ಮಾರ್ಚ್ ತಿಂಗಳ ಒಂದು ಸಾಯಂಕಾಲ ಸುತ್ತಲೂ ಬಿಸಿಲೆಲ್ಲಾ ಆವಿಯಾಗಿ ಆಕಾಶದಲ್ಲಿ ಇನ್ನೇನು ಮೋಡಗಳು ಬೇಸಿಗೆ ಮಳೆ ಸುರಿಸಲು ಹೊಂಚು ಹಾಕುತ್ತಿತ್ತು. ಅದೇ ಹೊತ್ತಿಗೆ ಗೆಳೆಯ ಅಮಿತ್, ‘ಕಾಡು ಹಣ್ಣು ಹುಡುಕಿ ಹೋಗೋಣ್ವಾ? ಚಂಪೆ ಹಣ್ಣು ದುರ್ಗ ಕಾಡಿನ ತುಂಬಾ ರಾಶಿ ರಾಶಿ ಆಗಿರಬಹುದು, ಇದೇ ಒಳ್ಳೆ ಸಮಯ ಹೋಗೇ ಬಿಡೋಣ’ ಎಂದು ಕಾಡು ಚಂಪೆ ಹಣ್ಣಿನ ಆಸೆ ಹುಟ್ಟಿಸಿದ.
ಸರಿ ಎಂದು ನಾವೇನೋ ಬೈಕ್ ಏರಿ ಬಹಳ ಹುಮ್ಮಸ್ಸಿನಲ್ಲಿ ಕಾಡು ಹಣ್ಣುಗಳ ಜಾಡು ಹಿಡಿಯ ಹೊರಟೆವು. ಆದರೆ, ಆ ಕಾಡು ಹಣ್ಣಿನ ಮರ ಅಷ್ಟು ಬೇಗ ನಮಗೆ ಕಾಣಲು ಅದೇನು ಮಾವನ ಮನೆಯೇ, ಹೇಳಿ. ಹಾಗಾಗಿ ಒಂದಷ್ಟು ಹುಡುಕಾಟ ನಡೆಸಲೇಬೇಕಿತ್ತು.
ಉಡುಪಿ ಜಿಲ್ಲೆಯ ಕಾರ್ಕಳದ ಪಶ್ಚಿಮಘಟ್ಟದ ಬುಡದಲ್ಲಿರುವ ಮನಮೋಹಕ ಊರು ದುರ್ಗ. ಇದು ಕನಸಿನಲ್ಲಿಯೂ ಕಾಡುವ ಸ್ವರ್ಗದ ನಾಡಿನಂತೆ. ಅಲ್ಲಿನ ಕಾಡು ಚಂದ. ಇನ್ನು ಈ ಕಾಡಲ್ಲಿ ಸುತ್ತುತ್ತಾ ಕಾಡು ಹಣ್ಣು ಹುಡುಕುವ ಸುಖವನ್ನು ಕಳೆದುಕೊಳ್ಳಲು ನಾವು ಸುತರಾಂ ಸಿದ್ದರಿರಲಿಲ್ಲ. ಕಾಡ ದಾರಿಯಲ್ಲಿ ಸಾಗುತ್ತಾ, ಅಲ್ಲಲ್ಲೇ ಬೈಕ್ ನಿಲ್ಲಿಸುತ್ತ, ಎಲ್ಲಾದರೂ ಚಂಪೆ ಹಣ್ಣಿನ ಮರ ಕಾಣಿಸುತ್ತದಾ ಎಂದು ಕಾತುರದಿಂದ ನೋಡುತ್ತಿದ್ದೆವು. ಅಷ್ಟೊತ್ತಿಗೆ ಕುದುರೆಮುಖ ಪರ್ವತ ಪಂಕ್ತಿಗಳ ಕಡೆಯಿಂದ ‘ಡಮಾರ್ ಅಂತ ಗುಡುಗೊಂದು ಮೊಳಗಿ ಜಿಟಿ ಜಿಟಿ ಮಳೆ ಹೊಯ್ಯಲು ಶುರುವಾಯಿತು. ಸಿಡಿಲಿಗೆ ಒಮ್ಮೆ ಭಯವಾದರೂ, ಕಾಡು ಹಣ್ಣನ್ನು ಹುಡುಕಿ ತಿನ್ನಲೇ ಬೇಕು ಅನ್ನೋ ಆಸೆಯ ಮುಂದೆ ಆ ಭಯ ಆವಿಯಾಯಿತು.
