ADVERTISEMENT

ವನಸುಂದರಿ ‘ಗೋಲಾರಿ’ಯ ನೋಡಲು ಬರ್ರೀ!

ಸದಾಶಿವ ಎಂ.ಎಸ್‌.
Published 9 ಜುಲೈ 2018, 11:06 IST
Last Updated 9 ಜುಲೈ 2018, 11:06 IST
ಕಾರವಾರ ತಾಲ್ಲೂಕಿನ ತೋಡೂರಿನಲ್ಲಿ ಮೈದುಂಬಿ ಧುಮುಕುತ್ತಿರುವ ‘ಗೋಲಾರಿ’ ಜಲಪಾತ.
ಕಾರವಾರ ತಾಲ್ಲೂಕಿನ ತೋಡೂರಿನಲ್ಲಿ ಮೈದುಂಬಿ ಧುಮುಕುತ್ತಿರುವ ‘ಗೋಲಾರಿ’ ಜಲಪಾತ.   

ಕಾರವಾರ:ದಟ್ಟವಾದ ಕಾಡಿನ ನಡುವೆ ನಡೆದು ಬಂದು ಸ್ವಲ್ಪ ದೂರ ಹೋಗುತ್ತಿದ್ದಂತೆ ದಾರಿಗೆ ಅಡ್ಡಲಾಗಿ ಹರಿಯುವ ತೊರೆ. ತಣ್ಣಗೆ ಕೊರೆಯುವ ನೀರಿನಲ್ಲಿ ಹೆಜ್ಜೆ ಹಾಕಿ ಆಚೆ ದಡಕ್ಕೆ ತಲುಪಿದಾಗ ಮತ್ತದೇ ಕಾಡು. ಮಳೆ ಸುರಿಯುತ್ತಿದ್ದರೂ ಮುಖದ ಮೇಲೆ ಒಸರುವ ಬೆವರನ್ನು ಒರೆಸಿಕೊಂಡು ಬೆಟ್ಟವೇರಲು ಆರಂಭಿಸಿದರೆ ಏನೋ ಹೊಸ ಅನುಭವ.

ಇದು ಕಾರವಾರ ತಾಲ್ಲೂಕಿನ ತೋಡೂರಿನ ‘ಗೋಲಾರಿ’ ಜಲಪಾತಕ್ಕೆ ಸಾಗುವ ದಾರಿಯ ಸಣ್ಣ ಚಿತ್ರಣ. ರಸ್ತೆಯಂಚಿನಿಂದ ಸುಮಾರು ಎರಡು ಕಿಲೋಮೀಟರ್ ದೂರ ಬೆಟ್ಟದ ಏರು ದಾರಿಯಲ್ಲಿ ಕಲ್ಲು, ಬಂಡೆಗಳ ನಡುವೆ ನಡೆದುಕೊಂಡೇ ಹೋಗಬೇಕು. ಹಲವರಿಗೆ ಚಾರಣದ ಅನುಭವ ನೀಡಿದರೆ ಅಚ್ಚರಿಯಿಲ್ಲ.

ದಾರಿಯುದ್ದಕ್ಕೂ ತೊರೆಯ ನೀರು, ಬಂಡೆಗಳ ಮೇಲಿನಿಂದ ಧುಮುಕುವ ಸದ್ದು ಕೇಳುತ್ತಿರುತ್ತದೆ. ನಡೆದು ಸುಸ್ತಾಗಿ ಇನ್ನೇನು ಬಂಡೆಯ ಮೇಲೆ ಕುಳಿತುಕೊಳ್ಳೋಣ ಎಂದುಕೊಳ್ಳುವಷ್ಟರಲ್ಲಿ ಅಂದಾಜು 65 ಅಡಿಗಳ ಎತ್ತರದಿಂದ ಕ್ಷೀರಧಾರೆಯಂತಹ ದೃಶ್ಯಕಾವ್ಯ, ‘ವಿಶ್ರಾಂತಿಯ ಅಗತ್ಯವಿಲ್ಲ, ಬಂಡೆಯ ಬುಡಕ್ಕೇ ಬನ್ನಿ’ ಎಂದು ಕರೆಯುತ್ತದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಇತರ ಜಲಪಾತಗಳಷ್ಟು ‘ಗೋಲಾರಿ’ ಪ್ರಸಿದ್ಧವಾಗಿಲ್ಲ. ಬೆಟ್ಟದ ಮೇಲಿನ ಹಳ್ಳದ ನೀರಿನಿಂದ ಉಂಟಾಗಿರುವ ಇದು, ಮಳೆಗಾಲದಲ್ಲಿ ಮಾತ್ರ ತನ್ನ ಸೌಂದರ್ಯವನ್ನು ಸಾರುತ್ತದೆ. ಉಳಿದ ದಿನಗಳಲ್ಲಿ ಹರಿವು ನಿಲ್ಲಿಸುತ್ತದೆ.

ಪಿಕ್‌ನಿಕ್‌ಗೆ ಸೂಕ್ತ:ಪಿಕ್‌ನಿಕ್ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ. ಪ್ರವಾಸ ಬರುವವರು ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಬರುವುದು ಸೂಕ್ತ. ಜಲಪಾತದ ಸಮೀಪವೇ ಅಂಗಡಿಗಳು, ಮನೆಗಳು, ಹೋಟೆಲ್‌ಗಳಿಲ್ಲ. ಪ್ರಕೃತಿಯ ಪ್ರಶಾಂತ ಮಡಿಲಿನಲ್ಲಿ, ಶುದ್ಧ ನೀರಿನ ಜಲಧಾರೆಗೆ ಮೈಯೊಡ್ಡಿ ಕಾಲ ಕಳೆದು ಅಲ್ಲೇ ವನಭೋಜನ ಮಾಡಲು ಈ ಜಾಗ ಪ್ರಶಸ್ತವಾಗಿದೆ.

