ADVERTISEMENT

ರುದ್ರ ರಮಣೀಯ ಲಡಾಖ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 19:30 IST
Last Updated 6 ಆಗಸ್ಟ್ 2022, 19:30 IST
ಮಂಜುಗಟ್ಟಿದ ಫುಕಟಲ್‌ ನದಿನ ನೋಟ
ಮಂಜುಗಟ್ಟಿದ ಫುಕಟಲ್‌ ನದಿನ ನೋಟ   

ಲೇಹ್, ಲಡಾಖ್‌ನ ರಾಜಧಾನಿ. ತಾಪಮಾನ ಬಹುಶಃ ಐದು ಡಿಗ್ರಿ ಸೆಲ್ಸಿಯಸ್! ನಮ್ಮ ಜೀವಮಾನದಲ್ಲಿಯೇ ಅಂಥ ಚಳಿಯನ್ನು ನಾವು ಅನುಭವಿಸಿರಲಿಲ್ಲ! ಮೈಕೈ ಎಲ್ಲ ಮರಗಟ್ಟಿ ಹೋಗಿತ್ತು. ಸರಿ, ಹೋದದಿನ ವಸತಿಗೃಹದಲ್ಲಿ ವಿರಮಿಸಿದೆವು.

ನಾವು ದೆಹಲಿಯಿಂದ ಲೇಹ್ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಾಗ ಬೆಳಗಿನ ಜಾವ ಆರು ಗಂಟೆ. ಲೇಹ್, ಲಡಾಖ್‌ನ ರಾಜಧಾನಿ. ತಾಪಮಾನ ಬಹುಶಃ ಐದು ಡಿಗ್ರಿ ಸೆಲ್ಸಿಯಸ್! ನಮ್ಮ ಜೀವಮಾನದಲ್ಲಿಯೇ ಅಂಥ ಚಳಿಯನ್ನು ನಾವು ಅನುಭವಿಸಿರಲಿಲ್ಲ! ಮೈಕೈ ಎಲ್ಲ ಮರಗಟ್ಟಿ ಹೋಗಿತ್ತು. ಸರಿ, ಹೋದದಿನ ವಸತಿಗೃಹದಲ್ಲಿ ವಿರಮಿಸಿದೆವು.

ಲಡಾಖ್ ಸಮುದ್ರ ಮಟ್ಟದಿಂದ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ. ನಮ್ಮ ಉಸಿರಾಟದಲ್ಲಿ ತುಸು ಲಯ ಕಡಿಮೆ ಆಗುವುದಾದರೂ ಪ್ರಾಣಾಯಾಮ ಮಾಡುವುದರಿಂದ ಓಡಾಟ ಸರಾಗವಾಗುತ್ತದೆ. ಲೇಹ್, ಬಹುರಮ್ಯ ಸ್ಥಳ. ನೀಲ ಆಗಸ, ಬೆಳ್ಳಿ ಮೋಡ, ಪಕ್ಕದಲ್ಲಿ ಬೆಟ್ಟ ಗುಡ್ಡಗಳ ಸಾಲು, ನೋಡಲು ಬಲು ಚೆನ್ನ.

