ADVERTISEMENT

ಮರುಜನ್ಮದಿಂದ ಸಿಕ್ಕ ಸಾರ್ಥಕತೆ

ರಸ್ತೆ ಪ್ರಯಾಣದ ಮೂಲಕ ಪಾರ್ಕಿನ್‌ಸನ್‌ ಕಾಯಿಲೆಯ ಜಾಗೃತಿ

ಮಾನಸ ಬಿ.ಆರ್‌
Published 21 ಮಾರ್ಚ್ 2019, 20:00 IST
Last Updated 21 ಮಾರ್ಚ್ 2019, 20:00 IST
ಪ್ರವಾಸದಲ್ಲಿ ಪತ್ನಿಯೊಂದಿಗೆ ಹರಿಪ್ರಸಾದ್
ಪ್ರವಾಸದಲ್ಲಿ ಪತ್ನಿಯೊಂದಿಗೆ ಹರಿಪ್ರಸಾದ್   

ಹುಟ್ಟು, ಸಾವು ಎರಡೂ ಆಕಸ್ಮಿಕವೇ, ಆದರೂ, ಕೆಲವರಿಗೆ ಮಾತ್ರ ಅದೃಷ್ಟದ ಮರುಜೀವ ಸಿಗುತ್ತದೆ. ಇನ್ನು ಕೆಲವರು ಆ ಮರುಜನ್ಮವನ್ನೇ ತಮ್ಮ ಬದುಕಿನ ಅಡಿಪಾಯ ಮಾಡಿಕೊಂಡು ಸಾರ್ಥಕ ಜೀವನ ಸಾಗಿಸುತ್ತಾರೆ. ಎನ್‌. ಹರಿಪ್ರಸಾದ್‌ ಈ ಸಾಲಿಗೆ ಸೇರುತ್ತಾರೆ.

2008ರಲ್ಲಿ ವೈದ್ಯರು ಅವರಿಗೆಪಾರ್ಕಿನ್‌ಸನ್‌ ಕಾಯಿಲೆ ಇರಬಹುದು ಎಂದು ಶಂಕಿಸಿದರು. ಆದರೆ ಈ ಕಾಯಿಲೆಯನ್ನು ದೃಢಪಡಿಸಲು ಯಾವುದೇ ಪರೀಕ್ಷೆಗಳಿಲ್ಲ. ವೈದ್ಯರು ಚಿಕಿತ್ಸೆ ನೀಡಲು ದಿನ ಮುಂದೂಡುತ್ತಾ ಹೋದರು. 2014ರಲ್ಲಿ ದೃಢವಾಯಿತು. ಚಿಕಿತ್ಸೆಯೂ ಆರಂಭವಾಯಿತು.

ದಿನೇದಿನೇ ಕೈಗಳ ನಡುಕ ಜೋರಾಯಿತು. ತಲೆ ಕೂಡ ನಿಲ್ಲುತ್ತಿರಲಿಲ್ಲ. ‘ನನ್ನ ಬದುಕು ಇಲ್ಲಿಗೇ ಮುಗಿಯಿತು’ ಎಂದು 57 ವರ್ಷದ ಹರಿಪ್ರಸಾದ್ ಹಗಲಿರುಳು ಮರುಗಿದರು. ನಾಳೆಯಿಂದ ನಾನು ಹೇಗೆ ಓಡಾಡಲಿ ಎಂಬ ಚಿಂತೆ ಅವರನ್ನು ಆವರಿಸಿತು. ಆ ಘಳಿಗೆಯಲ್ಲಿಯೇ ವೈದ್ಯರು ಅವರಿಗೆ ಡಿಬಿಎಸ್‌ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಏನಿದು ಡಿಬಿಎಸ್‌ ಚಿಕಿತ್ಸೆ: ಇದಕ್ಕೆ ಡೀಪ್‌ ಬ್ರೈನ್‌ ಸ್ಟಿಮ್ಯುಲೇಶನ್‌ ಚಿಕಿತ್ಸೆ ಎನ್ನುತ್ತಾರೆ. ಸತತ 9 ತಾಸು ಮಿದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ರೋಗಿಯನ್ನು ಮಾತನಾಡಿಸುತ್ತಲೇ ಚಿಕಿತ್ಸೆ ನೀಡುತ್ತಾರೆ. ಎಲ್ಲರಿಗೂ ಈ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಹರಿಪ್ರಸಾದ್ ಅವರಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ತೊಂದರೆಯಾಗಲೀ ಇರಲಿಲ್ಲ. ವಿಧಿ ಕೂಡ ಅವರಿಗೆ ಬೆಂಬಲ ನೀಡಿತು.

ಈ ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಅವರು ಶೇ 90ರಷ್ಟು ಗುಣಮುಖರಾದರು. ನಿಧಾನವಾಗಿ ನಡುಕ ಕೂಡ ಕಡಿಮೆಯಾಯಿತು. ತಲೆಯ ಭಾರ ಕಡಿಮೆಯಾಗಿ ದೇಹ ಹಗುರಾದ ಅನುಭವ ಪಡೆದರು. ಇದು ಅವರಿಗೆ ಸಿಕ್ಕ ಪುನರ್ಜನ್ಮ ಎಂದೇ ಭಾವಿಸಿದರು. ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟು ಸಂತಸಪಟ್ಟರು.

