ADVERTISEMENT

ದಟ್ಟವಾಗಿ ಬೆಳೆದ ‘ಮೈಕ್ರೋ ಫಾರೆಸ್ಟ್‌’

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 20:00 IST
Last Updated 11 ಜೂನ್ 2019, 20:00 IST
ರಿಚ್‌ಮಂಡ್‌ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಕ್ಯಾಂಪಸ್‌ನಲ್ಲಿರುವ ಮೈಕ್ರೋ ಫಾರೆಸ್ಟ್‌ – ಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ.
ರಿಚ್‌ಮಂಡ್‌ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಕ್ಯಾಂಪಸ್‌ನಲ್ಲಿರುವ ಮೈಕ್ರೋ ಫಾರೆಸ್ಟ್‌ – ಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ.   

ಕ್ಯಾಂಪಸ್‌ನೊಳಗೆ ಕಾಲಿಟ್ಟ ಕೂಡಲೇ, ಹತ್ತಾರು ವರ್ಷ ಇತಿಹಾಸ ಇರುವ ಬೃಹತ್‌ ಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಒಳಹೊಕ್ಕರೆ ಎತ್ತರದ ಕಟ್ಟಡಗಳ ನಡುವೆ ಹಕ್ಕಿಗಳ ಇಂಚರ, ಔಷಧೀಯ ಸಸ್ಯಗಳ ಘಮ,..ಇವೆಲ್ಲ ಕಾಣಸಿಗುವುದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಕ್ಯಾಂಪಸ್‌ನಲ್ಲಿ..

ನಗರದೊಳಗೆ ಅದರಲ್ಲೂ ರಿಚ್‌ಮಂಡ್‌ ರಸ್ತೆಯ ಬದಿಯಲ್ಲಿ ತೆರೆಮರೆಯಲ್ಲಿ ಮೈಕ್ರೋ ಫಾರೆಸ್ಟ್‌ (ಕಿರು ಅರಣ್ಯ) ಬೆಳೆದುಕೊಂಡಿದೆ. ಒಂದು ವರ್ಷದಲ್ಲಿ ಆಳೆತ್ತರ ಬೆಳೆದಿರುವ ಸಸ್ಯಗಳು ಕ್ಯಾಂಪಸ್‌ನ ಅಂದ ಹೆಚ್ಚಿಸಿವೆ. ಅಲ್ಲದೇ ಬೇಸಿಗೆಯಲ್ಲೂ ತಂಪಾದ ವಾತಾವರಣ ಕಾಯ್ದುಕೊಳ್ಳುವಲ್ಲಿ ನೆರವಾಗಿವೆ.

‘ಇದು ಒಂದು ವರ್ಷದ ಹಿಂದಿನ ಮಾತು.ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್‌ರಾವ್‌ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕಿರು ಅರಣ್ಯಕ್ಕೆ ಭೇಟಿ ನೀಡಿದರು. ಅದೇ ಮಾದರಿಯಲ್ಲಿ ನಗರದ ಬೇರೆ ಬೇರೆ ಭಾಗಗಳಲ್ಲಿಯೂ ಮೈಕ್ರೋ ಫಾರೆಸ್ಟ್ ಬೆಳೆಸುವ ಕನಸು ಕಂಡರು. ಇವತ್ತು ಅದು ಸಾಕಾರಗೊಂಡಿದೆ’ ಎಂದು ಸಹಾಯಕ ಕಮಾಂಡರ್‌ ಎನ್‌.ಎಸ್.ಪ್ರಕಾಶ್ ಮಾಹಿತಿ ನೀಡಿದರು.

ADVERTISEMENT
ರಿಚ್‌ಮಂಡ್‌ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಕ್ಯಾಂಪಸ್‌ನಲ್ಲಿರುವ ಮೈಕ್ರೋ ಫಾರೆಸ್ಟ್‌.
(ಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ.)

