ADVERTISEMENT

ಜೀವ ವೈವಿಧ್ಯ ದಿನ: ಕಣ್ಮರೆಯಾಗುತ್ತಿದೆ ಪಾರಂಪರಿಕ ತರಕಾರಿ

‘ಸಮಸ್ಯೆಗಳ ಪರಿಹಾರದಲ್ಲಿ ನಾವೂ ಭಾಗಿಗಳಾಗೋಣ’: ಘೋಷವಾಕ್ಯ

ಗಣಪತಿ ಹೆಗಡೆ
Published 21 ಮೇ 2021, 19:31 IST
Last Updated 21 ಮೇ 2021, 19:31 IST
ಶಿರಸಿಯ ಗ್ರಾಮೀಣ ಭಾಗದ ಕೃಷಿಕರೊಬ್ಬರು ಸಾವಯವ ಪದ್ಧತಿ ಮೂಲಕ ತರಕಾರಿ ಬೆಳೆಸುತ್ತಿರುವುದು
ಶಿರಸಿಯ ಗ್ರಾಮೀಣ ಭಾಗದ ಕೃಷಿಕರೊಬ್ಬರು ಸಾವಯವ ಪದ್ಧತಿ ಮೂಲಕ ತರಕಾರಿ ಬೆಳೆಸುತ್ತಿರುವುದು   

ಶಿರಸಿ: ‘ಸಮಸ್ಯೆಗಳ ಪರಿಹಾರದಲ್ಲಿ ನಾವೂ ಭಾಗಿಗಳಾಗೋಣ’ ಘೋಷವಾಕ್ಯದಡಿ ಈ ವರ್ಷದ ಜೀವ ವೈವಿಧ್ಯ ದಿನಾಚರಣೆ ಶನಿವಾರ (ಮೇ 22) ನಡೆಯಲಿದೆ. ಈ ಹೊತ್ತಿನಲ್ಲಿ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಪಾರಂಪರಿಕ ತರಕಾರಿ, ಕರಾವಳಿ ಭಾಗದಲ್ಲಿ ಮತ್ಸ್ಯ ಸಂತತಿ ಉಳಿವಿನ ವಿಚಾರವೂ ಮುನ್ನಲೆಗೆ ಬಂದಿದೆ.

ಈ ಭಾಗದಲ್ಲಿ ಸವತೆಕಾಯಿ, ಕುಂಬಳಕಾಯಿ, ಹೀರೆಕಾಯಿ ಸೇರಿ ನೂರೈವತ್ತಕ್ಕೂ ಹೆಚ್ಚು ಪಾರಂಪರಿಕ ತರಕಾರಿ ತಳಿಗಳು ಜನರ ಆರೋಗ್ಯ ಜೀವನಕ್ಕೆ ಕೊಡುಗೆ ನೀಡಿದ್ದವು. ಮನೆ ಅಂಗಳ, ಗದ್ದೆಯ ತುಂಡುಭಾಗದಲ್ಲಿ ಬೆಳೆಯುತ್ತಿದ್ದ ಹಲವು ತರಕಾರಿ ತಳಿ ಈಚಿನ ವರ್ಷಗಳಲ್ಲಿ ಕಣ್ಮರೆಯಾಗಿವೆ ಎನ್ನುತ್ತಿದೆ ತಜ್ಞರ ಅಧ್ಯಯನ ವರದಿ.

ಹೇರಳ ವಿಟಮಿನ್, ಕಬ್ಬಿಣದ ಅಂಶಗಳಿರುತ್ತಿದ್ದ ಸೊಪ್ಪು, ತರಕಾರಿಯನ್ನು ಬೆಳೆಯುವ ರೈತರ ಸಂಖ್ಯೆ ಇಳಿಕೆಯಾಗುತ್ತಿರುವ ಬಗ್ಗೆ 2018–19ರಲ್ಲಿ ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಉತ್ತರ ಕನ್ನಡ, ಶಿವಮೊಗ್ಗದ 8 ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿದ್ದರು. ಈ ವೇಳೆ ಪೌಷ್ಟಿಕಾಂಶ ಒದಗಿಸುತ್ತಿದ್ದ ತರಕಾರಿಗಳ ಬೆಳೆಯುವಿಕೆ ಪ್ರಮಾಣ ಶೇ.40ಕ್ಕಿಂತ ಕಡಿಮೆ ಆಗಿದ್ದು ಬೆಳಕಿಗೆ ಬಂದಿತ್ತು. ಒಂದು ಕಾಲದಲ್ಲಿ ಸ್ವಾವಲಂಬಿಗಳಾಗಿದ್ದ ಹಳ್ಳಿ ಜನ ಒಂದೂವರೆ ದಶಕದಿಂದ ಈಚೆಗೆ ತರಕಾರಿ ಖರೀದಿಗೆ ಹತ್ತು ಪಟ್ಟು ಹೆಚ್ಚು ವೆಚ್ಚ ಮಾಡುವದು ಸ್ಪಷ್ಟವಾಗಿತ್ತು.

