ADVERTISEMENT

ಹಣ್ಣುಗಳ ರಾಜನ ಹಿನ್ನೆಲೆ...

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:30 IST
Last Updated 14 ಡಿಸೆಂಬರ್ 2019, 19:30 IST
ಮಾವಿನ ಹಣ್ಣು
ಮಾವಿನ ಹಣ್ಣು   

ಮಾವಿನ ಹಣ್ಣು ಇಷ್ಟವಾಗದ ಭಾರತೀಯರನ್ನು ಹುಡುಕುವುದು ಬಹಳ ಕಷ್ಟ. ರುಚಿಯಾದ ತಿರುಳು ಇರುವ ಈ ಹಣ್ಣನ್ನು ಇಷ್ಟಪಡದೆ ಇರುವುದು ಹೇಗೆ ತಾನೇ ಸಾಧ್ಯ?! ಮಾವು ಇನ್ನೂ ಕಾಯಿಯಾಗಿರಲಿ ಅಥವಾ ಹಣ್ಣಾಗಿರಲಿ, ಭಾರತದಲ್ಲಿ ಅದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಉಪ್ಪಿನಕಾಯಿ, ಚಟ್ನಿ, ಜ್ಯೂಸ್‌ ಸೇರಿದಂತೆ ಬಾಯಲ್ಲಿ ನೀರೂರಿಸುವ ಹತ್ತು ಹಲವು ಖಾದ್ಯ–ಪೇಯಗಳನ್ನು ಮಾಡಲು ಮಾವು ಬೇಕು.

ಮಾವುಗಳ ಮೂಲ ಇರುವುದು ಪೂರ್ವ ಏಷ್ಯಾದಲ್ಲಿ ಎನ್ನಲಾಗಿದೆ. ಆದರೆ ಭಾರತದಲ್ಲಿಯಂತೂ ಮಾವುಗಳನ್ನು ಸಾವಿರಾರು ವರ್ಷಗಳಿಂದ ಬೆಳೆಯಲಾಗುತ್ತಿದೆ. ವಿಶ್ವದಲ್ಲಿ ಬೆಳೆಯಲಾಗುವ ಮಾವಿನ ಪ್ರಮಾಣದಲ್ಲಿ ಭಾರತದ ಪಾಲು ಶೇಕಡ 59ರಷ್ಟು. ಆ ಮೂಲಕ ವಿಶ್ವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯುವ ದೇಶ ಎನ್ನುವ ಖ್ಯಾತಿಯನ್ನು ಭಾರತ ಪಡೆದುಕೊಂಡಿದೆ.

ಭಾರತದಲ್ಲಿ ಅಂದಾಜು ಒಂದು ಸಾವಿರ ಮಾವಿನ ವಿಧಗಳು ಇವೆ. ಪ್ರತೀ ವಿಧದ ಮಾವು ಕೂಡ ತನ್ನದೇ ಆದ ರುಚಿ ಹೊಂದಿದೆ. ಅದಕ್ಕೆ ಕಾರಣ ಆ ಮಾವು ಬೆಳೆಯುವ ಪ್ರದೇಶ. ಮಾವನ್ನು ಪೋರ್ಚುಗೀಸರು ಆಫ್ರಿಕಾ ಮತ್ತು ಬ್ರೆಜಿಲ್‌ನತ್ತ ಒಯ್ದರು. ಇಂದು ಮಾವುಗಳನ್ನು ಜಗತ್ತಿನಲ್ಲಿ ಬೆಚ್ಚಗಿನ ವಾತಾವರಣ ಇರುವ ಎಲ್ಲೆಡೆಯೂ ಬೆಳೆಯಲಾಗುತ್ತದೆ.

ADVERTISEMENT

ತಮಿಳಿನ ‘ಮಂಗಾಯ್’ ಎನ್ನುವ ಪದದಿಂದ ಮಾವು ಎನ್ನುವ ಹೆಸರು ಬಂದಿದೆ. ಉತ್ತರ ಭಾರತದಲ್ಲಿ ಮಾವನ್ನು ‘ಆಮ್’ ಎಂದು ಕರೆಯುತ್ತಾರೆ. ‘ಆಮ್’ ಪದದ ಮೂಲ ಇರುವುದು ಸಂಸ್ಕೃತದಲ್ಲಿ.

ಚೌಂನ್ಸಾ, ದಶೇರಿ, ಲಂಗ್ರಾ, ಕೇಸರ್, ಹಿಮಸಾಗರ್, ಆಲ್ಫನ್ಸೊ, ಬಂಗನಪಲ್ಲಿ ಮತ್ತು ತೋತಾಪುರಿ ಭಾರತದಲ್ಲಿ ಜನಪ್ರಿಯವಾಗಿರುವ ಕೆಲವು ವಿಧಗಳು. ಮಾವಿನ ಮರ ಅಂದಾಜು 15 ಮೀಟರ್‌ಗಳಷ್ಟು ಎತ್ತರ ಬೆಳೆಯುತ್ತದೆ. ಇದು ಸದಾ ಹಸಿರೆಲೆಗಳನ್ನು ಹೊದ್ದಿರುತ್ತದೆ.