‘‘ನೋಡು ನೋಡು ಚಂಪೆ ಹಣ್ಣಿನ ಮರ” ಎಂದು ಅವನು ಕಾಡ ದಾರಿಯ ಮಗ್ಗುಲಲ್ಲಿದ್ದ ಮರ ತೋರಿಸಿ ಬೆರಗಾದ. ಮಳೆಯ ಹನಿಯನ್ನೆಲ್ಲಾ ಬೊಗಸೆಯಲ್ಲಿ ಹಿಡಿದುಕೊಂಡು ನಿಂತಿದ್ದ ಚಂಪೆ ಹಣ್ಣಿನ ಮರದ ತುಂಬ ಕೆಂಬಣ್ಣದ ಚಂಪೆ ಹಣ್ಣು ನಕ್ಷತ್ರಪುಂಜಗಳಂತೆ ಮಿನುಗುತ್ತಿತ್ತು. ಮರದ ಹತ್ತಿರ ಹೋದರೆ ಕೈಗೆಟಕುವಂತೆ ಸಿಗುವಂತಿದ್ದ ಚಂಪೆ ಹಣ್ಣು ನಮಗಾಗೇ ಕಾದಂತಿತ್ತು. ಹಣ್ಣನ್ನು ಹಗುರನೇ ಬಾಯಲ್ಲಿಟ್ಟ ಕೂಡಲೇ ಅದರ ಸಿಹಿ-ಹುಳಿ ರುಚಿಗೆ ಬಾಯಿ ಪುಳಕಗೊಳ್ಳದೇ ಇರಲಾದಿತಾ ಹೇಳಿ?
ಸ್ವಾದಿಷ್ಟು ಹಣು; ಚಂಪೆ ಹಣ್ಣು ಕಾಡಿನಲ್ಲಿ ಸಿಗುವ ಸ್ವಾದಿಷ್ಟ ಹಣ್ಣು. ಕೆಲವೆಡೆ ಸಂಪಿಗೆ ಹಣ್ಣು, ಮತ್ತೆ ಕೆಲವೆಡೆ ಮಿಂಡಿ ಹಣ್ಣು, ಸಂಪೆ, ತಂಪೆ, ಜೊಂಪೆ ಅಂತೆಲ್ಲಾ ಪಟ್ಟ ಗಿಟ್ಟಿಸಿರುವ ಈ ಗೋಳಿಯಾಕಾರದ ಗೊಂಚಲು ಗೊಂಚಲು ಹಣ್ಣಿಗೆ ಗತ ಕಾಲವನ್ನು ನೆನಪಿಸಿ ನಮ್ಮನ್ನು ಮತ್ತೆ ಬಾಲ್ಯದ ಬೇಸಿಗೆಯ ರಜಾ ದಿನಗಳತ್ತ ಕರೆದೊಯ್ಯುವ ಶಕ್ತಿ ಇದೆ.
ಮಲೆನಾಡು, ಕರಾವಳಿಯಲ್ಲಿ ಹೆಚ್ಚಾಗಿ ಕಾಣಸಿಗುವ ಈ ಕಾಡ ಹಣ್ಣು ಬೇಸಿಗೆಯ ಆತ್ಮೀಯ ಒಡನಾಡಿ, ನೆನಪುಗಳ ಜೋಡಿ. ಪರಿಚಿತ ಹಣ್ಣಂತೆ ಕಂಡರೂ ಈಗಿನ ಕಾಲದಲ್ಲಿ ಅಪರಿಚಿತ ಹಣ್ಣಿದು. ಕಾಡು ಪನ್ನೇರಳೆ, ಕಾಡಿನ ಹೆಬ್ಬಲಸು, ಕುಂಟಾಲ ಹಣ್ಣು, ಸ್ವಾದಿಷ್ಟವಾದ ಬಿರುಂಡಿ (ಕೋಂಕಂ)ಹಣ್ಣು, ಬೆರ್ರಿ ಹಣ್ಣು, ಜಂಬುನೇರಳೆ ಹಣ್ಣು, ಕಾಡುಗೇರು, ಸೀತಾಫಲ, ಸಕ್ಕರೆ ಚಳ್ಳಿಹಣ್ಣು, ತುಂಬ್ರಿ ಇವೆಲ್ಲಾ ಕಾಡುಹಣ್ಣುಗಳ ಪರಿಮಳವೋ, ಗುಣವೋ ಅದ್ಭುತ.
