ADVERTISEMENT

ಶಬ್ದಮಾಲಿನ್ಯ ಮರೆತ ಪಿಸಿಬಿ

ಶಶಿಕುಮಾರ್ ಸಿ.
Published 12 ಸೆಪ್ಟೆಂಬರ್ 2018, 19:30 IST
Last Updated 12 ಸೆಪ್ಟೆಂಬರ್ 2018, 19:30 IST
LOUD SPEAKER
LOUD SPEAKER   

ಬಣ್ಣದ ಗಣಪನಿಂದ ಪರಿಸರಕ್ಕೆ ಹಾನಿಯೇ ಹೊರತು ಪೂರಕವಲ್ಲ, ಅದರ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನೇ ಬಳಸಿ ಎಂದು ಜಾಗೃತಿ ಮೂಡಿಸುವುದರಲ್ಲಿ ತೊಡಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು(ಪಿಸಿಬಿ), ಶಬ್ದ ಮಾಲಿನ್ಯ ತಡೆಗಟ್ಟಲು ಅಷ್ಟಾಗಿ ಆಸಕ್ತಿತೋರದಂತಿದೆ.

ಹೌದು, ಗಣೇಶ ಹಬ್ಬದ ಪ್ರಯುಕ್ತ ಸಂಭ್ರಮಾಚರಣೆ ಪ್ರಯುಕ್ತ ಎಲ್ಲೆಡೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಹಬ್ಬದ ಆಚರಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸುವ ಕೆಲವು ಗಣೇಶ ಉತ್ಸವ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಅತಿಯಾಗಿ ಶಬ್ದ ಉಂಟುಮಾಡುವ ಆರ್ಕೇಸ್ಟ್ರಾ, ಮೈಕ್‌ಸೆಟ್‌, ಲೌಡ್‌ಸ್ಪೀಕರ್‌ಗಳ ಬಳಕೆಗೆ ಜೋತುಬೀಳುತ್ತಿವೆ. ಇದರ ಜೊತೆಗೆ ಹಬ್ಬಕ್ಕೆ ಲೋಕಲ್ ಟಚ್ ನೀಡಲು, ತಮಟೆಗಳ ಮಾರ್ಧನಿಗೂ ವಿಶೇಷ ಆಸಕ್ತಿ ತೋರುತ್ತಿವೆ. ಇದರಿಂದ ಅತಿಯಾದ ಶಬ್ದ ಮಾಲಿನ್ಯ ಉಂಟಾಗುವುದಂತೂಖಾತರಿ.

ಗಣೇಶ ಉತ್ಸವಕ್ಕೆ ನಗರ ಸೇರಿದಂತೆ ರಾಜ್ಯದೆಲ್ಲೆಡೆಗೂ ಅನ್ವಯಿಸುವಂತ ಪಿಸಿಬಿಯು ಕೆಲವೊಂದು ನೀತಿ–ನಿಯಮಗಳನ್ನು ಜಾರಿಗೊಳಿಸಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆಗೆ ನಿಷೇಧ ಹೇರಿರುವುದರ ಹೊರತಾಗಿಶಬ್ದ ಮಾಲಿನ್ಯ ತಡೆಗಟ್ಟಲು ಬೇರೆ ಯಾವುದೇ ಕ್ರಮಕೈಗೊಂಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಇಂತಿಷ್ಟೇ ಪ್ರಮಾಣದ ಶಬ್ದ ಉಂಟುಮಾಡುವ ಧ್ವನಿವರ್ಧಕಗಳನ್ನು ಬಳಸಬೇಕು ಎಂದು ಸೂಚಿಸಿಲ್ಲ.

ADVERTISEMENT

ಈ ಸಂಬಂಧ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಅವರನ್ನು ವಿಚಾರಿಸಿದರೆ, ‘ಶಬ್ದದ ಪ್ರಮಾಣವನ್ನು ಮಾನಿಟರ್ ಮಾಡುತ್ತೇವೆ. ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಧ್ವನಿವರ್ಧಕಗಳಿಂದ ಹೊರಹೊಮ್ಮುವ ಶಬ್ದದ ಪ್ರಮಾಣವು ಎಷ್ಟಿರಬೇಕು ಎಂಬುದನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಇದರ ಹೊರತಾಗಿ, ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಷೇಧ ಮಾಡಿದ್ದೇವೆ’ ಎಂದು ಹೇಳಿ ಕರೆ ಕಡಿತಗೊಳಿಸಿದರು.

‘ಗಣೇಶ ಹಬ್ಬ ಸಮಯದಲ್ಲಿ ಪರಿಸರಕ್ಕೆ ಹಾನಿಕಾರಕವಾಗಬಲ್ಲ ಗಣೇಶ ಮೂರ್ತಿಗಳ ಬಳಕೆಗೆ ಕಡಿವಾಣ ಹಾಕಿ, ಮಾಲಿನ್ಯ ತಡೆಗಟ್ಟುವುದರ ಬಗ್ಗೆಯಷ್ಟೇ ನಾವು ಗಮನಹರಿಸಿದ್ದೇವೆ. ರಾತ್ರಿ ವೇಳೆ ಧ್ವನಿವರ್ಧಕಗಳ ಬಳಕೆಯ ನಿಷೇಧ ಹೊರತಾಗಿ ಬೇರೆ ಕ್ರಮಗಳನ್ನು ಕೈಗೊಂಡಿಲ್ಲ. ಅಷ್ಟಕ್ಕೂ, ಈ ಹಬ್ಬದ ವೇಳೆ ಹೆಚ್ಚಾಗಿ ಶಬ್ದಮಾಲಿನ್ಯವಾಗದು. ದೀಪಾವಳಿ ವೇಳೆ ಶಬ್ದ ಹಾಗೂ ವಾಯು ಮಾಲಿನ್ಯದ ಬಗ್ಗೆ ಗಮನಹರಿಸುತ್ತೇವೆ. ಶಬ್ದಮಾಲಿನ್ಯ ತಡೆಗೆ ಮಂಡಳಿಯಿಂದ ಪ್ರತ್ಯೇಕ ನಿಯಾಮಾವಳಿಗಳನ್ನು ರೂಪಿಸಿಲ್ಲ’ ಎಂದರು‌ಮಂಡಳಿಯ ಅಧಿಕಾರಿಯೊಬ್ಬರು.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು, ವಿವಿಧ ಪ್ರದೇಶಗಳಿಗೆ ಅನ್ವಯವಾಗುವಂತೆ ಶಬ್ದ ಪ್ರಮಾಣವನ್ನು ಇಂತಿಷ್ಟೇ ಇರಬೇಕು ಎಂದು ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ದ ಉಂಟು ಮಾಡಿದರೆ, ಆಯಾ ಪ್ರದೇಶದ ಪೊಲೀಸರು ಕ್ರಮಕೈಗೊಳ್ಳಬಹುದು. ಕೋರ್ಟ್‌ನಲ್ಲಿ ಕೇಸ್ ದಾಖಲಿಸಿ ₹ 10 ಸಾವಿರದಿಂದ ₹ 1 ಲಕ್ಷದವರೆಗೆ ದಂಡ ವಿಧಿಸಬಹುದು. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಕಡಿಮೆ ಶಬ್ದ ಹೊರಹೊಮ್ಮುವ ಧ್ವನಿವರ್ಧಕಗಳನ್ನು ಬಳಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.