ADVERTISEMENT

ಅಪರೂಪದ ಕಾಡೆಮ್ಮೆ ವಿಸೆಂಟ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST
ವಿಸೆಂಟ್
ವಿಸೆಂಟ್   

ನಾವು ನೋಡುವ ದೊಡ್ಡಗಾತ್ರದ ಪ್ರಾಣಿಗಳು ಎಂದರೆ ಎಮ್ಮೆ, ಹಸುಗಳು. ಸಾಕು ಎಮ್ಮೆಗಳಿಗಿಂತ ಕಾಡು ಪ್ರದೇಶಗಳಲ್ಲಿನ ಎಮ್ಮೆಗಳು ಗಾತ್ರದಲ್ಲಿ ತುಸು ದೊಡ್ಡದಾಗಿರುತ್ತವೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಕಾಡೆಮ್ಮೆ ಪ್ರಭೇದಗಳಲ್ಲಿ ಒಂದಾದ ವಿಸೆಂಟ್‌ (Wisent) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬೈಸನ್ ಬೊನಸಸ್‌ (Bison bonasus). ಇದು ಸಸ್ಯಾಹಾರಿ ಪ್ರಾಣಿಗಳ ಬೋವಿಡೇ (Bovidae) ಮತ್ತು ಬೊವಿನೇ (Bovinae) ಉಪಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?

ADVERTISEMENT

ಕಂದು ಮತ್ತು ಕಪ್ಪು ಮಿಶ್ರಿತ ಮಂದವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಎದೆ, ಕತ್ತು ಮತ್ತು ಕುತ್ತಿಗೆಯ ಬಳಿ ನೀಳವಾದ ಕೂದಲು ಬೆಳೆದಿರುತ್ತವೆ. ಭುಜಗಳು ಬೆನ್ನಿನ ಮೇಲಿನ ಡುಬ್ಬ ಸಾಕು ಎಮ್ಮೆಗಳಿಗೆ ಹೋಲಿಸಿದರೆ ಊದಿಕೊಂಡಿರುತ್ತವೆ. ಕಾಲುಗಳು ಮಧ್ಯಮಗಾತ್ರದಲ್ಲಿದ್ದು, ದಟ್ಟವಾಗಿ ಕೂದಲು ಬೆಳೆದಿರುತ್ತವೆ. ತಲೆ ದೊಡ್ಡದಾಗಿದ್ದು, ತಲೆ, ಮುಖವೆಲ್ಲಾ ಕೂದಲಿನಿಂದ ಆವರಿಸಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು–ಕಂದು ಮಿಶ್ರಿತ ಬಣ್ಣದಲ್ಲಿರುತ್ತವೆ. ಕಿವಿಗಳು ಎಲೆಯಾಕಾರದಲ್ಲಿದ್ದು, ದಟ್ಟವಾಗಿ ಕೂದಲು ಬೆಳೆದಿರುತ್ತವೆ. ಕೋಡುಗಳು ಪುಟ್ಟದಾಗಿದ್ದು, ಅರ್ಧಚಂದ್ರಾಕೃತಿಯಲ್ಲಿ ತಿರುಗಿರುತ್ತವೆ. ಬಾಲ ನೀಳವಾಗಿದ್ದು, ತುದಿಯಲ್ಲಿ ದಟ್ಟವಾಗಿ ಕೂದಲು ಬೆಳೆದಿರುತ್ತವೆ.

ಎಲ್ಲಿದೆ?

ಇದನ್ನು ಯುರೇಷ್ಯನ್ ಎಮ್ಮೆ ಎಂತಲೇ ಕರೆಯುತ್ತಾರೆ. ಯುರೋಪ್ ಖಂಡದ ಪೋಲೆಂಡ್, ಬೆಲಾರಸ್, ಲಿಥುವೇನಿಯಾ, ರಷ್ಯಾ, ಉಕ್ರೇನ್, ಸ್ಲೊವೊಕಿಯಾ ಮತ್ತು ಕಿರ್ಗಿಸ್ತಾನದಲ್ಲಿ ಇದರ ಸಂತತಿ ವಿಸ್ತರಿಸಿದೆ. ನೀಳವಾದ ಮರಗಳು ದಟ್ಟವಾಗಿ ಬೆಳೆದಿರುವ ಪ್ರದೇಶಗಳಲ್ಲಿ ಮತ್ತು ಹುಲ್ಲು ಬೆಳೆದಿರು ಬಯಲು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಹಗಲೆಲ್ಲಾ ಆಹಾರ ಅರಸುತ್ತಾ ಸುತ್ತುತ್ತದೆ. ಕತ್ತಲಾಗುತ್ತಿದ್ದಂತೆಯೇ ಸುರಕ್ಷಿತ ಪ್ರದೇಶಗಳಲ್ಲಿ ವಿರಮಿಸಿ ಮೆಲುಕು ಹಾಕುತ್ತದೆ. ಒಂದು ಗುಂಪಿನಲ್ಲಿ 8ರಿಂದ 13 ವಿಸೆಂಟ್‌ಗಳು ಇರುತ್ತವೆ. ಗುಂಪು ರಚಿಸಿಕೊಂಡಿದ್ದರೂ ಒಂದು ಗುಂಪಿನ ಗಡಿಯೊಳಗೆ ಮತ್ತೊಂದು ಗುಂಪಿನ ವಿಸೆಂಟ್ ಬೆರೆಯುತ್ತದೆ. ಆದರೆ ಯಾವುದೇ ಕಾಳಗ ನಡೆಸುವುದಿಲ್ಲ.