ADVERTISEMENT

ಮಾರನೆಯ ದಿನ ನಮ್ಮ ಲಡಾಖ್ ಪ್ರವಾಸದ ಆರಂಭ. ಸನಿಹದಲ್ಲಿ ಶಾಂತಿ ಸ್ತೂಪ ಎಂಬ ಸುಂದರವಾದ ಬುದ್ಧ ವಿಹಾರವಿದೆ. ಇದನ್ನು ಬುದ್ಧ ಅವತರಿಸಿದ 2500 ವರ್ಷಗಳ ನೆನಪಿಗಾಗಿ 1991ರಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ಸುತ್ತಲೂ ಕಣ್ಣು ಹಾಯಿಸಿದರೆ ಲೇಹ್ ನಗರವು ಬಹು ಸುಂದರವಾಗಿ ಕಾಣಿಸುತ್ತದೆ. ಶುಭ್ರವಾದ ಗಾಳಿ, ಹಿತಕರ ವಾತಾವರಣ ಮನಸ್ಸಿಗೆ ತುಂಬಾ ಮುದ ನೀಡುತ್ತವೆ. ಬುದ್ಧನಮೂರ್ತಿ ಬಹು ಎತ್ತರ ಮತ್ತು ಭವ್ಯವಾಗಿದೆ. ಆತನ ಕರುಣೆ, ವಾತ್ಸಲ್ಯ ಸುಂದರ ಮುಖದಲ್ಲಿ ಎದ್ದು ಕಾಣಿಸುತ್ತವೆ.

ಎರಡನೆಯ ದಿನ ತುಸು ದೂರವಿರುವ ಇನ್ನೊಂದು ಬುದ್ಧ ವಿಹಾರದ ದರ್ಶನ. ಸಾಮಾನ್ಯವಾಗಿ ಎಲ್ಲ ಬುದ್ಧ ವಿಹಾರಗಳು ಒಂದೇ ತೆರನಾಗಿರುತ್ತವೆ. ಮತ್ತೆ ಎಲ್ಲವೂ ಬೆಟ್ಟಗಳ ಮೇಲೆಯೇ ಇರುತ್ತವೆ. ನಮ್ಮ ಮೂರನೆಯ ದಿನದ ಪ್ರವಾಸ ಖಾರ್ ದೂಂಗ್ ಲಾ ಪಾಸ್ ಮುಖಾಂತರ ಶುರುವಾಯಿತು. ಅತ್ಯಂತ ಕಡಿದಾದ ಬೆಟ್ಟವನ್ನು ಸೀಳಿ, ಬಗೆದು ರಸ್ತೆ ಮಾಡಿದ್ದಾರೆ. ಇದು ತುಸು ಅಪಾಯಕಾರಿ ಪ್ರಯಾಣ. ಸುಮಾರು ನೂರೈವತ್ತು ಮೈಲಿ ದೂರ ಹೋಗಲು ಆರು ಗಂಟೆ ಬೇಕು! ಎಲ್ಲ ಮಣ್ಣಿನ ರಸ್ತೆ. ಎದುರಿಗೆ ಬರುವ ವಾಹನಗಳು, ಮೋಟಾರ್ ಬೈಕ್ ಸವಾರರು ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದು ಚಾಲಕನ ಅನುಭವ ಮತ್ತು ಚಾಕಚಕ್ಯತೆಯನ್ನು ಅವಲಂಬಿಸಿದೆ!

ಕೆಳಗಿನಿಂದ ಮೇಲಕ್ಕೇರುವಾಗ ಆ ಹೆಬ್ಬಾವಿನ ರಸ್ತೆಗಳನ್ನು ನೋಡುವುದೇ ಒಂದು ಸೊಗಸು. ನಂತರ ತುಟ್ಟ ತುದಿಗೆ ಬಂದು ನಿಂತಾಗ ಕೆಳಗೆ ನೋಡಲು ಎದೆ ಝಲ್ ಎನ್ನುತ್ತದೆ. ಅಷ್ಟು ರೌದ್ರ ಮತ್ತು ಭಯಾನಕ ಆ ದೃಶ್ಯ. ಸುತ್ತಲೂ ದೈತ್ಯಾಕಾರವಾಗಿ ನಿಂತ ಪರ್ವತಗಳ ಸಾಲು. ಅಲ್ಲಲ್ಲಿ ಹಿಮಾಚ್ಛಾದಿತ ಸುಂದರ ದೃಶ್ಯ. ನಿಜಕ್ಕೂ ಅದು ತುಂಬಾ ರೋಮಾಂಚನಕಾರಿ ಅನುಭವ!

