ADVERTISEMENT

ತಾವರಗೇರಾದ ಭಗೀರಥರು

ಶಿವಾನಂದ ಕಳವೆ
Published 25 ಸೆಪ್ಟೆಂಬರ್ 2021, 19:30 IST
Last Updated 25 ಸೆಪ್ಟೆಂಬರ್ 2021, 19:30 IST
ಎಕರೆಯಲ್ಲಿ 15-16 ಅಡಿ ನೀರು ಸಂಗ್ರಹ, ತೆಪ್ಪದಲ್ಲಿ ಖುಷಿ ವಿಹಾರ
ಎಕರೆಯಲ್ಲಿ 15-16 ಅಡಿ ನೀರು ಸಂಗ್ರಹ, ತೆಪ್ಪದಲ್ಲಿ ಖುಷಿ ವಿಹಾರ   

ನೀರಿಲ್ಲದ ಊರಿನ ದುಃಖ ಅನುಭವಿಸಿದ್ದವರು ಕೊನೆಗೆ ಕೆರೆ ಮಾಡಿ ಗೆದ್ದರು. ಇವರ ಖುಷಿಯ ಸೆಲೆಗಳನ್ನು ಸಂತೆ, ಹೊಲಗಳಲ್ಲಿ ಅಡ್ಡಾಡಿ ಕಂಡುಂಡು ಬರುವುದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇದೆಯೇ? ಸರ್ಕಾರಿ ಅಂಕಿಸಂಖ್ಯೆಗಳಲ್ಲಿ ಸಿಗದ ನೀರಿನ ನೋಟಗಳನ್ನು ಗ್ರಾಮದ ಸಂತೆಗಳು ಎಷ್ಟು ಹೃದಯಸ್ಪರ್ಶಿಯಾಗಿ ಹೇಳುತ್ತವೆ. ಕಾಯಿಪಲ್ಲೆಯ ಚೆಂದದ ರಾಶಿಗಳಲ್ಲಿ, ಬಣ್ಣ ಬಣ್ಣದ ಓಡಾಟದ ಬೆರಗಿನಲ್ಲಿ ಕೊಪ್ಪಳ ಜಿಲ್ಲೆಯ ರಾಯರಕೆರೆಯ ಕೌತುಕಗಳಿವೆ.

**
ಕೊಪ್ಪಳದ ತಾವರಗೇರಾ ಊರಿನ ಸಂತೆ ಬೀದಿಯಲ್ಲಿ ಶತಮಾನದ ದೈತ್ಯ ಆಲ, ಬಸರಿ, ಅರಳಿ ಮರಗಳಿವೆ. ಊರಿನ ಹೆಚ್ಚು ಬರಗಾಲ ಅನುಭವಿಸಿ ಅಳಿದುಳಿದ ಹಿರಿಯಜ್ಜಂದಿರಂತೆ ಇವು ಇವೆ. ಮರಗಳ ಬುಡದ ನೆರಳಲ್ಲಿ ಕುಳಿತವರ ದೇಹ ಭಾಷೆ ಗಮನಿಸುತ್ತಿದ್ದೆ. ಜಲವಿಲ್ಲದೇ ಕೃಷಿ ಸೊರಗಿ ಸೋತ ಸಂಕಷ್ಟದ ನೋಟಗಳು ಕಾಣುತ್ತಿದ್ದವು. ಭಕ್ತರನ್ನು ಕಾಯುವ ಪ್ರಸಿದ್ಧ ವೈದ್ಯನಾಥೇಶ್ವರ ದೇಗುಲದ ಬಾವಿಯ ಗಂಗೆಯೂ ಒಣಗಿ, ಕಟ್ಟಿದ ಕಲ್ಲು ಇಷ್ಟಗಲ ಬಾಯಿ ಕಿಸಿದು ಬರದಮ್ಮನ ಸಾಕ್ಷ್ಯಚಿತ್ರಕ್ಕೊಂದು ಭಯಾನಕ ಪೀಠಿಕೆಯಂತಿತ್ತು. ಚೆಂದದ ವಕ್ರಾಣಿಯೂ(ಕಲ್ಯಾಣಿ) ಕಸದ ತೊಟ್ಟಿಯಾಗಿ ಇಡೀ ಸೀಮೆಯ ಉತ್ಸಾಹ, ಉತ್ಸವಗಳೆಲ್ಲ ನೀರಿನಂತೆ ಮಾಯವಾಗಿದ್ದವು. ಇಷ್ಟು ವರ್ಷಗಳಲ್ಲಿ ಇಂಥ ನೀರಿನ ಸಂಕಷ್ಟ ನೋಡದವರು ಕಾಲಕ್ಕೆ ಕಂಗಾಲಾಗಿದ್ದರು.

