ADVERTISEMENT

ಜಲ ಸ್ವಾವಲಂಬನೆಗೆ ಇಂಗು ಬಾವಿ?

ಅಮೃತ ಕಿರಣ ಬಿ.ಎಂ.
Published 16 ಮೇ 2019, 19:50 IST
Last Updated 16 ಮೇ 2019, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರಿನಲ್ಲಿ ವರ್ಷಕ್ಕೆ ಕನಿಷ್ಠ 600 ಮಿಲಿಮೀಟರ್‌ನಿಂದ ಸಾವಿರ ಮಿಲಿಮೀಟರ್‌ನಷ್ಟು ಮಳೆ ಸುರಿಯುತ್ತದೆ. ಆದರೆ ಬಿದ್ದ ನೀರೆಲ್ಲವೂ ಪ್ರವಾಹದ ರೀತಿ ಚರಂಡಿ ಸೇರುತ್ತಿದೆ. ಶುದ್ಧ ನೀರು ಹೀಗೆ ಪೋಲಾಗುವುದನ್ನು ತಪ್ಪಿಸಲು ಹಾಗೂ ಅಂತರ್ಜಲವನ್ನು ಭರ್ತಿ ಮಾಡಲು ಸದ್ಯಕ್ಕಿರುವ ಪರಿಹಾರವೆಂದರೆ ಇಂಗು ಬಾವಿ ನಿರ್ಮಾಣವೊಂದೇ ಎನ್ನುತ್ತಾರೆ ತಜ್ಞರು. ಈ ಬಗ್ಗೆ ಒಂದು ಸಮಗ್ರ ನೋಟ ಕಟ್ಟಿಕೊಡುವ ‘ಮೆಟ್ರೊ’ ಪ್ರಯತ್ನವಿದು.

***

ಮಳೆಗಾಲ ಬಂದಿದೆ. ಮಳೆ ನೀರು ಹಿಡಿದಿಡಲು ಏನಾದರೂ ಯೋಚಿಸಿದ್ದೀರಾ? ಮಳೆ ನೀರನ್ನು ಇಂಗಿಸಲು ಮುಂದಾಗಿದ್ದೀರಾ? ನಿಮ್ಮ ರೀತಿ ಯೋಚಿಸಿದವರ ಪೈಕಿ ಶೇ 12ರಷ್ಟು ಜನರು ಮಾತ್ರ ಬಾವಿಗಳನ್ನು ನಿರ್ಮಿಸಿ ನೀರು ಇಂಗಿಸುತ್ತಿದ್ದಾರೆ. ಈಗ ನಿಮ್ಮ ಸರದಿ.

ADVERTISEMENT

ಬೆಂಗಳೂರು ಕೆರೆ ಹಾಗೂ ಬಾವಿ ಆಧಾರಿತ ನಗರವಾಗಿಯೇ ಗುರುತಿಸಿಕೊಂಡಿದೆ. ಇಲ್ಲಿ 10 ಅಡಿಯಷ್ಟು ಬಾವಿ ತೋಡಿದರೆ ಸಾಕು ನೀರು ಚಿಮ್ಮುತ್ತಿತ್ತು. ಕೆಲವು ಪ್ರದೇಶಗಳಲ್ಲಿ ಈಗಲೂ ಹತ್ತು ಅಡಿಗೇ ನೀರು ಸಿಗುತ್ತಿದೆ. ಕಾವೇರಿ ನೀರು ಹಾಗೂ ಬೋರ್‌ವೆಲ್ ಬಂದ ಮೇಲೆ ಬಾವಿ ನೀರನ್ನು ಬಳಸುವ ಪರಿಪಾಠವೇ ಹೊರಟುಹೋಗಿದೆ. 20ರಿಂದ 30 ಅಡಿ ಅಗೆದರೆ ಸಾಕು ಈಗಲೂ ನೀರು ಜಿನುಗುತ್ತದೆ. ನಗರ ಎದುರಿಸುತ್ತಿರುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕೊರತೆಗೆ ಬಾವಿ ತೋಡುವ ವಿಧಾನ ಬ್ರಹ್ಮಾಸ್ತ್ರ ಎನಿಸಿಕೊಳ್ಳುತ್ತಿದೆ.