ಚಾಂಗ್ಲಾ ಪಾಸ್ ಎಂಬುದು ಲಡಾಖ್ ಭಾಗದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಬೆಟ್ಟದ ತುದಿ. ಇದು ಸಮುದ್ರ ಮಟ್ಟದಿಂದ ಸುಮಾರು ಹದಿನೇಳು ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ದೆಹಲಿ, ಜಮ್ಮು ಮತ್ತು ಕಾಶ್ಮೀರದಿಂದ ಮೋಟಾರ್ ಬೈಕ್ ಸವಾರರು ಬರುತ್ತಾರೆ. ಇಲ್ಲಿನ ಬೈಕ್‌ ಸವಾರಿ ಬಹು ಸಾಹಸಿ ಮತ್ತು ರೋಮಾಂಚಕಾರಿ ಅನುಭವ. ಚಾಂಗ್ ಲಾ ಪಾಸ್ ಬೆಟ್ಟದ ತುದಿ ಮುಟ್ಟಿದರೆ ಅವರಿಗೆ ಎವರೆಸ್ಟ್ ಶಿಖರ ಏರಿದಂತೆ! ಅವರ ಧೈರ್ಯ, ಸಾಹಸ ಮೆಚ್ಚುವಂಥದ್ದು.

ನಮ್ಮ ಮುಂದಿನ ಪ್ರಯಾಣ ಸಿಂಧೂ ನದಿ ಮತ್ತು ಝನ್ಸ್ಕಾರ್ ನದಿಗಳ ಸಂಗಮ ತಾಣ. ಚಿಕ್ಕವರಿದ್ದಾಗ ಸಿಂಧೂ ನದಿಯ ಸಂಸ್ಕೃತಿಯ ಮತ್ತು ಮೊಹೆಂಜೋದಾರೊ ಮತ್ತು ಹರಪ್ಪ ಕುರಿತು ಓದಿದ್ದೆವು. ಸಿಂಧೂ ಕೈಲಾಸ ಮಾನಸ ಸರೋವರದಲ್ಲಿ ಜನಿಸಿ ಕೆಳಗೆ ಹರಿದು ಬರುತ್ತಾಳೆ. ಪಚ್ಚೆ ಹಸುರಿನ ಸೀರೆಯುಟ್ಟು ನಮ್ಮ ಸಿಂಧೂ ಬರುವುದನ್ನು ಒಮ್ಮೆಯಾದರೂ ನೋಡಬೇಕು. ಆ ರಮ್ಯ, ವಿಹಂಗಮ ದೃಶ್ಯ ಅಪ್ರತಿಮ! ಮತ್ತೆ ಎದುರು ದಿಕ್ಕಿನಿಂದ ನೂರೈವತ್ತು ಮೈಲಿ ದೂರದಿಂದ ಮಣ್ಣಿನ ಮಗಳಾದ ಝನ್ಸ್ಕಾರ್ ಇಳಿದು ಬರುತ್ತಾಳೆ. ಸಿಂಧೂ ಮತ್ತೆ ಝಾನ್ಸ್ಕಾರ್ ಇಬ್ಬರೂ ಸಂಗಮಿಸಿ ಮುಂದೆ ಪಾಕಿಸ್ತಾನಕ್ಕೆ ತೆರಳುತ್ತಾರೆ.