ರಸಭರಿತವಾದ ಈ ಹಣ್ಣು ತಿನ್ನಲು ರುಚಿಯಷ್ಟೇ ಅಲ್ಲ, ಇದು ಪೌಷ್ಟಿಕಾಂಶಗಳ ಆಗರ ಕೂಡ. ಪೊಟ್ಯಾಸಿಯಂ, ಕ್ಯಾಲ್ಷಿಯಂ, ಫಾಸ್ಪರಸ್ ಮತ್ತು ಕಾರ್ಬೊಹೈಡ್ರೇಟ್‌ಗಳು ಇದರಲ್ಲಿ ಇವೆ.

ಸುದರ್ಶನ

ಇದು ಮಹಾವಿಷ್ಣುವಿನ ಅಸ್ತ್ರ. ವಿಶ್ವಕರ್ಮನ ಪುತ್ರಿ ಸಂಜನಾ ಸೂರ್ಯನನ್ನು ಮದುವೆ ಆಗಿದ್ದಳು. ಆದರೆ ಆತನ ತಾಪವನ್ನು ಭರಿಸಲು ಆಕೆಯಿಂದ ಆಗದಾಯಿತು. ಹಾಗಾಗಿ, ಮಗಳು ಅನುಭವಿಸುತ್ತಿದ್ದ ತಾಪವನ್ನು ತಗ್ಗಿಸಲು ವಿಶ್ವಕರ್ಮನು, ಸೂರ್ಯಯನ್ನು ತಿರುಗುವ ಯಂತ್ರದಲ್ಲಿ ಹಾಕುತ್ತಾನೆ. ತಿರುಗುವ ಪ್ರಕ್ರಿಯೆಯಲ್ಲಿ ಸೃಷ್ಟಿಯಾದ ದೂಳಿನಿಂದ ವಿಶ್ವಕರ್ಮನು ಸುದರ್ಶನ ಚಕ್ರ, ಪುಷ್ಪಕ ಎನ್ನುವ ರಥ, ಈಟಿ ಹಾಗೂ ತ್ರಿಶೂಲವನ್ನು ಸಿದ್ಧಪಡಿಸಿದ.

ಈಟಿಯನ್ನು ಅಸ್ತ್ರವಾಗಿ ಸುಬ್ರಹ್ಮಣ್ಯನಿಗೆ, ತ್ರಿಶೂಲವನ್ನು ಶಿವನಿಗೆ ನೀಡಿದ. ಸುದರ್ಶನ ಚಕ್ರವನ್ನು ವಿಷ್ಣುವಿಗೆ ನೀಡಿದ. ವಿಷ್ಣು ಈ ಚಕ್ರವನ್ನು ಬಳಸಿ ಶತ್ರುಗಳನ್ನು ಸಂಹರಿಸಿದ.

ಮಿದುಳಿನ ಕ್ರಿಯೆ

ಹಾರ್ವರ್ಡ್‌ ವಿಶ್ವವಿದ್ಯಾಲದ ಮನಃಶಾಸ್ತ್ರಜ್ಞರಾದ ವಿಲಿಯಂ ಜೇಮ್ಸ್‌ ಮತ್ತು ಬೋರಿಸ್ ಸಿದಿಸ್ ಅವರು, ‘ಮನುಷ್ಯರು ತಮ್ಮ ಮಿದುಳಿನ ಶೇಕಡ 10ರಷ್ಟನ್ನು ಮಾತ್ರ ಬಳಸಿಕೊಳ್ಳುತ್ತಾರೆ’ ಎಂದು 1890ರಲ್ಲಿ ಪ್ರತಿಪಾದಿಸಿದರು. ಈ ಪ್ರತಿಪಾದನೆಯು 20ನೆಯ ಶತಮಾನದ ಉದ್ದಕ್ಕೂ ಚಾಲ್ತಿಯಲ್ಲಿ ಇತ್ತು. ಆದರೆ ಆಧುನಿಕ ಸಂಶೋಧನೆಗಳು ಈ ಮಾತು ಸುಳ್ಳು ಎಂದು ಹೇಳಿವೆ. ಮಿದುಳಿನ ಎಲ್ಲ ಭಾಗಗಳೂ ಯಾವಾಗಲೂ ಸಕ್ರಿಯವಾಗಿ ಇರುತ್ತವೆ ಎಂದು ಆಧುನಿಕ ವಿಜ್ಞಾನ ಹೇಳಿದೆ. ನಿರ್ದಿಷ್ಟ ಸಂದರ್ಭಗಳಲ್ಲಿ ಕೆಲವು ಭಾಗಗಳು ಇತರರ ಭಾಗಗಳಿಗಿಂತ ಹೆಚ್ಚು ಸಕ್ರಿಯವಾಗಿ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.