ಬರದ ಗಾಯ ತೋರಿಸಲು ಒಂದಿಷ್ಟು ಹುಡುಗರು ಜತೆಗೂಡಿದ್ದರು. ‘ವಕ್ರಾಣಿ ಸುತ್ತಾ ಎಂಟು ಬೋರು ಅದಾವ್ರೀ, ಯಾವುದ್ರಾಗೂ ನೀರಿಲ್ಲ ನೋಡ್ರೀ! ನಾವು ಸಾಲಿ ಓದೋವಾಗ ದೇವರ ಬಾವ್ಯಾಗ ಈಜೋಕೆ ದಿನಾ ಬರ್ತಾ ಇದ್ವಿ. ಈ ಖಾಜಾ ಖಾನ್ ನಮ್ಮನ್ನ ಬಾವಿಯಿಂದ ಎಬ್ಬಿಸಿ, ಹೆದರಿಸಿ, ಬೆದರಿಸಿ ಓಡಿಸ್ತಾ ಇದ್ದಾ’ ಮೆಡಿಕೇರಿಯ ನಾರಾಯಣ ಗೌಡರು ನೆನಪಿನ ಪುಟದ ನೀರಿನ ಕಥೆ ಹೇಳುವಾಗ ದೊಡ್ಡ ಮರದಡಿ ನಿಂತ ಖಾನ್ ಸಾಹೇಬರು ‘ಬಾವಿಯಾಗ ಈಜೋ ಹುಡುಗರ‍್ಹಂಗೆ ನೀರು ನಾಪತ್ತೆ ಆತಲ್ರೀ’ ಎಂದು ಜಲ ದುಃಖದ ಧ್ವನಿ ಎತ್ತಿದರು.

ADVERTISEMENT
-ದೇವರ ಬಾವಿಯಲ್ಲಿ ಈಜಾಡುವ ಹುಡುಗರು

ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ 25 ಕಿಲೊ ಮೀಟರ್ ದೂರದ ತಾವರಗೇರಾದಲ್ಲಿ ಜನಗಳ ಜೊತೆ ಜಲ ವರ್ತಮಾನ ಓದುತ್ತಾ ಅಲ್ಲಿನ ರಾಯನಕೆರೆಗೆ ಬಂದೆವು. ‘ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಸಾಮ್ರಾಜ್ಯ ಕಾಲದಾಗ ಊರು ಕಟ್ಟೋದಕ್ಕೆ ಅಂತ ಕಟ್ಟಿದ್ ಕೆರಿ ಇದಂತ್ರಿ. ಇದು ರಾಯನಕೆರೆ ಅಂದ್ರೆ ರಾಜನಕೆರೆ. ಶ್ರೀಕೃಷ್ಣ ದೇವರಾಯನಿಗೆ ನಿತ್ಯ ಈ ಕೆರಿಯ ತಾವರಿ ಹೂ ಹೋಗ್ತಾ ಇತ್ತು ಅನ್ನೋದಕ್ಕ ನಮ್ಮೂರ್‍ಗೆ ತಾವರೆಕೆರೆ ಅಂತಿದ್ರಂತೆ! ಅದೀಗ ತಾವರಗೇರಾ ಆತ್ರೀ. ತಾವರಿ ಹೂವು ಹೋತು, ನೀರೂ ಹೋತ್ರೀ...’ ಗ್ರಾಮದ ಐತಿಹ್ಯವನ್ನು ಚಂದ್ರಶೇಖರ್ ನಾಲತವಾಡ ನೆನಪಿಸಿಕೊಂಡರು.

ಜಲಕ್ಷಾಮದಿಂದ ಕುಡಿಯೋ ನೀರಿಗೂ ಟ್ಯಾಂಕರ್ ಓಡಿಸುವ ನಾಡಿನ ಹಳ್ಳಿಗಳ ಹೆಸರಿನ ಕೊನೆಯ ಪದಗಳಿಗೆ ನೀರ ನೆನಪುಗಳಿವೆ. ಅಡವಿಗೇರಾ, ಅಡವಿಬಾವಿ, ಬೆಟಗೇರಿ, ಹನುಮಸಾಗರ, ವಣಗೇರಿ ಹೀಗೆ ಬಾವಿ, ಕೆರೆ, ಸಾಗರಗಳಿವೆ. ಕೆರೆ ಕಳೆದುಹೋಗುತ್ತಾ ತಾವರಗೇರಾ ಹಳ್ಳಿ ಕೂಡಾ ನೀರಿಗಾಗಿ ಅಳುವ ಸ್ಥಿತಿ ಬಂದಿತ್ತು. ಒಮ್ಮೆ ಮಳೆ ಸುರಿದು ಕೆರೆಗೆ ನೀರು ಬಂದರೂ ಕೆರೆಯ ಕೋಡಿಯ ಎತ್ತರಕ್ಕೆ ಜಮೆಯಾದ ಹೂಳಿನಿಂದ ನೀರು ನಿಲ್ಲುತ್ತಿರಲಿಲ್ಲ.

