ADVERTISEMENT

ವಿಶ್ವ ಗುಬ್ಬಚ್ಚಿ ದಿನ: ಗುಬ್ಬಚ್ಚಿಗಳ ಹಾಡು –ಪಾಡು...

ಡಾ.ಎಸ್.ಶಿಶುಪಾಲ
Published 20 ಮಾರ್ಚ್ 2022, 12:10 IST
Last Updated 20 ಮಾರ್ಚ್ 2022, 12:10 IST
ಕೈತೋಟದಲ್ಲಿರುವ ಗುಬ್ಬಚ್ಚಿ ಸಂಸಾರ (ಚಿತ್ರ ಕೃಪೆ: ಡಾ. ಎಸ್. ಶಿಶುಪಾಲ)
ಕೈತೋಟದಲ್ಲಿರುವ ಗುಬ್ಬಚ್ಚಿ ಸಂಸಾರ (ಚಿತ್ರ ಕೃಪೆ: ಡಾ. ಎಸ್. ಶಿಶುಪಾಲ)   

ಗುಬ್ಬಚ್ಚಿಗಳ ಕಥೆಗಳನ್ನು ಕೇಳಿ ಬೆಳೆದವರು ನಾವು. ಅವುಗಳ ಸೌಮ್ಯ ಸ್ವಭಾವ ಮತ್ತು ಮನೆಯ ಸುತ್ತಮುತ್ತ ಚಿಲಿಪಿಲಿಯೆನ್ನುತ್ತಾ ಕಾಳು ಆರಿಸುವುದನ್ನು ನೋಡುತ್ತಾ ಅವುಗಳ ಬಗ್ಗೆ ಪ್ರೀತಿಯುಂಟಾಗಿತ್ತು. ಆದರೆ, ಒಂದೆರಡು ದಶಕಗಳಿಂದ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನರಿತು ನಾನಾ ಸಂಘಟನೆಗಳು ಗುಬ್ಬಚ್ಚಿ ಮೇಲಿನ ಪ್ರೀತಿಯಿಂದ ಅವುಗಳ ಸಂತತಿ ನಾಶವಾಗಬಾರದೆಂಬ ಸದುದ್ದೇಶ ಹೊಂದಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮಾರ್ಚ್‌ 20ರಂದು ವಿಶ್ವ ಗುಬ್ಬಚ್ಚಿ ದಿನ. ನಗರಗಳಲ್ಲಿ ವಿನಾಶದ ಅಂಚಿನಲ್ಲಿರುವ ಗುಬ್ಬಚ್ಚಿಗಳು ಮತ್ತು ಇತರೆ ಹಕ್ಕಿಗಳ ಬಗ್ಗೆ ಅರಿವು ಮೂಡಿಸಿ ಅವುಗಳ ಸಂಖ್ಯೆ ಅಭಿವೃದ್ಧಿ ಪಡಿಸುವುದು ಈ ದಿನಾಚರಣೆಯ ಉದ್ದೇಶ.

ಫ್ರಾನ್ಸ್‌ನ ಎಕೋ–ಸಿಸ್ ಅಕ್ಷನ್ ಫೌಂಡೇಶನ್ ಸಂಸ್ಥೆ ಮತ್ತು ಭಾರತದ ನೇಚರ್ ಫಾರ್‌–ಎವರ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ಈ ದಿನಾಚರಣೆ ನಡೆಯುತ್ತಿದೆ. ವಿಶ್ವದ್ಯಾಂತ ಈ ದಿನ ಹಲವಾರು ಪರಿಸರ ಸಂಘಟನೆಗಳು ವಿವಿಧ ಕಾರ್ಯಕ್ರಮಗಳು ನಡೆಸುತ್ತವೆ.

ಗುಬ್ಬಚ್ಚಿಗಳು ಚಿಕ್ಕ ಗಾತ್ರದ (15 ಸೆಂ.ಮೀ.) ಪೇಲವ ಬಣ್ಣದ ಹಕ್ಕಿಗಳು. ಗಂಡು ಹಕ್ಕಿಯ ತಲೆ ಮೇಲ್ಭಾಗ ಬೂದು ಬಣ್ಣದ್ದಾಗಿದ್ದು, ಕಣ್ಣಿನ ಸುತ್ತದಿಂದ ಕಪ್ಪು ಬಣ್ಣ ಕುತ್ತಿಗೆವರೆಗೂ ಇಳಿಯುತ್ತದೆ. ಭುಜದಲ್ಲಿ ಬಿಳಿ ಮಚ್ಚೆಯಿದ್ದು ಕಂದು ರೆಕ್ಕೆಗಳಲ್ಲಿ ಗೆರೆಗಳಿರುತ್ತವೆ. ಹೆಣ್ಣು ಪೇಲವ ಬೂದು-ಮಿಶ್ರಿತ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿರುತ್ತದೆ. ಮಾನವನಿಗೆ ಅತಿ ಸಮಿಪದ ಹಕ್ಕಿಗಳು. ಮನುಷ್ಯರ ಮನೆಯಲ್ಲಿಯೇ ಆಶ್ರಯ ಪಡೆದು ತನ್ನ ಸಂತಾನವನ್ನು ಮುಂದುವರಿಸಿದ್ದ ಪ್ರಭೇದವಿದು.

