ADVERTISEMENT

ಈ ಗುಡ್ಡದ ಸಸಿಗೆ ಗಡಿನಾಡು ಕಾಸರಗೋಡು ಸೊಗಡು

ಐವರು ಸಸ್ಯವಿಜ್ಞಾನಿಗಳ ತಂಡದಿಂದ ಪತ್ತೆ; ಅನಂತಪುರದ ಹೆಸರನ್ನೇ ನೀಡಿದ ಸಂಶೋಧಕರು

ವಿಕ್ರಂ ಕಾಂತಿಕೆರೆ
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಅನಂತಪುರ ದೇವಸ್ಥಾನದ ಆಸುಪಾಸಿನಲ್ಲಿ ಪತ್ತೆಯಾದ ಹೊಸ ತಳಿಯ ಸಸಿ
ಅನಂತಪುರ ದೇವಸ್ಥಾನದ ಆಸುಪಾಸಿನಲ್ಲಿ ಪತ್ತೆಯಾದ ಹೊಸ ತಳಿಯ ಸಸಿ   

ಬೆಂಗಳೂರು: ಕಾಸರಗೋಡಿನ ಕುಂಬಳೆ ಸಮೀಪದ ಅನಂತಪುರದಲ್ಲಿ ಮಾತ್ರ ಕಾಣಸಿಗುವ, ಕರಿಕಲ್ಲು ಬಂಡೆ ಮೇಲೆ ಬೆಳೆಯುವ ಜಾತಿಯ ವಿಶಿಷ್ಟ ಸಸಿಯೊಂದು ಪತ್ತೆಯಾಗಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದ ಗುಡ್ಡದ ಸಸಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಐವರ ತಂಡ ಇದನ್ನು ಪತ್ತೆ ಮಾಡಿದ್ದು ನ್ಯೂಜಿಲೆಂಡ್‌ನ ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ ‘ಫೈಟೋಟಾಕ್ಸಾ’ದಲ್ಲಿ ಎರಡು ದಿನಗಳ ಹಿಂದೆ ಇದರ ಮಾಹಿತಿ ಪ್ರಕಟಗೊಂಡಿದೆ.

ಅನಂತಪುರದ ಪ್ರಸಿದ್ಧ ಅನಂತಪದ್ಮನಾಭ ದೇವಸ್ಥಾನದ ಆಸುಪಾಸಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಕಾಣಸಿಗುವ ಈ ಸಸಿಗೆ ಲೆಪಿಡಗಾತಿಸ್ ಅನಂತಪುರಮೆನ್ಸಿಸ್ (Lepidagathis Ananthapuramensis-Acanthaceae) ಎಂಬ ಹೆಸರು ನೀಡಲಾಗಿದೆ. ಇದು, ಲೆಪಿಡಗಾತಿಸ್ ಕೇರಳೆನ್ಸಿಸ್‌ ಜಾತಿಗೆ ಸೇರಿದೆ.

ಕೋಟಯಂನ ಪಾಲಾ ಸೇಂಟ್ ಥಾಮಸ್ ಕಾಲೇಜು ಸಸ್ಯವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜೋಮಿ ಆಗಸ್ಟಿನ್ ಅವರ ಮಾರ್ಗದರ್ಶನದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಸ್ಯವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಟಿ.ಬಿಜು, ಡಾ.ಇ.ಜೆ.ಜೋಸ್ ಕುಟ್ಟಿ, ತಿರುವನಂತಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿ.ಎಸ್‌.ಅನಿಲ್ ಕುಮಾರ್, ಸಂಶೋಧನಾ ವಿದ್ಯಾರ್ಥಿನಿ ಆರ್ಯಾ ಸಿಂಧು ಅವರು ಈ ಸಸಿಯನ್ನು ಪತ್ತೆ ಮಾಡಿದ್ದಾರೆ.

ADVERTISEMENT

‘50ರಿಂದ 100 ಸೆಂಟಿಮೀಟರ್ ಎತ್ತರಕ್ಕೆ ಬೆಳೆಯುವ ಈ ಸಸಿಗೆ ರೋಮಗಳಿಂದ ಕೂಡಿದ ಕಾಂಡ ಇದೆ. ನಸುನೇರಳೆ ಬಣ್ಣದ ಗೊಂಚಲಿನ ಒಂದು ಭಾಗದಲ್ಲಿ ಮಾತ್ರ ಗುಲಾಬಿ ಬಣ್ಣದ ಹೂಗಳು ಅರಳುತ್ತವೆ. ಒಂದು ಗೊಂಚಲಿನಲ್ಲಿ 14ರಿಂದ 30 ಹೂಗಳು ಇರುತ್ತವೆ. ಹೂಗಳ ಸುತ್ತ ಮುಳ್ಳು ಇದ್ದು ಎಲೆಗಳು ದಪ್ಪ ಇವೆ. ಕೇರಳದ ಕರಿಕಲ್ಲು ಬಂಡೆಗಳ ಮೇಲೆ ಕಾಣಸಿಗುವ ಇತರ ಸಸಿಗಳಲ್ಲಿ ಜನವರಿಯಿಂದ ಮೇ ವರೆಗೆ ಹೂಗಳು ಅರಳುತ್ತವೆ.ಲೆಪಿಡಗಾತಿಸ್ ಅನಂತಪುರಮೆನ್ಸಿಸ್‌ ಜುಲೈ ತಿಂಗಳಲ್ಲಿ ಹೂ ಬಿಡುತ್ತದೆ’ ಎಂದುಟಿ.ಬಿಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಿಕಲ್ಲುಗಳ ಮೇಲಿನ ಸಸಿಗಳ ಬಗ್ಗೆಒಂದು ದಶಕದಿಂದ ಅಧ್ಯಯನ ಮಾಡುತ್ತಿದ್ದೇನೆ. ಅನಂತಪುರದಲ್ಲಿ ಈ ಸಸಿ ಗಮನಕ್ಕೆ ಬಂದ ಕೂಡಲೇ ಬೇರೆಲ್ಲೂ ಇದನ್ನು ನೋಡಿಲ್ಲ ಎಂಬುದು ಖಚಿತವಾಯಿತು. ಪ್ರಯೋಗಾಲಯದಲ್ಲಿ ವೈಜ್ಞಾನಿಕ ಪರೀಕ್ಷೆ ಮಾಡಿದ ನಂತರ ತಜ್ಞರ ಜೊತೆ ಚರ್ಚೆ ನಡೆಸಿ, ಫೈಟೋಟಾಕ್ಸಾಗೆ ನೀಡಲಾಯಿತು. ಅವರು ಸಸ್ಯವಿಜ್ಞಾನಿಗಳ ಗಮನಕ್ಕೆ ತಂದು ಜಗತ್ತಿನ ಇತರ ಕಡೆಯಲ್ಲಿ ಈ ಸಸಿ ಇಲ್ಲ ಎಂದು ಘೋಷಿಸಿದ್ದಾರೆ’ ಎಂದು ಬಿಜು ವಿವರಿಸಿದರು.