-ರಾಯನಕೆರೆ ಹೂಳಿನಿಂದ ತುಂಬಿದ್ದಾಗ....

ಹತ್ತಾರು ಲಕ್ಷ ಜನ ಸೇರುವ ಕೊಪ್ಪಳ ಜಾತ್ರೆ ತುಂಬಾ ಪ್ರಸಿದ್ಧಿ. ಬರದ ಹೊತ್ತಿನಲ್ಲಿ ಜನ ಸೋತ ಕಾಲಕ್ಕೆ ಪರಿಸರ ಸಂರಕ್ಷಣೆಯ ಘೋಷಣೆ ಮಾಡಿದವರು ಗವಿಸಿದ್ಧೇಶ್ವರ ಸ್ವಾಮೀಜಿ. ಮೂರು ವರ್ಷಗಳ ಹಿಂದೆ ಅವರು ನೆಲ, ಜಲ ಸಂರಕ್ಷಣೆಯ ಯಾತ್ರೆ ಆರಂಭಿಸಿದರು. ‘ನಮ್ಮ ಶ್ರಮ ನಮ್ಮ ಕೆರೆ’ ಎಂಬ ಧ್ಯೇಯ ಬಿತ್ತುತ್ತ ಜಿಲ್ಲೆಯಲ್ಲಿ ಜಾಗೃತಿಯ ಕೆಲಸಗಳು ಸ್ವಾಮೀಜಿ ನೇತೃತ್ವದಲ್ಲಿ ಶುರುವಾದವು. ಕುಷ್ಟಗಿಯ ನಿಡಸೇಸಿ ಕೆರೆ ಕಾಯಕ ಆರಂಭವಾಗಿ ಬಹುದೊಡ್ಡ ಸಂಚಲನವನ್ನು ಮೂಡಿಸಿತು. ಸುದ್ದಿ ಕೇಳಿ ತಾವರಗೇರಾ ಹಳ್ಳಿಗರು ಎಚ್ಚೆತ್ತರು. ಸ್ವಾಮೀಜಿ ಪ್ರೇರಣೆಯಿಂದ ಕೆರೆ ಕಾಯಕಕ್ಕೆ ಎದ್ದರು. ರಾಯನ ಕೆರೆ ಅಭಿವೃದ್ಧಿ ಸಮಿತಿ ರಚಿಸಿಕೊಂಡು ದಾನಿಗಳಿಂದ ನೆರವು ಪಡೆದು ಹೂಳೆತ್ತುವ ಕೆಲಸ ಯೋಜಿಸಿದರು. ತಾವರಗೇರಾ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಸಜ್ಜನ್ ಹಾಗೂ ಗ್ರಾಮದ ಸಾಗರ ಭೇರಿ ಸೇರಿದಂತೆ ಮತ್ತಿತರ ಸಮಾನಮನಸ್ಕರು ಹಲವರು ಒಂದಾದರು. ಸಂಸ್ಥೆಗಳೂ ಕೈಜೋಡಿಸಿದವು. 2019ರ ಫೆಬ್ರುವರಿ 27ರಂದು ಕೆರೆ ಹೂಳೆತ್ತುವ ಪವಿತ್ರ ಕೆಲಸಕ್ಕೆ ಸ್ವಾಮೀಜಿ ಚಾಲನೆ ನೀಡಿದರು.