ಈ ಮೊದಲು ನಗರದ ಜನನಿಬಿಡ ಪ್ರದೇಶಗಳಿರಲಿ, ಸಂತೆಯಿರಲಿ ಅಥವಾ ಕೃಷಿ ಭೂಮಿಯಲ್ಲಿಯೂ ತನ್ನ ಸಂತತಿಯೊಂದಿಗೆ ಸಂತೋಷದಿಂದ ಇದ್ದ ಗುಬ್ಬಚ್ಚಿಗಳನ್ನು ಇಂದು ಹುಡುಕಿದರೂ ಕಾಣಲಾಗದ ಪರಿಸ್ಥಿತಿ ಇದೆ. ಕೃಷಿಯಲ್ಲಿ ಅತಿಯಾಗಿ ಬಳಸುವ ಕೀಟನಾಶಕ ಮತ್ತು ಆವಾಸ ಸ್ಥಾನಗಳ ಕೊರತೆ ಇವುಗಳನ್ನು ಅಳಿವಿನ ಅಂಚಿಗೆ ತಂದಿಟ್ಟಿವೆ. ‘ಸಿಟಿಜೆನ್ ಸ್ಪಾರೋ’ ಎಂಬ ಸಂಸ್ಥೆ ಭಾರತದಲ್ಲಿ ಸುಮಾರು 11 ಸಾವಿರ ಸ್ಥಳಗಳಲ್ಲಿನ ಗುಬ್ಬಚ್ಚಿಗಳ ಸಂಖ್ಯೆಯ ಸರ್ವೇಕ್ಷಣೆಯನ್ನು ಮಾಡಿ ಹಳ್ಳಿಗಳಲ್ಲಿ ಗುಬ್ಬಿಗಳ ಸಂತತಿ ಕಡಿಮೆಯಾಗುತ್ತಿರುವುದು ಮತ್ತು ಮಹಾನಗರಗಳಾದ ಮುಂಬೈ ಮತ್ತು ಚೆನ್ನೈಗಳಲ್ಲಿ ಅತಿ ಹೆಚ್ಚಿನ ಸಂಖ್ಯೆ ಗುಬ್ಬಿಗಳಿರುವ ಆಶ್ಚರ್ಯಕರ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ದಾವಣಗೆರೆಯಲ್ಲಿರುವ ಗುಬ್ಬಚ್ಚಿಗಳ ಮಾಹಿತಿಯನ್ನು ಸೇರಿಸಲಾಗಿದೆ. ನಗರದ ಕೆಲವು ಭಾಗಗಳಲ್ಲಿ ಗುಬ್ಬಚ್ಚಿಗಳಿರುವುದನ್ನು ದಾಖಲಿಸಲಾಗಿದೆ.

ಅಂತೆಯೇ ನಮ್ಮ ಮನೆಯ ಕೈತೋಟದಲ್ಲಿ ಇದುವರೆಗೂ ಎಂಟು ಬಾರಿ ಸಂತಾನಭಿವೃದ್ಧಿಯಾಗಿರುವುದು ಸಂತೋಷದ ವಿಷಯ. ಇದಕ್ಕಾಗಿ ನಮ್ಮ ಸಣ್ಣ ಪ್ರಯತ್ನವಿಷ್ಟೆ. ಕೈ ತೋಟದಲ್ಲಿ ಹಲವಾರು ಹೂವಿನ ಗಿಡಗಳಿವೆ. ಗುಬ್ಬಿಚ್ಚಿಗಳಿಗೆ ತಿನ್ನಲು ಸಿರಿಧ್ಯಾನದ ಬೊಗುಣಿ ಮತ್ತು ಕುಡಿಯಲು ನೀರನ್ನು ಮಣ್ಣಿನ ಪಾತ್ರೆಯಲ್ಲಿ ಇಡಲಾಗಿದೆ. ಗಿಡಗಳಿಗೆ ಬರುವ ಹುಳುಗಳನ್ನು ಸಹಾ ಅವು ತಿನ್ನುತ್ತವೆ. ಸುರಕ್ಷಿತ ಭಾವನೆ ಮತ್ತು ಆಹಾರ ಲಭ್ಯತೆ ಅವುಗಳಿಗೆ ಇಲ್ಲಿ ಸಂತಾನಭಿವೃದ್ಧಿ ಮಾಡಲು ಪ್ರೇರಣೆಯಾಗಿದೆ.

ತುಂಗಭದ್ರಾ ಬಡವಣೆಯಲ್ಲಿ ಅತಿ ಹೆಚ್ಚು ಗುಬ್ಬಚ್ಚಿಗಳು ಕಂಡು ಬಂದವು. ಕಾರಣ ಅಲ್ಲಿ ಒಂದು ಮನೆಯವರು ತೆಂಗಿನ ಚಿಪ್ಪಿನಲ್ಲಿ ಗೂಡು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಸುತ್ತಲೂ ಕೃಷಿ ಭೂಮಿ ಇರುವುದು ಸಹ ಅನುಕೂಲ. ಹಾಗಾಗಿ ಸ್ವಲ್ಪ ಜಾಗವಿರುವವರು ಮಣ್ಣಿನ ಅಥವಾ ಮರದ ಪೆಟ್ಟಿಗೆಯ ಗೂಡುಗಳನ್ನು ತಮ್ಮ ಮನೆಯ ಚಾವಣಿಗಳಲ್ಲಿ ಇಡಬಹುದು.

ಇಂತಹ ಗೂಡುಗಳು ಆನ್‌ಲೈನ್‌ನಲ್ಲಿ ಸಹ ಲಭ್ಯವಿದೆ. ಇತ್ತಿಚಿನ ವರದಿಯಂತೆ ಗುಬ್ಬಚ್ಚಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಇದಕ್ಕೆ ಸಹೃದಯ ಮಾನವರ ಸಹಕಾರ ಬೇಕಾಗಿದೆ. ಶಾಲೆ–ಕಾಲೇಜು ಮಕ್ಕಳಲ್ಲಿ ಪಕ್ಷಿ ವೀಕ್ಷಣೆಯಂತಹ ಚೇತೊಹಾರಿ ಹವ್ಯಾಸವನ್ನು ಬೆಳೆಸಬೇಕಿದೆ.

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.