ADVERTISEMENT

ಮರುಕಳಿಸಿದ ಸೈಕಲ್‌ ಗತವೈಭವ

ಸೈಕಲ್‌ ಮಹತ್ವ ಸಾರಿದ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
ವಿಶ್ವ ಸೈಕಲ್‌ ದಿನ
ವಿಶ್ವ ಸೈಕಲ್‌ ದಿನ   

ಭಾನುವಾರ ವಿಶ್ವ ಸೈಕಲ್ ದಿನ. ಸೈಕಲ್‌ ಮಹತ್ವ ಸಾರುವ ಉದ್ದೇಶದಿಂದ ಜಯನಗರದ 4ನೇ ಬ್ಲಾಕ್‌ನ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಬೃಹತ್ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳು, ಟಿ ಶರ್ಟ್ ತೊಟ್ಟು ಲಗುಬಗೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿದ್ದರು. ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ, ಭೈರಸಂದ್ರ ವಾರ್ಡ್‌ ಬಿಬಿಎಂಪಿ ಸದಸ್ಯ ಎನ್.ನಾಗರಾಜು ಜಾಥಾಗೆ ಚಾಲನೆ ನೀಡಿದರು.

‘ಸೈಕಲ್ ಬಳಸುವುದರಿಂದ ಇಂಧನ ಉಳಿಸುವ ಜತೆಗೆ ಪರಿಸರ ಸಂರಕ್ಷಣೆ ಮಾಡಬಹುದು. ಆರೋಗ್ಯವೂ ವೃದ್ಧಿಸುತ್ತದೆ. ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಗಷ್ಟೇ ಅಲ್ಲ ದೇಹಕ್ಕೂ ಹಿತಕಾರಿ’ ಎಂದು ಸೌಮ್ಯಾ ರೆಡ್ಡಿ ಸೈಕಲ್‌ ಮಹತ್ವ ಸಾರಿದರು.

ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ನಗರವಾಸಿಗಳನ್ನು ಕಾಡುತ್ತಿರುವ ರಕ್ತದೊತ್ತಡ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತಿತರ ದೈಹಿಕ ಸಮಸ್ಯೆಗಳಿಗೆ ಸೈಕಲ್‌ ಸರಳ ಮತ್ತು ಸುಲಭ ಪರಿಹಾರ ಒದಗಿಸುತ್ತದೆ. ಸೈಕಲ್ ಬಳಕೆಯಿಂದ ದೇಹದ ನರನಾಡಿಗಳಲ್ಲಿ ರಕ್ತ ಸಂಚಾರ ಸುಗಮವಾಗಿ ದೇಹ ಉಲ್ಲಾಸದಿಂದ ಇರುತ್ತದೆ. ಜನತೆ ವಾಹನ ಅವಲಂಬನೆ ಕಡಿಮೆ ಮಾಡಿ ಸೈಕಲ್ ಬಳಕೆಯತ್ತ ಆಸಕ್ತಿ ತೋರಬೇಕು ಎಂದರು.

ADVERTISEMENT

ಜನರಿಗೆ ಈಗ ಸೈಕಲ್‌ ಮಹತ್ವ ಅರಿವಾಗುತ್ತಿದೆ

‘15 ವರ್ಷಗಳ ಹಿಂದೆ ನಗರದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ಬಳಸುತ್ತಿದ್ದರು. ಬಹುತೇಕ ಪ್ರತಿಯೊಂದು ಮನೆಯಲ್ಲೂ ಸೈಕಲ್‌ಗಳಿದ್ದವು. ಕ್ರಮೇಣ ವಾಹನಗಳ ಭರಾಟೆ ಹೆಚ್ಚಾಗಿ ವಾಯು ಮತ್ತು ಶಬ್ದ ಮಾಲಿನ್ಯ ತೀವ್ರಗೊಂಡಿತು. ಆದರೆ ಜನರಿಗೆ ಇದೀಗ ಸೈಕಲ್‌ನ ಮಹತ್ವದ ಅರಿವಾಗುತ್ತಿದ್ದು, ಸೈಕಲ್ ಬಳಸುವುದರಿಂದ ನಾನಾ ರೀತಿಯ ಅನುಕೂಲಗಳಿವೆ ಎಂಬುದು ತಿಳಿಯುತ್ತಿದೆ. ಕಳೆದ ಮೂರ‍್ನಾಲ್ಕು ವರ್ಷಗಳಿಂದ ಮತ್ತೆ ಸೈಕಲ್ ಗತವೈಭವ ಮರುಕಳಿಸುತ್ತಿದೆ’ ಎಂದು ಬಿಬಿಎಂಪಿ ಸದಸ್ಯ ಎನ್. ನಾಗರಾಜು ಸ್ಮರಿಸಿಕೊಂಡರು.

‘ಸೈಕಲ್ ಬಳಸಿ - ಜಾಗೃತಿ ಮೂಡಿಸಿ’ ಎನ್ನುವ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸೈಕಲ್ ಸವಾರರು ಜನರತ್ತ ಕೈ ಬೀಸಿ ‘ನೀವು ಬನ್ನಿ, ಸೈಕಲ್ ತನ್ನಿ’ ಎಂದು ಹುರಿದುಂಬಿಸುತ್ತಿದ್ದರು.

ಕಾಲಕ್ಕೆ ತಕ್ಕಂತೆ ಬದಲಾದ ಸೈಕಲ್‌ ವಿನ್ಯಾಸ

ಆರೋಗ್ಯ ಕಾಪಾಡಲು ಸೈಕಲ್ ಬಳಕೆ ಅತ್ಯುತ್ತಮವಾಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಸೈಕಲ್ ಅತ್ಯಂತ ಪ್ರಭಾವಶಾಲಿ ಸಂಚಾರಿ ಸಾಧನವಾಗಿದೆ ಎಂದು ಜಾಥದಲ್ಲಿ ಪಾಲ್ಗೊಂಡವರು ಅನಿಸಿಕೆ ವ್ಯಕ್ತಪಡಿಸಿದರು. ಕಾಲಕ್ಕೆ ತಕ್ಕಂತೆ ಸೈಕಲ್‌ ನೋಟ ಮತ್ತು ಬೆಲೆ ಕೂಡ ಬದಲಾಗಿವೆ.

ಜಾಥಾದಲ್ಲಿ ಭಾಗವಹಿಸಿದ್ದ ಆಕರ್ಷಕ ಬಣ್ಣ ಮತ್ತು ವಿನ್ಯಾಸದ ವಿನೂತನ ಮಾದರಿ ಸೈಕಲ್‌ಗಳು ಎಲ್ಲರ ಗಮನ ಸೆಳೆದವು. ನೂರಾರು ರೂಪಾಯಿಗಳಿಗೆ ಸಿಗುತ್ತಿದ್ದ ಸೈಕಲ್‌ ಬೆಲೆ ಸಾವಿರಾರು ರೂಪಾಯಿಗೆ ಏರಿದೆ. ಗೇರ್‌ ಸೈಕಲ್‌, ರೇಸ್‌ ಸೈಕಲ್‌, ಟ್ಯೂಬ್‌ ಇಲ್ಲದ ಸೈಕಲ್‌... ಹೀಗೆ ಹಲವಾರು ಕಂಪನಿಯ ಸೈಕಲ್‌ಗಳು ಬೀದಿಗಿಳಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.