ಬೆಂಗಳೂರಿನಲ್ಲಿ ವರ್ಷಕ್ಕೆ ಕನಿಷ್ಠ 600 ಮಿಲಿಮೀಟರ್‌ನಿಂದ ಸಾವಿರ ಮಿಲಿಮೀಟರ್‌ನಷ್ಟು ಮಳೆ ಸುರಿಯುತ್ತದೆ. ಆದರೆ ಬಿದ್ದ ನೀರೆಲ್ಲವೂ ಪ್ರವಾಹದ ರೀತಿ ಚರಂಡಿ ಸೇರುತ್ತಿದೆ. ಶುದ್ಧ ನೀರು ಹೀಗೆ ಪೋಲಾಗುವುದನ್ನು ತಪ್ಪಿಸಲು ಹಾಗೂ ಅಂತರ್ಜಲವನ್ನು ಭರ್ತಿ ಮಾಡಲು ಸದ್ಯಕ್ಕಿರುವ ಪರಿಹಾರವೆಂದರೆ ಇಂಗು ಬಾವಿ ನಿರ್ಮಾಣವೊಂದೇ ಎನ್ನುತ್ತಾರೆ ತಜ್ಞರು.

ಇಂಗು ಬಾವಿಗೆ ಇಂಥದ್ದೇ ಜಾಗ ಆಗಬೇಕೆಂದಿಲ್ಲ. ರಸ್ತೆಯ ಬದಿಯಲ್ಲೂ ನೀರಿಂಗಿಸುವ ಬಾವಿ ತೋಡಬಹುದು.ಬೋವಿ ಜನಾಂಗದವರು ಸಾವಿರಾರು ವರ್ಷಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಮಣ್ಣು ವಡ್ಡರು ಎಂಬ ಹೆಸರೂ ಇದೆ. ಯಾವ ಜಾಗದಲ್ಲಿ ಭೂಮಿ ಅಗೆದರೆ ಉತ್ತಮ ಎಂಬುದು ಬೋವಿ ಜನಾಂಗದವರಿಗೆ ಗೊತ್ತು. ಮೊದಲೆಲ್ಲಾ ಬಾವಿ ತೆಗೆಯುತ್ತಿದ್ದವರು ಇವರೇ. ರಾಮನಗರ, ಆನೇಕಲ್, ನೆಲಮಂಗಲ, ಪಾಂಡವಪುರ, ಹೀಗೆ ಎಲ್ಲ ಕಡೆಯಲ್ಲೂ ಬೋವಿ ಜನಾಂಗದವರು ಇದ್ದಾರೆ. ಇವರಿಗೆ ಮಣ್ಣು ಹಾಗೂ ನೀರಿನ ಬಗ್ಗೆ ಇರುವ ಜ್ಞಾನ ಅಪಾರ.ಬೋರ್‌ವೆಲ್‌ ಬಂದ ಬಳಿಕ ಇವರು ಜೀವನೋಪಾಯ ಕಷ್ಟದಲ್ಲಿದೆ. ಅವರಿಗೆ ಇಂಗು ಗುಂಡಿಗಳನ್ನು ನಿರ್ಮಿಸುವ ಕೆಲಸ ವಹಿಸುವ ಮೂಲಕ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಉದ್ದೇಶವೂ ಇದೆ ಎನ್ನುವುದು ಫ್ರೆಂಡ್ಸ್ ಆಫ್ ಲೇಕ್ ಸಂಸ್ಥೆಯ ಸಂಚಾಲಕ ರಾಮಪ್ರಸಾದ್ ಅವರ ನಿಲುವು.

