ADVERTISEMENT

ಪ್ಲಾಸ್ಟಿಕ್ ಮನೆ, ಪ್ಲಾಸ್ಟಿಕ್ ಹಳ್ಳಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 2:32 IST
Last Updated 8 ಮಾರ್ಚ್ 2020, 2:32 IST
ಪ್ಲಾಸ್ಟಿಕ್ ಗ್ರಾಮ
ಪ್ಲಾಸ್ಟಿಕ್ ಗ್ರಾಮ   
""

ಪ್ಲಾಸ್ಟಿಕ್ಕಿನ ಹಾವಳಿ ನಿಯಂತ್ರಿಸಲು ‍ಪರಿಸರ ಸ್ನೇಹಿ ಮಾರ್ಗವೊಂದು ಇದೆ. ಅದು ‘ಪ್ಲಾಸ್ಟಿಕ್ ಬಾಟಲಿಗಳ ಹಳ್ಳಿ’!

ನಗರಗಳಲ್ಲಿ ವಾಸಿಸುವ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಾನೆ. ಇದರಿಂದಾಗಿ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಭೂಭರ್ತಿ ಸ್ಥಳಗಳಲ್ಲಿ ಪ್ಲಾಸ್ಟಿಕ್ಕಿನ ಹಾವಳಿ ವಿಪರೀತ ಆಗುತ್ತದೆ. ಪ್ಲಾಸ್ಟಿಕ್ಕಿನ ಯಾವುದೇ ವಸ್ತು ಸಂಪೂರ್ಣವಾಗಿ ಕೊಳೆತು ಮಣ್ಣಿಗೆ ಸೇರುವುದೂ ಇಲ್ಲ.

ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಕೆನಡಾ ದೇಶದ ಉದ್ಯಮಿ ರಾಬರ್ಟ್‌ ಬೆಜು ಎನ್ನುವವರು ವಿನೂತನ ಉಪಾಯವೊಂದನ್ನು ಹುಡುಕಿದ್ದಾರೆ. ಅವರು ತಾವು ಬಳಸಿ, ಎಸೆದ ವಸ್ತುಗಳನ್ನೇ ಬಳಸಿ ಮನೆ ನಿರ್ಮಾಣ ಮಾಡಿ, ಅದರಲ್ಲಿಯೇ ವಾಸಿಸುವ ತೀರ್ಮಾನ ಕೈಗೊಂಡಿದ್ದಾರೆ.

ADVERTISEMENT

ಅಂದರೆ, ಅವರು ಪ್ಲಾಸ್ಟಿಕ್ ಬಾಟಲಿಗಳನ್ನು ಪುನರ್‌ ಬಳಕೆ ಮಾಡಿ, ಆಕರ್ಷಕವಾದ ಮನೆಗಳನ್ನು ನಿರ್ಮಿಸಿದ್ದಾರೆ. ಆ ಮನೆಗಳು ಗಟ್ಟಿಮುಟ್ಟಾಗಿಯೂ ಇವೆ. ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ 120ಕ್ಕೂ ಹೆಚ್ಚು ಮನೆಗಳು ಇರುವ ಹಳ್ಳಿಯೊಂದು ಪನಾಮಾದ ಬೊಕಾಸ್ ಡೆಲ್ ಟೊರೊ ಎನ್ನುವ ದ್ವೀಪದಲ್ಲಿ ನಿರ್ಮಾಣವಾಗುತ್ತಿದೆ.

ಉಕ್ಕಿನ ಫ್ರೇಮ್‌ ಬಳಸಿ, ಅವುಗಳ ನಡುವೆ ಪುನರ್‌ ಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಇರಿಸಿ ಮನೆಗಳ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಮನೆಗಳು ಒಳಗಿನಿಂದ ತಂಪಾಗಿ ಇರುತ್ತವೆಯಂತೆ. ಹಾಗಾಗಿ, ಹವಾ ನಿಯಂತ್ರಕಗಳನ್ನು ಅಳವಡಿಸಬೇಕಾದ ಅಗತ್ಯ ಇಲ್ಲ.

ಪ್ಲಾಸ್ಟಿಕ್ ಬಾಟಲಿ ಮನೆಗಳ ನಿರ್ಮಾಣ ಕಡಿಮೆ ಖರ್ಚಿನದ್ದು ಮಾತ್ರವೇ ಅಲ್ಲ, ನಿರ್ಮಾಣ ಕಾರ್ಯ ಕಡಿಮೆ ಸಮಯದಲ್ಲಿ ಆಗುತ್ತದೆ. ಹಾಗೆಯೇ, ಅವು ಭೂಕಂಪ ನಿರೋಧಕ ಮನೆಗಳೂ ಹೌದು.

***

ದೊಡ್ಡ ರಣಹದ್ದು

ಲ್ಯಾ‍ಪೆಟ್–ಫೇಸ್ಡ್ ರಣಹದ್ದು ಆಫ್ರಿಕಾದ ರಣಹದ್ದುಗಳ ಪೈಕಿ ಅತ್ಯಂತ ದೊಡ್ಡದು. ಇದು ಒಂದು ಮೀಟರ್‌ಗೂ ಹೆಚ್ಚು ಎತ್ತರವಿರುತ್ತದೆ. ಈ ಹದ್ದು ತನ್ನ ಎರಡೂ ರೆಕ್ಕೆಗಳನ್ನು ಅಗಲವಾಗಿ ಚಾಚಿದರೆ, ಎರಡೂ ರೆಕ್ಕೆಗಳ ತುದಿಗಳ ನಡುವಿನ ಅಂತರ ಅಂದಾಜು 2.6 ಮೀಟರ್ ಆಗಿರುತ್ತದೆ.

ದೊಡ್ಡದಾದ ಕೊಕ್ಕು ಇದರ ವೈಶಿಷ್ಟ್ಯ. ಈ ಕೊಕ್ಕಿನ ಸಹಾಯದಿಂದ ಅದು ಯಾವುದೇ ಪ್ರಾಣಿಯ ದಪ್ಪ ಚರ್ಮವನ್ನು ಹರಿದು, ಮಾಂಸ ತಿನ್ನಬಲ್ಲದು. ಬೇರೆ ಜಾತಿಯ ರಣಗದ್ದುಗಳು, ಸತ್ತ ಪ್ರಾಣಿಗಳ ಮಾಂಸ ತಿನ್ನಲು ಈ ರಣಹದ್ದುಗಳ ಸಹಾಯ ಪಡೆಯುತ್ತವಂತೆ.

ರೆಕ್ಕೆಯ ಮೇಲಿರುವ ಗರಿಗಳು ಈ ರಣಹದ್ದುಗಳಿಗೆ ರೆಕ್ಕೆಗಳನ್ನು ಮತ್ತೆ ಮತ್ತೆ ಬಡಿಯದೆಯೇ ಬಹಳ ಹೊತ್ತು ಹಾರಾಡಲು, ಎತ್ತರಕ್ಕೆ ಹೋಗಲು ಸಹಾಯ ಮಾಡುತ್ತವೆ. ತಲೆ ಹಾಗೂ ಕುತ್ತಿಗೆ ಮೇಲಿರುವ ಜೋಲು ಚರ್ಮದ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.