ಮುಂದಿನ ಪ್ರಯಾಣ ಪ್ಯಾಂಗಾಂಗ್‌ ಸರೋವರ. ನಾವಲ್ಲಿ ತಲುಪಿದಾಗ ಸಂಜೆ ನಾಲ್ಕು ಗಂಟೆ. ಮೈ ಕೈ ಎಲ್ಲ ಸೆಟೆದು ನಿಂತಿದ್ದವು. ಅಂಥ ಭೀಕರ ಚಳಿ. ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ ಮಾತ್ರ! ನಮ್ಮ ಕಾರು ಚಾಲಕ ಮೊದಲೇ ನಮ್ಮನ್ನು ಎಚ್ಚರಿಸಿದ್ದ. ಬೆಚ್ಚಗಿರಿ, ಕೈಗೆ ಗ್ಲೌಸ್ ಹಾಕಿಕೊಳ್ಳಿ ಎಂದು. ಪ್ಯಾಂಗಾಂಗ್‌ ಸರೋವರದ ದಡದಲ್ಲಿ ನಿಂತು ನೋಡಿದರೆ ಅದೆಂಥ ವಿಸ್ಮಯ. ಅತಿ ಶುಭ್ರವಾದ ನೀರು. ಒಂದಿನಿತೂ ಕಲ್ಮಶ ಇಲ್ಲ. ಸುತ್ತಲೂ ಮೇಘಾಚ್ಛಾದಿತ ಶಿಖರಗಳ ಸಾಲು. ತುಂಬು ಸರೋವರ. ನೀರನ್ನು ಮುಟ್ಟಿ ನೋಡಿದರೆ ಶಾಕ್ ಹೊಡೆದಂತಾಯಿತು. ನಮ್ಮ ಬೆರಳು ಕಳಚಿಹೋಯಿತೇ ಎಂದು ಗಾಬರಿ ಆಯಿತು. ಮೇಲೆ ತಣ್ಣಗಿನ ಗಾಳಿ, ಇಬ್ಬನಿಯ ಹನಿ. ಆಗ ನನಗೆ ಅನಿಸಿದ್ದು, ಬಹುಶಃ ಪಾಂಡವರು ವನವಾಸದಲ್ಲಿ ಬಾಯಾರಿಕೆ ತಣಿಸಿಕೊಳ್ಳಲು ಈ ಪ್ಯಾಂಗಾಂಗ್‌ ಸರೋವರಕ್ಕೆ ಬಂದಿದ್ದರು, ಯಕ್ಷನ ಪ್ರಶ್ನೆಗೆ ಉತ್ತರಿಸಲಾಗದೆ ಮೂರ್ಛೆ ಹೋದರು ಎಂದು!

ಈ ಪ್ಯಾಂಗಾಂಗ್‌ ಸರೋವರದ ದಡದಲ್ಲಿ ‘ತ್ರಿ ಈಡಿಯಟ್ಸ್’ ಸಿನಿಮಾದ ಕೊನೆಯ ದೃಶ್ಯ ಚಿತ್ರೀಕರಣ ನಡೆದಿದೆ. ಮತ್ತು ‘ಜಾನ್ ಹೈ ತೋ ಜಹಾನ್ ಹೈ’ ಚಿತ್ರೀಕರಣ ಕೂಡ ಆಗಿದೆ. ರಾತ್ರಿ ಅಲ್ಲಿನ ವಸತಗೃಹದಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ತಾಪಮಾನ ಮೈನಸ್ ಎರಡು ಡಿಗ್ರಿ ಸೆಲ್ಸಿಯಸ್‌. ಎಷ್ಟು ರಜಾಯಿ ಹೊದ್ದು ಮಲಗಿದರೂ ಚಳಿ ಗಾಳಿ ನುಸುಳಿ ಬರುತ್ತಿತ್ತು. ಅದು ನಿಜಕ್ಕೂ ಯಾತನೀಯ. ಆದರೆ, ಮನುಷ್ಯ ಜೀವನದಲ್ಲಿ ಒಂದು ರಾತ್ರಿ ಇಲ್ಲಿ ಕಳೆಯಬೇಕು. ನಿಸರ್ಗದ ಮಡಿಲಲ್ಲಿ ಮಲಗಿ ಅನುಭವ ಪಡಬೇಕು. ಅದೊಂದು ಮರೆಯಲಾಗದ ರಾತ್ರಿ. ಆದರೆ ಅಲ್ಲಿನ ಹೋಟೆಲ್ ಸಿಬ್ಬಂದಿ ಅಂಥ ಚಳಿಯನ್ನೂ ಲೆಕ್ಕಿಸದೆ ನಮಗೆ ಆತಿಥ್ಯ ನೀಡಿದರು. ಅವರಿಗೆಲ್ಲ ನಾವು ಚಿರಋಣಿ.