ಜಂಬು ನೇರಳೆ, ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ, ಬಿರುಂಡಿ ಪಿತ್ತ ಕಡಿಮೆಯಾಗಲು, ಬೇಸಿಗೆಯಲ್ಲಿ ಸಿಗುವ ಧಾರೆಹುಳಿ (ಸ್ಟಾರ್ ಫ್ರುಟ್) ಕಫ ಶಮನಕ್ಕೆ ಸಹಕಾರಿ. ಇನ್ನು ಚೆರ‍್ರಿ ಹಣ್ಣಿನಲ್ಲಿರುಷ್ಟು ವಿಟಮಿನ್ ಯಾವ ಹಣ್ಣಿನಲ್ಲಿಯೂ ಇಲ್ಲ ಎನ್ನುವುದು ಹಿರಿಯರ ಅಭಿಪ್ರಾಯ.
ಕಾಡಿನ ಹಣ್ಣು ಬರೀ ತಿನ್ನುದಕ್ಕಲ್ಲ ರಸ ಹಿಂಡಿ ಜ್ಯೂಸ್ ಮಾಡಿ ಕುಡಿದರೂ ಆಹಾ ಆ ರುಚಿ ಯಾವ ಲೋಕದಲ್ಲಿಯೂ ಸಿಗಲಿಕ್ಕಿಲ್ಲ ಅನ್ನಿಸುತ್ತದೆ. ಕಾಡು ಗೇರಿನ ರಸ ಚೂರು ಹೀರಿದರೂ ಸಾಕು, ಆಯಾಸ ಎಲ್ಲಾ ಬಿದ್ದು ಹೋಗಿ ಉಲ್ಲಾಸ ಟಿಸಿಲೊಡೆಯೋದು ಗ್ಯಾರಂಟಿ.
ವಿಚಿತ್ರವೆಂದರೆ ಇಂತಹ ಹಣ್ಣುಗಳ ಬಗ್ಗೆ ಎಳ್ಳಷ್ಟೂ ಗಂದಗಾಳಿ ಇಲ್ಲದವರು “ಅದು ವಿಷದ ಹಣ್ಣು, ತಿಂದರೆ ಸಾಯುತ್ತಾರೆ” ಅಂತೆಲ್ಲಾ ಎಳೆ ಮಕ್ಕಳಲ್ಲಿ ಕಾಡು ಹಣ್ಣುಗಳ ಬಗ್ಗೆ ಭಯವನ್ನೂ, ರೇಜಿಗೆಯನ್ನೂ ಮೂಡಿಸಿದ್ದಾರೆ.
‘ಪ್ರಕೃತಿ ಎಂದರೆ ಕಾಡು ಹಣ್ಣುಗಳ ನಾಡು, ಇಲ್ಲಿನ ಒಂದೊಂದು ಹಣ್ಣಿಗೂ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನೂ ಮೀರಿಸಿದ ರುಚಿ ಇದೆ’ ಎನ್ನುವ ತಿಳುವಳಿಕೆಯನ್ನು ನಾವು ಈಗಿನ ಮಕ್ಕಳಲ್ಲಿ ಮೂಡಿಸುತ್ತಿಲ್ಲ ಎನ್ನುವುದೇ ಬೇಸರ.
(ಚಿತ್ರಗಳು: ಲೇಖಕರವು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.