ಆದರೆ ಅವರು ಸಂತೋಷ ಕೂಟ ಆಚರಿಸಲಿಲ್ಲ. ಬದಲಾಗಿ ತಮಗಾದ ಅನುಭವಗಳನ್ನು ಹಂಚಿಕೊಂಡು, ತಮಗೆ ಸಿಕ್ಕ ಉತ್ತಮ ಚಿಕಿತ್ಸೆ, ಅನುಕೂಲಗಳ ಮಾಹಿತಿ ಎಲ್ಲಾ ರೋಗಿಗಳಿಗೂ ಸಿಗುವಂತಾಗಬೇಕು ಎಂದು ಕಂಕಣ ತೊಟ್ಟರು. ರಸ್ತೆಯ ಪ್ರಯಾಣಕ್ಕೆ ಮುಂದಾದರು.

ಕಾಯಿಲೆಯೊಂದಿಗೆ ಪ್ರಯಾಣ ಅಷ್ಟು ಸುಲಭ ಅಲ್ಲ. ಆದರೂ ಈ ಸವಾಲುಗಳನ್ನು ಸ್ವೀಕರಿಸಲು ಅವರು ಸಾಕಷ್ಟು ತಯಾರಿ ನಡೆಸಿದರು.

‘ನಾನು ಹುಟ್ಟಿನಿಂದಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದೇನೆ. ಟೆಕ್ಕಿಯಾಗಿ ಒಂದಿಷ್ಟು ವರ್ಷ ಕೆಲಸ ಮಾಡಿದೆ. ಕಾಯಿಲೆ ಕಾರಣದಿಂದ ಮಧ್ಯದಲ್ಲೇ ವೃತ್ತಿಯನ್ನು ತೊರೆಯಬೇಕಾಯಿತು. ಸಾವಿಗೆ ಇನ್ನೇನು ಹತ್ತಿರವಾಗುತ್ತಿದ್ದೇನೆ ಅನ್ನುವ ಸಂದರ್ಭದಲ್ಲಿ ಮರುಜನ್ಮ ಸಿಕ್ಕಿತು. ಎಷ್ಟು ಜನರಿಗೆ ಈ ಭಾಗ್ಯ ಸಿಗಲು ಸಾಧ್ಯ. ಮಾಹಿತಿ ಇಲ್ಲದೇ ಜೀವ ಕಳೆದುಕೊಳ್ಳುವವರ ಸಂಖ್ಯೆಯೇ ನಮ್ಮಲ್ಲಿ ಹೆಚ್ಚಿದೆ. ಅವರಿಗೆಲ್ಲಾ ಸ್ಪೂರ್ತಿಯಾಗಲು ನಿರ್ಧರಿಸಿದೆ.2016ರ ಹೊತ್ತಿಗೆ ಸಾಕಷ್ಟು ಗುಣಮುಖನಾಗಿದ್ದೆ. ತಡಮಾಡದೇ ಮೊದಲ ರಸ್ತೆ ಪ್ರಯಾಣವನ್ನು ಆರಂಭಿಸಿದೆವು. ಪತ್ನಿ ಮಮತಾ ಪ್ರಸಾದ್ ಕೂಡ ನನ್ನ ಜೊತೆಯಾದರು’ ಎಂದು ಪುನರ್ಜನ್ಮವನ್ನು ಸಾರ್ಥಕ ಮಾಡಿಕೊಂಡ ಹಾದಿಯನ್ನು ಅವರು ವಿವರಿಸಿದರು.

ಹರಿಪ್ರಸಾದ್ ಅವರು ಮೊದಲು ಬೆಂಗಳೂರಿನಿಂದ ಹೊರಟು ಭೂತಾನ್‌ನ ಅನೇಕ ಭಾಗಗಳಿಗೆ ತಮ್ಮ ಕಾರ್‌ನಲ್ಲಿಯೇ ಪ್ರಯಾಣ ಮಾಡಿದರು. ಆಯಾಸವಾಗದಂತೆ ವೈದ್ಯರು ಕೊಟ್ಟಿದ್ದ ಬ್ಯಾಟರಿಯೊಂದಿಗೆ (ಎರಡು ದಿನಗಳಿಗೊಮ್ಮೆ ಚಾರ್ಜ್ ಮಾಡಿ ಎದೆಯ ಮೇಲೆ ಇಟ್ಟುಕೊಳ್ಳಬೇಕು) ಪ್ರಯಾಣ ಮಾಡಿದರು.

2017ರಲ್ಲಿ ಗುಜರಾತ್‌, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಭಾಗಗಳಿಗೆ ತೆರಳಿದರು. 2019ರಲ್ಲಿ 40ದಿನ ಬೆಂಗಳೂರಿನಿಂದ ನೇಪಾಳಕ್ಕೆ ಪ್ರಯಾಣ ಮಾಡಿದರು. ಈ ಪ್ರದೇಶಗಳ ಕೆಲವು ವಿಶ್ವವಿದ್ಯಾಲಯಗಳು, ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯರು ಎಲ್ಲರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ನಮ್ಮ ಮಾತುಗಳನ್ನು ಕೇಳಿದ ಮೇಲೆಲಖನೌನ ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿಯೂ ಡಿಬಿಎಸ್‌ ತಂತ್ರಜ್ಞಾನ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಸಾಕಷ್ಟು ಜನರಿಗೆ ಈ ಕಾಯಿಲೆಯನ್ನು ಹತೋಟಿಗೆ ತರಬಹುದು ಎಂಬುದೇ ಗೊತ್ತಿಲ್ಲ. ಪಾರ್ಕಿನ್‌ಸನ್‌ ಎಂದರೆ ಮಾರಣಾಂತಿಕ ಎಂಬ ನಂಬಿಕೆಯೇ ಇದೆ. ಕೆಲವರಿಗಾದರೂ ನನ್ನಿಂದ ಮಾಹಿತಿ ಸಿಕ್ಕಿರುವುದೇ ಸಾರ್ಥಕತೆ’ ಎನ್ನುತ್ತಾರೆ ಹರಿಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.