೆ. ಕೆಲವು ಹಕ್ಕಿಗಳ ಮೊಟ್ಟೆಗಳೂ ಇದರ ಆಹಾರದ ಭಾಗ.

ಸಂತಾನೋತ್ಪತ್ತಿ
ವರ್ಷಕ್ಕೆ ಒಮ್ಮೆ ಮಾತ್ರ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಹೆಚ್ಚು ಎತ್ತರವಿರುವ ಮರಗಳನ್ನು ಗೂಡು ಕಟ್ಟಿಕೊಂಡು ವಾಸಿಸುವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಗರ್ಭಧರಿಸಿದ ನಂತರ ಶುದ್ಧ ಬಿಳಿ ಬಣ್ಣದ 2 ಮೊಟ್ಟೆಗಳನ್ನು ಇಡುತ್ತದೆ. 17ರಿಂದ 18 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಪುಕ್ಕ ಮೂಡಿರುವುದಿಲ್ಲ. ದೃಷ್ಟಿ ಶಕ್ತಿ ಕೂಡ ಇರುವುದಿಲ್ಲ. ಹೀಗಾಗಿ ಪೋಷಕ ಹಕ್ಕಿಗಳು ಹೆಚ್ಚು ಕಾಳಜಿ ವಹಿಸಿ ಮರಿಗಳ ಆರೈಕೆ ಮಾಡುತ್ತವೆ.

16ರಿಂದ 18 ದಿನಗಳ ನಂತರ ಕಣ್ಣುಬಿಟ್ಟು ಪೋಷಕ ಹಕ್ಕಿಗಳನ್ನು ಮರಿಗಳು ಗುರುತಿಸುತ್ತವೆ. ಆರು ವಾರಗಳ ವರೆಗೆ ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆದು ಗೂಡು ಬಿಟ್ಟು ಹೋಗುತ್ತವೆ.

ಸ್ವಾರಸ್ಯಕರ ಸಂಗತಿ
ಮರಿಗಳನ್ನು ಗೂಡಿನಲ್ಲಿ ಇದ್ದಾಗಲೇ ಹೊತ್ತೊಯ್ದರೆ, ಹಕ್ಕಿಗಳಾಗಿ ಮಾನವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಿಸಿಕೊಳ್ಳುತ್ತವೆ. ಆದರೆ ಇದರ ಮರಿಗಳ ಆರೈಕೆಗೆ ಸೂಕ್ತ ಕಾಳಜಿ ತೆಗೆದುಕೊಂಡು ಸಮಪರ್ಕವಾಗಿ ಆರೈಕೆ ಮಾಡಬೇಕು. ಇಲ್ಲದಿದ್ದರೆ ಇದು ಸಾಯುವ ಸಂಭವ ಇರುತ್ತದೆ.

ವಾಸಿಸುವ ಪ್ರದೇಶವನ್ನು ಸದಾ ಶುದ್ಧವಾಗಿಟ್ಟುಕೊಳ್ಳುವುದು ಕೂಡ ಅನಿವಾರ್ಯ. ತಾಜ ಹಣ್ಣುಗಳನ್ನು ಪೂರೈಸಿ ಬೆಳೆಸಿಕೊಳ್ಳಬೇಕು.

ಗಾತ್ರ ಮತ್ತು ಜೀವಿತಾವಧಿ
55–66 ಸೆಂ.ಮೀ:
ದೇಹದ ಉದ್ದ
22–26 ಸೆಂ.ಮೀ: ರೆಕ್ಕೆಗಳ ಅಗಲ
500–750 ಗ್ರಾಂ: ದೇಹದ ತೂಕ
26 ವರ್ಷ: ಜೀವಿತಾವಧಿ
8 ಇಂಚು: ಕೊಕ್ಕಿನ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.