ಕ್ಯಾಂಪಸ್‌ನ ಮಧ್ಯಭಾಗದಲ್ಲಿ ಕ್ಯಾಂಟೀನ್‌ನ ಪಕ್ಕ ಸುಮಾರು 200 ರಿಂದ 300 ಗಿಡಗಳನ್ನು ನೆಡಲಾಗಿದೆ. ಬೇವು, ಹಲಸು, ಹತ್ತಿ, ನುಗ್ಗೆ ಸೇರಿದಂತೆ 100 ಜಾತಿಯ ಮರ, ಗಿಡಗಳು ಇಲ್ಲಿವೆ. ಕೆಎಸ್‌ಆರ್‌ಪಿಯ ಇತರ ಅಧಿಕಾರಿಗಳು ಗಿಡಗಳನ್ನು ಬೆಳೆಸುವಲ್ಲಿ ಒತ್ತಾಸೆಯಾಗಿದ್ದಾರೆ.

ಕ್ಯಾಂಪಸ್‌ನ ಅಂದ ಹೆಚ್ಚಿಸಿದೆ. ಜೊತೆಗೆ ತಂಪಾದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ ಎಂದು ಅಲ್ಲಿನ ಸಿಬ್ಬಂದಿ ಸಂತೋಷ ವ್ಯಕ್ತಪಡಿಸುತ್ತಾರೆ.

ಮೂರು ಕಡೆ: ನಗರದ ಮೂರು ಕ್ಯಾಂಪಸ್‌ಗಳಲ್ಲಿ ಈ ರೀತಿಯ ಕಿರು ಅರಣ್ಯ ಬೆಳೆದುಕೊಂಡಿದೆ. ಕೋರಮಂಗಲದ ಕೃಪಾನಿಧಿ ಕಾಲೇಜು ಪಕ್ಕ ಸುಮಾರು 170 ಎಕರೆಯಷ್ಟು ಜಾಗ ಇರುವ ಪೊಲೀಸ್ ಕ್ವಾರ್ಟಸ್‌ನಲ್ಲಿ ಗಿಡಗಳನ್ನು ನೆಡಲಾಗಿದೆ.

ಸರ್ಜಾಪುರ ರಸ್ತೆಯ ಕೂಡ್ಲುವಿನಲ್ಲಿ 100 ಎಕರೆ ಜಾಗದಲ್ಲಿ ಕಿರು ಅರಣ್ಯ ಬೆಳೆಸಲಾಗಿದೆ. ಇಲ್ಲಿಯೂ ಔಷಧೀಯ ಸಸ್ಯಗಳು ಇವೆ. ಅಳಿಲು ಸೇರಿದಂತೆ ಸಾಕಷ್ಟು ಪಕ್ಷಿ, ಪ್ರಾಣಿಗಳೂ ಆಶ್ರಯ ಪಡೆದುಕೊಂಡಿವೆ.

ರಾಜ್ಯದಲ್ಲಿ 12 ಕ್ಯಾಂಪಸ್‌ಗಳಲ್ಲಿ ಈ ಕಿರು ಅರಣ್ಯವನ್ನು ಬೆಳೆಸಲಾಗಿದೆ. ಮಂಗಳೂರು, ಶಿವಮೊಗ್ಗ, ಮೈಸೂರು, ವಿಜಯಪುರ, ಕಲ್ಬುರ್ಗಿ, ಬೆಳಗಾವಿ, ಶಿಗ್ಗಾವಿಯಲ್ಲಿಯೂ ನೂರಾರು ಎಕರೆ ಅರಣ್ಯ ಹೊಂದಿದೆ.

ಆರಂಭ:2018 ಜೂನ್‌ 23ರಂದು ಗಿಡನೆಡಲು ಶಂಕುಸ್ಥಾಪನೆ ಮಾಡಲಾಯಿತು. ಭತ್ತದ ಹೊಟ್ಟು, ತೆಂಗಿನ ನಾರು, ಗೊಬ್ಬರವನ್ನು ಸಮಪ್ರಮಾಣದಲ್ಲಿ ಬಳಸಲಾಗಿದೆ. ಒಂದರ ಪಕ್ಕ ಒಂದು ಗಿಡಗಳನ್ನು ನೆಡುವ ಮೂಲಕ ದಟ್ಟವಾಗಿ ಬೆಳೆಯುವಂತೆ ಮಾಡುವುದು ಮೈಕ್ರೋ ಫಾರೆಸ್ಟ್‌ನ ಮುಖ್ಯ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.