32 ಎಕರೆಯ ವಿಶಾಲ ಕೆರೆ, ಸುಮಾರು ಏಳು ಕಿಲೊ ಮೀಟರ್ ದೂರದ ನವಲಿ ಹಳ್ಳದಿಂದ ಹರಿದು ಬರುವ ಮಳೆ ನೀರನ್ನು ಹಿಡಿಯುವ ಪಾರಂಪರಿಕ ರಚನೆಯ ಪುನರುಜ್ಜೀವನ ಕೆಲಸವಿದು. 25 ಸಾವಿರ ಜನಸಂಖ್ಯೆಯ ಹಳ್ಳಿ ಕೆರೆ ನಂಬಿದೆ, ಕೆರೆ ಕೆಲಸಕ್ಕೆ 20 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಯ್ತು, ಸರ್ಕಾರದ ‘ಕೆರೆ ಸಂಜೀವಿನಿ’ಯ ಏಳು ಲಕ್ಷ ರೂಪಾಯಿ ನೆರವು ಕೂಡಾ ದೊರೆತು ತಿಂಗಳುಗಟ್ಟಲೆ ಸಮರೋಪಾದಿಯಲ್ಲಿ ಹೂಳೆತ್ತುವ ಕೆಲಸ ನಡೆಯಿತು. ‘ಕೆರೆಯಲ್ಲಿ ನೀರು ಜಾಸ್ತಿ ನಿಲ್ಲುತ್ತಿಲ್ಲ, ಈಗಿರುವುದಕ್ಕಿಂತ 15-16 ಅಡಿ ಆಳ ಮಾಡಿದರೆ ಹೆಚ್ಚು ನೀರು ಶೇಖರಣೆ ಸಾಧ್ಯವೆಂದು ನಿರ್ಧರಿಸಿದೆವು. ಕೆರೆ ದಂಡೆ ಭದ್ರಪಡಿಸಿ, ಕಾಲುವೆ ಸರಿಪಡಿಸುವ ಯೋಜನೆ ಮಾಡಿದೆವು. ಕೆರೆ ಹೂಳನ್ನು ಒಯ್ಯಲು ರೈತರು ಮುಂದೆ ಬಂದಿದ್ದರಿಂದ ಮಣ್ಣು ಸಾಗಾಟ ವೆಚ್ಚ ಕಡಿಮೆಯಾಯ್ತು. ಸುಮಾರು 40 ಲಕ್ಷ ರೂಪಾಯಿಯಲ್ಲಿ ವಿವಿಧ ದಾನಿಗಳು, ಸರ್ಕಾರದ ಸಹಾಯದಿಂದ ಪೂಜ್ಯ ಗವಿಮಠದ ಶ್ರೀಗಳ ಪ್ರೇರಣೆಯಿಂದ 30 ಎಕರೆ ಕೆರೆ ಹೂಳು ತೆಗೆದೆವು’ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ನಾಲತವಾಡ ಕಾಯಕ ಸಾಹಸ ನೆನಪಿಸಿಕೊಳ್ಳುತ್ತಾರೆ.

-ಜಲಸಮೃದ್ಧಿಯಿಂದ ಸಂತೆಯ ಬಣ್ಣ ಬದಲಾಗಿದೆ.

ವಾಡಿಕೆಯಲ್ಲಿ ವಾರ್ಷಿಕ 600-650 ಮಿಲಿ ಮೀಟರ್ ಮಳೆ ಸುರಿಯುವ ಈ ಪ್ರದೇಶದಲ್ಲಿ ಕೆಲವು ವರ್ಷ 300 ಮಿಲಿ ಮೀಟರ್ ಮಳೆಯೂ ಬರುವುದಿಲ್ಲ. ನೀರಿನ ಬಳಕೆ ಹೆಚ್ಚಿದ ಹೊತ್ತಿನಲ್ಲಿ ಕೆರೆಗಳು ಹಾಳಾಗಿದ್ದವು. ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕೆರೆ ಗುರುತಿಸಲಾಗಿದ್ದರಿಂದ ಜಾಸ್ತಿ ನೀರು ಹಿಡಿಯಲು ಹೂಳು ತೆಗೆಯುವುದು ಅವಶ್ಯವೆಂದು ಜನಗಳು ಅರ್ಥಮಾಡಿಕೊಂಡರು. ‘ಹೂಳೆತ್ತುವ ಒಳ್ಳೆಯ ಕೆಲಸ ನಾವು ಮಾಡಿದರೆ ನೀರು ಕಳಿಸುವ ಕೆಲಸ ದೇವರು ನೋಡ್ಕೋತಾನೆ’ ಎಂಬ ಮಾತು ರಾಜ್ಯದ ಹಲವೆಡೆ ಸಾಬೀತಾದಂತೆ ಇಲ್ಲಿಯೂ ಅದು ಘಟಿಸಿದೆ. ಕೆರೆ ಕೆಲಸ ಪೂರೈಸಿ ಮುಂಗಾರು ಶುರುವಾದ ಹೊತ್ತಿಗೆ ಅತ್ಯುತ್ತಮವಾಗಿ ಮಳೆ ಸುರಿದು ಕೆರೆ ಭರ್ತಿಯಾಗಿ ಕೋಡಿಯೂ ಹರಿಯಿತು! ತೆಪ್ಪದಲ್ಲಿ ಕೂಡ್ರಿಸಿಕೊಂಡು ಅದೇ ಜಲಕ್ಷಾಮ ತೋರಿಸಿದ ಹುಡುಗರು ಈಗ ಕೆರೆ ದ್ವೀಪಕ್ಕೆ ಕರೆದೊಯ್ದರು. ಊರ ಎತ್ತರದ ಜಲರಾಶಿ. ದೇಗುಲದ ವಕ್ರಾಣಿ, ಬಾವಿಗಳಲ್ಲಿ ನೀರು ಉಕ್ಕಿ ಪುಟಾಣಿ ಮಕ್ಕಳು ಈಜಿನಲ್ಲಿ ಮೈಮರೆತಿದ್ದರು.