ಅಲ್ಲಿಂದ ಮುಂದೆ ನಮ್ಮ ಪಯಣ ನುಬ್ರಾ ಪಟ್ಟಣದ ಕಡೆಗೆ. ಅಲ್ಲಿಯ ಒಂಟೆ ಸವಾರಿ ಬಹಳ ಪ್ರಸಿದ್ಧ. ಅಲ್ಲಿಯ ಒಂಟೆಗಳು ಜೋಡಿ ಡುಬ್ಬ ಹೊಂದಿವೆ. ಮುಂದೆ ಲೇಹ್ ನಗರಕ್ಕೆ ಮರಳಿ ಬಂದು ಮಾರುಕಟ್ಟೆಗೆ ಹೋಗಿದ್ದೆವು. ಇಲ್ಲಿನ ಡ್ರೈ ಫ್ರೂಟ್ಸ್ ತುಂಬಾ ಪ್ರಸಿದ್ಧ. ಲಡಾಖ್ ಜನರು ಸ್ನೇಹಪರರು ಮತ್ತು ಒಳ್ಳೆಯ ಆತಿಥ್ಯ ನೀಡುವವರು. ಎಲ್ಲ ಕಡೆ ಬೌದ್ಧರೆ ಹೆಚ್ಚು.

ತುರ್ ತುಕ್ ಎಂಬ ಹಳ್ಳಿಗೂ ನಾವು ಹೋಗಿದ್ದೆವು. ಅದು ನಮ್ಮ ದೇಶದ ಕೊನೆಯ ಹಳ್ಳಿ. ಅಲ್ಲಿಂದ ನಾವು ಪಾಕಿಸ್ತಾನವನ್ನು ಕಾಣಬಹುದು, ದುರ್ಬೀನು ಮೂಲಕ. 1971ರ ಪಾಕಿಸ್ತಾನ ಯುದ್ಧದಲ್ಲಿ ಎರಡು ಹಳ್ಳಿಗಳು ಬೇರೆ ಬೇರೆ ಆದವು.
ಒಂದು ಪಾಕಿಸ್ತಾನದಲ್ಲಿ ಫಾರ್ನು, ಇನ್ನೊಂದು ಭಾರತದಲ್ಲಿ ತಾಂಗ್. ಅವಳಿ ಗ್ರಾಮಗಳು. ಅಲ್ಲಿ ಒಂದು ಬೋರ್ಡ್ ಹಾಕಿದ್ದಾರೆ. ಪತಿ ಒಂದು ಕಡೆ, ಪತ್ನಿ ಒಂದು ಕಡೆ, ತಂದೆ ತಾಯಿ ಒಂದು ಕಡೆ, ಮಕ್ಕಳು ಒಂದು ಕಡೆ. ಹೀಗೆ ದೇಶದ ಜತೆ ಕುಟುಂಬಗಳೂ ವಿಭಜನೆಯಾಗಿವೆ. ಹೀಗೆ ಇರುವಾಗ ನಮ್ಮಲ್ಲಿ ಒಂದು ಪ್ರಶ್ನೆ ಕಾಡುತ್ತದೆ. ಯುದ್ಧದಲ್ಲಿ ಗೆದ್ದವರು ಯಾರು? ಯಾರೂ ಇಲ್ಲ. ಸೋತವರು, ಸತ್ತವರು ಅಮಾಯಕರು ಮಾತ್ರ.
ಬೇರೆಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಹೋಲಿಸಿದರೆ ಲಡಾಖ್‌ ಯಾನ ಬಹು ಸಾಹಸಿ ಮತ್ತು ರೋಮಾಂಚಕಾರಿ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.