ಫ್ರೆಂಡ್ಸ್‌ ಆಫ್‌ ಲೇಕ್ಸ್, ಬಯೋಮ್ ಹಾಗೂ ಇಂಡಿಯಾ ಕೇರ್ಸ್ ಸಂಸ್ಥೆಗಳು ನಗರದಲ್ಲಿ ಇಂಗು ಬಾವಿಗಳ ನಿರ್ಮಾಣಕ್ಕಾಗಿ ಶ್ರಮಿಸುತ್ತಿವೆ.ಯೋಜನೆ ಜಾರಿಗೆ ಫ್ರೆಂಡ್ಸ್ ಆಫ್ ಲೇಕ್ ಸಹಕಾರ ನೀಡಿದರೆ, ಬಯೋಮ್ ತಾಂತ್ರಿಕ ನೆರವು ನೀಡುತ್ತದೆ. ಯೋಜನೆಗಳಿಗೆ ಹಣಕಾಸು ನೆರವು ನೀಡುವ ಕೆಲಸವನ್ನು ಇಂಡಿಯಾ ಕೇರ್ಸ್ ಮಾಡುತ್ತಿದೆ.

ನೀರಿಂಗಿಸುವ ಅಭಿಯಾನ

ಬೆಂಗಳೂರಿನ ನೀರಿನ ದಾಹ ಇಂಗಿಸಬೇಕಾದರೆ ಮಳೆ ನೀರನ್ನು ಭೂಮಿಗೆ ಇಂಗಿಸಬೇಕು ಎಂಬ ಉದ್ದೇಶದೊಂದಿಗೆ ನಾಲ್ಕು ವರ್ಷದ ಹಿಂದೆ ಮಿಲಿಯನ್ ವೆಲ್ಸ್ ಎಂಬ ಅಭಿಯಾನ ಆರಂಭವಾಯಿತು.ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಹಂತದಲ್ಲಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ಪಾಳುಬಿದ್ದಿದ್ದ ಏಳು ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿತ್ತು. ಈ ಬಾವಿಗಳ ಚಿತ್ರಣವೇ ಈಗ ಬದಲಾಗಿದೆ. ಇದೀಗ ನಿತ್ಯ 80 ಸಾವಿರ ಲೀಟರ್ ನೀರು ಹಿಡಿದಿಡುವ ಸಾಮರ್ಥ್ಯ ಇವುಗಳಿಗೆ ಬಂದಿದೆ. ಈ ಯತ್ನದ ಮುಂದುವರಿದ ಭಾಗವಾಗಿ, ಕರಗದ ಕುಂಟೆಯೂ ಸೇರಿದಂತೆ ಮೂರು ಹೊಂಡಗಳನ್ನು (ಕುಂಟೆ) ಪುನರುಜ್ಜೀವನ ಮಾಡಲಾಗುತ್ತಿದೆ. 65 ಇಂಗು ಬಾವಿ ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ಕಾರ್ಯಕ್ರಮಕ್ಕೆ ಫಸ್ಟ್ ಅಮೆರಿಕನ್ ಇಂಡಿಯಾ ಹಣಕಾಸಿನ ನೆರವು ನೀಡುತ್ತಿದೆ.

ಇಂಗು ಬಾವಿ ಕನಿಷ್ಟ 15 ಅಡಿ ಆಳ ಇರಬೇಕು. ಆಯಾ ಮಣ್ಣಿನ ಗುಣ ನೋಡಿಕೊಂಡು 30 ಅಡಿವರೆಗೂ ಇದ್ದರೆ ಅಡ್ಡಿಯಿಲ್ಲ. ಆಗ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಬರುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ನೀರು ಕೊಡುವ ಬಾವಿಗಳು