’ಕೇರಳದಲ್ಲಿ, ವಿಶೇಷವಾಗಿ ಕಾಸರಗೋಡು ಮತ್ತು ಕಣ್ಣೂರು ಸುತ್ತಮುತ್ತ ಕರಿಬಂಡೆಗಳ ಮೇಲೆ ಬೆಳೆಯುವ ಸಸಿಗಳಿವೆ. 1991ರಲ್ಲಿ ಕಣ್ಣೂರು ಜಿಲ್ಲೆಯ ಮಾಡಾಯಿಪ್ಪಾರದಲ್ಲಿ ಸಂಶೋಧಕ ಮಧುಸೂದನ ಅವರು ಇದೇ ರೀತಿಯ ಸಸಿಯೊಂದನ್ನು ಪತ್ತೆಹಚ್ಚಿದ್ದರು. ಆದರೆ ಅದು ಬಂಡೆಗೆ ಅಂಟಿಕೊಂಡಿರುತ್ತದೆ. ಅನಂತಪುರದಲ್ಲಿ ಪತ್ತೆಯಾಗಿರುವ ಸಸಿ ಮೇಲೆ ಎದ್ದು ಸುಂದರವಾದ ಹೂಗಳಿಂದ ಕಂಗೊಳಿಸುತ್ತದೆ’ ಎಂದು ಅವರು ವಿವರಿಸಿದರು.

ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೂಲಸ್ಥಾನ ಎಂದು ಹೇಳಲಾಗುವ ಅನಂತಪುರದ ದೇವಸ್ಥಾನ ಕೆರೆಯ ಮಧ್ಯದಲ್ಲಿ ಇರುವುದು ವಿಶೇಷ. ಇಲ್ಲಿ ಸಸ್ಯಾಹಾರ ಮಾತ್ರ ಸೇವಿಸುವ ಬಬಿಯಾ ಎಂಬ ಹೆಸರಿನ ಮೊಸಳೆಯೂ ಇದೆ. ಇಂಥ ವಿಶಿಷ್ಟ ವಾತಾವರಣದ ಸುತ್ತ ಬೆಳೆಯುವ ಈ ಸಸಿಗೆ ಸ್ಥಳೀಯವಾಗಿ ಯಾವ ಹೆಸರೂ ಇಲ್ಲ. ಗುಡ್ಡದ ಸಸಿ, ಗುಡ್ಡದ ಹೂ ಎಂದಷ್ಟೇ ಇಲ್ಲಿನವರು ಇದನ್ನು ಕರೆಯುತ್ತಾರೆ. ಅಂಥ ಸಸಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ವಿಸ್ತೃತ ಅಧ್ಯಯನ, ಸಂರಕ್ಷಣೆ ಅಗತ್ಯ

‘ಈ ಸಸಿ ಮತ್ತು ಅದರ ಹೂಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ಅದರಲ್ಲಿ ಔಷಧೀಯ ಗುಣಗಳೇನಾದರೂ ಇವೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇಲ್ಲಿ ಮಾತ್ರ ಕಾಣಿಸುವ ಈ ಸಸಿಯನ್ನು ಉಳಿಸುವ ಅಗತ್ಯವಿದೆ. ಖಾಸಗಿ ಜಾಗಗಳಲ್ಲಿ ಬೆಳೆಯುವ ಈ ಸಸಿಯ ಮೌಲ್ಯ ಗೊತ್ತಿಲ್ಲದೇ ಕತ್ತರಿಸಿ ಬಿಸಾಕುವ, ಆ ಮೂಲಕ ಇದು ವಿನಾಶ ಹೊಂದುವ ಸಾಧ್ಯತೆ ಇದೆ. ಆದ್ದರಿಂದ ಸಂರಕ್ಷಣೆಗೆ ಸೂಕ್ತ ಕ್ರಮಗಳು ಆಗಬೇಕು’ ಎಂಬುದು ಬಿಜು ಅವರ ಕಳಕಳಿ.

‘ಸಸಿಯೊಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಯಾಕೆ ಇರುತ್ತದೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಲು ಸಸ್ಯವಿಜ್ಞಾನ ಲೋಕಕ್ಕೆ ಇನ್ನೂ ಸಾಧ್ಯವಾಗಲಿಲ್ಲ. ವಾತಾವರಣ ಅಥವಾ ಭೌಗೋಳಿಕವಾಗಿ ಉಂಟಾದ ಯಾವುದಾದರೂ ಮಾರ್ಪಾಟು ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.