ADVERTISEMENT

2020ರ ವೇಳೆಗೆ ಬೆಂಗಳೂರಿನಲ್ಲಿ ಬರಿದಾಗಲಿದೆ ಅಂತರ್ಜಲ: ನೀತಿ ಆಯೋಗ ವರದಿ

60 ಕೋಟಿ ಜನರಿಗೆ ಶುದ್ಧ ನೀರಿನ ಕೊರತೆ

ಪಿಟಿಐ
Published 16 ಜೂನ್ 2018, 12:45 IST
Last Updated 16 ಜೂನ್ 2018, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದ್ದು, 10 ಕೋಟಿ ಜನರಿಗೆ ತೊಂದರೆಯಾಗಲಿದೆ ಎಂದು ನೀತಿ ಆಯೋಗದ ವರದಿ ಆತಂಕ ವ್ಯಕ್ತಪಡಿಸಿದೆ.

2030ರ ವೇಳೆಗೆ ದೇಶದ ಶೇಕಡ 40ರಷ್ಟು ಜನರಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಂತರರಾಷ್ಟ್ರೀಯ ಮಟ್ಟದ ಕೆಲವು ಏಜೆನ್ಸಿಗಳ ಅಂಕಿಅಂಶ ಉಲ್ಲೇಖಿಸಿ ವರದಿಯಲ್ಲಿ ವಿವರಿಸಲಾಗಿದೆ.

ದೇಶದ 60 ಕೋಟಿ ಜನ ಶುದ್ಧ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ದೇಶದಾದ್ಯಂತ ಸುಮಾರು 2 ಲಕ್ಷ ಜನ ಮೃತಪಡುತ್ತಿದ್ದಾರೆ. ದೇಶದಲ್ಲಿ ನೀರಿನ ಬಿಕ್ಕಟ್ಟು ಇನ್ನಷ್ಟು ಹದಗೆಡಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ’ ಎಂಬ ಶೀರ್ಷಿಕೆಯುಳ್ಳ ವರದಿಯನ್ನು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಬಿಡುಗಡೆ ಮಾಡಿದ್ದರು.

‘2030ರ ವೇಳೆಗೆ ದೇಶದಲ್ಲಿ ನೀರಿನ ಬಳಕೆ ಲಭ್ಯತೆಗಿಂತ ದುಪ್ಪಟ್ಟಾಗಲಿದೆ. ಇದರಿಂದ ಕೋಟ್ಯಂತರ ಜನರಿಗೆ ನೀರಿನ ಕೊರತೆ ಎದುರಾಗಲಿದೆ. ದೇಶದ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಶೇಕಡ 6 ......

ದೇಶದಲ್ಲಿ ಲಭ್ಯವಿರುವ ಶೇಕಡ 70ರಷ್ಟು ನೀರು ಕಲುಷಿತಗೊಂಡಿದೆ ಎಂಬುದನ್ನು ಹಲವು ಸ್ವತಂತ್ರ ಏಜೆನ್ಸಿಗಳಿಂದ ಪಡೆದ ಅಂಕಿಅಂಶಗಳೊಂದಿಗೆ ವರದಿಯಲ್ಲಿ ತಿಳಿಸಲಾಗಿದೆ. ಕಳಪೆ ಗುಣಮಟ್ಟದ ನೀರು ಹೊಂದಿರುವ ವಿಶ್ವದ 122 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 120ನೇ ಸ್ಥಾನದಲ್ಲಿದೆ.

ನೀರಿನ ಬಳಕೆ ಮತ್ತು ನಿರ್ವಹಣೆ ಬಗ್ಗೆ ಗಂಭೀರ ಚಿಂತನೆಯಾಗಬೇಕು ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ಪ್ರತಿ ರಾಜ್ಯಕ್ಕೂ ರ್‍ಯಾಂಕಿಂಗ್: ಅಂತರ್ಜಲ ಮರುಪೂರಣೆ, ನೀರಾವರಿ ವಿಧಾನ, ಕೃಷಿ ಪದ್ಧತಿಗಳು, ಕುಡಿಯುವ ನೀರು, ನೀತಿ ನಿರೂಪಣೆ ಮತ್ತು ಆಡಳಿತದ ಆಧಾರದಲ್ಲಿ ನೀತಿ ಆಯೋಗ ಪ್ರತಿಯೊಂದು ರಾಜ್ಯಕ್ಕೂ ರ್‍ಯಾಂಕಿಂಗ್ ನೀಡಿದೆ. ಇದರಲ್ಲಿ ಗುಜರಾತ್‌ ಅಗ್ರ ಸ್ಥಾನದಲ್ಲಿದ್ದರೆ, ಜಾರ್ಖಂಡ್ ಕಳಪೆ ಸಾಧನೆ ಮಾಡಿದೆ. ಗುಜರಾತ್‌ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಇವೆ.

ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರ ಮುಂಚೂಣಿಯಲ್ಲಿದ್ದರೆ ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ನಂತರದ ಸ್ಥಾನಗಳಲ್ಲಿವೆ.

ಮಳೆಯನ್ನೇ ಅವಲಂಬಿಸಿದ ಕೃಷಿ: ದೇಶದ ಶೇಕಡ 52ರಷ್ಟು ಕೃಷಿ ಮಳೆ ನೀರನ್ನೇ ಅವಲಂಬಿಸಿದೆ. ಹೀಗಾಗಿ ಭವಿಷ್ಯದಲ್ಲಿ ನೀರಾವರಿ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಚ್ಚಿನ ರಾಜ್ಯಗಳಿಗೆ ಕಡಿಮೆ ಅಂಕ: ನೀರು ನಿರ್ವಹಣೆ ವಿಚಾರದಲ್ಲಿ ಹೆಚ್ಚಿನ ಎಲ್ಲಾ ರಾಜ್ಯಗಳೂ ಶೇಕಡ 50ಕ್ಕಿಂತ ಕಡಿಮೆ ಅಂಕ ಗಳಿಸಿವೆ.

ನೀರು ನಿರ್ವಹಣೆಗೆ ಸಂಬಂಧಿಸಿ ಯೋಜನೆಗಳನ್ನು ರೂಪಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಮತ್ತು ಇಲಾಖೆಗಳಿಗೆ ಸಲಹೆಗಳನ್ನೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.