ನೀರು ಇಂಗಿಸುವ ಉದ್ದೇಶದಿಂದ ಐದಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿಗಳು ಇಂದು ನೀರು ಕೊಡುವ ಬಾವಿಗಳಾಗಿ ಮಾರ್ಪಾಡಾಗಿವೆ ಎನ್ನುತ್ತಾರೆ ರಾಮಪ್ರಸಾದ್. ಇದನ್ನು ಹೇಳುವಾಗ ಅವರ ಮೊಗದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. ಇವುಗಳ ಪ್ರಾಥಮಿಕ ಉದ್ದೇಶ ನೀರು ಇಂಗಿಸುವುದೇ ಆಗಿದ್ದರೂ, ಅಗತ್ಯವಿದ್ದರೆ ಆ ನೀರನ್ನು ಬಳಸಿಕೊಳ್ಳಲು ಅಡ್ಡಿಯಿಲ್ಲ.

ಬೆಂಗಳೂರಿನಲ್ಲಿ 10 ಲಕ್ಷ ಇಂಗು ಬಾವಿಗಳು ನಿರ್ಮಾಣವಾದ ಬಳಿಕ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ತಲೆದೋರುವ ಸ್ಥಿತಿ ಎದುರಾಗದು. ಕಾವೇರಿ ನೀರಿಗಾಗಿ ಬೀದಿಯಲ್ಲಿ ಹೊಡೆದಾಡುವ ಸ್ಥಿತಿಯೂ ಇರದು ಎನ್ನುತ್ತಾರೆ ತಜ್ಞರು. ನೀರಿನ ಸ್ವಾವಲಂಬನೆ ಸದ್ಯದ ತುರ್ತು.

2,500 ಬಾವಿ ನಿರ್ಮಿಸಲು ಪಣ

ಹಲವು ಸಂಘಟನೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯದವರು ಜಲ ಸ್ವಾವಲಂಬನೆ ಸಾಧಿಸಲು ಮುಂದಾಗಿದ್ದಾರೆ.ರೈನ್‌ಬೋ ಡ್ರೈವ್ ನಾಲ್ಕು ವರ್ಷದಿಂದ ಹಿಂದೆಯೇ ಈ ಕೆಲಸ ಮಾಡಿದೆ. ಯಲಹಂಕದ ವ್ಹೀಲ್ ಅಂಡ್ ಆಕ್ಸೆಲ್ ಘಟಕದವರೂ ಇದನ್ನು ಸಾಧ್ಯವಾಗಿಸಿದ್ದಾರೆ. ಬೆಳ್ಳಂದೂರು ನಿವಾಸಿಗಳು ಈ ವರ್ಷ 2,500 ಇಂಗುಬಾವಿ ನಿರ್ಮಿಸುವ ಗುರಿ ಹಾಕಿಕೊಂಡಿದ್ದಾರೆ. ಈ ಭಾಗದ 20ಕ್ಕೂ ಹೆಚ್ಚು ನಿವಾಸಿಗಳ ಸಂಘಟನೆಗಳು (ಆರ್‌ಡಬ್ಲ್ಯೂಎ) ಈ ಕೈಂಕರ್ಯಕ್ಕೆ ಪಣತೊಟ್ಟಿವೆ. ಮಳೆ ನೀರು ಇಂಗಿಸಿ, ಬಾವಿಗಳನ್ನು ಉಳಿಸಿಕೊಳ್ಳುವ ಉದ್ದೇಶ ಇವರದ್ದು.