ಕೆರೆ ತಗ್ಗಿನ ಐದಾರು ಕಿಲೊ ಮೀಟರ್ ಹಾಗೂ ಮೇಲ್ಭಾಗದ ಎರಡು ಕಿಲೊ ಮೀಟರ್ ದೂರದ ರೈತರ ಹೊಲದ ಕೊಳವೆ ಬಾವಿಗಳಲ್ಲಿ ಇಂದು ಸಾಕಷ್ಟು ನೀರು ದೊರೆಯುತ್ತಿದೆ. ಹಳೆಯ ತೆರೆದ ಬಾವಿಗಳಲ್ಲಿ ಮತ್ತೆ ನೀರು ಕೆರೆ ಸಂರಕ್ಷಣೆಯ ಪ್ರೀತಿ, ನೀತಿಗಳು ಎಲ್ಲರಿಗೂ ಅರ್ಥವಾಗುತ್ತಿವೆ.

‘ಸಣ್ಣ ಸಣ್ಣ ಕೆರೆ ಕೂಡಾ ಊರಿನ ಹಸಿರಾಗಬಹುದು, ಉಸಿರಾಗಬಹುದು’ ಎಂಬ ನಿದರ್ಶನಗಳು ರಾಯನಕೆರೆಯಲ್ಲಿವೆ. ಶನಿವಾರ ತಾವರಗೇರಾ ವಾರದ ಸಂತೆ, ಸುಮಾರು 40 ಹಳ್ಳಿಗಳ ಸಾವಿರಾರು ಜನಗಳ ಪುಟ್ಟ ಜಾತ್ರೆ. ಬರಗಾಲದಲ್ಲಿ ಬಣ್ಣ ಕಳಕೊಂಡ ಸಂತೆ ಕೆರೆಯಿಂದ ಹೊಸ ಮೆರುಗು ಪಡೆದಿದೆ. ಇಲ್ಲಿ ಮಾರಾಟಕ್ಕೆ ಬರುವ ಅತ್ಯುತ್ತಮ ತರಕಾರಿ, ಸೊಪ್ಪು, ಹಣ್ಣುಗಳಲ್ಲಿ ಶೇಕಡಾ 75ರಷ್ಟು ಇಲ್ಲಿನ ಹೊಲದಿಂದ ಬೆಳೆದು ಬಂದಿದ್ದು ಎಂಬುದು ವಿಶೇಷ! ಸಂತೆಗೆ ಮೀನಿನ ಬಲೆ ಮಾರುವವರೂ ಹಾಜರಾಗುವುದು ನೀರ ನೆಮ್ಮದಿಯ ಸೋಜಿಗ. ಬೆಳೆಯುವವರ ಯಶಸ್ಸು, ಖರೀದಿಸುವ ತಾಕತ್ತು, ಮಿರ್ಚಿ ಮಂಡಕ್ಕಿ ಆಟೋಟಗಳಲ್ಲಿ ಸಂತೆಗೆ ಎಷ್ಟೊಂದು ಸಂಭ್ರಮವಿದೆ! ಜನ ಜಮಾವಣೆಗೆ ಮಹಾಮರಗಳು ಅಚ್ಚರಿಯಲ್ಲಿ ತಲೆದೂಗುತ್ತಿವೆ.

-ಜನಜಾಗೃತಿಯ ಶಕ್ತಿ ಕೊಪ್ಪಳ ಗವಿಮಠದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.