ADVERTISEMENT

ಕೊರೆವ ಚಳಿಯಲ್ಲೂ ಬದುಕುವ ಬಂಟಿಂಗ್!

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:26 IST
Last Updated 20 ಜನವರಿ 2019, 13:26 IST
ಹಿಮ ಬಂಟಿಂಗ್ ಪಕ್ಷಿಗಳು
ಹಿಮ ಬಂಟಿಂಗ್ ಪಕ್ಷಿಗಳು   

ಭೂಮಿಯ ಉತ್ತರ ಧ್ರುವದ ಸುತ್ತ ಹರಡಿರುವ ಹಿಮಾವೃತ ಭೂಭಾಗವಾದ ಆರ್ಕ್‌ಟಿಕ್ ಪ್ರದೇಶದಲ್ಲಿ ಉಷ್ಣಾಂಶವು ಶೂನ್ಯ ಡಿಗ್ರಿಗಿಂತಲೂ ಕಡಿಮೆಯಿರುತ್ತದೆ. ಇಂಥ ಪ್ರದೇಶಗಳಲ್ಲಿ ಜೀವಿಗಳು ಬದುಕುಳಿಯುವುದೇ ಒಂದು ಸವಾಲು.

ಇಂಥ ಪ್ರತಿಕೂಲ ವಾತಾವರಣದಲ್ಲಿ ವಾಸಿಸುವ ಹಲವು ಪ್ರಾಣಿ–ಪಕ್ಷಿಗಳನ್ನು ಕಾಣಬಹುದು. ಅಂಥವುಗಳಲ್ಲಿ ಹಿಮ ಬಂಟಿಂಗ್ ಪಕ್ಷಿ ಕೂಡಾ ಒಂದಾಗಿದೆ. ಇದರ ವೈಜ್ಞಾನಿಕ ಹೆಸರು ಪ್ಲೆಕ್ಟ್ರೊಪಿನಕ್ಸ್ ನೈವಲಿಸ್ (Plectrophenax nivalis). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ADVERTISEMENT

ಇದು ನೋಡುವುದಕ್ಕೆ ಗುಬ್ಬಚ್ಚಿಯಂತೆ ಕಂಡರೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ. ಇದರ ದೇಹವು ದಟ್ಟವಾದ ಬಿಳಿ ಬಣ್ಣದ ಗರಿಗಳಿಂದ ಆವೃತವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ವಿಶಾಲವಾದ ರೆಕ್ಕೆಗಳನ್ನು ಹೊಂದಿರುತ್ತದೆ. ಈ ಗರಿಗಳು ಚಳಿಯಿಂದ ದೇಹಕ್ಕೆ ರಕ್ಷಣೆ ಒದಗಿದುತ್ತವೆ. ಚಿಕ್ಕದಾದ ಕೊಕ್ಕನ್ನು ಹೊಂದಿದ್ದು, ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುತ್ತದೆ.

ಎಲ್ಲಿಲ್ಲಿವೆ?

ಹಿಮಾವೃತ ಪ್ರದೇಶಗಳು, ಟಂಡ್ರಾ ವಾಯುಗುಣ ಹೊಂದಿರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ. ಚಳಿಗಾಲದಲ್ಲಿ ಸರೋವರಗಳು ಮತ್ತು ಸಮುದ್ರ ತೀರಗಳ ಬಳಿ ಹೆಚ್ಚಾಗಿ ಕಂಡುಬರುತ್ತವೆ. ಆರ್ಕ್ಟಿಕ್ಪ್ರದೇಶ, ಸ್ಕ್ಯಾಂಡಿನೇವಿಯಾ, ಐಸ್‌ಲ್ಯಾಂಡ್, ಸ್ಕಾಟ್‌ಲ್ಯಾಂಡ್, ರಷ್ಯಾ, ಸೈಬೀರಿಯಾ, ಅಲಾಸ್ಕ, ಕೆನಡಾ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ಇದು ಹೆಚ್ಚಾಗಿ ಕಾಳುಗಳು, ಹಣ್ಣುಗಳು ಮತ್ತು ಕೀಟಗಳು, ಹುಳುಗಳನ್ನು ತಿನ್ನುತ್ತದೆ.

ವರ್ತನೆ ಮತ್ತು ಜೀವನ ಕ್ರಮ

ಚಳಿಗಾಲದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಣ್ಣು ಪಕ್ಷಿಗಳು ಅಮೆರಿಕ ಮತ್ತು ಕೆನಡಾದ ಬೆಚ್ಚಗಿನ ಪ್ರದೇಶಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತವೆ. ಇವುಗಳಲ್ಲಿ ಗಂಡು ಪಕ್ಷಿಗಳು ಮಾತ್ರ ಚಳಿಗಾಲದಲ್ಲಿ –30° ಸೆಲ್ಸಿಯಸ್ ಉಷ್ಣಾಂಶದ ಕೊರೆಯುವ ಚಳಿಯಲ್ಲೂ ಗಂಡು ಪಕ್ಷಿ ಬದುಕುಳಿಯುತ್ತದೆ.ಇವು ಬೆಟ್ಟಗುಡ್ಡಗಳ ಬಂಡೆಗಳ ಬಿರುಕುಗಳಲ್ಲಿ ಗೂಡನ್ನು ಕಟ್ಟುತ್ತದೆ. ಇವು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತವೆ. ಒಂದು ಗುಂಪಿನಲ್ಲಿ 20 ರಿಂದ 30 ಪಕ್ಷಿಗಳು ಇರುತ್ತವೆ. ಹೆಣ್ಣು ಪಕ್ಷಿಗಳು ಮಾತ್ರ ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಿಗೆ ವಲಸೆ ಹೋಗಿ ಚಳಿಗಾಲದ ಒಂದು ತಿಂಗಳ ನಂತರ ಹಿಂದಿರುಗುತ್ತವೆ.

ಸಂತಾನೋತ್ಪತ್ತಿ

ಮೇ ತಿಂಗಳಿನಿಂದ ಸೆಪ್ಟೆಂಬರ್‌ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಬಂಟಿಂಗ್ ಒಂದು ಬಾರಿಗೆ 3 ರಿಂದ 9 ಮೊಟ್ಟೆಗಳನ್ನು ಇಡುತ್ತದೆ. ಸುಮಾರು 10 ರಿಂದ 16 ದಿನಗಳವರೆಗೆ ಕಾವು ಕೊಡುತ್ತದೆ. ಮರಿಗಳು ವಯಸ್ಕ ಹಂತಕ್ಕೆ ತಲುಪುದಕ್ಕೆ ಸುಮಾರು ಒಂದು ವರ್ಷವಾದರೂ ಬೇಕು. ಅದುವರೆಗೂ ಮರಿಗಳು ತಾಯಿಯ ಪೋಷಣೆಯ ಲ್ಲಿ ಬೆಳೆಯುತ್ತವೆ.

ಹವಾಮಾನ ವೈಪರೀತ್ಯ, ಅತಿಯಾದ ಬೇಟೆಗಾರಿಕೆ ಮತ್ತು ವಾಸಸ್ಥಾನಗಳ ವಿನಾಶದಿಂದ ಇವುಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ.

**

ದೇಹದ ಗಾತ್ರ ಮತ್ತು ಜೀವಿತಾವಧಿ

ದೇಹದ ಉದ್ದ:17 ರಿಂದ 19 ಸೆಂ.ಮೀ

ತೂಕ:29 ರಿಂದ 42 ಗ್ರಾಂ

ಜೀವಿತಾವಧಿ:ಸರಾಸರಿ 9 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.