ರೈನ್‌ಬೋ ಡ್ರೈವ್ ಯಶೋಗಾಥೆ

ಸರ್ಜಾಪುರದಲ್ಲಿ 36 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರೈನ್‌ಬೋ ಡ್ರೈವ್ ಎಂಬ ಅಪಾರ್ಟ್‌ಮೆಂಟ್ ಸಮುಚ್ಛಯದ ಯಶೋಗಾಥೆ ಎಲ್ಲರಿಗೂ ಮಾದರಿ. ತಗ್ಗು–ದಿಣ್ಣೆಗಳಿಂದ ಕೂಡಿರುವ ಈ ಜಾಗದಲ್ಲಿ ಮಳೆಗಾಲದಲ್ಲಿ ಪ್ರವಾಹವೇ ಸೃಷ್ಟಿಯಾಗುತ್ತಿತ್ತು. ಆದರೆ ಜನರ ಬಳಕೆಗೆ ಸಾಕಷ್ಟು ನೀರು ಲಭ್ಯವಿರಲಿಲ್ಲ. ಕಾವೇರಿ ನೀರು ಪೂರೈಕೆ ಇಲ್ಲದ ಕಾರಣ ಸಂಪೂರ್ಣವಾಗಿ ಕೊಳವೆಬಾವಿ ನೀರನ್ನೇ ಇಲ್ಲಿ ನಿವಾಸಿಗಳು ಆಶ್ರಯಿಸಿದ್ದರು.

ನೀರಿನ ಕೊರತೆ ನೀಗಿಸಲೇಬೇಕಿತ್ತು. ಹೀಗಾಗಿ ಇಲ್ಲಿನ ಜನರು ಸುಸ್ಥಿರ ನೀರು ನಿರ್ವಹಣೆಗೆ ನಿರ್ಧರಿಸಿದ್ದು ಮಹತ್ವದ ಹೆಜ್ಜೆಯಾಯಿತು. ಮಳೆ ನೀರನ್ನು ನೆಲದ ಆಳಕ್ಕೆ ಇಂಗಿಸುವ, ಮಳೆ ನೀರನ್ನು ಸಂಗ್ರಹಿಸುವ ಹಾಗೂ ನೀರು ಮರುಬಳಕೆ ಮಾಡುವ ವಿವಿಧ ವಿಧಾನಗಳನ್ನು ಅಳವಡಿಸಿಕೊಂಡರು. ಪರಿಣಾಮ ಮಾತ್ರ ಅಗಾಧ.

ಇಡೀ ಪ್ರದೇಶದಲ್ಲಿ ಒಟ್ಟು 360 ಇಂಗು ಬಾವಿಗಳನ್ನು ನಿರ್ಮಿಸಲಾಗಿತ್ತು. ಹೆಚ್ಚುವರಿ ಮಳೆನೀರು ಈ ಇಂಗುಬಾವಿಗಳನ್ನು ಸೇರಿಕೊಂಡಿತು. ಅದು ಕ್ರಮೇಣ ಅಂತರ್ಜಲದೊಂದಿಗೆ ಬೆರೆತು, ಅದರ ಮಟ್ಟ ಏರಿಕೆಯಾಯಿತು. ತನ್ಮೂಲಕ ನೀರಿನ ವಿಚಾರದಲ್ಲಿ ರೈನ್‌ಬೋ ಡ್ರೈವ್ ಸ್ವಾವಲಂಬಿಯಾಯಿತು. ಹೊರಗಡೆಯಿಂದ ಒಂದೇ ಒಂದು ಹನಿ ನೀರು ಅಪಾರ್ಟ್‌ಮೆಂಟ್‌ನೊಳಗೆ ಪ್ರವೇಶಿಸುತ್ತಿಲ್ಲ. ಈ ಬಾವಿಗಳ ನೀರೇ ಎಲ್ಲ ಮನೆಗಳಿಗೂ ಬಳಕೆಯಾಗುತ್ತಿದೆ. ಕುಡಿಯುವ ನೀರು, ದಿನಬಳಕೆ, ಉದ್ಯಾನ ನಿರ್ವಹಣೆಗೂ ಈ ನೀರೇ ಆಧಾರ. ಸಮುದಾಯದ ಜನರ ದೃಢ ನಿರ್ಧಾರದಿಂದ ಜಲಸ್ವಾವಲಂಬನೆ ಇಲ್ಲಿ ಮೂರ್ತರೂಪ ಪಡೆದಿದೆ.