ಸ್ವಚ್ಛವಾಗಿಡಿ:ಜೂನ್‌, ಜುಲೈ ಮತ್ತ ಆಗಸ್ಟ್ ತಿಂಗಳ ಆರಂಭದಲ್ಲಿ ಮೈತುಂಬಿ ಹರಿಯುವ ಜಲಧಾರೆಯಲ್ಲಿ ಆಟವಾಡಲು ವಾರಾಂತ್ಯದಲ್ಲಿ ಒಂದಿಷ್ಟು ಪ್ರವಾಸಿಗರು ಬರುತ್ತಾರೆ. ಆದರೆ, ಕೆಲವರು ಪಾರ್ಟಿ, ಮೋಜು– ಮಸ್ತಿ ಮಾಡಿ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಗಾಜಿನ ಸೀಸೆಗಳನ್ನು, ಆಹಾರ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆದು ಬೇಜವಾಬ್ದಾರಿ ತೋರಿದ ನಿದರ್ಶನಗಳು ಜಲಪಾತದ ಬುಡದಲ್ಲಿ ಸಿಗುತ್ತವೆ.

ರೂಟ್‌ ಮ್ಯಾಪ್ ಹೋಗುವುದು ಹೇಗೆ?

‘ಗೋಲಾರಿ’ ಜಲಪಾತವು ಕಾರವಾರದಿಂದ 17 ಕಿ.ಮೀ ದೂರದಲ್ಲಿ ತೋಡೂರು ಗ್ರಾಮದಲ್ಲಿದೆ. ಹುಬ್ಬಳ್ಳಿಯಿಂದ ಕಾರವಾರಕ್ಕೆ ಹಳಿಯಾಳ– ಜೊಯಿಡಾ ಮೂಲಕ 177 ಕಿ.ಮೀ ಆದರೆ, ಯಲ್ಲಾಪುರದ ಮೂಲಕ 169 ಕಿ.ಮೀ ಆಗುತ್ತದೆ. ನಿತ್ಯಹರಿದ್ವರ್ಣ ಕಾಡಿನ ಕೋಟೆಯೊಳಗೆ ಅಚ್ಚ ಹಸಿರಿನ ಗದ್ದೆಗಳ ಅಂಚಿನಲ್ಲಿ ಪ್ರಯಾಣ ಮಾಡಿ, ಕಾಡಿನ ಅಂಚಿನಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಎರಡು ಕಿ.ಮೀ ಚಾರಣ ಮಾಡಬೇಕು.

* ಕಾರವಾರ–ತೋಡೂರು ಕ್ರಾಸ್ (ರಾ.ಹೆ 66ರಲ್ಲಿ ಅಂಕೋಲಾ ಕಡೆ) 14 ಕಿ.ಮೀ– ತೋಡೂರು (ಎಡಕ್ಕೆ) 3 ಕಿ.ಮೀ.
* ಅಂಕೋಲಾ-–ತೋಡೂರು ಕ್ರಾಸ್ (ರಾ.ಹೆ 66ರಲ್ಲಿ ಕಾರವಾರ ಕಡೆ) 21 ಕಿ.ಮೀ–ತೋಡೂರು (ಬಲಕ್ಕೆ) 3 ಕಿ.ಮೀ.

ಬಂಡೆಗಳ ಮೇಲೆ ಎಚ್ಚರಿಕೆ ಅತ್ಯಗತ್ಯ

ಬೆಟ್ಟವೇರುವ ಆರಂಭದಲ್ಲೇ ತೊರೆಯಲ್ಲಿ ದೊಡ್ಡ ಬಂಡೆಗಳಿವೆ. ಅವು ನಯವಾಗಿದ್ದು ಕಾಲಿಟ್ಟರೆ ಜಾರುತ್ತವೆ. ಅತ್ಯಂತ ಎಚ್ಚರಿಕೆಯಿಂದ ಅವುಗಳ ಮೇಲೆ ಹೆಜ್ಜೆಯಿಡಬೇಕು. ಇಲ್ಲದಿದ್ದರೆ ಬಿದ್ದು ಏಟಾಗುವ, ಮೊಬೈಲ್, ಕ್ಯಾಮೆರಾ, ಪರ್ಸ್ ತೋಯುವ ಸಾಧ್ಯತೆಯಿದೆ.

ಜಲಪಾತದ ತುದಿಯು ಕೆಳಭಾಗಕ್ಕೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಅದನ್ನು ನೋಡಲೆಂದು ಕೆಲವು ಯುವಕರು ಬಂಡೆಗಳ ಮೇಲೆ ಹತ್ತುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಾರೆ. ಇದು ಅತ್ಯಂತ ಅಪಾಯಕಾರಿ. ಪಾಚಿಗಟ್ಟಿದ ಬಂಡೆಗಳಲ್ಲಿ ಕಾಲು ಜಾರಿ ಬಿದ್ದರೆ ಜೀವಹಾನಿಯಾಗುವ ಸಾಧ್ಯತೆಯೇ ಅಧಿಕ. ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆಗೆ ಕರೆದುಕೊಂಡು ಬರುವುದೂ ಕಠಿಣ ದಾರಿಯಲ್ಲಿ ಸುಲಭದ ಮಾತಲ್ಲ. ಈ ಎಚ್ಚರಿಕೆಗಳನ್ನು ನೆನಪಿನಲ್ಲಿಟ್ಟುಕೊಂಡರೆ‘ಗೋಲಾರಿ’ ಎಂಬ ಸುಂದರಿಯ ಸೌಂದರ್ಯ ಸದಾ ಸವಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.