ಆದರೆ ಹಿರಿಯ ವಿಸೆಂಟ್‌ಗಳಿಗಿಂತ ವಯಸ್ಕ ವಿಸೆಂಟ್‌ಗಳು ಹೆಚ್ಚು ವ್ಯಾಪ್ತಿಯಲ್ಲಿ ಗಡಿ ಗುರುತಿಸಿಕೊಂಡಿರುತ್ತವೆ. ಬೇರೆ ಬೇರೆ ಗುಂಪಿನ ವಿಸೆಂಟ್‌ಗಳು ಒಂದೆಡೆ ಕೂಡಿ ಬಾಳವುದೂ ಉಂಟು. ನಿಧಾನವಾಗಿ ನಡೆಯು ಪ್ರಾಣಿಯಾಗಿದ್ದರೂ ಚುರುಕಾಗಿ ವರ್ತಿಸುತ್ತದೆ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಹಾರಿ ಪ್ರಾಣಿ. ಹುಲ್ಲನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಎಲೆ ಮತ್ತು ಚಿಗುರಗಳನ್ನೂ ತಿನ್ನುತ್ತದೆ. ಬೇಸಿಗೆಯಲ್ಲಿ ವಯಸ್ಕ ಗಂಡು ವಿಸೆಂಟ್ ದಿನಕ್ಕೆ 32 ಕೆ.ಜಿ. ಆಹಾರ ಸೇವಿಸುತ್ತದೆ. ಇದು ದಿನ ನೀರು ಕುಡಿಯುವುದು ಅವಶ್ಯಕ. ಚಳಿಗಾಲದಲ್ಲಿ ಗಡ್ಡೆಕಟ್ಟಿರುವ ಹಿಮವನ್ನು ಕೋಡುಗಳಿಂದ ಕೊರೆದು ನೀರಾದ ಮೇಲೆ ಕುಡಿಯುತ್ತದೆ.

ಸಂತಾನೋತ್ಪತ್ತಿ

ಆಗಸ್ಟ್‌ನಿಂದ ಅಕ್ಟೋಬರ್ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಗಂಡು ವಿಸೆಂಟ್‌ಗಳು ಗುಂಪಿನಲ್ಲಿರುವ ಅಥವಾ ಇತರೆ ಗುಂಪುಗಳಲ್ಲಿರುವ ಯಾವುದಾದರೂ ಹೆಣ್ಣು ವಿಸೆಂಟ್‌ನೊಂದಿಗ ಜೊತೆಯಾಗುತ್ತವೆ. ಹೆಣ್ಣು ವಿಸೆಂಟ್‌ ಸುಮಾರು 260 ದಿನ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್ ಎನ್ನುತ್ತಾರೆ. ಮರಿ ಜನಿಸಿದ ಕೆಲವೇ ನಿಮಿಷಗಳಲ್ಲಿ ಎದ್ದು ಓಡಾಡುತ್ತದೆ. ಮರಿ ಜನಿಸಿದ ನಂತರ ತಾಯಿ ವಿಸೆಂಟ್ ಗುಂಪು ಬಿಟ್ಟು ಮರಿಯೊಂದಿಗೆ ಜೀವಿಸುತ್ತದೆ. ಮರಿಯನ್ನು ಸುರಕ್ಷಿತ ಪ್ರದೇಶಗಳಲ್ಲಿ ಬಚ್ಚಿಟ್ಟು ನಿತ್ಯ ಎರಡು ಅಥವಾ ಮೂರು ಬಾರಿ ಹಾಲುಣಿಸಿ ಬೆಳೆಸುತ್ತದೆ. ಒಂದು ತಿಂಗಳ ನಂತರ ಮರಿ ತಾಯಿಯೊಂದಿಗೆ ಆಹಾರ ಹುಡುಕುವುದನ್ನು ಕಲಿಯುತ್ತದೆ. 10ರಿಂದ 12 ತಿಂಗಳ ನಂತರ ತಾಯಿಯಿಂದ ಬೇರ್ಪಟ್ಟು ಗುಂಪಿನಲ್ಲಿ ವಾಸಿಸಲು ಆರಂಭಿಸುತ್ತದೆ. ಹೆಣ್ಣು ಮರಿ ಮೂರು ವರ್ಷಗಳ ನಂತರ, ಗಂಡು ಮರಿ ಎರಡು ವರ್ಷದ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

ಗಂಡು ವಿಸೆಂಟ್ ಅನ್ನು ಬುಲ್‌ ಎಂದು, ಹೆಣ್ಣು ವಿಸೆಂಟ್ ಅನ್ನು ಕೌ ಎಂದು ಕರೆಯುತ್ತಾರೆ.ಗಂಡು ಮತ್ತು ಹೆಣ್ಣು ಎರಡೂ ವಿಸೆಂಟ್‌ಗಳಿಗೆ ಕೋಡುಗಳು ಬೆಳೆದಿರುತ್ತವೆ.ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಆಹಾರ ಅಭಾವ ಎದುರಾದಾಗ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಇದರ ಮಾಂಸವನ್ನೇ ಹೆಚ್ಚಾಗಿ ಬಳಸಲಾಗುತ್ತಿತ್ತು.ಪ್ರಸ್ತುತ ಕೇವಲ 3200 ವಿಸೆಂಟ್‌ಗಳು ಮಾತ್ರ ಉಳಿದಿವೆ.

ಗಾತ್ರ ಮತ್ತು ಜೀವಿತಾವಧಿ

ಜೀವಿತಾವಧಿ-14 ರಿಂದ 28 ವರ್ಷ,ದೇಹದ ತೂಕ - 300ರಿಂದ920 ಕೆ.ಜಿ. ದೇಹದ ಎತ್ತರ 5 ರಿಂದ 6 ಅಡಿ, ಉದ್ದ 7–16 ಅಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.