ಇಂಗು ಬಾವಿ ಏಕೆ ಬೇಕು

* ಪ್ರತಿ ವರ್ಷವೂ ಹೆಚ್ಚುತ್ತಿರುವ ಬರದ ಛಾಯೆಯನ್ನು ಈ ಮೂಲಕ ಒಂದಿಷ್ಟು ಕಡಿಮೆ ಮಾಡಬಹುದು

* ವ್ಯರ್ಥವಾಗಿ ಚರಂಡಿ ಸೇರುವ ಮಳೆ ನೀರನ್ನು ನೇರವಾಗಿ ಅಂತರ್ಜಲಕ್ಕೆ ಸೇರಿಸಬಹುದು

* ಇಂಗು ಬಾವಿಯಲ್ಲಿ ತುಂಬಿಕೊಂಡಿರುವ ನೀರನ್ನು ದಿನಬಳಕೆಗೂ ಉಪಯೋಗಿಸಬಹುದು

* ನೆಲದಲ್ಲಿ ಸಹಜವಾಗಿ ಮೂಡುವ ಬಿರುಕು, ಪೊಟರೆ ಮೂಲಕ (ಇಕ್ವಿಫರ್) ಮಳೆನೀರು ನೆಲದಡಿಗೆ ಜಾರುತ್ತದೆ

* ಕಟ್ಟಡಗಳಿಂದ ತುಂಬಿರುವ ನಗರ ಪ್ರದೇಶಗಳಲ್ಲಿ ಇದು ಸ್ವಲ್ಪ ಕಷ್ಟ. ಇಂಗುಬಾವಿ ಮೂಲಕ ಇದು ಸಾಧ್ಯ

ಬಾವಿ ರಚನೆ ಹೀಗಿರಲಿ...

ಬಾವಿಯನ್ನು ತೋಡುವವರು ಹಾಗೂ ಪ್ಲಂಬಿಂಗ್ ಕೆಲಸ ಮಾಡುವವರು ಅಗತ್ಯ. 30*40 ಅಳತೆಯ ನಿವೇಶನದಲ್ಲಿ 3 ಅಡಿ ವ್ಯಾಸದ, 20 ಅಡಿ ಆಳದ ಬಾವಿ ನಿರ್ಮಿಸಬಹುದು. 60*40 ಅಳತೆಯ ನಿವೇಶನದಲ್ಲಿ ನಾಲ್ಕಡಿ ವ್ಯಾಸವಿರುವ 30 ಅಡಿ ಆಳದ ಬಾವಿ ಮಾಡಬಹುದು. ಒಂದು ಎಕರೆ ಜಾಗದಲ್ಲಿ ನಾಲ್ಕೈದು ಇಂಗು ಬಾವಿ ನಿರ್ಮಿಸಬಹುದು.

ಮನೆಯ ಸಂಪ್‌ ತುಂಬಿ ಹರಿಯುವ ನೀರನ್ನು ಈ ಬಾವಿಗೆ ಸಂಪರ್ಕಿಸಬಹುದು. ಮಳೆ ಬಂದಾಗ ಮನೆಯ ಚಾವಣಿಯಿಂದ ಪೈಪ್ ಮೂಲಕ ಕೆಳಗೆ ಬರುವ ನೀರನ್ನೂ ಸಂಪರ್ಕಿಸಬಹುದು. ಒಂದು ವೇಳೆ ಸಾರ್ವಜನಿಕವಾಗಿ ಇಂಗು ಬಾವಿ ನಿರ್ಮಿಸುವಂತಿದ್ದರೆ, ಹರಿದುಬರುವ ಮಳೆ ನೀರನ್ನು ಬಾವಿಯತ್ತ ತಿರುಗಿಸಿದರೆ ಆಯ್ತು.