ADVERTISEMENT

‘ಎರಡೂವರೆ ದಶಕದಿಂದ ಈಚೆಗೆ ನೂರೈವತ್ತಕ್ಕೂ ಹೆಚ್ಚು ಪಾರಂಪರಿಕ ತರಕಾರಿ ಬೆಳೆ ನಶಿಸುವ ಹಂತಕ್ಕೆ ಬಂದಿದೆ. ಇವುಗಳು ಹೇರಳ ಪ್ರಮಾಣದ ಪೋಷಕಾಂಶ, ಖನಿಜಾಂಶ ಮತ್ತು ಕಬ್ಬಿಣದ ಅಂಶವನ್ನು ದೇಹಕ್ಕೆ ಒದಗಿಸುತ್ತಿದ್ದವು. ಇವುಗಳ ಲಭ್ಯತೆಯ ಬದಲು ರಾಸಾಯನಿಕಯುಕ್ತ ತರಕಾರಿ ಬಳಕೆ ಹೆಚ್ಚಿದ ಪರಿಣಾಮ ರೋಗನಿರೋಧಕ ಶಕ್ತಿ ಕುಗ್ಗುವುದು ಸಹಜವಾಗುತ್ತಿದೆ’ ಎನ್ನುತ್ತಾರೆ ಕೇಶವ
ಕೊರ್ಸೆ.

‘ಬೆಳೆದು ತಿನ್ನುವ ಬದಲು ಹಳ್ಳಿಗಳಲ್ಲೂ ಕೊಂಡುಕೊಳ್ಳುವ ಪರಿಪಾಟ ಹೆಚ್ಚಿದ್ದೇ ಸಾವಯವ ಬೆಳೆಗಳು ವಿನಾಶದ ಅಂಚಿಗೆ ತಲುಪಲು ಕಾರಣ. ನಗರ ವಲಸೆ ಸಂಸ್ಕೃತಿ, ಶ್ರಮಜೀವನ ಮರೆಯಾಗಿದ್ದು ಇನ್ನೊಂದು ಕಾರಣವಿರಬಹುದು’ ಎಂದು ಹೇಳಿದರು. ‘ಸಾವಯವ
ಪದ್ಧತಿಯ ಮೂಲಕ ಪಾರಂಪರಿಕ ಕೃಷಿಗೆ ಒತ್ತು ನೀಡಿದರೆ ಪೋಷಕಾಂಶದ ಜತೆಗೆ ಜೀವವೈವಿಧ್ಯ ರಕ್ಷಣೆಯೂ ಸಾಧ್ಯ. ಇದಕ್ಕಾಗಿ ಗ್ರಾಮ ಮಟ್ಟದ ಜೀವವೈವಿಧ್ಯ ನಿರ್ವಹಣಾ ಸಮಿತಿ ಮೂಲಕವೂ ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದು ಪ್ರತಿಪಾದಿಸಿದರು.

***

ಪಶ್ಚಿಮ ಕರಾವಳಿಯಲ್ಲಿ ಸೇವನೆಗೆ ಯೋಗ್ಯವಿದ್ದ 180 ರಷ್ಟು ಮೀನುಗಳ ಪೈಕಿ ಅವೈಜ್ಞಾನಿಕ ಮೀನುಗಾರಿಕೆ, ಸಮುದ್ರ ಮಾಲಿನ್ಯದಿಂದ 15ಕ್ಕೂ ಹೆಚ್ಚು ಮತ್ಸ್ಯ ಸಂತತಿ ಕ್ಷೀಣಿಸಿದೆ.

- ಡಾ.ವಿ.ಎನ್.ನಾಯಕ, ಜೀವವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.