ADVERTISEMENT

ಆಕ್ರಮಣಕಾರಿ ಸ್ವಭಾವದ ಸ್ಕುವಾ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 11:29 IST
Last Updated 18 ಫೆಬ್ರುವರಿ 2019, 11:29 IST
   

ಪ್ರಪಂಚದಲ್ಲಿ ವಿಭಿನ್ನ ಜೀವನ ಶೈಲಿ ಮತ್ತು ದೇಹದ ಆಕಾರದಿಂದ ಗಮನ ಸೆಳೆಯುವ ಹಲವು ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಅಂತವುಗಳಲ್ಲಿ ಅಂಟಾರ್ಟಿಕಾ ಖಂಡದಲ್ಲಿ ಕಂಡುಬರುವ ಸ್ಕುವಾ ಕೂಡಾ ಒಂದಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಟೆರ್ಕೊರೇರಿಯಸ್ ಮಾಕ್ಕೊರ್ಮಿಕ್ (Stercorarius maccormicki). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಮಧ್ಯಮ ಗಾತ್ರದ ಕಡಲ ಹಕ್ಕಿಗಳಲ್ಲಿ ಸ್ಕುವಾ ಪಕ್ಷಿ ಕೂಡಾ ಒಂದಾಗಿದೆ. ಸಂಶೋಧಕ ರಾಬರ್ಟ್ ಮ್ಯಾಕ್‌ಕೊಮಾರ್ಕ್‌ ಮೊದಲು ಈ ಪಕ್ಷಿ ಪ್ರಭೇದವನ್ನು ಪತ್ತೆ ಹಚ್ಚಿದ್ದರಿಂದ ಈ ಹಕ್ಕಿಗೆ ಇವರ ಹೆಸರನ್ನೇ ಇಡಲಾಗಿದೆ.ಇದರ ದೇಹದ ಮೇಲ್ಭಾಗವು ಕಂದು ಬಣ್ಣ, ತಲೆಯ ಭಾಗವು ಬಿಳಿ ಬಣ್ಣದಲ್ಲಿದ್ದು, ಕೆಳಭಾಗ ಬಿಳಿ ಬಣ್ಣದ ಗರಿಗಳಿಂದ ಆವೃತವಾಗಿದ್ದು, ಕಪ್ಪು ಬಣ್ಣದ ಚೂಪಾದ ಬಾಗಿದ ಕೊಕ್ಕನ್ನು ಹೊಂದಿದೆ.

ADVERTISEMENT

ಎಲ್ಲೆಲ್ಲಿವೆ?

ಇದು ಅಂಟಾರ್ಟಿಕದ ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಾಗಿ ಇವುಗಳನ್ನು ಕಾಣಬಹುದಾಗಿದೆ.ಚಳಿಗಾಲದಲ್ಲಿ ಈ ಪಕ್ಷಿಯು ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರಗಳ ತೀರ ಪ್ರದೇಶಗಳಿಗೆ ವಲಸೆ ಹೋಗುತ್ತವೆ.

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ಇದು ಹೆಚ್ಚಾಗಿ ಮೀನುಗಳು, ಹುಳಗಳು, ಕೀಟಗಳು ಮತ್ತು ಚಿಕ್ಕ ಗಾತ್ರದ ಪಕ್ಷಿಗಳನ್ನೂ ತಿನ್ನುತ್ತದೆ.

ವರ್ತನೆ ಮತ್ತು ಜೀವನ ಕ್ರಮ

ಈ ಸಮುದ್ರ ಪಕ್ಷಿ ಸೀಗಲ್ಸ್‌ ಪಕ್ಷಿಯಂತೆ ಕಾಣುತ್ತದೆ. ಇತರ ಪಕ್ಷಗಳ ಆಹಾರವನ್ನು ಕದಿಯುವುದು ಇದರ ಪ್ರಧಾನ ಲಕ್ಷಣ. ಸ್ಕಿಮ್ಮರ್ಸ್, ಫಪಿನ್ಸ್ ಮುಂತಾದ ಪಕ್ಷಿಗಳು ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವುಗಳ ಹಿಂದೆ ಬಿದ್ದು, ಆಕಾಶದಲ್ಲೇ ಆಹಾರವನ್ನು ಕದಿಯುತ್ತವೆ. ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಜರ್ಮನ್ ಭಾಷೆಯಲ್ಲಿ ‘ಸ್ಕುವಾ’ ಎಂದರೆ ಬೇಟೆಗಾರ(ಹಂಟರ್) ಎಂಬ ಅರ್ಥವಿದೆ. ಆಹಾರವನ್ನು ಸಂಗ್ರಹಿಸುವಾಗ ಇತರ ಪಕ್ಷಿಗಳ ಮೇಲೆ ಇವು ದಾಳಿ ಮಾಡುವ ಇವುಗಳ ಆಕ್ರಮಣಕಾರಿ ಲಕ್ಷಣದಿಂದಲೇ ಈ ಪಕ್ಷಿಗೆ ಈ ಹೆಸರು ಬಂದಿದೆ.

ಸಂತಾನೋತ್ಪತ್ತಿ

ನವೆಂಬರ್‌ನಿಂದ ಡಿಸೆಂಬರ್ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿದೆ. ಚಳಿಗಾಲದಲ್ಲಿ ಸಂತಾನೋತ್ಪತ್ತಿಯ ಸಮಯದಲ್ಲಿ ಈ ಪಕ್ಷಿಗಳು ಆಸ್ಟ್ರೇಲಿಯಾದ ಕಡಲ ತೀರಗಳಿಗೆ ವಲಸೆ ಹೋಗುತ್ತವೆ. ಹೆಣ್ಣು ಸ್ಕುವಾ ಒಂದು ಬಾರಿಗೆ 2 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಗೆ ಸುಮಾರು 24 ದಿನಗಳವರೆಗೆ ಕಾವು ಕೊಡುತ್ತದೆ. ಮರಿಗಳು ವಯಸ್ಕ ಹಂತಕ್ಕೆ ಬೆಳೆಯುವವರೆಗೆ ತಾಯಿ ಪೋಷಣೆಯಲ್ಲಿ ಬೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.