ಬಾವಿಯ ಜಾಗ ಹಾಗೂ ನಿರ್ಮಾಣ ವಿಧಾನ

* ಮನೆಯಾಗಿದ್ದರೆ, ಬೋರ್‌ವೆಲ್‌ನ ಸಮೀಪದಲ್ಲಿ ಬಾವಿ ನಿರ್ಮಿಸಿ

* ಶೌಚಾಲಯ, ಸೆಪ್ಟಿಕ್ ಟ್ಯಾಂಕ್‌ ಹಾಗೂ ಕಟ್ಟಡದ ಬುನಾದಿಯಿಂದ ದೂರಿವಿರಲಿ

* ಸಾರ್ವಜನಿಕ ಜಾಗವಾಗಿದ್ದರೆ, ಮಳೆನೀರು ಹರಿಯುವ ಹಾಗೂ ಬೋರ್‌ವೆಲ್ ಬಳಿ ನಿರ್ಮಿಸಿ

* ಕಾಂಕ್ರೀಟ್‌ ರಿಂಗ್‌ ಜೋಡಿಸುವ ಕಾರಣ, 6–8 ಅಡಿ ಸುತ್ತಳತೆಯ ಗುಂಡಿ ತೋಡಲಾಗುತ್ತದೆ

* ರಿಂಗ್‌ಗಳು ಸರಿದಾಡಲು ಆಸ್ಪದ ನೀಡದಂತೆ ಸುತ್ತಲೂ ಜಲ್ಲಿಕಲ್ಲುಗಳನ್ನು ಹಾಕಬೇಕು

* ಮೇಲ್ಭಾಗದಲ್ಲಿ ಮರೆಯದಂತೆ ಕಾಂಕ್ರೀಟ್ ಸ್ಲ್ಯಾಬ್‌ ಇರಿಸಬೇಕು.

* ಒಂದು ಇಂಗುಗುಂಡಿ ನಿರ್ಮಾಣಕ್ಕೆ ಕನಿಷ್ಠ ₹20 ಸಾವಿರ ವೆಚ್ಚ ತಗಲುತ್ತದೆ

* ನಿರ್ಮಾಣ ಸ್ಥಳ ಹಾಗೂ ವಿಧಾನಕ್ಕಾಗಿ ತಜ್ಞರ ನೆರವು ಪಡೆಯುವುದು ಸೂಕ್ತ

ನೀರಿನ ಸೆಲೆ ಪತ್ತೆಹಚ್ಚುವ ಪೆದ್ದಣ್ಣ

ಬಾವಿ ತೋಡುವ ಕುಲಕಸುಬಿನ ಮಣ್ಣುವಡ್ಡರ ಪೆದ್ದಣ್ಣ ಈ ಕೆಲಸದಲ್ಲಿ ನಿಷ್ಣಾತ. ಯಾವ ಪ್ರದೇಶದಲ್ಲಿ ಎಲ್ಲಿ ಬಾವಿ ತೆಗೆದರೆ ನೀರು ಬರುತ್ತದೆ ಎಂದು ಕರಾರುವಕ್ಕಾಗಿ ಹೇಳಬಲ್ಲ ಜಾಣ್ಮೆ ಈತನದ್ದು. ತಮಿಳುನಾಡು ಮೂಲದ ಇವರ ಕುಟುಂಬ ಬೆಂಗಳೂರಿಗೆ ಬಂದು ವರ್ಷಗಳೇ ಕಳೆದಿವೆ. ತಮ್ಮ ಕುಟುಂಬದ ಎಲ್ಲರೂ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ವರ್ಷಪೂರ್ತಿ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದಾರೆ. ಸರ್ಜಾಪುರ, ಆನೇಕಲ್, ಹರಳೂರು ರಸ್ತೆ, ಬನ್ನೇರುಘಟ್ಟ ರಸ್ತೆ ಮೊದಲಾದೆಡೆ ಇವರು ಕೆಲಸ ಮಾಡಿದ್ದಾರೆ. ಪೆದ್ದಣ್ಣ ನೇತೃತ್ವದಲ್ಲಿ ಕಬ್ಬನ್‌ಪಾರ್ಕ್‌ನಲ್ಲಿ ಇಂಗು ಬಾವಿ ನಿರ್ಮಾಣ ಹಾಗೂ ಕುಂಟೆಗಳ ಪುನಶ್ಚೇತನ ಕಾಮಗಾರಿ ನಡೆಯುತ್ತಿದೆ.

ಎಲ್ಲಿ ನೀರಿದೆ ಎಂದು ಹೇಗೆ ಪತ್ತೆ ಹಚ್ಚುತ್ತೀರಿ ಎಂಬ ಪ್ರಶ್ನೆಗೆ ವಿನಯದಿಂದಲೇ ಉತ್ತರಿಸುವ ಪೆದ್ದಣ್ಣ, ತಾತನಿಂದ ಅಪ್ಪನಿಗೆ, ಅಪ್ಪನಿಂದ ತಮಗೆ ಈ ವಿದ್ಯೆ ಬಂದಿದೆ ಎನ್ನುತ್ತಾರೆ. ಇಡೀ ಪ್ರದೇಶವನ್ನು ಪರಿಶೀಲಿಸಿದರೆ ಸಾಕು ನೀರಿನ ಸೆಲೆ ಎಲ್ಲಿ ಇರಬಹುದು ಎಂಬ ಅಂದಾಜು ಸಿಗುತ್ತದೆ ಎನ್ನುತ್ತಾರೆ ಅವರು. ತೆರೆದ ಬಾವಿ, ಇಂಗು ಬಾವಿ, ಇಂಗು ಗುಂಡಿ, ಮಳೆನೀರು ಸಂಗ್ರಹ, ಬಾವಿ ಹಾಗೂ ಕುಂಟೆಗಳನ್ನು ಸ್ವಚ್ಛಮಾಡುವ ವೃತ್ತಿಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ 60 ಇಂಗು ಬಾವಿಗಳನ್ನು ನಿರ್ಮಿಸಿದ್ದಾರೆ. ಹರಳೂರು ರಸ್ತೆಯಲ್ಲಿ ಸ್ಥಳೀಯರೊಬ್ಬರು 1,200 ಅಡಿ ಆಳದ ಕೊಳವೆ ಬಾವಿ ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಪೆದ್ದಣ್ಣ ಹಾಗೂ ಅವರ ತಂಡ ಬಾವಿ ತೆಗೆಸುವ ಪ್ರಸ್ತಾವ ಇಟ್ಟಿತು. ಬಾವಿ ತೆಗೆಯಲು ಶುರು ಮಾಡಿದ 20 ಅಡಿಗೇ ನೀರು ಕಾಣಿಸಿಕೊಂಡಿದೆ. ಇಲ್ಲಿ 40 ಅಡಿ ಆಳದ ಬಾವಿ ನಿರ್ಮಾಣವಾಗುತ್ತಿದೆ.

ಪೆದ್ದಣ್ಣ ಸಂಪರ್ಕ ಸಂಖ್ಯೆ: 9742423145/9751548126

***

ದುಡ್ಡು ಕೊಟ್ಟು ನೀರು ತೆಗೆದುಕೊಳ್ಳುತ್ತೇನೆ ಎಂಬ ಜನರ ಮನೋಭಾವ ಬದಲಾಗಬೇಕು. ಈವರೆಗೆ 25 ಸಾವಿರ ಬಾವಿಗಳನ್ನು ತೋಡಲಾಗಿದೆ. 2025ರ ಹೊತ್ತಿಗೆ ನಗರ ಜಲ ಸ್ವಾವಲಂಬನೆ ಸಾಧಿಸುವ ವಿಶ್ವಾಸವಿದೆ.

-ರಾಮಪ್ರಸಾದ್, ಫ್ರೆಂಡ್ಸ್ ಆಫ್ ಲೇಕ್‌’ ಸಂಚಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.